ಬಾಲಿವುಡ್ ಗಣ್ಯ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಆಧರಿಸಿದ ಚಿತ್ರಗಳನ್ನು ನಿರಂತರವಾಗಿ ನಿರ್ಮಾಣ ಮಾಡುತ್ತಲೇ ಬಂದಿದೆ. ಹಲವು ಕ್ರೀಡಾ ತಾರೆಗಳ, ಸಿನಿಮಾ ತಾರೆಯರ ಜೀವನಚರಿತ್ರೆಗಳು ಈಗಾಗಲೇ ಬಾಲಿವುಡ್ ಸಿನಿಮಾವಾಗಿ ದೊಡ್ಡ ಮಟ್ಟದ ಯಶಸ್ಸನ್ನೂ ಗಳಿಸಿವೆ. ಇಂತಹ ಸಿನಿಮಾಗಳಿಗೆ ಹೊಸ ಸೇರ್ಪಡೆ “ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್”. ಇಂಟರ್ನೆಟ್ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ನೆಟ್ಫ್ಲಿಕ್ಸ್ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಈ ಸಿನಿಮಾದ ಬಗ್ಗೆ ಮಾಧ್ಯಮಗಳಲ್ಲಿ ಮತ್ತು ಇತರೆಡೆಗಳಲ್ಲಿ ಸಾಕಷ್ಟು ವಿವಾದ ಮತ್ತು ಚರ್ಚೆಗಳು ಹುಟ್ಟಿಕೊಂಡಿವೆ. ಈ ಚಿತ್ರವು ಫ್ಲೈಟ್ ಲೆಫ್ಟಿನೆಂಟ್ ಗುಂಜನ್ ಸಕ್ಸೇನಾ ಅವರ ಜೀವನವನ್ನು ಆಧರಿಸಿದೆ. ಅವರು ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ ಮತ್ತು ಮಾಜಿ ಹೆಲಿಕಾಪ್ಟರ್ ಪೈಲೆಟ್. ಅವರು 1996 ರಲ್ಲಿ ಐಎಎಫ್ಗೆ ಸೇರಿಕೊಂಡರು, 1999 ರ ಕಾರ್ಗಿಲ್ ಯುದ್ಧದಲ್ಲಿ ಪಾತ್ರ ವಹಿಸಿದವರು ಮತ್ತು ಯುದ್ಧ ವಲಯದಲ್ಲಿ ಹಾರಾಟ ನಡೆಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಯನ್ನು ಹೊಂದಿದವರು.
ವಾಯುಸೇನೆಯ ಕೆಚ್ಚೆದೆಯ ಮಹಿಳಾ ಅಧಿಕಾರಿಯ ಸಾಧನೆಗಳನ್ನು ನಿರೂಪಿಸಿದ್ದಕ್ಕಾಗಿ ಈ ಚಲನಚಿತ್ರವು ಹೆಚ್ಚು ಮೆಚ್ಚುಗೆ ಪಡೆದಿದೆ ಎಂಬುದೆನೋ ನಿಜ. ಆದರೆ ಈ ಸಿನಿಮಾದಲ್ಲಿ ವಾಯುಸೇನೆಯನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಐಎಎಫ್ನಲ್ಲಿ ಸೇವೆ ಸಲ್ಲಿಸುವ ವೃತ್ತಿಪರರ ಮೇಲೆ ಈ ಸಿನಿಮಾ ಸುಳ್ಳು ಆಪಾದನೆ ಮಾಡಿದೆ, ಗುಂಜನ್ ಅವರನ್ನು ಮಹಿಳೆ ಎಂಬ ಕಾರಣಕ್ಕೆ ತಾರತಮ್ಯ ಧೋರಣೆಯಿಂದ ನೋಡಲಾಗಿದೆ ಎಂಬಂತೆ ಸಿನಿಮಾದಲ್ಲಿ ತೋರಿಸಲಾಗಿದೆ.
ಭಾರತೀಯ ವಾಯುಪಡೆ ಪ್ರಸ್ತುತ ವಿಶ್ವದ ನಾಲ್ಕನೇ ಅತಿದೊಡ್ಡ ವಾಯುಪಡೆಯಾಗಿದೆ ಮತ್ತು ವಿವಿಧ ಯುದ್ಧಗಳು, ಪರಿಹಾರ ಕಾರ್ಯಾಚರಣೆಗಳು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮತ್ತು ತುರ್ತು ಸ್ಪಂದನೆ, ಸ್ಥಳಾಂತರಿಸುವಿಕೆಗಳಲ್ಲಿ ಭಾಗವಹಿಸಿ ದೇಶ ರಕ್ಷಣೆಗೆ ಕಟಿಬದ್ದತೆಯನ್ನು ತೋರಿಸಿದೆ.
“ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್” ಸಿನಿಮಾ ಕಾರ್ಗಿಲ್ ಯುದ್ಧ ಆಧಾರಿತವಾಗಿದೆ. ಐಎಎಫ್ ಈ ಯುದ್ಧದಲ್ಲಿ ಆಪರೇಷನ್ ಸೇಫ್ ಸಾಗರ್ ಅನ್ನು ಹೆಚ್ಚು ಶೌರ್ಯ ಮತ್ತು ಯಶಸ್ಸಿನಿಂದ ನಡೆಸಿತು. ಭಾರತೀಯ ವಾಯುಪಡೆಯು ಮಿಗ್ 21, ಮಿಗ್ 27, ಮಿಗ್ 29, ಮಿರಾಜ್ 2000, ಮಿ -17 ಮತ್ತು ವಿವಿಧ ರೀತಿಯ ಹೆಲಿಕಾಪ್ಟರ್ಗಳನ್ನು ಬಳಸಿತು. ಮುಂತೋ ಧಲೋ ಮತ್ತು ಟೈಗರ್ ಹಿಲ್ ಅನ್ನು ಭಾರತೀಯ ಸೇನೆಯು ವಶಪಡಿಸಿಕೊಳ್ಳುವಲ್ಲಿ ಐಎಎಫ್ ಸ್ಟ್ರೈಕ್ ಪ್ರಮುಖ ಪಾತ್ರ ವಹಿಸಿದೆ.
ಮಹಿಳಾ ಅಧಿಕಾರಿಗಳಿಗೆ ಅವಕಾಶಗಳನ್ನು ನೀಡುವ ದೃಷ್ಟಿಯಿಂದ, ಐಎಎಫ್ ತನ್ನ ಸೇವೆಗಳನ್ನು ಹೆಚ್ಚಿಸಿದೆ. ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಲಾದ ವರದಿಯ ಪ್ರಕಾರ, ಭಾರತದ ಮೂರು ರಕ್ಷಣಾ ಪಡೆಗಳಲ್ಲಿ ಭಾರತೀಯ ವಾಯುಪಡೆಯಲ್ಲಿ ಮಹಿಳಾ ಅಧಿಕಾರಿಗಳ ಪ್ರಮಾಣ 13.09% ರಷ್ಟಿದೆ. ಭಾರತೀಯ ನೌಕಾಪಡೆಯ ಮಹಿಳಾ ಪ್ರಾತಿನಿಧ್ಯ 6% ಆಗಿದ್ದರೆ, ಭಾರತೀಯ ಸೇನೆಯಲ್ಲಿ ಮಹಿಳಾ ಪ್ರಾತಿನಿಧ್ಯ 4% ಆಗಿದೆ. ಭಾರತೀಯ ವಾಯುಪಡೆಯು ವಾಯು ಸಂಚಾರ ನಿಯಂತ್ರಕರಿಂದ ಹಿಡಿದು ಪೈಲಟ್ಗಳನ್ನು ಎದುರಿಸಲು ಮತ್ತು ಸಾಗಿಸುವವರೆಗೆ ಮಹಿಳಾ ಅಧಿಕಾರಿಗಳಿಗೆ ಎಲ್ಲಾ ಕಾರ್ಯಗಳನ್ನು ಮುಕ್ತಗೊಳಿಸಿದೆ. ಸ್ಪಷ್ಟವಾಗಿ, ಐಎಎಫ್ ನಿಜವಾದ ಅರ್ಥದಲ್ಲಿ ಲಿಂಗ ಸಮಾನತೆ ಮತ್ತು ಸಬಲೀಕರಣವನ್ನು ನಂಬುತ್ತದೆ.
ಮಹಿಳಾ ಅಧಿಕಾರಿಗಳು ಕಾರ್ಗಿಲ್, ಸಿಯಾಚಿನ್ ಮತ್ತು ಇತರ ಅಪಾಯಕಾರಿ ಕಾರ್ಯಾಚರಣೆಗಳಲ್ಲಿ ತಮ್ಮನ್ನು ತಾವು ಉತ್ತಮಗೊಳಿಸಿಕೊಂಡಿದ್ದಾರೆ. ಸ್ಕ್ವಾಡ್ರನ್ ಲೀಡರ್ ಖುಸ್ಬೂ ಗುಪ್ತಾ ಸಿಯಾಚಿನ್ನಲ್ಲಿ ಹಾರಾಟ ನಡೆಸಿದ ಮೊದಲ ಐಎಎಫ್ ಮಹಿಳಾ ಪೈಲಟ್. ವಿಂಗ್ ಕಮಾಂಡರ್ ಶಲಿಜಾ ಧಾಮಿ ದೇಶದ ಮೊದಲ ಮಹಿಳಾ ಫ್ಲೈಟ್ ಕಮಾಂಡರ್ ಆಗಿದ್ದಾರೆ. ಐಎಎಫ್ನೊಂದಿಗೆ ಶಾಶ್ವತ ಆಯೋಗ ಪಡೆದ ಮೊದಲ ಮಹಿಳಾ ಅಧಿಕಾರಿ ಕೂಡ. ಫ್ಲೈಟ್ ಲೆಫ್ಟಿನೆಂಟ್ ಭಾವನಾ ಕಾಂತ್ ಅವರು ಮಿಗ್ 21 ರಲ್ಲಿ ಹಾರಾಟ ನಡೆಸುವ ಮೂಲಕ ಯುದ್ಧ ವಿಮಾನದಲ್ಲಿ ಕಾರ್ಯಾಚರಣೆ ನಡೆಸಲು ಅರ್ಹತೆ ಪಡೆದ ಮೊದಲ ಮಹಿಳಾ ಫೈಟರ್ ಪೈಲಟ್. ಫ್ಲೈಟ್ ಲೆಫ್ಟಿನೆಂಟ್ ಅವನಿ ಚತುರ್ವೇದಿ ಮತ್ತು ಫ್ಲೈಟ್ ಲೆಫ್ಟಿನೆಂಟ್ ಮೋಹನಾ ಸಿಂಗ್ ಜಿತಾರ್ವಾಲ್ ಅವರು ಯುದ್ಧ ಪಾತ್ರದಲ್ಲಿ ಸೇರಿದ್ದಾರೆ. ಈ ಮಹಿಳಾ ಅಧಿಕಾರಿಗಳು ಭಾರತೀಯ ವಾಯುಪಡೆಗೆ ಸೇರಲು ಮತ್ತು ಆಕಾಶವನ್ನು ಸ್ಪರ್ಶಿಸಲು ಬಯಸುವ ಎಲ್ಲ ಮಹಿಳೆಯರಿಗೆ ಆದರ್ಶಪ್ರಾಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆದರೆ ‘ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್’ ಚಲನಚಿತ್ರವು ವಾಯುಸೇನೆ ತಾರತಮ್ಯವನ್ನು ನಡೆಸುತ್ತದೆ ಎಂಬಂತೆ ಬಿಂಬಿಸಿದೆ. ಇದರಲ್ಲಿ ಜಾನ್ವಿ ಕಪೂರ್ ಮತ್ತು ಪಂಕಜ್ ತ್ರಿಪಾಠಿ ನಟಿಸಿದ್ದಾರೆ ಮತ್ತು ಇದನ್ನು ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದೆ. ಈ ಚಲನಚಿತ್ರವು ತನ್ನ ನಟರ ನಟನಾ ಕೌಶಲ್ಯಕ್ಕಾಗಿ ಪ್ರಶಂಸೆ ಗಳಿಸಿದೆ, ಆದರೆ ಐಎಎಫ್ ಅನ್ನು ಚಿತ್ರಿಸಿದ ರೀತಿಗೆ ತೀವ್ರ ಟೀಕೆಗೆ ಗುರಿಯಾಗಿದೆ. ಸ್ವತಃ ಗುಂಜನ್ ಸಕ್ಸೇನಾ ಅವರು ವಾಯುಸೇನೆಯಲ್ಲಿ ತಾರತಮ್ಯದ ಯಾವ ಅನುಭವವೂ ನನಗೆ ಆಗಿಲ್ಲ ಎಂದಿದ್ದಾರೆ.
ಗುಂಜನ್ ಸಕ್ಸೇನಾ ತನ್ನ ಕಮಾಂಡಿಂಗ್ ಆಫೀಸರ್ನಿಂದ ತಾರತಮ್ಯಕ್ಕೆ ಒಳಗಾಗಿದ್ದಾರೆ ಎಂಬಂತೆ ಸಿನಿಮಾದಲ್ಲಿ ತೋರಿಸಲಾಗಿದೆ. ಇದಲ್ಲದೆ, ಭಾರತೀಯ ವಾಯುಪಡೆಯು ಪುರುಷ ಅಧಿಕಾರಿಗಳು ಹೆಚ್ಚು ಕುಡಿಯುವುದು, ಅಶ್ಲೀಲ ಟೀಕೆಗಳನ್ನು ಮಾಡುವುದು, ನಗ್ನ ಪೋಸ್ಟರ್ಗಳ ವೀಕ್ಷಣೆ, ಅಸಹ್ಯ ನೃತ್ಯ ಮಾಡುವುದು, ಮಹಿಳಾ ಅಧಿಕಾರಿಗಳಿಗೆ ಕಿರಿಕಿರಿಯುಂಟು ಮಾಡುವುದು ಇತ್ಯಾದಿಗಳನ್ನು ಮಾಡುತ್ತಾರೆ ಎಂಬಂತೆ ತೋರಿಸಲಾಗಿದೆ.
ತನ್ನ ಮಹಿಳಾ ಅಧಿಕಾರಿಗಳ ಬಗ್ಗೆ ಅತೀವ ಹೆಮ್ಮೆ ಹೊಂದಿರುವ ವಾಯುಸೇನೆಗೆ ಈ ಸಿನಿಮಾದಿಂದ ಕಳಂಕ ತಟ್ಟಿದೆ. ಸಿನಿಮಾದ ವಿರುದ್ಧ ವಾಯುಸೇನೆಯು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ ದೂರನ್ನು ಕೂಡ ಸಲ್ಲಿಸಿದೆ.
ಜೀವನ ಚರಿತ್ರೆ ಆಧಾರಿತ ಸಿನಿಮಾಗಳನ್ನು ಮಾಡುವಾಗ ಹೆಚ್ಚು ಸೂಕ್ಷ್ಮತೆಯನ್ನು ಬಾಲಿವುಡ್ ಮಂದಿ ಅಳವಡಿಸಿಕೊಳ್ಳುವುದು ಉತ್ತಮ. ಇಲ್ಲವಾದರೆ ಇದು ಗಣ್ಯವ್ಯಕ್ತಿಗಳ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ಆಗುತ್ತದೆ. ಗುಂಜನ್ ಸಕ್ಸೇನಾ ಅವರ ಸಾಧನೆಯನ್ನು ಜನರ ಮುಂದಿಡುವ ಪ್ರಯತ್ನದಲ್ಲಿ ವಾಯುಸೇನೆಯನ್ನು ಕೆಟ್ಟದಾಗಿ ಬಿಂಬಿಸುವ ಮೂಲಕ ಸಿನಿಮಾ ತಂಡ ಅಕ್ಷಮ್ಯ ಅಪರಾಧವನ್ನೇ ಮಾಡಿದೆ ಎಂದರೆ ತಪ್ಪಲ್ಲ.
✍️ಶರಣ್ಯ ಶೆಟ್ಟಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.