ಹಳೆ ಬೇರು, ಹೊಸ ಚಿಗುರು.. ಸೇರಿರಲು ಮರ ಸೊಗಸು ಎಂಬಂತೆ ಕುಟುಂಬ ವ್ಯವಸ್ಥೆಯ ಶಕ್ತಿ, ಸಮಾಜದ ಸಂಸ್ಕೃತಿಗಳನ್ನು ಮುಂದಿನ ತಲೆಮಾರಿಗೆ ದಾಟಿಸುವ, ತಮ್ಮ ಅನುಭವಗಳ ಮೂಲಕವೇ ಕಿರಿಯರ ಬದುಕಿಗೆ ಬೆಳಕು ತೋರುವವರು ನಮ್ಮ ಹಿರಿಯರು. ನಮ್ಮ ಹಿರಿಯರ ಮೂಲಕವೇ ಜೀವನಾದರ್ಶಗಳು, ಸರಿ-ತಪ್ಪುಗಳನ್ನು ತಿಳಿದುಕೊಳ್ಳುವ ಅರಿವು, ಕುಟುಂಬದ ಸಂಪ್ರದಾಯ, ಆಚಾರ ವಿಚಾರಗಳ ಜೊತೆಗೆ ಸಾಮಾಜಿಕ ಜೀವನವನ್ನು ಹೇಗೆ ನಡೆಸಬೇಕು ಎಂಬುದೂ ಮತ್ತೊಂದು ತಲೆಮಾರಿಗೆ ದಾಟಿಕೊಂಡು ಬರುತ್ತಿದೆ ಎಂಬುದು ಒಪ್ಪತಕ್ಕಂತಹ ಮಾತು.
ಇಂದು ಕುಟುಂಬಗಳ ಚಿತ್ರಣ ಬದಲಾಗಿದೆ. ಹಿಂದೆಲ್ಲಾ ಅವಿಭಕ್ತ ಕುಟುಂಬ. ಅದಕ್ಕೊಬ್ಬ ಆ ಮನೆಯ ಹಿರಿತಲೆ ಯಜಮಾನ. ಅವನು ಹಾಕಿಕೊಟ್ಟಂತೆ, ಹೇಳಿಕೊಟ್ಟಂತೆ ಬದುಕು ಸಾಗಿಸುವ ಕ್ರಮ ನಮ್ಮಲ್ಲಿತ್ತು. ಈಗ ಹಾಗಿಲ್ಲ. ಆಧುನಿಕತೆ ಹೆಚ್ಚಾದಂತೆ ಜನರ ಜೀವನಕ್ರಮ ಬದಲಾಗಿದೆ. ಹಳ್ಳಿಯ ಹಿರಿಯರ ಜೊತೆಗಿನ ಕೂಡು ಕುಟುಂಬ ತುಂಡು ತುಂಡಾಗಿ ‘ಗಂಡ, ಹೆಂಡತಿ, ಮಕ್ಕಳು’ ಇವಿಷ್ಟೇ ಆಗಿ ನಗರ ಜೀವನದತ್ತ ಮುಖ ಮಾಡಿದ್ದಾರೆ. ಅವಿಭಕ್ತ ಕುಟುಂಬದ ಮೂಲಕ ಮನೆಯ ಸದಸ್ಯರು ಅವಿಭಾಜ್ಯ ಅಂಗಗಳಂತೆ ಇದ್ದವರು, ಇಂದು ಈ ಕಲ್ಪನೆಯಿಂದಲೇ ಸಂಪೂರ್ಣ ಹೊರಬಂದು ತಮ್ಮದೇ ಪುಟಾಣಿ ಗೂಡುಗಳಲ್ಲಿ ವಾಸಿಸುವಂತಾಗಿದೆ. ಮಕ್ಕಳಿಗೆ ವರ್ಷಕ್ಕೊಮ್ಮೆ ಶಾಲಾ ಬಿಡುವಿನ ಸಮಯದಲ್ಲಿ ತಾತ, ಅಜ್ಜಿಯರ ಮನೆಯ ದರ್ಶನ ಭಾಗ್ಯವಾಗುವ ವರೆಗೆ ಜಗತ್ತು ಮುಂದುವರೆದಿದೆ. ಕೆಲವು ಮಕ್ಕಳಿಗೆ ಆ ಭಾಗ್ಯವೂ ಇಲ್ಲ. ಇನ್ನು ಮಕ್ಕಳಿದ್ದರೂ ಕೆಲವು ಹಿರಿಯರು ತಮ್ಮ ವೃದ್ಧಾಪ್ಯದಲ್ಲಿ ಯಾರೂ ಇರದಂತೆ ಬದುಕುವ ಅನಿವಾರ್ಯತೆಯನ್ನೂ ಕೆಲವು ಕಡೆಗಳಲ್ಲಿ ಕಾಣಬಹುದು.
ಅಂದ ಹಾಗೆ ಇಂದು ಅಂತರರಾಷ್ಟ್ರೀಯ ಹಿರಿಯ ನಾಗರಿಕರ ದಿನ. ಈ ಸಂದರ್ಭದಲ್ಲಿ ನಮ್ಮ ಸಮಾಜದಲ್ಲಿ ಕೆಲವು ಹಿರಿಯರು ಅನುಭವಿಸುವ ನೋವುಗಳ ಬಗ್ಗೆ ನಾವು ತಿಳಿದುಕೊಳ್ಳಲೇ ಬೇಕು. ತಂದೆ, ಮಕ್ಕಳು, ಮೊಮ್ಮಕ್ಕಳು ಎಂಬ ಬಾಂಧವ್ಯ ಪ್ರಸ್ತುತ ಸಮಾಜದಲ್ಲಿ ಯಾವ ರೀತಿಯಲ್ಲಿದೆ. ಹಿರಿಯರಿಗೆ ಪೂರಕ ಸ್ಥಾನಮಾನ, ಗೌರವ, ಅವರೆಲ್ಲಾ ಅಗತ್ಯತೆಗಳನ್ನು ಪೂರೈಕೆ ಮಾಡುವಲ್ಲಿ ಅವರೇ ಎಷ್ಟು ಸಮರ್ಥರಾಗಿದ್ದಾರೆ ಅಥವಾ ಅವರ ಕುಟುಂಬ ಈ ಸಮಯದಲ್ಲಿ ಅವರನ್ನು ಯಾವ ರೀತಿಯಲ್ಲಿ ಪೋಷಿಸುತ್ತಿದೆ ಎಂಬುದರತ್ತಲೂ ನಾವು ಗಮನ ಹರಿಸಬೇಕಿದೆ. ವಯಸ್ಸು ಕಾಲಕ್ಕೆ ತಕ್ಕಂತೆ ಏರುತ್ತಾ ಹೋಗುವುದು ಪ್ರಕೃತಿ ಸಹಜ ಕ್ರಿಯೆ. ಈ ಸಹಜ ಕ್ರಿಯೆ ಹಿರಿಯ ನಾಗರಿಕರಿಗೆ ತಮ್ಮ ಕುಟುಂಬದ ಮೂಲಕವೇ ಎಷ್ಟರ ಮಟ್ಟಿಗೆ ಭದ್ರತೆ ಒದಗಿಸಿದೆ ಎಂಬುದನ್ನು ಗಮನಿಸಬೇಕು. ಎಲ್ಲವೂ ಸರಿಯಾಗಿದ್ದರೆ ಸರಿ, ಇಲ್ಲವಾದರೆ ಯಾಕೆ, ನಾವು ಎಲ್ಲಿ ತಪ್ಪಿದ್ದೇವೆ ಎಂಬುದನ್ನು ತಿಳಿಯುವ ಪ್ರಯತ್ನ ನಮ್ಮಿಂದಾಗಬೇಕು. ಇದು ಅಗತ್ಯತೆಯೇ ಹೌದು.
ಮನುಷ್ಯ ವೃದ್ಧಾಪ್ಯ ಸ್ಥಿತಿಯಲ್ಲಿ ಮತ್ತೆ ಮಗುವಂತಾಗುತ್ತಾನೆ. ಈ ಸಂದರ್ಭದಲ್ಲಿ ಆತನಿಗೆ ತನ್ನ ಕುಟುಂಬದವರ ಪ್ರೀತಿ, ಕಾಳಜಿ ಬಹಳೇ ಮುಖ್ಯವಾಗುತ್ತದೆ. ಇದಕ್ಕಾಗಿ ಆತ ಹಂಬಲಿಸುತ್ತಾನೆ. ಆದರೆ ವಿದ್ಯಾವಂತ ಮಕ್ಕಳು ಹಿರಿಯರ ಜೊತೆಗೆ ನಿಲ್ಲುವ ಸ್ಥಿತಿಯಲ್ಲಿಲ್ಲ. ಕೆಲಸ, ಮಕ್ಕಳ ವಿದ್ಯಾಭ್ಯಾಸ ಮೊದಲಾದ ಕಾರಣಗಳಿಂದ ಹಿರಿಯರನ್ನು ಬಿಟ್ಟು ಇನ್ನೆಲ್ಲೋ ಹೋಗಿ ಬದುಕುತ್ತಾನೆ. ಇಂತಹ ವಿಚಾರಗಳಿಂದಾಗಿ ಹಲವು ಸಂದರ್ಭಗಳಲ್ಲಿ ಎಲ್ಲಾ ಇದ್ದರೂ ಕೆಲವೊಮ್ಮೆ ಹಿರಿ ಜೀವಗಳು ವೃದ್ಧಾಶ್ರಮಗಳಲ್ಲಿ ಕಳೆಯಬೇಕಾಗುತ್ತದೆ. ತಾವು ಮುತ್ತಿನಂತೆ ಸಾಕಿದ ಮಕ್ಕಳು ಈ ಸಂದರ್ಭದಲ್ಲಿ ನಮ್ಮೊಂದಿಗಿದ್ದು ಸಂತೋಷ ನೀಡುತ್ತಿಲ್ಲವಲ್ಲಾ ಎಂದು ಕಣ್ಣೀರಿಡುತ್ತಾರೆ. (ಎಲ್ಲಾ ಕುಟುಂಬಗಳಲ್ಲಿಯೂ ಹೀಗಾಗುತ್ತದೆ ಎಂದಲ್ಲ. ಆದರೆ ಕೆಲವು ಕಡೆಗಳಲ್ಲಿ ಇದೇ ಕಣ್ಣಿಗೆ ಕಾಣುವ ಸತ್ಯ).
ಹೌದು ಹಿರಿಯರಿಗೆ ತಮ್ಮ ಕೊನೆಗಾಲದಲ್ಲಿ ತಮ್ಮ ಮಕ್ಕಳ ಜೊತೆಗೆ, ಮೊಮ್ಮಕ್ಕಳ ಜೊತೆಗೆ ಬದುಕಬೇಕು ಎಂಬ ಮಹತ್ವಾಕಾಂಕ್ಷೆ ಇರುತ್ತದೆ. ಆದರೆ ನಮಗೆ ನಮ್ಮ ಜೀವನಕ್ಕೆ ಬೇಕಾದದ್ದನ್ನು ಗಿಟ್ಟಿಸಲು ಪ್ರಯತ್ನ ಪಡುವ ಯತ್ನ. ಈ ನಡುವೆ ಹಿರಿಯರ ಬಗ್ಗೆ ಅಸಡ್ಡೆ ಹುಟ್ಟುತ್ತದೆ. ಅವರು ಕಾಯಿಲೆ ಬಿದ್ದರೆ ಅವರಿಗೆ ಬೇಕಾದ ಚಿಕಿತ್ಸೆ, ಪ್ರೀತಿ ತುಂಬಿದ ಮಾತುಗಳನ್ನಾಡಲು ನಮಗೆ ಸಮಯವಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಆಧುನಿಕತೆ ಎಂಬ ಮಾಯೆ ನಾನು ನನ್ನವರು ಎಂಬ ಭಾವವನ್ನು, ಕುಟುಂಬ ವ್ಯವಸ್ಥೆಯನ್ನು ಒಟ್ಟಾರೆಯಾಗಿ ಸಾಮಾಜಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ.
ಆಧುನಿಕತೆಯ ಮುಷ್ಟಿಯಲ್ಲಿ ಹೆತ್ತವರು, ಮಕ್ಕಳು, ಬಂಧುತ್ವದ ಬೇರು ದೃಢತೆ ಕಳೆದುಕೊಳ್ಳುವ ಭಾವ. ಹಿರಿಯರ ಮೇಲಿನ ಕಾಳಜಿ ಇಲ್ಲ. ನಾಳೆ ನಮಗೂ ವಯಸ್ಸಾಗುತ್ತದೆ ಎಂಬ ಕನಿಷ್ಟ ಜ್ಞಾನವನ್ನು ಸಹಾ ಮರೆತು ಬದುಕುತ್ತಿದ್ದೇವೆ ಎಂದರೆ ಇದು ದುರಂತವಲ್ಲದೆ ಮತ್ತೇನು. ಈಗಲೇ ಹೀಗಾದರೆ ನಮ್ಮ ವೃದ್ಧಾಪ್ಯದ ಸಮಯಕ್ಕೆ ಪರಿಸ್ಥಿತಿ ಹೇಗಿರಬಹುದು ಯೋಚಿಸಿ. ಹೌದು, ಬದುಕು ಕಣ್ಣು ಮುಚ್ಚಿ ತೆರೆಯುವ ಮುನ್ನ ಮುಗಿಯುತ್ತದೆ. ಈ ನಡುವಿನ ಬದುಕಿನಲ್ಲಿ ಮಾನವೀಯ ಮೌಲ್ಯಗಳನ್ನು ಮಾರಿ ಜೀವಿಸುವ ಜನರು ನಾವಾಗದಿರೋಣ. ನಾವಿಂದು ನಮ್ಮ ಹಿರಿಯರ ಬಗ್ಗೆ ಕಾಳಜಿ ವಹಿಸಿದರೆ, ನಮ್ಮ ಬದುಕಿನ ಇಳಿ ಸಂಜೆಯೂ ಚೆನ್ನಾಗಿರಲು ಸಾಧ್ಯ. ಏಕೆಂದರೆ ಮಕ್ಕಳು ಹೇಳಿ, ಕೇಳಿ ತಿಳಿಯುವುದಕ್ಕಿಂತ ನಮ್ಮನ್ನು ನೋಡಿ ಆಚರಣೆ ಅನುಸರಣೆ ಮಾಡುವುದೇ ಹೆಚ್ಚು. ಮರೆಯದಿರೋಣ.
ಅಂದ ಹಾಗೆ ಈ ಬಾರಿಯ ಅಂತರರಾಷ್ಟ್ರೀಯ ಹಿರಿಯ ನಾಗರಿಕರ ದಿನವನ್ನು ಬಿಜೆಪಿ ಸರ್ಕಾರ ಕೆಲವು ಘೋಷಣೆಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತಿದೆ. 2020-30 ರ ದಶಕವನ್ನು ಹಿರಿಯರ ದಶಕ ಎಂದೇ ಪರಿಗಣಿಸಲು ಮುಂದಾಗಿದೆ. ವಯಸ್ಸು ಮತ್ತು ವಯಸ್ಸಾಗುವಿಕೆಯ ಸೂಕ್ತ ನಿರ್ವಹಣೆಯು ಸಾಂಕ್ರಾಮಿಕತೆಯ ತೀವ್ರತೆಯನ್ನು ಬದಲಾಯಿಸುವುದೇ ಎಂಬ ನಿಟ್ಟಿನಲ್ಲಿಯೂ ಗಮನ ವಹಿಸಲು ಮುಂದಾಗಿದೆ. ಜೊತೆಗೆ ಹಿರಿಯ ನಾಗರಿಕರ ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ, ಗುಣಮಟ್ಟದ ಆರೈಕೆ ನೀಡಲು ‘ರಾಷ್ಟ್ರೀಯ ವಯೋವೃದ್ಧರ ಆರೋಗ್ಯ ಆರೈಕೆ’ ಕಾರ್ಯಕ್ರಮವನ್ನು ಜಾರಿಗೆ ತಂದಿದೆ.
ಸರ್ಕಾರಗಳು ಹಿರಿಯ ನಾಗರಿಕರ ಕಾಳಜಿಗೆ ಇನ್ನೂ ಅನೇಕ ಕ್ರಮಗಳನ್ನು ಜಾರಿಗೆ ತಂದಿದೆ. ಈ ಸಂದರ್ಭದಲ್ಲಿ ನಾವು ಯೋಚಿಸಬೇಕಾದದ್ದು, ಅರಿವಿಗೆ ತಂದುಕೊಳ್ಳಬೇಕಾದದ್ದು ‘ಹಿರಿಯರಿಲ್ಲದೆ ನಾವಿಲ್ಲ’. ಬಾಲ್ಯದಲ್ಲಿ ನಮಗೆ ನೆರಳಾದ ಹಿರಿಯರಿಗೆ ಅವರ ವೃದ್ಧಾಪ್ಯದ ಅವಧಿಯಲ್ಲಿ ನಾವು ಹೆಗಲಾಗಬೇಕು ಎಂಬುದು. ಹೀಗಾದಲ್ಲಿ ದೇಶದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಜೊತೆಗೆ ಕುಟುಂಬ ವ್ಯವಸ್ಥೆ, ಸಂಪ್ರದಾಯ, ಸಾಮಾಜಿಕ ಭದ್ರತೆಯೂ ಉಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂಬುದರಲ್ಲಿ ಸಂದೇಹವೇ ಬೇಡ.
✍️ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.