ಕೃಷಿ ಕ್ಷೇತ್ರಗಳನ್ನು ಸುಧಾರಣೆ ಗೊಳಿಸುವ ಮತ್ತು ರೈತರನ್ನು ಸಬಲೀಕರಣಗೊಳಿಸುವ ಆಶಯದೊಂದಿಗೆ ಕೇಂದ್ರ ಸರಕಾರವು ಲೋಕಸಭೆಯಲ್ಲಿ ಎರಡು ಪ್ರಮುಖ ಮಸೂದೆಗಳನ್ನು ಅನುಮೋದನೆಗೊಳಿಸಿದೆ. ಕೃಷಿ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ 2020 ಮತ್ತು ಬೆಲೆ ಭರವಸೆ ಮತ್ತು ರೈತ (ದತ್ತಿ ಮತ್ತು ಭದ್ರತೆ) ಒಪ್ಪಂದ ಮತ್ತು ಕೃಷಿ ಸೇವೆಗಳ ಮಸೂದೆ 2020 ಅನ್ನು ಸಂಸತ್ತಿನ ಕೆಳಮನೆಯಲ್ಲಿ ಅಂಗೀಕರಿಸಲಾಗಿದೆ. ಈ ಮಸೂದೆಗಳ ಬಗ್ಗೆ ದೇಶವ್ಯಾಪಿಯಾಗಿ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಪ್ರತಿಪಕ್ಷಗಳು ಈ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದ್ದು, ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಕೂಡ ನೀಡಿದೆ. ಕೆಲ ರೈತ ಸಂಘಟನೆಗಳು ಕೂಡ ಪ್ರತಿಭಟನೆಯ ಎಚ್ಚರಿಕೆ ನೀಡಿದೆ. ಇಷ್ಟಕ್ಕೂ ಕೃಷಿ ಕ್ಷೇತ್ರಗಳನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ತರಲಾದ ಈ ಮಸೂದೆಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅಪಸ್ವರ ಯಾಕೆ ಕೇಳಿಬರುತ್ತಿದೆ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಇದಕ್ಕೆ ಕಾರಣ ಕೆಲವು ಊಹಾಪೋಹಗಳು. ಕೃಷಿ ಉತ್ಪನ್ನಗಳನ್ನು ಸರ್ಕಾರ ಖರೀದಿ ಮಾಡುವುದು ನಿಂತೇ ಹೋಗುತ್ತದೆ ಎಂಬ ಗೊಂದಲವನ್ನು ರೈತರಲ್ಲಿ ಮೂಡಿಸಲಾಗುತ್ತಿದೆ. ಇದುವೇ ಈ ಮಸೂದೆಗಳಿಗೆ ವಿರೋಧ ವ್ಯಕ್ತವಾಗಲು ಕಾರಣ.
ಈ ಮಸೂದೆಗಳ ಬಗ್ಗೆ ಮೂಡಿರುವ ಗೊಂದಲಗಳನ್ನು ಪರಿಹರಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಮಸೂದೆ ಯಾವುದೇ ತರದಲ್ಲಿ ರೈತರಿಗೆ ಅನಾನುಕೂಲ ಉಂಟು ಮಾಡುವುದಿಲ್ಲ ಎಂಬ ಭರವಸೆಯನ್ನು ನೀಡಿದ್ದಾರೆ. ಬೆಳೆಗಳ ಎಂಎಸ್ಪಿ ಮೇಲೆ ಈ ಮಸೂದೆ ಪರಿಣಾಮ ಬೀರುವುದಿಲ್ಲ, ರೈತರ ಬೆಳೆಗಳನ್ನು ಖರೀದಿ ಮಾಡುವುದನ್ನು ಸರ್ಕಾರ ಮುಂದುವರಿಸುತ್ತದೆ ಎಂಬ ಭರವಸೆಯನ್ನು ನೀಡಿದ್ದಾರೆ.
ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ, 2020ಯ ಅನುಮೋದನೆಯಿಂದ ರೈತರಿಗೆ ತಮ್ಮ ಆಯ್ಕೆಯ ಸ್ಥಳಗಳಲ್ಲಿ ಉತ್ತಮ ದರಗಳಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಇನ್ನು ಮುಂದೆ ಮಾರಾಟ ಮಾಡಬಹುದು, ಇದು ಖರೀದಿದಾರರ ಸಂಖ್ಯೆಯನ್ನು ವೃದ್ಧಿಸಲಿದೆ. ಈರುಳ್ಳಿ ಮತ್ತು ಬಟಾಟೆ, ಆಹಾರ ಧಾನ್ಯಗಳು, ತೈಲ ಬೀಜಗಳು ಮತ್ತು ದ್ವಿದಳ ಧಾನ್ಯಗಳಂತಹ ಅತ್ಯಗತ್ಯ ಬೆಳೆಗಳನ್ನು ಅತ್ಯಗತ್ಯ ಸರಕುಗಳ ಕಾಯ್ದೆ ಪಟ್ಟಿಯಿಂದ ಹೊರಗಿಡಲಾಗಿದೆ. ಇತರ ರಾಜ್ಯಗಳ ಪರವಾನಗಿ ಹೊಂದಿದ ವ್ಯಾಪಾರಿಗಳೊಂದಿಗೆ ಇನ್ನು ಮುಂದೆ ರೈತರು ಒಪ್ಪಂದಗಳನ್ನು ಮಾಡಿಕೊಳ್ಳಬಹುದು. ಇದು ಮಾರುಕಟ್ಟೆಯಲ್ಲಿ ಸಹಕಾರವನ್ನು ವೃದ್ಧಿಸಲಿದೆ ಮತ್ತು ರೈತರಿಗೆ ಅವರ ಉತ್ಪನ್ನಗಳಿಗೆ ಹೆಚ್ಚಿನ ಬೆಲೆಯನ್ನು ದೊರಕಿಸಿಕೊಡಲಿದೆ. ಈ ಮಸೂದೆ ಅಡಿ, ಪಾನ್ ನಂಬರ್ ಹೊಂದಿದ ವ್ಯಾಪಾರಿಗಳು ವ್ಯಾಪಾರ ನಡೆಸಲು ಅರ್ಹರಾಗಿರುತ್ತಾರೆ. ಎಲೆಕ್ಟ್ರಾನಿಕ್ ಟ್ರೇಡಿಂಗ್ ವೇದಿಕೆಗಳ ಮೂಲಕ ರೈತರು ಮತ್ತು ವ್ಯಾಪಾರಿಗಳು ತಮ್ಮ ರಾಜ್ಯ ಅಥವಾ ಇತರ ರಾಜ್ಯಗಳೊಂದಿಗೆ ವ್ಯಾಪಾರದಲ್ಲಿ ತೊಡಗಿಕೊಳ್ಳಬಹುದು. ಈ ಮಸೂದೆಯು ‘ಒಂದು ರಾಷ್ಟ್ರ ಒಂದು ಮಾರುಕಟ್ಟೆ’ ಧ್ಯೇಯವನ್ನು ಉತ್ತೇಜಿಸಲಿದೆ ಮತ್ತು ದೇಶದಾದ್ಯಂತ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಿದೆ.
ಬೆಲೆ ಭರವಸೆ ಮತ್ತು ರೈತ (ದತ್ತಿ ಮತ್ತು ಭದ್ರತೆ) ಒಪ್ಪಂದ ಮತ್ತು ಕೃಷಿ ಸೇವೆಗಳ ಮಸೂದೆ 2020 ಅನುಮೋದನೆಯಿಂದ, ರೈತರಿಗೆ ಇನ್ನು ಮುಂದೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಆಹಾರ ಉತ್ಪನ್ನಗಳನ್ನು ಉತ್ಪಾದಿಸುವ ಕಂಪನಿಗಳೊಂದಿಗೆ, ಸಗಟು ಮಾರಾಟಗಾರರೊಂದಿಗೆ, ಚಿಲ್ಲರೆ ವ್ಯಾಪಾರಿಗಳೊಂದಿಗೆ ಮತ್ತು ರಫ್ತುದಾರರೊಂದಿಗೆ ನೇರ ಒಪ್ಪಂದ ಅಥವಾ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಳ್ಳಲು ಸಾಧ್ಯವಾಗಲಿದೆ. ಉತ್ಪನ್ನಗಳ ಮಾರಾಟವನ್ನು ಕಂಪನಿ ಅಥವಾ ಉದ್ಯಮಿಗಳೊಂದಿಗೆ ನಿರ್ಧರಿಸಿದ ಬಳಿಕ, ಉತ್ತಮ ಬೆಳೆ ಇಳುವರಿಗಾಗಿ ಅಗತ್ಯ ವಿಧಾನಗಳು ಅಥವಾ ಒಳಹರಿವುಗಳನ್ನು ಒದಗಿಸುವ ಜವಾಬ್ದಾರಿಯನ್ನು ಖರೀದಿದಾರರು ಹೊಂದಿರುತ್ತಾರೆ. ಸರಿಯಾದ ಕೃಷಿ ಯಂತ್ರೋಪಕರಣಗಳು ಮತ್ತು ಉಪಕರಣಗಳ ವ್ಯವಸ್ಥೆಯನ್ನು ಖರೀದಿದಾರರೇ ಮಾಡುತ್ತಾರೆ. ಖರೀದಿದಾರನು ರೈತರಿಗೆ ತಾಂತ್ರಿಕ ಮಾರ್ಗದರ್ಶನ ಮತ್ತು ಸಲಹೆಯನ್ನು ನೀಡಲಿದ್ದಾನೆ ಮತ್ತು ಬೆಳೆ ಅಪಾಯಗಳ ಸಂದರ್ಭದಲ್ಲಿ ಸಂಪೂರ್ಣ ಅಥವಾ ಭಾಗಶಃ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾನೆ. ಉತ್ಪಾದನೆಯ ಸಂದರ್ಭದಲ್ಲಿ ಬೆಳೆ ರೈತನ ಮಾಲೀಕತ್ವದಲ್ಲಿಯೇ ಇರುತ್ತದೆ ಮತ್ತು ಬೆಳೆ ವಿಮೆಗೆ ಒಳಪಡಲಿದೆ ಮತ್ತು ಅಗತ್ಯವಿದ್ದರೆ ರೈತರು ಹಣಕಾಸು ಸಂಸ್ಥೆಯಿಂದ ಸಾಲ ತೆಗೆದುಕೊಳ್ಳಬಹುದು. ಒಪ್ಪಂದದ ಅಡಿಯಲ್ಲಿ ಬೆಳೆದ ಬೆಳೆಗಳಿಗೆ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಅಗತ್ಯ ಸರಕುಗಳ ಕಾಯ್ದೆಯ ನಿಬಂಧನೆಗಳಿಗೆ ಸಂಬಂಧಿಸಿದ ನಿಯಮಗಳು ಮತ್ತು ಕಾನೂನುಗಳಿಂದ ವಿನಾಯಿತಿ ನೀಡಲಾಗುತ್ತದೆ.
ಈ ಎರಡು ಮಸೂದೆಗಳ ಮಂಡನೆಯಿಂದ ಇನ್ನು ಮುಂದೆ ರೈತರ ಉತ್ಪನ್ನಗಳನ್ನು ಸರ್ಕಾರ ಖರೀದಿ ಮಾಡುವುದಿಲ್ಲವೇ ಎಂಬ ಅನುಮಾನ ಮೂಡುವುದು ಸಹಜ. ಆದರೆ ಆ ರೀತಿ ಆಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಎಂದಿನಂತೆ ರೈತರಿಂದ ಸರ್ಕಾರದ ಖರೀದಿ ಮುಂದುವರೆಯಲಿದೆ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ. ರೈತರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುವ ಸಲುವಾಗಿ ಮತ್ತು ಮಧ್ಯವರ್ತಿಗಳ ಹಾವಳಿಯಿಂದ ರೈತರನ್ನು ರಕ್ಷಿಸುವ ಸಲುವಾಗಿ ಈ ಮಸೂದೆಯನ್ನು ತರಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮಸೂದೆ ಮಂಡನೆ ಮಾಡಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಕೂಡ, ಎರಡು ಮಸೂದೆಗಳು ಬೆಳೆಗಳ ಎಂಎಸ್ಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ರೈತರಿಂದ ಎಂಎಸ್ಪಿ ಮೇಲೆ ಬೆಳೆಗಳ ಖರೀದಿ ಮುಂದುವರಿಯುತ್ತದೆ ಎಂದು ಸದನಕ್ಕೆ ಭರವಸೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.