ನಮ್ಮ ಇತಿಹಾಸದ ಓದಿನಲ್ಲಿ ಪಾಕಿಸ್ಥಾನದ ರಚನೆಯೊಂದು ಕಹಿ ನೆನಪಾಗಿ ನಿಲ್ಲುತ್ತದೆ. ನೆನೆದಂತೆ ಮೆಲುಕಿ ಹಾಕಿದಂತೆಲ್ಲ ಅದು ಅಸಹನೀಯ, ಅಸಮರ್ಥನೀಯವೆಂದೇ ಮನಸ್ಸು ನಿರ್ಧರಿಸುತ್ತದೆ. ಕವಿಯ ಪ್ರಶ್ನೆ ‘ಅಂಗ ಭಂಗವದಾಗೆ ಮರಳಿ ಜೋಡಿಸಬಹುದು, ವಂಗಭಂಗವದಾಗೆ ಬಾರದೇನು?’ ಅರ್ಥ ಪೂರ್ಣವೆನಿಸುತ್ತದೆ.
ಸ್ವಾತಂತ್ರ್ಯ ನಮಗೆ ದೊರೆತ ಹೊಸತರಲ್ಲಿ ನಮ್ಮ ತಾರುಣ್ಯವನ್ನು ಪಣಕ್ಕಿಟ್ಟು ಹೋರಾಟ ನಡೆಸಿದ ಅನೇಕರು ಇಂದು ವಯೋವೃದ್ಧರಾಗಿದ್ದಾರೆ. ಅವರ ಅಂದಿನ ಅನುಭವ, ಅದರಿಂದ ಬಂದ ವಿಮಶೆಗಳು ಈ ನಾಡಿನ ಜನಕೋಟಿಯ ಎದುರು ರಾಶಿ ಬಿದ್ದಿವೆ.
ದೇಶ ವಿಭಜನೆಯ ದುರಂತದಲ್ಲಿ ಯಾರ ಪಾತ್ರ ಎಷ್ಟು, ಯಾವ ತಪ್ಪಿನ ಮೂಲ ಯಾರಿಂದ, ಯಾವುದರ ಪರಿಣಾಮ ಎಲ್ಲಿವರೆಗೆ ಎಂಬುದರ ವಿಸ್ತೃತ ಚರ್ಚೆ ನಡೆದೇ ಇದೆ. ಹೊಸಹೊಸ ನಿಷ್ಕರ್ಷೆಗಳು ಕಾಲದ ಒರೆಗಲ್ಲಿಗೆ ತಿಕ್ಕೆ ಹೊಳಪು ಪಡೆಯುತ್ತಲೇ ಇವೆ. ನೆಹರು, ಗಾಂಧೀಜಿ, ಪಟೇಲ್, ಜಿನ್ಹ, ಮೌಂಟ್ ಬ್ಯಾಟನ್, ಕೊನೆಗೆ ಲೇಡಿ ಮೌಂಟ್ ಬ್ಯಾಟನ್ ಕೂಡಾ ದೇಶ ತುಂಡರಿಸುವ ಅಕ್ಷಮ್ಯ ಕಾರ್ಯದಲ್ಲಿ ಸ್ಪಂದಿಸಿದ ಪರಿಗಳನ್ನು ಮರೆಮಾಚುವುದು ಸಾಧ್ಯವೇ ಇಲ್ಲ. ಹೊಸ ಸ್ವಾತಂತ್ರ್ಯೋತ್ಸವ ಬಂದಾಗಲೆಲ್ಲ ಹಳೆಯ ದಿನದ ನೆನಪು ಗಾಢವೇ ಆಗುತ್ತದೆ. ಅಂದಿನ ದುರಂತ ನಡೆಯಲೇಬೇಕಿತ್ತೇ ಎಂಬ ಸಂದಿಗ್ಧ ಪ್ರಶ್ನೆಯಲ್ಲಿ ಮನಸ್ಸು ತುಯ್ದಾಡುತ್ತದೆ.
ಕೆಲ ವರ್ಷಗಳ ಹಿಂದೆ ಖ್ಯಾತ ಇತಿಹಾಸಕಾರ ಆಂಡ್ರ್ಯೂ ರಾಬರ್ಟ್ ಹೊಸ ಸಂಗತಿಯೊಂದನ್ನು ಬೆಳಕಿಗೆ ತಂದಿರುವುದು ವರದಿಯಾಗಿದೆ. 1947ರ ವಿಭಜನೆ ಸಂದರ್ಭದ ಕೋಮು ಗಲಭೆಯಲ್ಲಿ ಮೌಂಟ್ ಬ್ಯಾಟನ್ರ ಹೊಣೆಯನ್ನು ಕುರಿತು ರಾಬರ್ಟ್ ಪ್ರಶ್ನೆಯೆತ್ತಿದ್ದಾರೆ. ದೇಶವನ್ನು ಒಂದಾಗಿಟ್ಟೇ ಸ್ವಾತಂತ್ರ್ಯ ಸಾರಬೇಕೆಂಬ ಹಂಬಲವೇನಾದರೂ ಬ್ರಿಟಿಷರ ಅಂತರಂಗದಲ್ಲಿತ್ತೇ ಅಥವಾ ದಕ್ಷಿಣ ಏಷ್ಯಾದಲ್ಲಿ ಪ್ರಬಲ ರಾಷ್ಟ್ರವೊಂದು ಮೈತಳೆಯಬಹುದಾದ ಸಾಧ್ಯತೆಗೆ ಅಂದೇ ಕುಡಿ ಚಿವುಟಲಾಯಿತೆ ಎಂಬ ಪ್ರಶ್ನೆಯನ್ನು ಇದೀಗ ಇನ್ನಪ್ಟು ಪ್ರಬಲವಾಗಿ ಮಂಡಿಸಲಾಗುತ್ತಿದೆ.
‘ಬಹುಶಃ ಪಾಕಿಸ್ಥಾನ- ಹಿಂದೂಸ್ಥಾನಗಳ ರಚನೆಯಾದ ಬಳಿಕ ಪಾಕಿಸ್ಥಾನದ ಹಿಂದುಗಳು ಹಿಂದೂಸ್ಥಾನಕ್ಕೂ, ಹಿಂದೂಸ್ಥಾನದ ಮುಸ್ಲಿಮರು ಪಾಕಿಸ್ಥಾನಕ್ಕೂ ವಲಸೆ ಹೋಗುತ್ತಾರೆ’ ಎಂಬ ಭ್ರಮೆ, ಅವ್ಯಾವಹಾರಿಕ ತರ್ಕ ಅಂದಿನ ಬಹುದೊಡ್ಡ ಸೋಲು. ಹಾಗಾಗಲೇ ಇಲ್ಲ. ಆದರೆ ಅದರ ವ್ಯತಿರಿಕ್ತ ಪರಿಣಾಮವಾದರೂ ಎಲ್ಲಿಗೆ ಬಂದು ನಿಂತಿದೆ? ಪಾಕಿಸ್ಥಾನ ರಚನೆಯಾಗುತ್ತಲೇ ಹಿಂದುಗಳನ್ನು ಹಿಂಸಿಸಿ ಓಡಿಸಲಾಯಿತು. ದುರಾಗ್ರಹದಿಂದ ಮತಾಂತರಗೊಳಿಸಲಾಯಿತು. ಆದರೆ ಸುಮಾರು ೧ ಲಕ್ಷದಷ್ಟು ಹರಿಜನ ಹಿಂದುಗಳನ್ನು ಮಾತ್ರ ಇಂದಿಗೂ ಮತಾಂತರಿಸದೇ ‘ಸಮ್ಮಾನ’ದಿಂದ ಉಳಿಸಿಕೊಡಿದ್ದಾರೆ. ಪಾಕಿಗಳ ಬಿಟ್ಟಿಕೆಲಸ, ಕೊಳೆಗೇರಿ ತೊಳೆಯುವ ಕೆಲಸ, ಹೊಲಸು ಹೊರುವ ಕೆಲಸಗಳನ್ನು ಸಮ್ಮಾನ ಪೂರ್ವಕವಾಗಿ ಈ ಹಿಂದುಗಳಿಗೆ ಬಿಟ್ಟುಕೊಡಲಾಗಿದೆ. ಒಂದೆಡೆ ಕಾಶ್ಮೀರದಲ್ಲಿ ಪಾಕಿಗಳ ಆಕ್ರಮಕ ಧೋರಣೆ, ಇನ್ನೊಂದೆಡೆ ಬಾಂಗ್ಲಾದಿಂದ ಬಂದ ಚಕ್ಮಾ ನಿರಾಶ್ರಿತರ ಬವಣೆ- ಇವೆಲ್ಲ ಸ್ವತಂತ್ರ ಭಾರತಕ್ಕೆ ದೊರೆತ ಉಡುಗೊರೆಗಳು!
ಭಾರತದಲ್ಲಾದರೋ ಅತ್ತ ಪಾಕಿಗೂ ಹೋಗದೆ ಇತ್ತ ಭಾರತದ ಬದುಕಿಗೂ ಒಗ್ಗದೆ ಮುಸ್ಲಿಂ ವಂಶಾವಳಿ ಪುನರಪಿ ಪಾಕಿಸ್ಥಾನಗಳ ಸೃಷ್ಟಿಗೆ ಪೂರಕವಾಗುತ್ತಿದೆ. ರಾಷ್ಟ್ರಹಿತಕ್ಕೆ ಪೂರಕವಾಗುವುದಂತಿರಲಿ, ಇಲ್ಲಿಯ ರಾಷ್ಟ್ರಗೀತೆ, ರಾಷ್ಟ್ರಧ್ವಜ, ಕೊನೆಗೆ ಇದೊಂದು ಸನಾತನ ರಾಷ್ಟ್ರವೆಂಬುದನ್ನೂ ಅಪಮಾನಿಸುತ್ತ ಬದನಿಕೆಗಳಂತೆ ಬದುಕುತ್ತಿರುವವರ ಸಂಖ್ಯೆ ದಿನಂಪ್ರತಿ ಆತಂಕಕಾರಿಯಾಗುತ್ತಲೇ ನಡೆದಿದೆ.
ಆದ್ದರಿಂದ ಪ್ರಶ್ನೆ ಜೀವಂತವಾಗುತ್ತದೆ. ವಿಭಜನೆ – ಈ ಬಗೆಯ ದುರಂತಕ್ಕೆ ಕಾರಣವಾದ ವಿಭಜನೆ – ಅನಿವಾರ್ಯವಾಗಿತ್ತೇ ? ತುಂಡಾದ ತಾಯ್ ಭೂಮಿ ತುಂಡಾಗುತ್ತಲೇ ನಡೆಯಬೇಕೆ? ಒಮ್ಮೆ ಬ್ರಿಟಿಷರ ಸಮಕ್ಷಮದಲ್ಲಿ, ಇನ್ನೊಮ್ಮೆ ರಷ್ಯನರ ರಾಜಿಯಲ್ಲಿ ಮತ್ತೊಮ್ಮ ಕಾಂಗ್ರೆಸಿಗರ ಕುನೀತಿಯಲ್ಲಿ… ಹೀಗೆ ಭೂಮಿಯನ್ನು ತುಂಡರಿಸಿ ಬಿಟ್ಟುಕೊಡುತ್ತಲೇ ಹೋಗುವುದೇ? ಬಾಕಿ ಭಾರತವನ್ನು ಉಳಿಸುವವರಾರು?
ರಾಬರ್ಟ್ ಹೇಳುತ್ತಾರೆ – ‘ವಿಭಜಿತ ಭಾರತದಲ್ಲಿ ಸಿಕ್ಖರ ಭಯೋತ್ಪಾದನೆಯುಂಟಾಗಿ ಮುಸ್ಲಿಮರೆಲ್ಲಾ ಪಾಕಿಸ್ಥಾನಕ್ಕೇ ಹೋಗುವರೆಂಬ ತಾರ್ಕೀಕ ಬುದ್ಧಿ ಮೌಂಟ್ ಬ್ಯಾಟನ್ರದ್ದಿರಬೇಕು ‘ ಅದು ಹೇಗೆ ಇದ್ದರೂ ಬ್ರಿಟಿಷರು ತಾವು ಬರುವ ಮುನ್ನ ಅಖಂಡವಾಗಿದ್ದ ‘ರಾಷ್ಟ್ರ’ವನ್ನು ತ್ರಿಖಂಡಗೊಳಿಸಿದ ಚರಿತ್ರೆಯನ್ನು ಮನ್ನಿಸುದೆಂತು?ಪಾಕಿಸ್ಥಾನವು ಭಾರತದಲ್ಲಿ ವಿಲೀನಗೊಳ್ಳುವ ಸಾಧ್ಯತೆಯನ್ನು ಹುಸಿಬಾಂಬೆಂದು ಹಲವರು ಬೀಸಾಡಿಬಿಡಬಹುದು.ಆದರೆ ಎರುಡು ಜರ್ಮನಿಗಳು ಒಂದಾಗುವುದನ್ನು ಯಾರು ಕನಸು ಕಂಡಿದ್ದರು? ಮೂಲತಃ ಮತೀಯ ಕಟ್ಟಾಚಾರವೊಂದನ್ನು ಬಿಟ್ಟರೆ ಪಾಕಿ-ಬಾಂಗ್ಲಾ ಮುಸ್ಲಿಮರು ಸಾಂಸ್ಕೃತಿಕವಾಗಿ ಹಿಂದುರಾಷ್ಟ್ರದ ರಕ್ತದ ಮಕ್ಕಳೇ ಎಂಬುದನ್ನು ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ. ಮಾನವ ಚರಿತ್ರೆಯಲ್ಲಿ ತುಂಬ ದೂರದಲ್ಲೆಲ್ಲೋ ಸಾಧ್ಯವೆನಿಸಬಹುದಾದರೂ ಅಂಧ ಅನಿವಾರ್ಯ ಸತ್ಯವನ್ನು ಹೇಳಲೇಬೇಕಾಗುತ್ತದೆ.
ವ್ಯಕ್ತವ್ಯಮೇವ ವಕ್ತವ್ಯಂ ಪ್ರಾಣೈಃ ಕಂಠಗತೈರಪಿ
ಕೃಪೆ: ಅಕ್ಷಿಪಥ
ಲೇಖಕರು: ಡಾ|ಸೋಂದಾ ನಾರಾಯಣ ಭಟ್ಟ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.