ನಾನಾಜಿ ದೇಶಮುಖ್ ಅವರು ಲೋಕಮಾನ್ಯ ಬಾಲಗಂಗಾಧರ ತಿಲಕರ ಚಿಂತನೆಗಳಿಂದ ಪ್ರಭಾವಿತರಾದ ವ್ಯಕ್ತಿ. ಕೃಷಿ, ಪತ್ರಿಕೋದ್ಯಮ ಮತ್ತು ಗ್ರಾಮ ವಿಕಾಸಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು. ಇವರ ನಿಜವಾದ ಹೆಸರು ಚಂಡಿಕಾ ರಾವ್ ಅಮೃತ ರಾವ್ ದೇಶಮುಖ್. 1916 ಅಕ್ಟೋಬರ್ 11 ರಂದು ಮಹಾರಾಷ್ಟ್ರದ ಕುಡೋಲಿ ಪ್ರದೇಶದಲ್ಲಿ ಜನಿಸಿದ ಇವರು ನಾನಾಜಿ ದೇಶ್ಮುಖ್ ಎಂದೇ ಜನಜನಿತರಾಗಿದ್ದವರು.
ಶಿಕ್ಷಣವನ್ನು ಸಂಪೂರ್ಣಗೊಳಿಸಿದ ಬಳಿಕ ನಾನಾಜಿ ಚಿತ್ತ ಹರಿಸಿದ ಕ್ಷೇತ್ರ ಸಮಾಜ ಸೇವೆ. ಆರಂಭದಲ್ಲಿಯೇ ಹೇಳಿದಂತೆ ತಿಲಕರ ವ್ಯಕ್ತಿ-ವಿಚಾರಗಳಿಂದ ಪ್ರಭಾವಕ್ಕೆ ಒಳಗಾಗಿದ್ದವರು ನಾನಾಜಿ. ಆ ಬಳಿಕ ಆರೆಸ್ಸೆಸ್ ಎಂಬ ಸಮಾಜಮುಖಿ ಸಂಘದ ತಿರುಳನ್ನು ಮೆಚ್ಚಿ ಅದರತ್ತ ಚಿತ್ತ ಹರಿಸಿದರು. ಇವರ ಆಸಕ್ತಿಯ ಕ್ಷೇತ್ರವಾದ ಸಂಶೋಧನೆಯಲ್ಲಿಯೂ ಸಾಧನೆ ಮೆರೆದಿರುವ ನಾನಾಜಿ ನವದೆಹಲಿಯ ದೀನದಯಾಳ್ ಸಂಶೋಧನಾ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ದೇಶದಲ್ಲಿ ಜನಸಂಘ ಆರಂಭವಾದ ದಿನದಿಂದ ಅದರೊಂದಿಗೇ ಗುರುತಿಸಿಕೊಂಡಿದ್ದವರು ನಾನಾಜಿ. ಇವರು ರಾಷ್ಟ್ರಧರ್ಮ, ಪಾಂಚಜನ್ಯ, ಸ್ವದೇಶೀ ಪತ್ರಿಕೆಗಳಿಗೆ ಮಾರ್ಗದರ್ಶಕರಾಗಿಯೂ ಕೆಲಸ ಮಾಡಿದ್ದಾರೆ. ಈ ಸಂದರ್ಭದಲ್ಲಿ ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಈ ಪತ್ರಿಕೆಗಳ ಸಂಪಾದಕರಾಗಿದ್ದರು. 1967 ರಲ್ಲಿ ಉತ್ತರ ಪ್ರದೇಶದ ಮೊದಲ ಕಾಂಗ್ರೆಸೇತರ ಸರ್ಕಾರ ರಚನೆಗೂ ಕಾರಣರಾದವರು ನಾನಾಜಿ. ಚೌಧರಿ ಚರಣ್ ಸಿಂಗ್ ಹಾಗೂ ಡಾ. ಲೋಹಿಯಾ ಅವರು ನಾನಾಜೀ ಅವರಿಗೆ ಅತ್ಯಂತ ಆಪ್ತರಾಗಿದ್ದರು.
ಒಂದು ಬಾರಿ ಡಾ. ಲೋಹಿಯಾ ಅವರು ನಾನಾಜಿ ಅವರನ್ನು ಜನಸಂಘದ ಕಾರ್ಯಕರ್ತರ ಸಮ್ಮೇಳನಕ್ಕೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಅಲ್ಲಿ ಲೋಹಿಯಾ ಅವರಿಂದ ನಾನಾಜಿ ಅವರಿಗೆ ದೀನ ದಯಾಳ್ ಉಪಾಧ್ಯಾಯರನ್ನು ಭೇಟಿ ಮಾಡಿಸಿದರು. ಈ ಭೇಟಿ ದೇಶದಲ್ಲಿ ಕಾಂಗ್ರೆಸ್ಗಿಂತ ಭಿನ್ನವಾದ ರಾಜಕೀಯ ಮನಸ್ಸುಗಳ ಒಂದಾಗುವಿಕೆಗೆ ಸಾಕ್ಷಿಯಾಯಿತು. ನಾನಾಜಿ ದೇಶಮುಖ್ ಅವರು ವಿನೋಬಾ ಅವರ ಭೂದಾನ ಚಳುವಳಿ, ಬಿಜೆಪಿಯ ಸಂಪೂರ್ಣ ಕ್ರಾಂತಿ ಹೋರಾಟಗಳಲ್ಲಿಯೂ ಸಕ್ರಿಯರಾಗಿದ್ದರು.
ದೇಶದಲ್ಲಿ ತುರ್ತು ಪರಿಸ್ಥಿತಿಯ ಬಳಿಕ ಉತ್ತರ ಪ್ರದೇಶದ ಬಲರಾಂಪುರದಿಂದ ಲೋಕಸಭೆಗೂ ನಾನಾಜಿ ಆಯ್ಕೆಯಾಗುತ್ತಾರೆ. ಆ ಬಳಿಕ ಇವರು ಜನಸಂಘದ ಚಟುವಟಿಕೆಗಳಲ್ಲಿ ನಾನಾಜಿ ಅವರ ಸಕ್ರಿಯತೆ, ಕಾರ್ಯ ವೈಖರಿರನ್ನು ಗಮನಿಸಿದ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ನಾನಾಜಿ ದೇಶ್ಮುಖ್ ಅವರನ್ನು ಸಂಪುಟ ಸೇರಲು ಆಹ್ವಾನ ನೀಡುತ್ತಾರೆ. ಆದರೆ ಈ ಅವಕಾಶವನ್ನು ನಾನಾಜಿ ನಯವಾಗಿ ತಿರಸ್ಕರಿಸುತ್ತಾರೆ. ಬಳಿಕ ಅದರ ಮರುವರ್ಷವೇ ರಾಜಕೀಯ ಜೀವನಕ್ಕೂ ನಿವೃತ್ತಿ ಘೋಷಿಸುತ್ತಾರೆ. 60 ವರ್ಷದ ಬಳಿಕ ರಾಜಕೀಯ ಬಿಟ್ಟು, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಬೇಕು ಎಂಬ ಮಹತ್ವ ಆಶಯ ನಾನಾಜಿ ಅವರದ್ದಾಗಿತ್ತು.
ಗ್ರಾಮಗಳ ಅಭಿವೃದ್ಧಿಯಿಂದ ದೇಶ ಅಭಿವೃದ್ಧಿ ಹೊಂದುತ್ತದೆ. ಈ ಆಶಯದಲ್ಲಿ ನಂಬಿಕೆ ಇರಿಸಿದ್ದವರು ನಾನಾಜಿ. ಅದರಂತೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ‘ಚಿತ್ರಕೂಟ ಗ್ರಾಮೋದಯ ವಿದ್ಯಾಲಯ’ ಆರಂಭ ಮಾಡಿದ ಕೀರ್ತಿ ನಾನಾಜಿ ಅವರದ್ದು. ಅವರೇ ಅದರ ಮೊದಲ ಕುಲಪತಿಯೂ ಆಗಿದ್ದರು. ಈ ವಿಶ್ವವಿದ್ಯಾಲಯ ದೇಶದ ಪ್ರಥಮ ಗ್ರಾಮೀಣ ವಿವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ದೇಶದ ಶಿಕ್ಷಣ, ಆರೋಗ್ಯ, ಸ್ವಾವಲಂಬನೆಯ ಸದಾಶಯದ ಜೊತೆಗೆ ಅಭಿವೃದ್ಧಿಗಾಗಿ ಕೆಲಸ ಮಾಡಿದ ಮಹಾತ್ಮ ನಾನಾಜಿ ದೇಶ್ಮುಖ್. ಗ್ರಾಮಗಳ ಉದ್ದಾರವಾದರೆ ದೇಶ ಉದ್ದಾರವಾಗುತ್ತದೆ ಎಂಬ ನಂಬಿಕೆಯನ್ನು ಇಟ್ಟುಕೊಂಡಿದ್ದ ನಾನಾಜಿ ಗ್ರಾಮಗಳ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಾಕಿ, ಆ ಮೂಲಕ ಗ್ರಾಮ ವಿಕಾಸಕ್ಕೆ ತಮ್ಮದೇ ಆದ ಕೊಡುಗೆ ನೀಡಿದವರು. ಇಂತಹ ಧೀಮಂತ ವ್ಯಕ್ತಿ ನಾನಾಜಿ ದೇಶ್ಮುಖ್ 2010 ಫೆಬ್ರವರಿ 27 ರಂದು ಇಹಲೋಕ ತ್ಯಜಿಸಿದರು. ಕಾಯ ಅಳಿದಿದೆ. ಆದರೆ ಇವರ ಕಾಯಕ ಇಂದಿಗೂ ಜನಮಾನಸದಲ್ಲಿ ಇವರನ್ನು ಸದಾ ಸ್ಮರಣೀಯರನ್ನಾಗಿಸಿದೆ ಎಂದರೆ ತಪ್ಪಾಗಲಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.