ಆ ವ್ಯಕ್ತಿ ನಿಧನರಾದಾಗ ಇಡೀ ದೇಶಕ್ಕೆ ದೇಶವೇ ಮಮ್ಮಲ ಮರುಗಿತ್ತು. ಶಾಲಾ ಮಕ್ಕಳು ಬಿಕ್ಕಿಬಿಕ್ಕಿ ಕಣ್ಣೀರು ಸುರಿಸಿದ್ದರು. ಆಟೋಚಾಲಕರು ತಮ್ಮ ಬಳಿ ಇದ್ದ ಅಲ್ಪಸ್ವಲ್ಪ ಹಣದಿಂದಲೇ ಅವರದೊಂದು ಫ್ಲೆಕ್ಸ್ ಮಾಡಿ, ನಾಲ್ಕು ರಸ್ತೆ ಸೇರುವ ಜಾಗದಲ್ಲಿ ಕಟ್ಟಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದರು. ಆ ಫ್ಲೆಕ್ಸ್ನಲ್ಲಿ ಅಪ್ಪಿತಪ್ಪಿ ಕೂಡಾ ಆಟೋಚಾಲಕರು ತಮ್ಮ ಭಾವಚಿತ್ರ ಛಾಪಿಸಿಕೊಂಡಿರಲಿಲ್ಲ. ಅದರಲ್ಲಿದ್ದಿದ್ದು ನಿಧನರಾದ ಆ ವ್ಯಕ್ತಿಯ ಚಿತ್ರ ಮಾತ್ರ.
ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ನಿಧನರಾದಾಗ ಇಡೀ ದೇಶದಾದ್ಯಂತ ಕಂಡುಬಂದ ದೃಶ್ಯಗಳಿವು. ಬಹುಶಃ ಇದುವರೆಗೆ ಯಾವ ರಾಷ್ಟ್ರಪತಿಗೂ ಇಷ್ಟೊಂದು ಅಭೂತಪೂರ್ವ ಶ್ರದ್ಧಾಂಜಲಿ ಸಲ್ಲಿಸಿದ ನಿದರ್ಶನವಿಲ್ಲ. ಜವಾಹರಲಾಲ್ ನೆಹರು ಅವರನ್ನು `ಮಕ್ಕಳ ಚಾಚಾ’ ಎಂದು ಕರೆಯುವುದುಂಟು. ಆದರೆ ನೆಹರು ಸತ್ತಾಗಲೂ ದೇಶದ ಮಕ್ಕಳು ಈ ಪರಿ ಕಣ್ಣೀರು ಸುರಿಸಿರಲಿಕ್ಕಿಲ್ಲ. ಚೆನ್ನೈಯಲ್ಲಿ ಮುಂಬತ್ತಿ ಹಚ್ಚಿ ಸಾಮೂಹಿಕ ಶ್ರದ್ಧಾಂಜಲಿ ಸಲ್ಲಿಸಿದ ಶಾಲಾ-ಕಾಲೇಜು ಮಕ್ಕಳ ಕಣ್ಣಲ್ಲಿ ದುಃಖದ ಕಣ್ಣೀರು. ಮಕ್ಕಳ ಹೃದಯದಲ್ಲಿ ಡಾ. ಕಲಾಂ ಆ ಪರಿಯಾಗಿ ಆವರಿಸಿಕೊಂಡಿದ್ದರು. ತಮ್ಮ ಮನೆಯ ಪ್ರೀತಿಯ ತಾತನೋ, ದೊಡ್ಡಪ್ಪನೋ ತೀರಿ ಹೋದಾಗ ಆಗುವಂತಹ ಸಂಕಟ ಅದು.
ಕಲಾಂ ತೀರಿಕೊಂಡ ದಿನ ಪತ್ರಿಕೆಗಳಲ್ಲಿ ಪ್ರಕಟವಾದ ತಲೆಬರಹವೇ ಅವರೆಷ್ಟು ಜನಪ್ರಿಯ, ಜನಮನ ಗೆದ್ದ ಮಾಜಿ ರಾಷ್ಟ್ರಪತಿ ಎಂಬುದು ಶೃತಪಟ್ಟಿತ್ತು. ‘Dies doing what he did best: Igniting minds’, ‘People’s President passes away’, ‘A hospitable President’…. ಇಂತಹ ಅದೆಷ್ಟೋ ಮನ ಮಿಡಿಯುವ ಶೀರ್ಷಿಕೆಗಳು. ಮಾಧ್ಯಮ ಮಿತ್ರರು ಕಲಾಂ ಅವರನ್ನು ಹೊಗಳಲೆಂದು ಕೊಟ್ಟ ಶೀರ್ಷಿಕೆಗಳಲ್ಲ ಇವು. ಅವೆಲ್ಲ ಮಾಧ್ಯಮ ಮಿತ್ರರ ಮನದಾಳದಿಂದ ಹೊಮ್ಮಿದ ಶೀರ್ಷಿಕೆಗಳು. ಕಲಾಂ ಅವರನ್ನು ಹೊಗಳುವುದರಿಂದ ಮಾಧ್ಯಮ ಮಿತ್ರರಿಗೆ ಯಾವ ಬಗೆಯ `ಲಾಭ’ವೂ ಇರಲಿಲ್ಲ. ಮಹಾನ್ ವ್ಯಕ್ತಿಗೆ ಆತ ತೀರಿಕೊಂಡ ದಿನವಾದರೂ ಮನ ಮಿಡಿಯುವ ಶ್ರೇಷ್ಠ ಅಕ್ಷರ ಪೂಜೆ ಸಲ್ಲಿಸುವ ಕಾಳಜಿಯ ಪ್ರತೀಕ ಅದು.
***
`ಇಬ್ಬರು ಭಾರತೀಯ ಮುಸ್ಲಿಮರ ಅಂತ್ಯಕ್ರಿಯೆ ಒಂದೇ ದಿನ ನಡೆದಿರುವುದು ಎಂತಹ ಕಾಕತಾಳೀಯ! ಒಬ್ಬರು ತಮ್ಮ ಸಾಧನೆಯ ಮೂಲಕ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವಂತಹ ಸಾಧನೆ ಮಾಡಿದ ಡಾ. ಕಲಾಂ. ಮತ್ತೊಬ್ಬ ದೇಶದ್ರೋಹದಿಂದ ಇಡೀ ಸಮುದಾಯ ತಲೆ ತಗ್ಗಿಸುವಂತೆ ಮಾಡಿದ ಮೆಮನ್’. ಇದು ಪ್ರಗತಿಪರರ, ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯೆಂದೇ ಬಿಂಬಿತವಾಗಿರುವ ಪ್ರಜಾವಾಣಿ ಪತ್ರಿಕೆಯ ಮುಖಪುಟದಲ್ಲಿ ಕಲಾಂ ಅಂತ್ಯಕ್ರಿಯೆ ನಡೆದ ದಿನ ಪ್ರಕಟವಾದ ಬಾಕ್ಸ್ ಐಟಂ. ಅಂದಹಾಗೆ ಈ ಹೇಳಿಕೆ ನೀಡಿದವರು ಬಿಜೆಪಿ ಅಥವಾ ಆರೆಸ್ಸೆಸ್ನ ಪ್ರಮುಖರಲ್ಲ, ಬಜರಂಗದಳದವರಂತೂ ಖಂಡಿತ ಅಲ್ಲ. ಈ ಹೇಳಿಕೆ ನೀಡಿದ್ದು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್! ದಿಗ್ವಿಜಯ ಸಿಂಗ್ ಮನದಾಳದಿಂದ ಹೊರಹೊಮ್ಮಿದ ಭಾವನೆ ಇದು. ಅವರು ಸಾರ್ವಜನಿಕವಾಗಿ ಹಲವು ಬಾರಿ ಎಡವಟ್ಟಿನ, ಎಗ್ಗಿಲ್ಲದ ಏನೇನೋ ಹೇಳಿಕೆಗಳನ್ನು ಕೊಡುತ್ತಲೇ ಇರುತ್ತಾರೆ. ಈ ಹೇಳಿಕೆ ಮಾತ್ರ ಎಡವಟ್ಟಿನದಲ್ಲ. `ಹೆಮ್ಮೆಯ ಕಲಾಂ, ದೇಶದ್ರೋಹಿ ಮೆಮನ್’ ಎಂಬ ವಿಶ್ಲೇಷಣೆ ದಿಗ್ವಿಜಯ ಸಿಂಗ್ರ ಮನದ ಮಾತು.
ಕಲಾಂ ಹುಟ್ಟಿದ್ದು ಮುಸಲ್ಮಾನನಾಗಿ. ಆದರೆ ಬೆಳೆದದ್ದು ಅಪ್ಪಟ ಭಾರತೀಯನಾಗಿ. ಅವರೆಂದೂ ಜಾತಿ, ಮತ, ಪಂಥ, ಪಕ್ಷ ಮುಂತಾದ ಸಂಕುಚಿತ, ಮತಾಂಧ ಗೋಡೆಗಳನ್ನು ತಮ್ಮ ಸುತ್ತ ಕಟ್ಟಿಕೊಂಡಿರಲಿಲ್ಲ. ಇಂತಹ ಯಾವುದೇ ಗೋಡೆಗಳಿಲ್ಲದ ಆಲಯದಲ್ಲಿರಲು ಅವರು ಇಷ್ಟಪಡುತ್ತಿದ್ದರು. ತಾನು ಹುಟ್ಟಿದ್ದು ಭಾರತದ ಮಣ್ಣಿನಲ್ಲಿ, ಹುಟ್ಟಿದ ನೆಲಕ್ಕೆ ಚಿರಋಣಿಯಾಗಿರಬೇಕು, ಇಲ್ಲಿನ ಸಂಸ್ಕೃತಿ, ಪರಂಪರೆಗೆ ಗೌರವ ಸಲ್ಲಿಸಬೇಕು ಎಂಬ ಎಚ್ಚರ ಅವರಲ್ಲಿ ಕೊನೆಯವರೆಗೂ ಇತ್ತು. ಅವರು ಡಿಆರ್ಡಿಓದಲ್ಲಿ ಕ್ಷಿಪಣಿಗಳ ವಿಜ್ಞಾನಿಯಾಗಿ, ಅವುಗಳ ತಯಾರಿಕೆಯಲ್ಲಿ ನಿರತರಾಗಿದ್ದಾಗಲೂ ಈ ಎಚ್ಚರ ಅವರಲ್ಲಿತ್ತು. ಹಾಗೆಂದೇ ತಾವು ತಯಾರಿಸಿದ ಕ್ಷಿಪಣಿಗಳಿಗೆ ಅವರಿಟ್ಟ ಹೆಸರುಗಳು: ಹಿಂದು ಪುರಾಣ ಮೂಲದ ಆಕಾಶ್, ಅಗ್ನಿ, ಪೃಥ್ವಿ, ತ್ರಿಶೂಲ್ ಇತ್ಯಾದಿ. ಮುಸ್ಲಿಮನೆಂಬ ಮತಾಂಧತೆ ಅವರೊಳಗಿದ್ದಿದ್ದರೆ ಆ ಕ್ಷಿಪಣಿಗಳಿಗೆ ಘೋರಿ, ಘಜನಿ, ಔರಂಗಜೇಬ್, ಅಕ್ಬರ್…. ಮುಂತಾದ ಹೆಸರುಗಳನ್ನು ಇಡುತ್ತಿದ್ದರೇನೋ! ಅಸಲಿಗೆ ಕಲಾಂ ಅವರನ್ನು ಕೊನೆಯವರೆಗೂ ಅಂತಹ ಮತಾಂಧತೆ ಕಾಡಲೇ ಇಲ್ಲ. ಈ ದೇಶದ ಸಂಸ್ಕೃತಿ, ಪರಂಪರೆ ಯಾವುದೆಂಬುದರ ಸ್ಪಷ್ಟ ಅರಿವು ಅವರಿಗಿತ್ತು. ಕುರಾನ್ ಬಗ್ಗೆ ಇದ್ದಷ್ಟೇ ಶ್ರದ್ಧೆ ಭಗವದ್ಗೀತೆ, ರಾಮಾಯಣದ ಬಗ್ಗೆಯೂ ಇತ್ತು. ಮುಸಲ್ಮಾನರಾಗಿದ್ದರೂ ಅವರು ಮಸೀದಿಗೆ ತೆರಳಿದ್ದು ತೀರಾ ಕಡಿಮೆ. ಹಿಂದು ಮಠ-ಮಂದಿರಗಳಿಗೆ, ದೇವಸ್ಥಾನಗಳಿಗೆ ಹೋಗಿದ್ದೇ ಹೆಚ್ಚು. ಕರ್ನಾಟಕದ ಪ್ರವಾಸದ ಸಂದರ್ಭದಲ್ಲಿ ಸಿದ್ಧಗಂಗಾ, ಆದಿಚುಂಚನಗಿರಿ, ಧರ್ಮಸ್ಥಳ, ಶೃಂಗೇರಿ ಮೊದಲಾದ ಕ್ಷೇತ್ರಗಳಿಗೆ ಭೇಟಿ ನೀಡಿದ್ದರು. ಮುಸ್ಲಿಮನಾಗಿ ಮಠ-ಮಂದಿರಗಳಿಗೆ ಹೋಗಬಾರದು, ಹಣೆಗೆ ಕುಂಕುಮ ಪ್ರಸಾದ ಹಚ್ಚಿಕೊಳ್ಳಬಾರದು ಎಂಬ ಸಂಕುಚಿತತೆ ಅವರನ್ನೆಂದೂ ಕಾಡಲಿಲ್ಲ.
ಹಾಗೆ ನೋಡಿದರೆ ದೇಗುಲಗಳ ನಗರ ರಾಮೇಶ್ವರಂನಲ್ಲಿ ಅವರು ಹುಟ್ಟಿ ಬೆಳೆದದ್ದು ಹಿಂದು ಪರಿಸರದಲ್ಲಿ. ಭಾರತೀಯ ಚಿಂತನೆ, ಸ್ವಭಾವ ಮೈಗೂಡಿದ್ದು, ಮನದಾಳದಲ್ಲಿ ಬೇರೂರಿದ್ದು ಅದೇ ಕಾರಣದಿಂದಿರಬಹುದು. ವಿಜ್ಞಾನಿಯಾಗಿದ್ದಾಗ, ರಾಷ್ಟ್ರಪತಿಯಾಗಿದ್ದಾಗ ಅಥವಾ ಮಾಜಿ ರಾಷ್ಟ್ರಪತಿಯಾಗಿದ್ದಾಗ ಅವರು ತಲೆಯ ಮೇಲೆ ಮುಸ್ಲಿಂ ಟೋಪಿ ಹಾಕಿರುವ ಯಾವುದೇ ಭಾವಚಿತ್ರಗಳು ಸಿಗುವುದಿಲ್ಲ. ಆದರೆ ಹಿಂದುಗಳಂತೆ ಲಕ್ಷಣವಾಗಿ ಧೋತಿ ಉಟ್ಟು, ಶಲ್ಯ ಹೊದ್ದ ಭಾವಚಿತ್ರಗಳು ಸಾಕಷ್ಟಿವೆ. ಸಂಗೀತದ ಬಗ್ಗೆ ಅಪಾರ ಒಲವಿದ್ದ ಕಲಾಂ ರುದ್ರವೀಣೆ ನುಡಿಸುತ್ತಿದ್ದರು. ರುದ್ರವೀಣೆ ನುಡಿಸುವಾಗ ಅವರ ಡ್ರೆಸ್ಕೋಡ್ ಮತ್ತದೇ ಬಿಳಿಯ ಪಂಚೆ ಹಾಗೂ ಶಲ್ಯ.
ಅವರೊಬ್ಬ ಅಪ್ಪಟ ಸ್ವದೇಶಾಭಿಮಾನಿ ಎನ್ನುವುದಕ್ಕೆ ಸ್ವದೇಶಿ ತಂತ್ರಜ್ಞಾನದ ಮೂಲಕವೇ ಭಾರತದ ಮೊಟ್ಟಮೊದಲ ಪರಮಾಣು ಬಾಂಬ್ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ನಿದರ್ಶನ. ಅಮೆರಿಕದ ಹದ್ದುಗಣ್ಣನ್ನು ತಪ್ಪಿಸಿ ಪೋಖ್ರಾನ್ನಲ್ಲಿ ಪರಮಾಣು ಬಾಂಬ್ನ ಯಶಸ್ವಿ ಸ್ಫೋಟ ನಡೆಸಿದ್ದರ ಹಿಂದೆ ಇದ್ದಿದ್ದು ಕಲಾಂ ಅವರ ಅದ್ಭುತ ಬುದ್ಧಿಮತ್ತೆ. ವಾಜಪೇಯಿ ಸರ್ಕಾರದ ಹೆಮ್ಮೆಯ ಸಾಧನೆ ಅದೆಂದು ಬಿಂಬಿತವಾದರೂ ಅದರ ಸಂಪೂರ್ಣ ಕ್ರೆಡಿಟ್ ಸಲ್ಲಬೇಕಾದದ್ದು ಕಲಾಂ ಅವರಿಗೇ! ಆದರೆ ಅವರೆಂದೂ ಅದು ತನ್ನದೇ ಸಾಧನೆ ಎಂದು ಎದೆ ತಟ್ಟಿಕೊಳ್ಳಲಿಲ್ಲ. ಭಾರತ ಸಶಕ್ತ, ಸದೃಢ ದೇಶವಾಗಿ ಹೊಮ್ಮಬೇಕಾದರೆ, ಸ್ವಾವಲಂಬಿಯಾಗಿ ತಲೆಯೆತ್ತಬೇಕಾದರೆ ಅದು ತನ್ನದೇ ಪರಮಾಣು ಬಾಂಬ್ ಹೊಂದಿರಬೇಕು ಎಂಬುದಷ್ಟೇ ಕಲಾಂ ಅವರ ಕಾಳಜಿ.
***
ಯುವಶಕ್ತಿ ದೇಶದ ಆಸ್ತಿ ಎಂಬ ವಿವೇಕಾನಂದರ ವಿಚಾರವೇ ಕಲಾಂ ಅವರ ವಿಚಾರವೂ ಆಗಿತ್ತು. ಬದುಕಿನ ಕೊನೆಯುಸಿರಿನವರೆಗೆ ಅವರು ಪ್ರೀತಿಸಿದ್ದು ಮಕ್ಕಳಿಗೆ, ಯುವಕರಿಗೆ ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳ ವಿಸ್ಮಯದ ಬಗ್ಗೆ ಪಾಠ ಹೇಳುವುದನ್ನು. ಮೊನ್ನೆ ಶಿಲ್ಲಾಂಗ್ನಲ್ಲಿ ಕೊನೆಯುಸಿರೆಳೆಯುವ ಮುನ್ನ ಅವರು ಐಐಎಂ ವಿದ್ಯಾರ್ಥಿಗಳಿಗೆ ಪಾಠ ಹೇಳಿದ್ದರು. ಭುವನೇಶ್ವರಕ್ಕೆ ಒಮ್ಮೆ ವಿಶ್ವವಿದ್ಯಾಲಯವೊಂದರ ಕಾರ್ಯಕ್ರಮಕ್ಕೆ ಬಂದಿದ್ದಾಗಿನ ಘಟನೆ. ಸಭೆಯ ಮುಂಭಾಗದ ಸಾಲುಗಳಲ್ಲಿ ಗಣ್ಯಾತಿಗಣ್ಯರು, ಹಿಂಬದಿಯ ಸಾಲುಗಳಲ್ಲಿ ಪದವಿ ವಿದ್ಯಾರ್ಥಿಗಳು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಕಲಾಂ ಗಣ್ಯರನ್ನು ಗಮನಿಸದೆ, ನೇರವಾಗಿ ವಿದ್ಯಾರ್ಥಿಗಳ ಬಳಿ ತೆರಳಿ ಅವರೊಡನೆ ಹರಟೆ ಹೊಡೆದರು, ತಮಾಷೆ ಮಾಡಿದರು. ಇನ್ನುಮುಂದೆ ವಿದ್ಯಾರ್ಥಿಗಳನ್ನು ಸಭೆಯ ಮುಂಭಾಗದ ಸಾಲುಗಳಲ್ಲಿ ಕೂರಿಸಿ, ಗಣ್ಯರನ್ನು ಹಿಂಬದಿ ಕೂರಿಸಿ ಎಂದು ಅಲ್ಲಿದ್ದ ವ್ಯವಸ್ಥಾಪಕರಿಗೆ ತಾಕೀತು ಮಾಡಿದರು. ಅದಾದ ಮೇಲೆ ಕಲಾಂ ತಿಳಿಸಿದಂತೆಯೇ ಸಭೆಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿತ್ತು ಎಂದು ಒಡಿಶಾದ ಮಾಜಿ ರಾಜ್ಯಪಾಲ ಎಂ.ಎಂ. ರಾಜೇಂದ್ರನ್ ನೆನಪಿಸಿಕೊಳ್ಳುತ್ತಾರೆ.
***
ಕಲಾಂ ಜನರ ರಾಷ್ಟ್ರಪತಿಯಾಗಿದ್ದರು. ರಾಷ್ಟ್ರಪತಿ ಭವನವೆಂಬ ಇರುವೆಯೂ ನುಸುಳದಂತಹ ಭದ್ರಕೋಟೆಯನ್ನು ಸಾರ್ವಜನಿಕರಿಗಾಗಿ ತೆರೆದಿಟ್ಟರು. ರಾಷ್ಟ್ರಪತಿ ಒಬ್ಬ ಸರಳ ವ್ಯಕ್ತಿಯಾಗಿಯೂ ಬದುಕಲು ಸಾಧ್ಯ ಎಂದು ತೋರಿಸಿಕೊಟ್ಟರು. ಒಂದಿಷ್ಟು ಮೊಸರನ್ನ, ಉಪ್ಪಿನಕಾಯಿ ಇದ್ದರೆ ಸಾಕು, ಅದೇ ಅವರಿಗೆ ಮೃಷ್ಟಾನ್ನ. ಅಪ್ಪಟ ಸಸ್ಯಾಹಾರಿಯಾಗಿದ್ದ ಕಲಾಂ ಇತರರೂ ಹಾಗೇ ಇರಬೇಕೆಂದು ಬಯಸಿದವರಲ್ಲ. ರಾಷ್ಟ್ರಪತಿ ಭವನದಲ್ಲಿ ರಾಜ್ಯಪಾಲರ ಸಮ್ಮೇಳನ ನಡೆದಾಗಲೆಲ್ಲ ಮಾಂಸಾಹಾರಿಗಳಿಗೆ ಅತ್ಯುತ್ತಮ ಮಾಂಸಾಹಾರದ ಅಡುಗೆ ಇರುವಂತೆ ಅವರೇ ಗಮನಹರಿಸುತ್ತಿದ್ದರು. ಮೆನು ಯಾವುದಿರಬೇಕೆಂದು ಅವರೇ ಸೂಚಿಸುತ್ತಿದ್ದರು! ಅಂತಹ ಔದಾರ್ಯದ ಆತಿಥ್ಯ ಅವರದು.
ರಾಷ್ಟ್ರಪತಿ ಭವನಕ್ಕೆ ಹೋಗುವಾಗ ಕಲಾಂ ತೆಗೆದುಕೊಂಡು ಹೋಗಿದ್ದು ಒಂದೆರಡು ಸ್ವಂತದ ಸಾಮಗ್ರಿಗಳ ಸೂಟ್ಕೇಸ್ಗಳು. ನಿವೃತ್ತರಾಗಿ ಅಲ್ಲಿಂದ ನಿರ್ಗಮಿಸುವಾಗ ಅವರು ವಾಪಸ್ ತಂದಿದ್ದು ಅಷ್ಟೇ ಲಗೇಜು. ಇವರ ನಂತರ ರಾಷ್ಟ್ರಪತಿಯಾದ ಪ್ರತಿಭಾ ಪಾಟೀಲ್, ಇವರಿಗಿಂತ ಹಿಂದೆ ರಾಷ್ಟ್ರಪತಿಯಾಗಿದ್ದ ವಿ.ವಿ.ಗಿರಿ ಮುಂತಾದವರು ನಿವೃತ್ತಿಯ ಬಳಿಕ ರಾಷ್ಟ್ರಪತಿ ಭವನದಿಂದ ಟ್ರಕ್ಗಟ್ಟಲೆ ಸಾಮಾನುಗಳನ್ನು ಸಾಗಿಸಿದ್ದರು. ತಾನು ಖಾಸಗಿ ವಾಹನಗಳಲ್ಲಿ ಪ್ರಯಾಣ ಮಾಡಿದ ವೆಚ್ಚವನ್ನೂ ಸರ್ಕಾರವೇ ಭರಿಸಬೇಕೆಂದು ಇತ್ತೀಚೆಗೆ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಕ್ಯಾತೆ ತೆಗೆದಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇಂಥವರ ನಡುವೆ ಕಲಾಂ ಮಾಣಿಕ್ಯದಂತೆ ಮಿನುಗಿದ್ದರು.
***
ಕಲಾಂ ರಾಷ್ಟ್ರಪತಿಯಾಗಿದ್ದಾಗ ಒಮ್ಮೆ ತಮಿಳುನಾಡಿನ ಈರೋಡ್ಗೆ ಒಂದು ಸಮಾರಂಭಕ್ಕೆ ಬಂದಿದ್ದರು. ಆ ಸಮಾರಂಭವನ್ನು ಪ್ರಾಯೋಜಿಸಿದ್ದು ಸೌಭಾಗ್ಯ ವೆಟ್ ಗ್ರೈಂಡರ್ಸ್ ಸಂಸ್ಥೆ. ಸಮಾರಂಭದಲ್ಲಿ ಸಂಸ್ಥೆಯ ಎಂ.ಡಿ.ಯಾಗಿದ್ದ ವಿ. ಆದಿಕೇಶವನ್ ಕಲಾಂ ಅವರಿಗೆ 4,850 ರೂ ಬೆಲೆಯ ಒಂದು ಗ್ರೈಂಡರ್ನ್ನು ಉಡುಗೊರೆಯಾಗಿ ನೀಡಿದಾಗ ಕಲಾಂ ಅದನ್ನು ತಿರಸ್ಕರಿಸಿದರು. ನನ್ನ ಕುಟುಂಬಕ್ಕೆ ನಿಜಕ್ಕೂ ಇಂತಹದೊಂದು ಗ್ರೈಂಡರ್ ಬೇಕು. ಆದರೆ ಅದನ್ನು ಹಣ ಪಾವತಿಸಿಯೇ ತೆಗೆದುಕೊಳ್ಳುವೆ ಎಂದರು. ಬಳಿಕ ತಮ್ಮ ಸಹಾಯಕನೊಬ್ಬನನ್ನು ಸೌಭಾಗ್ಯ ಗ್ರೈಂಡರ್ ಶೋ ರೂಂಗೆ ಕಳಿಸಿ, ಚೆಕ್ ಪಾವತಿಸಿ ಗ್ರೈಂಡರ್ ಖರೀದಿಸಿದರು.
ಆದರೆ ಆದಿಕೇಶವನ್, ಕಲಾಂ ಅವರಿಂದ ಪಡೆದ ಚೆಕ್ ಅನ್ನು ತಿಂಗಳಾದರೂ ಬ್ಯಾಂಕಿಗೆ ಹಾಕಿರಲಿಲ್ಲ. ಇದನ್ನು ಗಮನಿಸಿದ ಕಲಾಂ, ಚೆಕ್ ಅನ್ನು ನಗದೀಕರಿಸದಿದ್ದರೆ ಗ್ರೈಂಡರ್ ವಾಪಸ್ ಮಾಡುವುದಾಗಿ ಖಡಕ್ಕಾಗಿ ಹೇಳಿದರು. ಅನಂತರವೇ ಆದಿಕೇಶವನ್ ಚೆಕ್ ನಗದೀಕರಿಸಿದ್ದು. ಚೆಕ್ ನಗದೀಕರಣವಾಗಿದ್ದು ತಿಳಿಯುತ್ತಿದ್ದಂತೆ ಕಲಾಂ ಆದಿಕೇಶವನ್ ಕಚೇರಿಗೆ ಫೋನ್ ಮಾಡಿ ಥ್ಯಾಂಕ್ಸ್ ಹೇಳಿದ್ದರಂತೆ!
***
ಅವರೊಬ್ಬ ಶ್ರೇಷ್ಠ ವಿಜ್ಞಾನಿ, ಶ್ರೇಷ್ಠ ರಾಷ್ಟ್ರಪತಿ ಎಂಬ ಕಾರಣಕ್ಕೆ 30 ಕ್ಕೂ ಹೆಚ್ಚು ದೇಶ-ವಿದೇಶದ ವಿ.ವಿ.ಗಳ ಗೌರವ ಡಾಕ್ಟರೇಟ್ ಪದವಿಗಳು ಅವರನ್ನರಸಿ ಬಂದಿದ್ದವು. ಅವರಂತೂ ಅರ್ಜಿ ಹಾಕಿರಲಿಲ್ಲ. ಆದರೂ ಅವರೊಬ್ಬ ಸಾಮಾನ್ಯ ವ್ಯಕ್ತಿಯಂತೆಯೇ ಸರಳವಾಗಿ ಬದುಕಿದರು. ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬುದು ಅವರ ಬದುಕಿನ ಸಂದೇಶವಾಗಿತ್ತು. ದೇಶ ಮೊದಲು, ಅನಂತರ ನಾವೆಲ್ಲ ಎಂಬುದು ಅವರ ಬದುಕಿನ ಮಂತ್ರವಾಗಿತ್ತು. `ಮಾ ತುಝೆ ಸಲಾಂ’ ಎಂದು ಭಾರತ ಮಾತೆಯ ಅಡಿದಾವರೆಗಳಿಗೆ ತಮ್ಮ ಬುದ್ಧಿ, ಶಕ್ತಿ, ಸಾಮರ್ಥ್ಯ, ಪ್ರತಿಭೆ ಎಲ್ಲವನ್ನು ಕಲಾಂ ಅರ್ಪಿಸಿದ್ದರು. ಅವರ ಬದುಕೇ ಒಂದು ಸಂದೇಶ, ಒಂದು ಮೇಲ್ಪಂಕ್ತಿ. ನಾವದನ್ನು ಪ್ರಾಮಾಣಿಕವಾಗಿ ಅನುಸರಿಸಬೇಕಷ್ಟೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.