News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಸ್ತೆಯಲ್ಲಿಯೇ ಹರಿದ ಒಳಚರಂಡಿ ತ್ಯಾಜ್ಯ : ಸುಳ್ಯ ನಗರದಲ್ಲೆಲ್ಲ ಹರಡಿದ ದುರ್ವಾಸನೆ

ಸುಳ್ಯ : ಹಲವು ವಿವಾದಗಳಿಗೆ ಕಾರಣವಾಗಿದ್ದು ಸುಳ್ಯ ನಗರದಲ್ಲಿ ಇದೀಗ ಅಳವಡಿಸಲಾಗಿರುವ ಒಳಚರಂಡಿಯು ಆರಂಭದಲ್ಲಿಯೇ ಆವಾಂತರ ಸೃಷ್ಠಿಸಿದೆ. ಒಳಚರಂಡಿಯ ತ್ಯಾಜ್ಯ ರಸ್ತೆಯಲ್ಲಿಯೇ ಹರಿದು ನಗರವಿಡೀ ವಾಸನೆ ಹರಡಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಸುಳ್ಯ ನಗರದ ಮುಖ್ಯ ರಸ್ತೆಯಲ್ಲಿ ಅಳವಡಿಸಲಾದ ಒಳಚರಂಡಿಯ ಮ್ಯಾನ್ ಹೋಲ್‌ಗಳಲ್ಲಿ ತ್ಯಾಜ್ಯ ತುಂಬಿ ತುಳುಕಿ ರಸ್ತೆಯಲ್ಲೆಲ್ಲ ಹರಿದು ನಗರದಲ್ಲಿ ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ಬುಧವಾರ ರಾತ್ರಿ ಸುಳ್ಯ ಪೊಲೀಸ್ ಠಾಣೆ ಮುಂಭಾಗದಲ್ಲಿ ರಸ್ತೆ ಮಧ್ಯೆ ಇರುವ ಮ್ಯಾನ್ ಹೋಲ್‌ನಲ್ಲಿ ತ್ಯಾಜ್ಯ ತುಂಬಿ ಹೊರ ಚೆಲ್ಲಿ ರಸ್ತೆಯಲ್ಲೆಲ್ಲ ಹರಿಯಿತು. ಇದರಿಂದ ಪರಿಸರವೆಲ್ಲ ದುರ್ನಾತ ಬೀರಿದೆ. ವಿಷಯ ತಿಳಿದು ನಗರ ಪಂಚಾಯಿತಿ ಸದಸ್ಯರು ಮತ್ತು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಗಮಿಸಿ ಬ್ಯಾರಿಕೇಡ್ ಅಳವಡಿಸಿ ರಸ್ತೆಯ ಒಂದು ಬದಿಯನ್ನು ಬಂದ್ ಮಾಡಿ ಮ್ಯಾನ್ ಹೋಲ್‌ನ ಮುಚ್ಚಳವನ್ನು ತೆಗೆದು ಸಕ್ಕಿಂಗ್ ಯಂತ್ರದ ಸಹಾಯದಿಂದ ತ್ಯಾಜ್ಯವನ್ನು ಹೊರ ತೆಗೆಯಲಾಯಿತು. ಹಾಗಿದ್ದರೂ ಇಡೀ ಪರಿಸರವೆಲ್ಲ ತ್ಯಾಜ್ಯ ಹರಡಿ ದುರ್ವಾಸನೆ ಬೀರಿ ಸಾರ್ವಜನಿಕರು ಮೂಗು ಮುಚ್ಚಿ ಕೊಂಡೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

SUL-19MAR-1

ಬಾರೀ ವಿವಾದಕ್ಕೆ ಕಾಣವಾಗಿದ್ದ ಒಳಚರಂಡಿಗೆ ವಿರೋಧದ ನಡುವೆಯೂ ಸುಳ್ಯ ನಗರದಲ್ಲಿ ಕಳೆದ ಜನವರಿಯಲ್ಲಿ ಸಂಪರ್ಕ ನೀಡಲಾಗಿತ್ತು. ಗಾಂಧೀನಗರದಿಂದ ಆರಂಭಗೊಂಡು ಹೋಟೆಲ್, ಕ್ಯಾಂಟೀನ್, ಲಾಡ್ಜ್, ಕೋಳಿ ಅಂಗಡಿ ಸೇರಿದಂತೆ ಸುಮಾರು ಎಪ್ಪತ್ತಕ್ಕೂ ಹೆಚ್ಚು ಸಂಪರ್ಕವನ್ನು ನೀಡಲಾಗಿದೆ. ಕೋಳಿ ತ್ಯಾಜ್ಯ ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಕಳೆದ ಎರಡು ತಿಂಗಳಿನಿಂದ ಈ ಒಳಚರಂಡಿಯ ಪೈಪ್‌ಗಳ ಮೂಲಕವೇ ಹರಿಯ ಬಿಡಲಾಗುತ್ತದೆ. ಇದು ಹರಿದು ಬಂದು ಪೊಲೀಸ್ ಠಾಣೆಯ ಮುಂಭಾಗದವರೆಗಿನ ಮ್ಯಾನ್‌ಹೋಲ್ ಮತ್ತು ಪೈಪ್‌ಗಳಲ್ಲಿ ಶೇಖರಣೆಯಾಗಿದೆ. ಅಲ್ಲಿಂದ ಕೆಳಗಿನ ಮ್ಯಾನ್‌ಹೋಲ್‌ಗೆ ತ್ಯಾಜ್ಯಗಳು ಹರಿಯುತ್ತಿಲ್ಲ. ಗುರುವಾರ ಹಗಲು ಮತ್ತೆ ಮ್ಯಾನ್ ಹೋಲ್ ತುಂಬಿ ತುಳುಕಿ ವಾಸನೆ ಬೀರಿತ್ತು. ನಗರ ಪಂಚಾಯಿತಿಯವರು, ಒಳಚರಂಡಿಯವರು ಸ್ಥಳಕ್ಕೆ ಆಗಮಿಸಿ ಪರೀಶೀಲಿಸಿ ಸಕ್ಕಿಂಗ್ ಯಂತ್ರವನ್ನು ತಂದು ಮ್ಯಾನ್‌ಹೋಲ್‌ನಲ್ಲಿ ಶೇಖರಣೆಯಾದ ತ್ಯಾಜ್ಯವನ್ನು ತೆಗೆಯಲಾಯಿತು. ಕೆಳಗಿನ ಮ್ಯಾನ್‌ಹೋಲ್‌ನ ಮುಚ್ಚಳವನ್ನು ತೆಗೆದು ಮೇಲಿನ ಮ್ಯಾನ್‌ಹೋಲ್‌ನಲ್ಲಿ ಶೇಖರಣೆಯಾದ ತ್ಯಾಜ್ಯವನ್ನು ತೆಗೆಯಲು ಪ್ರಯತ್ನ ನಡೆಸಿದರೂ ಕೆಳಗೆ ಇದು ಹರಿಯುತ್ತಿರಲಿಲ್ಲ. ಡಾಮರೀಕರಣಗೊಂಡ ರಸ್ತೆಯನ್ನು ಅಗೆದು ಮ್ಯಾನ್‌ಹೋಲ್‌ಗಳ ಮುಚ್ಚಳವನ್ನು ತೆಗೆಯಲಾಯಿತು.

SUL-19MAR-2

ಒಳಚರಂಡಿ ಸಂಪರ್ಕ ನೀಡಲು ಆರಂಭಿಸಿದರೂ ಅದನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಈ ರೀತಿ ರಾದ್ದಾಂತ ಉಂಟಾಗಿದೆ ಎಂದು ಸಾವಜನಿಕರು ಮತ್ತು ನಗರ ಪಂಚಾಯಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೈಪ್‌ನಲ್ಲಿ ಹರಿಯ ಬಿಡುವ ತ್ಯಾಜ್ಯ ಸರಿಯಾಗಿ ಹರಿದು ಶುದ್ದೀಕರಣ ಘಟಕದವರೆಗೆ ತಲುಪುತಿದೆಯೇ ಎಂದು ಪರೀಕ್ಷಿಸಿಲ್ಲ. ಅಲ್ಲದೆ ಕೋಳಿ ತ್ಯಾಜ್ಯ ಸೇರಿದಂತೆ ದ್ರವ ಮತ್ತು ಘನ ತ್ಯಾಜ್ಯಗಳೂ ಒಳಚರಂಡಿಯಲ್ಲಿ ಹರಿಯ ಬಿಟ್ಟ ಕಾರಣ ತ್ಯಾಜ್ಯ ಪೈಪ್‌ನಲ್ಲಿ ಸಿಲುಕಿದೆ. ಇದು ತ್ಯಾಜ್ಯ ಶುದ್ದೀಕರಣ ಘಟಕಕ್ಕೆ ಹರಿಯದೆ ತಿಂಗಳಿನಿಂದ ಪೈಪ್ ಮತ್ತು ಮ್ಯಾನ್‌ಹೋಲ್‌ಗಳಲ್ಲಿಯೇ ತುಂಬಿ ಈಗ ಹೊರ ಚೆಲ್ಲಿ ನಗರ ಪೂರ್ತಿ ವಾಸನೆ ಬೀರಿ ಸಮಸ್ಯೆ ಉಂಟಾಗಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.

ಒಳಚರಂಡಿ ಸಂಪರ್ಕ ನೀಡುವುದಕ್ಕೆ ನಗರ ಪಂಚಾಯಿತಿಯ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ವಿರೋಧದ ನಡುವೆಯೇ ಅಧಿಕಾರಿಗಳು ಒಳಚರಂಡಿ ಸಂಪರ್ಕ ನೀಡಲಾಗಿದ್ದು ಮತ್ತು ನಿರ್ವಹಣೆಯ ಕೊರತೆಯಿಂದ ಈಗ ತ್ಯಾಜ್ಯ ರಸ್ತೆಯಲ್ಲಿಯೇ ಹರಿಯುವಂತಾಗಿ ಸಮಸ್ಯೆ ಉದ್ಭವಿಸಿದೆ. ಮುಂದೆ ಈ ರೀತಿ ಆಗದಂತೆ ಮುಂಜಾಗೃತೆ ವಹಿಸಲಾಗುವುದು ಎಂದು ನಗರ ಪಂಚಾಯಿತಿ ಅಧ್ಯಕ್ಷ ಎನ್.ಎ.ರಾಮಚಂದ್ರ ಹೇಳುತ್ತಾರೆ.

SUL-19MAR-3

ಒಳಚರಂಡಿ ಸಂಪರ್ಕ ನೀಡುವುದಕ್ಕೆ ಪ್ರತಿ ಸಭೆಯಲ್ಲಿಯೂ ಎಲ್ಲಾ ಸದಸ್ಯರೂ ವಿರೋಧ ವ್ಯಕ್ತಪಡಿಸಿದ್ದರೂ ಪ್ರಾಯೋಗಿಕವಾಗಿ ಸರಿಯಾಗಿದೆಯೇ ಎಂದು ಪರೀಕ್ಷೆ ನಡೆಸದೆ ಸಂಪರ್ಕ ನೀಡಿರುವುದರಿಂದ ಈಗ ತ್ಯಾಜ್ಯ ರಸ್ತೆಗೆ ಹರಿದು ನಗರದಲ್ಲಿ ದುರ್ವಾಸನೆ ಬೀರುವಂತಾಗಿದೆ ಎನ್ನುತ್ತಾರೆ ನಗರ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top