ಅದೊಂದು ಹಳ್ಳಿ. ದಿನಕ್ಕೆ ಒಂದೋ ಎರಡೋ ಎತ್ತಿನಗಾಡಿ ಅಲ್ಲಿ ಓಡಾಡುತ್ತಿದ್ದುವು. ಪಟೇಲ ಮತ್ತು ಹೆಗ್ಡೆ ಎಂಬ ಎರಡು ಮನೆತನಗಳಿಗೆ ಸೇರಿದ್ದ ಗಾಡಿಗಳಾಗಿದ್ದವವು. ಇವು ಬಿಟ್ಟರೆ ಎರಡು ಮೂರು ಸೈಕಲ್ಲುಗಳೂ ಅಲ್ಲಿಯ ರಸ್ತೆಯಲ್ಲಿ ದಿನಕ್ಕೆ ಒಂದೋ ಎರಡೋ ಬಾರಿ ಕಾಣಿಸುತ್ತಿದ್ದುವು. ಆ ಹಳ್ಳಿಯಿಂದ ಎರಡು ಮೈಲಿ ದೂರದಲ್ಲಿ ಬಸ್ ಓಡಾಡುವ ರಸ್ತೆ ಇದೆ. ಎರಡು ಖಾಸಗಿ ಬಸ್ಸುಗಳು ದಿನಕ್ಕೆ ತಲಾ ಎರಡು ಬಾರಿ ಒಂದೂರಿಂದ ಮತ್ತೊಂದೂರಿಗೆ ಹೋಗಿಬರುತ್ತಿದ್ದವು. ಬಸ್ ಬಿಟ್ಟರೆ ಆ ರಸ್ತೆಯಲ್ಲಿ ಅನ್ಯ ವಾಹನವನ್ನು ಕಾಣಲೂ ಸಾಧ್ಯವಿರಲಿಲ್ಲ. ಬಸ್ ಹೋಗುವ ಮುಖ್ಯರಸ್ತೆಯಿಂದ ಹಳ್ಳಿಗೆ ಹೊರಟ ಕಚ್ಚಾರಸ್ತೆ (ಅದನ್ನು ಕಚ್ಚಾರಸ್ತೆಯೆನ್ನಬೇಕೆ?) ಜಲ್ಲಿ-ಟಾರುಗಳನ್ನದು ಕಾಣದಿದ್ದರೂ ಕಡುಬೇಸಗೆಯಲ್ಲೂ ಧೂಳನ್ನು ಹೊಂದುತ್ತಿರಲಿಲ್ಲ; ಬರಿಗಾಲಲ್ಲೇ ನಡೆಯುವ ಹಳ್ಳಿ ಮಂದಿಗೆ ಯಾವ ತ್ರಾಸನ್ನೂ ಕೊಡುತ್ತಿರಲಿಲ್ಲ. ಅಂಥ ರಸ್ತೆ ಕಚ್ಚಾವೆ? ಅಚ್ಚಾವೆ? ಅದು ಇನ್ನೂ ಮೂರು ಹಳ್ಳಿಗಳನ್ನು ದಾಟಿ ನಾಲ್ಕು ಮೈಲಿ ದೂರದಲ್ಲಿ ಬಸ್ ಸೇವೆ ಇರುವ ಮತ್ತೊಂದು ಮುಖ್ಯರಸ್ತೆಯನ್ನು ಸಂಪರ್ಕಿಸುತ್ತಿತ್ತು. ಆ ರಸ್ತೆಯ ಇಕ್ಕೆಲಗಳಲ್ಲೂ ಬೆಟ್ಟ – ಗುಡ್ಡಗಳು, ಹಸಿರು, ಹಸಿರು, ಹಸಿರು. ಕಣ್ಣಿಗೆ ಹಸಿರು ಬಿಟ್ಟರೆ ಆ ಹಸಿರನ್ನು ಮೇಯಲು ಬರುವ ಜಾನುವಾರುಗಳಷ್ಟೇ ಕಂಡಾವು. ಹೆಚ್ಚಿನವು ಮಲೆನಾಡು ಗಿಡ್ಡ ಎಂಬ ಊರ ತಳಿಯ ಗೋವುಗಳು. ನೂರಾರು ಗೋವುಗಳಿದ್ದ, ಪ್ರತಿ ಮನೆಯಲ್ಲೂ ಕನಿಷ್ಠವೆಂದರೂ ಮೂರ್ನಾಲ್ಕು ಗೋವುಗಳಿದ್ದ ಊರದು. ಹಾಗೆಂದು ಹಾಲೇನೂ ಯಥೇಚ್ಛವಿತ್ತೆನ್ನಲಾಗದು. ಹಾಲು ಯಥೇಚ್ಛವಿಲ್ಲದಿದ್ದರೇನಂತೆ; ಊರಗೊಬ್ಬರ ಅಂದರೆ ಹಟ್ಟಿಗೊಬ್ಬರ, ಆಧುನಿಕ ಪರಿಭಾಷೆಯಲ್ಲಿ ಹೇಳಬೇಕೆಂದರೆ ಸಾವಯವ ಗೊಬ್ಬರ -ಇದು ನಿಜ ಮತ್ತು ಸಹಜ ಸಾವಯವ ಗೊಬ್ಬರ- ಯಥೇಚ್ಛವಾಗಿತ್ತು. ಸಾವಯವ ರೀತಿಯಲ್ಲಿ ಆಹಾರ ಬೆಳೆಯನ್ನು ಯಥೇಚ್ಛವಾಗಿ ಆ ಊರು ಬೆಳೆಯುತ್ತಿತ್ತು. ಇದು ಯಾಕೆಂದರೆ, ಆಗಿನ್ನೂ ರಸಗೊಬ್ಬರ ಕೀಟನಾಶಕಗಳು ಆ ಊರಿಗೆ ಕಾಲಿಟ್ಟಿರಲಿಲ್ಲ. ಅಡಿಕೆಯಂಥ, ಬಳಿಕ ಬಂದ ರಬ್ಬರಿನಂಥ ವಾಣಿಜ್ಯ ಬೆಳೆಯ ಹುಚ್ಚು ಅಲ್ಲಿಯ ರೈತರನ್ನು ಆಗಿನ್ನೂ ಹಿಡಿದಿರಲಿಲ್ಲ. ಆ ಊರಲ್ಲಿ ಒಂದು ಬೆಳೆ ಭತ್ತ ಬೆಳೆವ ಬೆಟ್ಟುಗದ್ದೆ, ಎರಡು ಬೆಳೆ ಭತ್ತ ಬೆಳೆವ ಗದ್ದೆ ಹಾಗೂ ಮೂರು ಬೆಳೆ ಭತ್ತ ಬೆಳೆವ (ಜವುಗು ಇರುವ) ಗದ್ದೆ – ಹೀಗೆ ಮುಖ್ಯವಾಗಿ ಮೂರು ಬಗೆಯ ಗದ್ದೆಗಳಿದ್ದುವು. ಎರಡು ಬೆಳೆ ಭತ್ತ ಬೆಳೆವ ಗದ್ದೆಯಲ್ಲಿ ಮೂರನೇ ಬೆಳೆಯಾಗಿ ಧಾನ್ಯವನ್ನು, ಮುಖ್ಯವಾಗಿ ದ್ವಿದಳ ಧಾನ್ಯಗಳನ್ನು ಬೆಳೆಯಲಾಗುತ್ತಿತ್ತು. ಎಲ್ಲ ಬೆಳೆಯನ್ನೂ ಜನ ಬೆಳೆಯುತ್ತಿದ್ದರು. ಯಾಕೆಂದರೆ ಹಳ್ಳಿಯಲ್ಲಿ ನಿಜ ಕೃಷಿಕರು, ಅವರಲ್ಲೂ ಯುವ ಕೃಷಿಕರು ಇದ್ದರು. ಯಾರಾದರೂ ಒಂದು ಬೆಳೆ ಬೆಳೆದಿಲ್ಲವೆಂದರೆ ಅವರ ಆರ್ಥಿಕ ಸ್ಥಿತಿಯ ಬಗೆಗೋ ವ್ಯಸನ – ಹವ್ಯಾಸಗಳ ಬಗೆಗೋ ವದಂತಿ ಹಬ್ಬುತ್ತಿತ್ತು. ಅಂದರೆ ಯಾವುದೇ ಒಂದು ಬೆಳೆಯನ್ನು ಬೆಳೆಯದಿರುವುದು, ಗದ್ದೆಯನ್ನು ಹಾಗೇ ಪಾಳು (ಹಡೀಲು) ಬಿಡುವುದು ಅಪಮಾನದ ಸಂಗತಿಯಾಗಿ ಪರಿಗಣಿತವಾಗುತ್ತಿತ್ತು. ಮತ್ತಿದು ಊರಿಗೆಲ್ಲ ದೊಡ್ಡ ಸುದ್ದಿಯಾಗುತ್ತಿತ್ತು.
ಈಗ!
ಬದಲಾಗಿದೆ!
ಬದಲಾಗಿದೆ ಎನ್ನುವಾಗ ಹಿರಿಯರೊಬ್ಬರು ಒಂದು ಮಾತು ಹೇಳುತ್ತಿದ್ದರು – “ಕಾಲವಲ್ಲ ಬದಲಾಗಿರುವುದು, ತಲೆ.” ಮನುಷ್ಯ ತಾನು ಬದಲಾಗಿ, ತನ್ನ ಸುಖಕ್ಕನುಗುಣವಾಗಿ ಎಂಬಂತೆ ಬದಲಾಗಿ, ಅದು ಬದಲಾಗಬೇಕಾದ ರೀತಿಯ ಬದಲಾವಣೆಯಲ್ಲ ಎಂದು ಗೊತ್ತಾಗಿ, ಆ ಬದಲಾವಣೆಯನ್ನು ಕಾಲದ ಮೇಲೆ ಆರೋಪಿಸುತ್ತಾನೆ.
ಅಸಾಮರ್ಥ್ಯವನ್ನು ಮುಚ್ಚುವ ಸಾಮರ್ಥ್ಯ
ಈ ನೆಲೆಯಲ್ಲಿ ಹೇಳುವುದಾದರೆ ಆ ಹಳ್ಳಿ ತುಂಬಾ ಬದಲಾಗಿದೆ. ಎತ್ತಿನಗಾಡಿ ಕಾಣೆಯಾಗಿದೆ. ಬೆಟ್ಟಗುಡ್ಡಗಳ ಏರುತಗ್ಗು ರಸ್ತೆಯಲ್ಲಿ, ಆ ರಸ್ತೆ ಡಾಮರೀಕರಣಗೊಂಡಿದ್ದರೂ ಸೈಕಲ್ ತುಳಿವ ಸಾಮರ್ಥ್ಯವುಳ್ಳವರೇ ಆ ಊರಲ್ಲಿಲ್ಲವೆನ್ನಬೇಕು. ತಮ್ಮೀ ದೈಹಿಕ ಅಸಾಮರ್ಥ್ಯವನ್ನು ಮುಚ್ಚಿಕೊಳ್ಳಲು ಜನರಿಗೆ ಆರ್ಥಿಕ ಸಾಮರ್ಥ್ಯವೂ ಅದರಿಂದಾಗಿ ಬೈಕು – ಕಾರುಗಳಂಥ ಇಂಧನಚಾಲಿತ ವಾಹನಗಳೂ ಸಹಾಯಕ್ಕೊದಗಿವೆ. ಅಸಾಮರ್ಥ್ಯವನ್ನು ಮುಚ್ಚಿಕೊಳ್ಳುವುದರ ಜತೆಜತೆಗೇ ಪ್ರತಿಷ್ಠೆಯಂಥ ಕೊಂಡಾಡಬಹುದಾದ ರೀತಿಯ ಅಹಂಕಾರವನ್ನು ನಿಸ್ಸಂಕೋಚವಾಗಿ, ಮತ್ತು ನಿರ್ಲಜ್ಜವಾಗಿಯೂ ಕೂಡಾ, ಪ್ರದರ್ಶಿಸಲು ಅವು ನೆರವಿಗೆ ಬಂದಿವೆ. ಈಗ ಮುಖ್ಯರಸ್ತೆಯಲ್ಲಿ ಹತ್ತು ನಿಮಿಷಕ್ಕೊಂದರಂತೆ -ಏರು ಅವಧಿಯಲ್ಲಿ ಇನ್ನೂ ಹೆಚ್ಚು – ಬಸ್ಸುಗಳು ಓಡಾಡುತ್ತವೆ. ಇತರ ವಾಹನಗಳು ಬಸ್ಸಿನ ಹತ್ತಾರು ಪಟ್ಟು – ಅಕ್ಷರಶಃ ಬಸ್ಸಿನ ಕನಿಷ್ಠ ಹತ್ತು ಪಟ್ಟು ಹೆಚ್ಚು – ಹೆಚ್ಚಿವೆ. ಆದರೂ ಬಸ್ಸು ಸದಾ ತುಂಬಿ ತುಳುಕುತ್ತಿರುತ್ತದೆ. ಹತ್ತೇ ನಿಮಿಷಗಳಲ್ಲಿ ಮುಂದಿನ ಬಸ್ ಬರುವುದಿದ್ದರೂ ಅಷ್ಟು ಹೊತ್ತು ಕಾಯುವ ವ್ಯವಧಾನವೋ ಪುರುಸೊತ್ತೋ ಆ ಹಳ್ಳಿ ಜನರಿಗೀಗ ಇಲ್ಲವಾಗಿದೆ.
ಬಂಜರು ಬೆಟ್ಟ
ಆ ಹಳ್ಳಿಯ ರಸ್ತೆ ಈಗ ಟಾರು ಕಂಡಿದೆ. ಟಾರನ್ನೇನೋ ಕಂಡಿದೆ. ಆದರೆ ಧೂಳು ಹೆಚ್ಚಾಗಿದೆ. ರಸ್ತೆಯ ಅಕ್ಕ ಪಕ್ಕದ ಬದಿಯ -ಅಕ್ಕಪಕ್ಕದ್ದೇನು, ತುಸು ದೂರದ್ದು ಕೂಡಾ- ಗಿಡಮರಗಳ, ಅಳಿದುಳಿದ ಗಿಡಮರಗಳ ಯಾವ ಎಲೆಗಳೂ ಧೂಳಿನಿಂದ ಮುಕ್ತವಾಗಿಲ್ಲ. ಬಹುಶಃ ಮಳೆಗಾಲದ ಕೆಲವು ದಿನಗಳಲ್ಲಿ, ಕೆಲವೇ ದಿನಗಳಲ್ಲಿ ಅವುಗಳ ಮೇಲೆ ಧೂಳಿನಂಥ ಧೂಳು ಅಂತ ಇರುವುದಿಲ್ಲ.
ಬೆಟ್ಟಗುಡ್ಡಗಳೇನೋ ಇವೆ. ಇನ್ನೂ ವಿಕಾರಕ್ಕೊಳಗಾಗಿವೆ. ಅವುಗಳ ಮೇಲಿನ ಗಿಡಗಂಟಿಗಳು, ಮರಮಟ್ಟುಗಳೆಲ್ಲ ಗೇರುಕೃಷಿಗಾಗಿ ಕೊಡಲಿಗೆ ಬಲಿಯಾಗಿವೆ. ಗೇರುಗಿಡ ನೆಡಲೆಂದು ಗೈದ ಅಗೆತವು ಇಡಿಯ ಗುಡ್ಡಕ್ಕೆ ವೃತ್ತಾಕಾರದಲ್ಲಿ ನೂರಾರು ನಾಮಗಳನ್ನು ಬಳಿದಂತೆ ಭಾಸವಾಗುತ್ತಿದೆ. ಹಿಂದೆಲ್ಲ ಆ ಬೆಟ್ಟದಲ್ಲಿ ಮತ್ತು ಸುತ್ತಮುತ್ತವೂ ಮಳೆಗಾಲದ ಎರಡು ತಿಂಗಳು ನೀರಚಿಲುಮೆಗಳನ್ನು ಕಾಣಬಹುದಿತ್ತು. ಈಗ ಗೇರುಗಿಡಗಳನ್ನು ಮಾತ್ರ ಹೊತ್ತುಕೊಂಡಿರುವ ಈ ಬೆಟ್ಟಗಳು ಬೋಳುಬೆಟ್ಟದಂತಾಗಿ ಮಳೆನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನೇ ಕಳಕೊಂಡಿವೆ. ಹಳ್ಳಿಯ ಬಾವಿಗಳೆಲ್ಲ ಕಡುಬೇಸಗೆಯಲ್ಲೂ ನೀರನ್ನು ಯಥೇಚ್ಛ ಹೊಂದುವಂತೆ ಅಂತರ್ಜಲವನ್ನು ಶ್ರೀಮಂತಗೊಳಿಸುತ್ತಿದ್ದ ಈ ಬೆಟ್ಟಗಳು ಈಗ ಮಳೆನೀರನ್ನು ಅದರ ಮೂಲಸ್ಥಾನವಾದ ಸಮುದ್ರಕ್ಕೆ ‘ನಿರ್ವಂಚನೆ’ಯಿಂದ ಬಿಟ್ಟುಕೊಡುತ್ತಿರುವಂತೆ ಕಾಣುತ್ತಿವೆ!
ಅಶಾಂತದೊಳಗೆ ಶಾಂತ!
ಸುತ್ತಮುತ್ತ ಮುಂಚಿನಷ್ಟು ಹಸಿರು ಕಾಣಿಸುತ್ತಿಲ್ಲ. ಕ್ರಮೇಣ ಕಾಂಕ್ರೀಟ್ ಕಾಡು ಅಲ್ಲಿ ಬೆಳೆಯುತ್ತಿರುವಂತೆ ತೋರುತ್ತದೆ. ರಸ್ತೆಯ ಅಕ್ಕಪಕ್ಕದ -ಅಷ್ಟೇ ಏಕೆ, ದೂರದ್ದೂ ಕೂಡ- ಬಹುತೇಕ ಜಾಗಗಳು ಆಕ್ರಮಣಕ್ಕೊಳಗಾಗಿವೆ. ಅಕ್ರಮ ಸಕ್ರಮವಾಗಿದೆ. ಬಲವಾದ ಬೇಲಿ ಬಿದ್ದಿವೆ. ಜಾನುವಾರುಗಳೇನಿದ್ದರೂ ರಸ್ತೆಯಲ್ಲೇ ಓಡಾಡಬೇಕಷ್ಟೇ.
ಹ್ಞಾಂ! ಹಾಗೆ ಓಡಾಡಲು ಜಾನುವಾರುಗಳು ತುಂಬಾ ಇವೆಯೆಂದುಕೊಂಡಿರಾ? ಊರ ತಳಿಯ ಗೋವುಗಳನ್ನು ಸಾಕಲು ಯಾರೂ ಈಗ ಧೈರ್ಯ ತೋರುತ್ತಿಲ್ಲ. ಹಾಗೆ ಧೈರ್ಯ ತೋರಿ ಅವನ್ನು ಸಾಕಿದರೂ ಕೊಟ್ಟಿಗೆಯಲ್ಲಿ ಕಟ್ಟಿಹಾಕಿಯೇ ಸಾಕಬೇಕಷ್ಟೇ. ಯಾಕೆಂದರೆ ಅವುಗಳ ಮೇವಿನ ಜಾಗ ಆಕ್ರಮಣಕ್ಕೊಳಗಾಗಿ ಬೇಲಿಯನ್ನು ಹೊಂದಿವೆ. ಹೊರಗೆ ಬಿಟ್ಟ ಹಲವು ಗೋವುಗಳು ಕಟುಕರ ಆಕ್ರಮಣಕ್ಕೊಳಗಾಗಿ ಕಸಾಯಿಖಾನೆ ಸೇರಿವೆ. ಬಂದೂಕು ತೋರಿಸಿ ಮನೆ ಮಂದಿಯನ್ನು ಬೆದರಿಸಿ ಕೊಟ್ಟಿಗೆಯಿಂದಲೇ ಗೋವುಗಳನ್ನು ರಾಕ್ಷಸಬಗೆಯಲ್ಲಿ ದರೋಡೆಗೈದು ಕಸಾಯಿಖಾನೆಗಟ್ಟಿದ ಪ್ರಕರಣಗಳೂ ನಡೆದಿದೆ. ಇಷ್ಟಿದ್ದೂ ಹಳ್ಳಿ ಶಾಂತವಾಗಿದೆ!
ಗೋವುಗಳೇನೋ ಕಡಿಮೆಯಾಗಿದೆ. ಆದರೆ ಹೊಳೆಯೆಂಬಂತೆ ಹಾಲು ಹರಿದಿದೆ. ಹಾಲಿನ ಡೈರಿ ಪ್ರಾರಂಭಗೊಂಡು ಈ ಹಳ್ಳಿಯಿಂದ ಹಾಲು ಹೊರ ಊರುಗಳಿಗೂ ರವಾನೆಯಾಗುತ್ತಿದೆ. ಇದೆಲ್ಲ ಜೆರ್ಸಿ, ಎಚ್ಚೆಫ್ ಇತ್ಯಾದಿ ವಿದೇಶೀತಳಿಯ ದನಗಳು ಮಾಡಿದ ಪವಾಡ.
ಕಳೆದುಹೋದ ನೇಗಿಲಯೋಗಿ
ಹಿಂದೆ ಸಾಲುಸಾಲು ಗದ್ದೆಗಳು ಕಂಡುಬರುತ್ತಿರುವಲ್ಲಿ ಈಗ ಸಾಲು ಸಾಲು ಅಡಿಕೆತೋಟ ರಾರಾಜಿಸುತ್ತಿದೆ. ಕಾಡುಗಳಿದ್ದ ಜಾಗವನ್ನು ರಬ್ಬರ್ ತೋಟ ಕಬಳಿಸಿದೆ. ಹಿಂದೆ ಕಾಡ ಬದಿ ಹೋದಾಗ ಬೇಸಗೆಯಲ್ಲೂ ತಂಪಿನ ಅನುಭವಾಗುತ್ತಿತ್ತು. ಈಗ ಮಳೆಗಾಲದಲ್ಲೂ ರಬ್ಬರ್ ತೋಟ ಬಿಸಿಯಾಗೇ ಇರುತ್ತದೆ. ಈಗ ಕೃಷಿಕಾರ್ಯಕ್ಕೆ ಮುಂಚಿನಷ್ಟು ಜನ ಬೇಡ. ವಾಣಿಜ್ಯ ಬೆಳೆಯ ಸ್ವರೂಪವೇ ಅಂಥದ್ದು – ಹೆಚ್ಚು ಜನ ಬೇಡ, ಹೆಚ್ಚು ಕಾಲ ಕೆಲಸ ಇಲ್ಲ, ಹೆಚ್ಚು ಲಾಭ ತಂದುಕೊಡುತ್ತದೆ. ಇಂಥ ಸ್ವರೂಪದ ಕೃಷಿಯನ್ನು ಅಪ್ಪಿಕೊಳ್ಳದವನು ‘ಮನುಷ್ಯ’ನಾದಾನೆ? ಹಾಗಾಗಿ ಎಲ್ಲರೂ ‘ಮನುಷ್ಯ’ರಾಗಿದ್ದಾರೆ. ಕುವೆಂಪುರವರ ನೇಗಿಲಯೋಗಿ ನಾಪತ್ತೆಯಾಗಿ ವರ್ಷಗಳೆಷ್ಟೋ ಉರುಳಿವೆ. ಅವನೆಲ್ಲಿಯಾದರೂ ಪುನರ್ಜನ್ಮ ಪಡೆದು ಈ ಹಳ್ಳಿಗೆ ಬಂದರೆ ಪರಿಚಯವೇ ಸಿಗದಷ್ಟು ಅಲ್ಲಿಯ ಕೃಷಿಸ್ವರೂಪ ಬದಲಾಗಿದೆ. ಈಗಿನ ಕೃಷಿಕಾರ್ಯಕ್ಕೆ ಹೆಚ್ಚು ಜನ ಬೇಕಾಗದಿದ್ದರೂ ಬೇಕಾಗುವ ಸ್ವಲ್ಪ ಜನರೂ ಆ ಹಳ್ಳಿಗೆ, ಹಳ್ಳಿಯಂಥ ಆ ಹಳ್ಳಿಗೆ ಪರ ಊರುಗಳಿಂದಲೇ ಬರುತ್ತಿದ್ದಾರೆ.
ಗೇರುತೋಪಿಗೆ ಹೆಲಿಕಾಪ್ಟರ್ ಬಂದು ಔಷಧ ಸಿಂಪಡಿಸಿ ಹೋಗುತ್ತದೆ. ವಿಷದ ಆ ವಸ್ತು ಔಷಧ ಹೇಗಾಗುತ್ತದೋ ಗೊತ್ತಿಲ್ಲ! ಇದರಿಂದಾಗಿಯೇ ವಿಕಲಾಂಗ, ಬುದ್ಧಿಮಾಂದ್ಯ ಮಕ್ಕಳ ಪ್ರಮಾಣ ಹೆಚ್ಚುತ್ತಿದೆ ಎಂದು ವಿಶ್ಲೇಷಣೆ ನಡೆದಿದೆ. ಸ್ವತಃ ಹಳ್ಳಿ ಮಂದಿಯೇ ಕೃಷಿಗೆ ರಸಗೊಬ್ಬರ – ಕೀಟನಾಶಕಗಳನ್ನು ಬಳಸಿ ಬಳಸಿ ಕ್ಯಾನ್ಸರಿನಂಥ ಭೀಕರ ಖಾಯಿಲೆಗಳನ್ನು ತಂದುಕೊಳ್ಳುತ್ತಿದ್ದಾರೆ ಎಂಬ ವಿಶ್ಲೇಷಣೆಯೂ ನಡೆದಿದೆ. ಹೀಗಿದ್ದೂ ಆ ಹಳ್ಳಿ ಹಿಂದಿಗಿಂತ ಎಷ್ಟೋ ಪಟ್ಟು ಹೆಚ್ಚು ಸುಖಿಯಾಗಿದೆ ಎಂದನಿಸುತ್ತಿದೆ!
ಇಲ್ಲಿರುವ ಅಕ್ಷರಕ್ಷರವನ್ನೂ ಉತ್ಪ್ರೇಕ್ಷೆರಹಿತವೆಂದು ಭಾವಿಸಲಡ್ಡಿಯಿಲ್ಲ.
ಇದು ನಿರ್ದಿಷ್ಟವಾಗಿ ಒಂದು ಹಳ್ಳಿಯ ಕಥೆ. ನಿಮ್ಮ ಹಳ್ಳಿಯ ಕಥೆಯೂ ಇದೇ ಆಗಿರಬಹುದಲ್ಲವೆ?
✍️ ನಾರಾಯಣ ಶೇವಿರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.