ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಇಸ್ರೇಲ್ ಪೂರ್ಣ ಪ್ರಮಾಣದ ರಾಜತಾಂತ್ರಿಕ ಸಂಬಂಧವನ್ನು ಸ್ಥಾಪನೆ ಮಾಡಿಕೊಳ್ಳಲು ಪರಸ್ಪರ ಮುಂದಾಗಿವೆ. ಈ ಮೂಲಕ ಯುಎಇ ಇಸ್ರೇಲ್ ಜೊತೆ ಸಕ್ರಿಯ ರಾಜತಾಂತ್ರಿಕ ಸಂಬಂಧ ಹೊಂದುವ ಮೂರನೇ ಅರಬ್ ರಾಷ್ಟ್ರವಾಗಲಿದೆ ಎಂದು ವರದಿಗಳು ತಿಳಿಸಿವೆ.
ಈ ಒಪ್ಪಂದ ನಿಜಕ್ಕೂ ಐತಿಹಾಸಿಕವಾಗಿದೆ. ಅರಬ್ ರಾಷ್ಟ್ರಗಳಲ್ಲಿ, ಈಜಿಪ್ಟ್ ಮತ್ತು ಜೋರ್ಡಾನ್ ಮಾತ್ರ ಇಸ್ರೇಲ್ ಜೊತೆ ಸಕ್ರಿಯ ರಾಜತಾಂತ್ರಿಕ ಸಂಬಂಧವನ್ನು ಹೊಂದಿವೆ. ಈಜಿಪ್ಟ್ 1979 ರಲ್ಲಿ ಇಸ್ರೇಲ್ ಜೊತೆ ಶಾಂತಿ ಒಪ್ಪಂದ ಮಾಡಿಕೊಂಡಿತು, ನಂತರ 1994 ರಲ್ಲಿ ಜೋರ್ಡಾನ್ ಒಪ್ಪಂದ ಮಾಡಿಕೊಂಡಿತ್ತು. ಮೌರಿಟಾನಿಯಾ 1999 ರಲ್ಲಿ ಇಸ್ರೇಲ್ ಜೊತೆ ಒಪ್ಪಂದ ಮಾಡಿಕೊಂಡಿತ್ತು, ಆದರೆ 2009 ರಲ್ಲಿ ನಡೆದ ಗಾಝಾ ಇಸ್ರೇಲ್ ಯುದ್ಧದ ಬಳಿಕ ಸಂಬಂಧವನ್ನು ಕೊನೆಗೊಳಿಸಿತು.
ಯುಎಇ ಮತ್ತು ಇಸ್ರೇಲ್ ಸಂಬಂಧಕ್ಕೆ ಪ್ರಮುಖವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಧ್ಯಸ್ಥಿಕೆಯನ್ನು ವಹಿಸಿದ್ದು, ಅವರ ನೇತೃತ್ವದಲ್ಲೇ ಈ ಒಪ್ಪಂದ ನಡೆದಿದೆ. ಇನ್ನು ಈ ಒಪ್ಪಂದದ ಪರಿಣಾಮವಾಗಿ ಭಾರಿ ವಿವಾದ ಹಾಗೂ ಚರ್ಚೆಗೆ ಕಾರಣವಾಗಿದ್ದ ವೆಸ್ಟ್ಬ್ಯಾಂಕ್ ಪಶ್ಚಿಮ ದಂಡೆಯ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆಯನ್ನು ಇಸ್ರೇಲ್ ಕೈ ಬಿಡುವುದಾಗಿ ಒಪ್ಪಂದದ ಭಾಗವಾಗಿ ಘೋಷಿಸಿದೆ.
ಅಮೆರಿಕ ಅಧ್ಯಕ್ಷ ಟ್ರಂಪ್, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಬುಧಾಬಿಯ ರಾಜ, ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅವರು ಸೇರಿದಂತೆ ಮೂರು ದೇಶಗಳು ಒಪ್ಪಂದದ ಸಂಬಂಧ ಜಂಟಿ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ. “ಇಸ್ರೇಲ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವಿನ ಸಂಬಂಧಗಳ ಸಂಪೂರ್ಣ ಸಹಜತೆಗೆ ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.