ಸಾವಯವ ಕೃಷಿಯನ್ನಾಧರಿಸಿ ಬದುಕು ಕಟ್ಟಿಕೊಂಡ ಅದೆಷ್ಟೋ ಜನರು ನಮ್ಮ ನಡುವೆ ಕಾಣಸಿಗುತ್ತಾರೆ. ಅಂತಹವರಲ್ಲಿ 69 ವರ್ಷದ ಮೈಸೂರಿನ ಹುಣಸೂರಿನ ಕೃಷಿಕ ತಮ್ಮಯ್ಯ ಅವರೂ ಒಬ್ಬರು. ತಮ್ಮ ಒಂದು ಎಕರೆ ಭೂಮಿಯಲ್ಲಿ ರಾಸಯನಿಕಗಳಿಗೆ ದಾಸರಾಗದೆ, ಸಾವಯವ ಪದ್ಧತಿಯನ್ನೇ ಅವಲಂಭಿಸಿ ಸುಮಾರು 300 ಬಗೆಯ ಸಸ್ಯ ಸಂಪತ್ತನ್ನು ಇವರು ಬೆಳೆಸಿದ್ದಾರೆ. ಆ ಮೂಲಕ ವಾರ್ಷಿಕ 10 ಲಕ್ಷ ರೂ. ಗಳ ಆದಾಯವನ್ನೂ ಅವರು ಗಳಿಸುವ ಮೂಲಕ ಇತರ ರೈತರಿಗೂ ಮಾದರಿಯಾಗಿದ್ದಾರೆ.
1984 ರಿಂದ ತೊಡಗಿದಂತೆ ಈ ವರೆಗೆ ಸಾವಯವ ಪದ್ಧತಿಯ ಕೃಷಿಯನ್ನೇ ನೆಚ್ಚಿಕೊಂಡಿರುವ ಇವರ ತೋಟದಲ್ಲಿ ತೆಂಗಿನ ಮರಗಳು, ಹಲಸಿನ ಮರಗಳು, ರಾಗಿ, ಮಾವಿನ ಮರಗಳು, ಬಾಳೆಹಣ್ಣು, ಅಡಿಕೆ, ತರಕಾರಿ, ಕಾಳು ಮೆಣಸು ಸೇರಿದಂತೆ ಹತ್ತು ಹಲವು ಬಗೆಯ ಸುಮಾರು 300 ಕ್ಕೂ ಅಧಿಕ ಸಸ್ಯ ರಾಶಿಯನ್ನು ನಾವು ಕಾಣಬಹುದಾಗಿದೆ. ಎಲ್ಲಾ ಕಾಲಕ್ಕೂ ಪೂರಕವಾಗುವಂತಹ ಕೃಷಿಯಿಂದ ಹಿಡಿದು, ಆಯಾ ಕಾಲಕ್ಕೆ ಅನುಗುಣವಾದ ಕೃಷಿ ಪದ್ಧತಿಯನ್ನು ತಮ್ಮಯ್ಯ ಅವರು ಅನುಸರಿಸುತ್ತಿದ್ದು ಆ ಮೂಲಕ ವರ್ಷಪೂರ್ತಿ ಕುಟುಂಬ ನಿರ್ವಹಣೆಗೆ ಬೇಕಾದ ಆದಾಯವನ್ನು ಕೃಷಿ ವಿಧಾನದ ಮೂಲಕವೇ ಪಡೆಯುವ ಮೂಲಕ ಇವರು ಬದುಕು ಕಟ್ಟಿಕೊಂಡಿದ್ದಾರೆ.
ಆರಂಭದ ದಿನಗಳಲ್ಲಿ ತಮ್ಮಯ್ಯ ಅವರು ನೀರಿನ ಸಮಸ್ಯೆ, ಬೆಳೆ ಹಾನಿ ಸೇರಿದಂತೆ ಸಾಕಷ್ಟು ಸವಾಲುಗಳನ್ನು ಕೃಷಿ ಚಟುವಟಿಕೆಯ ಸಂದರ್ಭದಲ್ಲಿ ಅನುಭವಿಸಿದ್ದಾರೆ. ಆದರೆ ಇವರ ಪರಿಸರಸ್ನೇಹಿ ಕೃಷಿಯ ಕಾರಣದಿಂದಾಗಿ ಭೂಮಿ ಕೆಲವೇ ವರ್ಷಗಳಲ್ಲಿ ಫಲವತ್ತಾಗಿ ಅಧಿಕ ಇಳುವರಿ ನೀಡಲಾರಂಭಿಸಿದೆ. ಆರಂಭದಲ್ಲಿ ಅನುಭವಿಸುತ್ತಿದ್ದ ನೀರಿನ ಬವಣೆಗೂ ಮುಕ್ತಿ ಸಿಕ್ಕಿದೆ. ಬಹು ಪದರ ಕೃಷಿ ಪದ್ಧತಿ ಯನ್ನು ಅನುಸರಿಸುವ ಮೂಲಕ ಯಶಸ್ಸು ಕಂಡಿರುವ ಇವರಿಗೆ ಸದ್ಯದ ಸ್ಥಿತಿಯಲ್ಲಿ ಹಿಂದಿಗಿಂತ ಹತ್ತು ಪಟ್ಟು ಹೆಚ್ಚು ಇಳುವರಿ ಬರುತ್ತಿದೆ. ಹಾಗೆಯೇ ಸುತ್ತೆಲ್ಲಾ ಹಚ್ಚ ಹಸುರಿನ ಕಾರಣದಿಂದಾಗಿ ಭೂಮಿಯ ಫಲವತ್ತತೆ ಹೆಚ್ಚಾಗಿ, ಭೂಮಿಯಲ್ಲಿ ಅಂತರ್ಜಲದ ಮಟ್ಟ ಏರಿದೆ. ಸದ್ಯ ಇವರ ಕೃಷಿಗೆ ಬೇಕಾದ ಹೆಚ್ಚಿನ ನೀರನ್ನು ಭೂಮಿಯೇ ಒದಗಿಸುತ್ತಿದ್ದು, ಉಳಿದ 50% ದಷ್ಟು ನೀರನ್ನು ಮಾತ್ರ ಬೆಳೆಗೆ ನೀಡುತ್ತಿದ್ದಾರೆ. ಆ ಮೂಲಕ ಅವರೊಬ್ಬ ಸಾಧಕ, ಮಾದರಿ ಕೃಷಿಕ ಎಂಬುದನ್ನು ತಮ್ಮ ಶ್ರಮದ ಮೂಲಕವೇ ಸಾಧಿಸಿ ತೋರಿಸಿದ್ದಾರೆ.
ಈ ಸಂಬಂಧ ತಮ್ಮಯ್ಯ ಅವರ ಮಾತುಗಳಲ್ಲೇ ಹೇಳುವುದಾದರೆ, ಭೂಮಿಯ ಸಾರ ಹೆಚ್ಚಿಸಲು ಮತ್ತು ಫಲವತ್ತತೆ ಹೆಚ್ಚಿಸಲು ಒಂದೇ ಸಮಯದಲ್ಲಿ ಬಹುರೂಪಿ ಕೃಷಿ ಪದ್ಧತಿಯನ್ನು ಅನುಸರಿಸುವುದು ಉತ್ತಮ ಎಂದು ತಿಳಿಸುತ್ತಾರೆ. ಇದೊಂದು ಸ್ವಾವಲಂಬನೆಯ ತಂತ್ರವೂ ಆಗಿದ್ದು, ಒಂದು ಬೆಳೆ ಫಸಲು ಕೊಯ್ಲು ಮುಗಿದಾಕ್ಷಣವೇ, ಮತ್ತೊಂದು ಬೆಳೆ ಕೈಗೆ ಬರುವಂತೆ ಋತುಮಾನಕ್ಕೆ ಅನುಗುಣವಾದ ಕೃಷಿ ಪದ್ಧತಿ ಅನುಸರಿಸುವುದು ಹೆಚ್ಚು ಸೂಕ್ತ ಎಂದು ಅವರು ಕಿವಿಮಾತು ಹೇಳುತ್ತಾರೆ. ಈ ರೀತಿಯಲ್ಲಿ ಹೆಚ್ಚು ಇಳುವರಿ, ಆದಾಯ ಪಡೆಯುವುದು ಸಾಧ್ಯ. ಕಡಿಮೆ ನೀರು, ಗೊಬ್ಬರ ಬಳಸಿ ಅಧಿಕ ಇಳುವರಿ ಪಡೆಯುವುದು ಸಾಧ್ಯ ಎಂದು ಅವರು ತಮ್ಮ ಅನುಭವದ ಮಾತುಗಳನ್ನು ಹೇಳುತ್ತಾರೆ.
ಇವರೂ ಸಹ 1984 ರ ವರೆಗೆ ರಾಸಾಯನಿಕ ಗೊಬ್ಬರಗಳನ್ನು ಬಳಸಿಯೇ ಕೃಷಿ ಮಾಡುತ್ತಿದ್ದವರು. ಆದರೆ ಭೂಮಿಯ ಫಲವತ್ತತೆ ಹೆಚ್ಚಿಸುವ ಸಲುವಾಗಿ 1984 ರ ಬಳಿಕ ಸಾವಯವ ಕೃಷಿಗೆ ಮನಸ್ಸು ಮಾಡುತ್ತಾರೆ. ಇದೊಂದು ಬದಲಾವಣೆಯ ಪರ್ವ. ಈ ಸಂದರ್ಭದಲ್ಲಿ ಆ ವರೆಗೆ ರಾಸಾಯನಿಕ ಕೃಷಿಗೆ ಒಗ್ಗಿಕೊಂಡಿದ ಭೂಮಿ ಮತ್ತು ಬೆಳೆ, ಈ ರೀತಿಯ ಬದಲಾವಣೆಯನ್ನು ಒಪ್ಪಿಕೊಳ್ಳಬೇಕಾದರೆ ಇವರಿಗೂ ಸಾಕಷ್ಟು ಹಿನ್ನಡೆಗಳಾಗಿವೆ. ಸುಮಾರು ಒಂದು ವರ್ಷಗಳ ಬಳಿಕ ಭೂಮಿ ಸಾವಯವ ಪದ್ಧತಿಗೆ ಹೊಂದಿಕೊಂಡಿತು ಎಂದು ಅವರು ತಿಳಿಸುತ್ತಾರೆ. ಆರಂಭದಲ್ಲಿ ತಮ್ಮ 6 ಎಕರೆ ಕೃಷಿ ಭೂಮಿಯಲ್ಲಿ ಒಂದು ಎಕರೆಯನ್ನು ಬಳಕೆ ಮಾಡಿ ಬಹುಪದರ ಕೃಷಿ ಅನುಸರಿಸಿ ಯಶಸ್ಸು ಕಂಡುಕೊಂಡಿರುವುದಾಗಿ ಅವರು ತಿಳಿಸುತ್ತಾರೆ. ಉಳಿದ ಭೂಮಿಯಲ್ಲಿ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಈ ರೀತಿಯ ಬಹು ಪದರ ಕೃಷಿ ಪದ್ಧತಿ ಅನುಸರಿಸುವ ಮೊದಲು ತಾವು ಇಂತಹ ಪದ್ಧತಿಯಿಂದ ಯಶ ಕಂಡ ರೈತರ ಜೊತೆಗೂ ಚರ್ಚಿಸಿದ್ದಾರೆ.
ಈ ವಿಧಾನದಲ್ಲಿ ಮೊದಲು ಅವರು ತೆಂಗಿನ ಗಿಡಗಳನ್ನು ನೆಟ್ಟರು. ಅವುಗಳ ನಡುವೆ ಚಿಕ್ಕು ಹಣ್ಣಿನ ಗಿಡಗಳನ್ನು ಬೆಳೆಸಿದರು. ಅವುಗಳ ನಡುವೆ ಅಡಿಕೆ ಮರಗಳು, ಬಾಳೆಯನ್ನೂ ಬೆಳೆಸಿರುವ ಅವರು ನಡು ನಡುವೆ ಕಾಳು ಮೆಣಸಿನ ಬಳ್ಳಿಗಳನ್ನು ಹಬ್ಬಿಸಿದ್ದಾರೆ. ಹಾಗೆಯೇ ಮಸಾಲೆಗೆ ಬಳಕೆ ಮಾಡುವ ಪದಾರ್ಥಗಳ ಕೃಷಿಗೂ ಅದೇ ಭೂಮಿಯನ್ನು ಬಳಕೆ ಮಾಡಿದ್ದಾರೆ. ಇವೆಲ್ಲವುಗಳ ಜೊತೆಗೆ ಮಾವು, ಹಲಸು, ಸೇಬು, ನಿಂಬೆ ಸೇರಿದಂತೆ ಇನ್ನೂ ಅನೇಕ ಜಾತಿಯ ಸಸ್ಯಗಳಿಗೆ ಅವರು ಮನ್ನಣೆ ನೀಡಿ ಬೆಳೆಸಿದ್ದಾರೆ. ಹಾಗೆಯೇ ರಾಗಿ, ತರಕಾರಿ, ಅರಶಿನ, ಶುಂಠಿ, ಕ್ಯಾರೆಟ್, ಆಲೂಗಡ್ಡೆ, ನೆಲ್ಲಿ, ಚೆರ್ರಿ, ಕಾಫಿ, ರೋಸ್ವುಡ್, ಕಸ್ಟರ್ಡ್ ಆಪಲ್, ಶ್ರೀಗಂಧ, ಕಬ್ಬು, 140 ಬಗೆಯ ಔಷಧೀಯ ಸಸ್ಯಗಳನ್ನೂ ತಮ್ಮ ತೋಟದಲ್ಲಿ ಬೆಳೆಸುವ ಮೂಲಕ ಸಂಪದ್ಭರಿತ ಕೃಷಿ ಮಾಡುತ್ತಿದ್ದಾರೆ.
ಈ ಎಲ್ಲಾ ರೀತಿಯ ಸಸ್ಯಗಳೂ ಒಂದನ್ನೊಂದು ಅವಲಂಬಿಸಿಕೊಂಡು ಬೆಳೆಯುವ ಗುಣವನ್ನು ಹೊಂದಿದ್ದು, ಪ್ರಕೃತಿಗೆ ಹೆಚ್ಚು ಪೂರಕವಾಗಿದೆ. ಅರಶಿನ ಕ್ರಿಮಿ ಕೀಟಗಳು ಬಾಧಿಸದಂತೆ ತಡೆದರೆ ತೆಂಗು ಪೂರಕ ಬೆಳಕನ್ನು ನೀಡುವಲ್ಲಿ ಮತ್ತು ನೆರಳನ್ನೊದಗಿಸುವಲ್ಲಿ ಸಹಕಾರಿ. ಜೊತೆಗೆ ಈ ಎಲ್ಲಾ ಸಸ್ಯಗಳೂ ಭೂಮಿಯ ಫಲವತ್ತತೆ ಹೆಚ್ಚಿಸುವ ನಿಟ್ಟಿನಲ್ಲಿಯೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಪೊದೆಗಳಂತಹ ಬೆಳೆಗಳು ನೀರನ್ನು ಹೆಚ್ಚು ಹಿಡಿದಿಟ್ಟುಕೊಳ್ಳುತ್ತವೆ. ಎತ್ತರದ ಸಸ್ಯಗಳು ನೆರಳು ನೀಡಲು ಪೂರಕವಾಗಿದೆ. ಇದರಿಂದಾಗಿ ಕಡಿಮೆ ನೀರಿನಲ್ಲಿ ಹೆಚ್ಚು ಇಳುವರಿ ಪಡೆಯಲು ಸಾಧ್ಯವಿದೆ ಎನ್ನುತ್ತಾರೆ ತಮ್ಮಯ್ಯ. ಹಾಗೆಯೇ ವಿಭಿನ್ನ ಬೆಳೆಗಳಿಂದಾಗಿ ತಾವು ವರ್ಷ ಪೂರ್ತಿ ಇಳುವರಿ, ಆದಾಯ ಗಳಿಕೆಗೂ ಸಹಾಯಕವಾಗಿದೆ ಎಂದು ಅವರು ತಿಳಿಸಿದ್ದಾರೆ.
ಒಂದು ತೆಂಗಿನ ಮರದಿಂದ 300 ಕಾಯಿಗಳಾದರೂ ದೊರೆಯುತ್ತದೆ. ಅಲ್ಲದೆ ತರಕಾರಿ, ಹಣ್ಣು, ಔಷಧೀಯ ಸಸ್ಯಗಳಿಂದಲೂ ತಾವು ವರ್ಷಪೂರ್ತಿ ಆದಾಯ ಪಡೆಯಲು ಸಾಧ್ಯವಾಗಿದೆ. ಜೊತೆಗೆ ಎಲ್ಲಾ ಋತುಗಳಲ್ಲಿಯೂ ಬೆಳೆ ಕೈಗೆ ಬರುವುದರಿಂದ ಮಾರುಕಟ್ಟೆಯಲ್ಲಿಯೂ ಇವರ ವಸ್ತುಗಳಿಗೆ ಬೇಡಿಕೆ ಇದೆ. ಮಾರಾಟ ವ್ಯವಸ್ಥೆಯಲ್ಲಿ ಹೆಚ್ಚಿನ ಲಾಭವನ್ನು ನಿರೀಕ್ಷಿಸದಿದ್ದರೂ, ಪರ್ಯಾಯ ವಿಧಾನಗಳ ಮೂಲಕ ಇವರು ಲಾಭ ಕಂಡುಕೊಂಡಿದ್ದಾರೆ. ನರ್ಸರಿ, ಉಪ್ಪಿನಕಾಯಿ ತಯಾರಿಕೆ, ನೆಲಗಡಲೆ ಎಣ್ಣೆ ಹೀಗೆ ತಮ್ಮ ಅನೇಕ ಬೆಳೆಗಳಿಗೆ ಪರ್ಯಾಯ ಪರಿಹಾರವನ್ನು ಅವರು ಕಂಡುಕೊಳ್ಳುವ ಮೂಲಕ ಯಶಸ್ಸು ಕಾಣುತ್ತಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ ತಮ್ಮದೇ ವಿಭಿನ್ನ ಶೈಲಿಯ ಮಾರ್ಗಗಳನ್ನು ಅನುಸರಿಸುವ ಮೂಲಕ ಪ್ರಕೃತಿಗೆ ಪೂರಕವಾಗಿರುವುದನ್ನು ನೀಡಿ, ಅದರಿಂದ ತಮಗೆ ಬೇಕಾಗಿರುವುದನ್ನು ಪಡೆದುಕೊಳ್ಳುವಲ್ಲಿ ತಮ್ಮಯ್ಯ ಸಫಲರಾಗಿದ್ದಾರೆ. ಅವರ ಈ ಬಹು ಪದರ, ಸಾಂಪ್ರದಾಯಿಕ ಕೃಷಿಯಲ್ಲಿ ಸಾವಯವ ಕ್ರಮವನ್ನು ಅನುಸರಿಸುವ ಮೂಲಕ ಭೂಮಿಯ ಅಂತರ್ಜಲ ಹೆಚ್ಚಿಸಿದ್ದಾರೆ. ಸಾರವೂ ಹೆಚ್ಚಿದೆ. ಈ ಸಾರ ಮತ್ತು ತಮ್ಮ ಶ್ರಮದ ಮೂಲಕ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಗಳಿಸುವ ವ್ಯವಸ್ಥೆ ಕಂಡುಕೊಂಡಿದ್ದಾರೆ. ಅವರು ಅನುಸರಿಸುತ್ತಿರುವ ಈ ಕೃಷಿ ಪದ್ಧತಿ ಎಲ್ಲಾ ಕೃಷಿಕರಿಗೂ ಮಾದರಿ ಎಂದರೆ ತಪ್ಪಾಗಲಾರದೇನೋ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.