ನವದೆಹಲಿ: ವಯೋವೃದ್ಧರನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗ ಹೊಸ ಕ್ರಮವೊಂದನ್ನು ಆಚರಣೆಗೆ ತರಲು ಸಿದ್ಧತೆ ನಡೆಸಿದೆ. ವಿಕಲಾಂಗರು ಮತ್ತು 80 ವರ್ಷಕ್ಕೂ ಮೇಲ್ಪಟ್ಟ ವೃದ್ಧರಿಗೆ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸುವ ಅವಕಾಶವನ್ನು ಒದಗಿಸುವ ಮೂಲಕ ಮತದಾನ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ.
ಈ ರೀತಿಯಲ್ಲಿ ಮತದಾನ ಮಾಡಲು ಪೂರಕವಾದ 12 ಡಿ ಅರ್ಜಿ ನಮೂನೆಯನ್ನು ಮತಗಟ್ಟೆ ಅಧಿಕಾರಿಗಳೇ ವಯೋವೃದ್ಧರ ಅಥವಾ ವಿಕಲಾಂಗರ ಮನೆಗೆ ತಲುಪಿಸುವ ಕಾರ್ಯವನ್ನು ಮಾಡಲಿದ್ದಾರೆ. ಚುನಾವಣೆಯ ಅಧಿಸೂಚನೆ ಹೊರಡಿಸಲಾದ ಐದು ದಿನಗಳಲ್ಲಿಯೇ ಈ ಅರ್ಜಿ ಫಾರಂಗಳನ್ನು ಸಂಬಂಧಿಸಿದವರ ಮನೆಗಳಿಗೆ ತಲುಪಿಸುವಂತೆಯೂ ಚುನಾವಣಾ ಆಯೋಗ ಎಲ್ಲಾ ರಾಜ್ಯಗಳ ಚುನಾವಣಾಧಿಕಾರಿಗಳಿಗೂ ಸೂಚನೆ ನೀಡಿದೆ.
ನೌಕರಿಯಲ್ಲಿರುವವರಿಗೆ ನೀಡಲಾಗುವ ಅಂಚೆ ಮತದಾನದ ಅವಕಾಶ ಮತ್ತು ವೃದ್ಧರು, ಅಂಗವಿಕಲರನ್ನು ಗಮನದಲ್ಲಿಟ್ಟುಕೊಂಡು ಜಾರಿಗೊಳಿಸಲಾದ ಈ ಪ್ರಕ್ರಿಯೆಯ ನಡುವೆ ವ್ಯತ್ಯಾಸಗಳಿವೆ. ಈ ಪ್ರಕ್ರಿಯೆಯಲ್ಲಿ ಅರ್ಜಿ ನಮೂನೆ ಭರ್ತಿ ಮಾಡುವುದು, ಅಧಿಕಾರಿಗಳೇ ಮತಪತ್ರವನ್ನು ತಲುಪಿಸುವುದು ಮತ್ತು ಪ್ರಕ್ರಿಯೆಯಲ್ಲಿ ಪಾರದರ್ಶಕ ವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗುವುದು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. ಈ ಮತಪತ್ರಗಳನ್ನು ನಿಯೋಜಿಸಲ್ಪಟ್ಟ ಚುನಾವಣಾ ತಂಡಗಳು ಪೂರ್ವ ನಿಗದಿತ ದಿನಾಂಕಗಳಂದೇ ತಲುಪಿಸಿ ಬಳಿಕ ಅವುಗಳನ್ನು ಮರಳಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಲಿದ್ದಾರೆ ಎಂದೂ ಮೂಲಗಳು ಮಾಹಿತಿ ನೀಡಿವೆ.
ಈ ಹೊಸ ಪ್ರಕ್ರಿಯೆ ಎಲ್ಲಾ ಚುನಾವಣೆ ಮತ್ತು ಉಪ ಚುನಾವಣಾ ಪ್ರಕ್ರಿಯೆಗಳಿಗೂ ಅನ್ವಯವಾಗಲಿದೆ ಎಂದೂ ಚುನಾವಣಾ ಆಯೋಗ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.