ಇಂದು ಹೈದರಾಬಾದ್ ವಿಮೋಚನಾ ದಿನ. ಹೈದರಾಬಾದಿನ ನಿಜಾಮರ ದರ್ಪವನ್ನು ಮುರಿದು ತೆಲಂಗಾಣ, ಮಹಾರಾಷ್ಟ್ರದ ಮರಾಠಾವಾಡ ಮತ್ತು ಕರ್ನಾಟಕದ ಕಲ್ಯಾಣ ಕರ್ನಾಟಕ ಪ್ರದೇಶಗಳನ್ನು ಭಾರತ ಒಕ್ಕೂಟಕ್ಕೆ ಸೇರ್ಪಡೆಗೊಳಿಸಿದ ದಿನ. 1948ರ ಸೆ.17ರಂದು ಹೈದರಾಬಾದ್ ನಿಜಾಮರಿಂದ ಈ ಭೂಪ್ರದೇಶಗಳು ಸ್ವತಂತ್ರಗೊಂಡವು.
1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ, ಹೈದರಾಬಾದಿನ ನಿಜಾಮರು ಮಾತ್ರ ತಮ್ಮ ಸಂಸ್ಥಾನಗಳನ್ನು ಭಾರತದ ಜತೆ ವಿಲೀನಗೊಳಿಸಲು ನಿರಾಕರಿಸಿದ್ದರು. ಆ ಸಂಸ್ಥಾನಗಳ ಬಹುಪಾಲು ಜನರು ಭಾರತಕ್ಕೆ ಸೇರಲು ಒಲವು ವ್ಯಕ್ತಪಡಿಸಿದ್ದರೂ ಕೂಡ ಅವರ ಆಶಯವನ್ನು ಧಿಕ್ಕರಿಸಿ ಹೈದರಾಬಾದಿನ ನಿಜಾಮ ಮೀರ್ ಉಸ್ಮಾನ್ ಅಲಿ ತನ್ನ ಸಂಸ್ಥಾನಗಳನ್ನು ಸ್ವತಂತ್ರ ರಾಷ್ಟ್ರ ಎಂದು ಘೋಷಣೆ ಮಾಡಿದ್ದ. ಹೀಗಾಗಿ ಅನಿವಾರ್ಯವಾಗಿ ಸ್ವಾತಂತ್ರ್ಯದ ಬಳಿಕ ಹೈದರಾಬಾದ್ ವಿಮೋಚನಾ ಹೋರಾಟಕ್ಕೆ ದೇಶ ಧುಮುಕ ಬೇಕಾಯಿತು. ಶಸ್ತ್ರಾಸ್ತ್ರ ಬಳಸಿ ಯುದ್ಧವನ್ನು ನಡೆಸಿ ಹೈದರಾಬಾದನ್ನು ವಿಮೋಚನೆಗೊಳಿಸಬೇಕಾಯಿತು.
ಲಕ್ಷಾಂತರ ಜನರು ಹೈದರಾಬಾದ್ ಪ್ರಾಂತ್ಯ ವಿಮೋಚನೆಗಾಗಿ ಹೋರಾಡಿದರು. ಇದಕ್ಕಾಗಿ ತಮ್ಮ ಮನೆಮಠಗಳನ್ನು ಕಳೆದುಕೊಂಡರು, ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದರು. 1942ರಲ್ಲಿ ಹೈದರಾಬಾದ್ ರಾಜ್ಯದ ಜನಸಂಖ್ಯೆ ಸುಮಾರು 1 ಕೋಟಿ 63 ಲಕ್ಷ ಇತ್ತು. ಈ ರಾಜ್ಯದ ವಿಸ್ತೀರ್ಣ 82,313 ಚದರ ಮೈಲು ಆಗಿತ್ತು. ತೆಲುಗು, ಕನ್ನಡ ಮತ್ತು ಮರಾಠಿ ಭಾಷೆಗಳನ್ನು ಅಲ್ಲಿ ಮಾತನಾಡಲಾಗುತ್ತಿತ್ತು. ಕರ್ನಾಟಕದ ಕಲ್ಯಾಣ ಕರ್ನಾಟಕ ಭಾಗಗಳು, ಮಹಾರಾಷ್ಟ್ರದ ಮರಾಠಾವಾಡ , ತೆಲಂಗಾಣ ಸೇರಿದಂತೆ 16 ಜಿಲ್ಲೆಗಳು ಇದರಲ್ಲಿ ಇದ್ದವು. ಇಲ್ಲಿನ ಮುಕ್ಕಾಲು ಜನಸಂಖ್ಯೆ ಹಿಂದೂ ಧರ್ಮಿಯರು ಆಗಿದ್ದರು. ನಿಜಾಮರ ದಮನಕಾರಿ ನೀತಿಗಳು ಇವರನ್ನು ತತ್ತರಿಸುವಂತೆ ಮಾಡಿದ್ದವು.
ಹೈದರಾಬಾದ್ ಪ್ರಾಂತ್ಯವನ್ನು ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಿದ್ದ ಹೈದರಾಬಾದಿನ ನಿಜಾಮ, ಮುಸ್ಲಿಂ ರಾಷ್ಟ್ರವನ್ನು ಸ್ಥಾಪನೆ ಮಾಡುವ ಹಪಹಪಿಗೆ ಬಿದ್ದಿದ್ದ. ಈತನ ವಿರುದ್ಧ ಹೋರಾಟ ನಡೆಸುವುದೇ ದೊಡ್ಡ ಸವಾಲಿನ ಕಾರ್ಯವಾಗಿತ್ತು. ಎರಡು ಲಕ್ಷಕ್ಕೂ ಹೆಚ್ಚು ತರಬೇತಿ ಹೊಂದಿದ ಉಗ್ರ ಮನಸ್ಥಿತಿಯ ಸೈನಿಕರು ಆತನ ಬಳಿ ಇದ್ದರು.
ಹೈದರಾಬಾದ್ ನಿಜಾಮನಿಂದ ಹೈದರಾಬಾದನ್ನು ಸ್ವತಂತ್ರಗೊಳಿಸುವ ನಿಟ್ಟಿನಲ್ಲಿ ದೊಡ್ಡಮಟ್ಟದ ಕಾರ್ಯಾಚರಣೆ ನಡೆಯಿತು. ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದೃಡ ನಿರ್ಧಾರದ ಫಲವಾಗಿ 1948ರಂದು ಸೆಪ್ಟೆಂಬರ್ 13ರಂದು ಭಾರತೀಯ ಸೇನೆಯು ಹೈದರಾಬಾದಿನ ಮೇಲೆ ದಾಳಿ ಮಾಡಿತು. ಈ ಕಾರ್ಯಾಚರಣೆಗೆ ‘ಆಪರೇಷನ್ ಪೋಲೋ’ ಎಂದು ಹೆಸರಿಸಲಾಯಿತು. ಭಾರತೀಯ ಸೇನೆಯು ನಿಜಾಮನ ಎಲ್ಲಾ ಸೈನ್ಯ ಅಧಿಕಾರಿಗಳನ್ನು ಬಂಧಿಸಿತು. 108 ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆಯು ಹೈದರಾಬಾದನ್ನು ಭಾರತದ ಒಕ್ಕೂಟಕ್ಕೆ ವಿಲೀನಗೊಳಿಸುವಲ್ಲಿ ಸಹಕಾರಿಯಾಯಿತು.
1948ರ ಸೆಪ್ಟೆಂಬರ್ 17ರಂದು ಭಾರತದ ಒಕ್ಕೂಟದ ಜೊತೆ ಹೈದರಾಬಾದ್ ಸಂಸ್ಥಾನ ವಿಲೀನವಾಯಿತು. ಸೆಪ್ಟೆಂಬರ್ 17ರಂದು ನಿಜಾಮನು ಭಾರತದ ಒಕ್ಕೂಟಕ್ಕೆ ಸೇರುವುದಾಗಿ ಘೋಷಣೆ ಮಾಡಿದ. ಈ ದಿನದ ಸ್ಮರಣಾರ್ಥ ಪ್ರತಿವರ್ಷ ಹೈದರಾಬಾದ್ ವಿಮೋಚನಾ ದಿನವನ್ನು ಆಚರಣೆ ಮಾಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.