ವಾಷಿಂಗ್ಟನ್: ಕೊರೋನಾ ಕಾರಣದಿಂದ ಇಡೀ ಜಗತ್ತಿನ ಹೆಚ್ಚಿನ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿರುವ ಚೀನಾದ ಮೇಲೆ ಅಮೆರಿಕಾ ನ್ಯಾಯಾಂಗ ಇಲಾಖೆ ಇನ್ನೊಂದು ಆರೋಪ ಹೊರಿಸಿದೆ. ಚೀನಾ ಸರ್ಕಾರದ ಜೊತೆಗೆ ಕೆಲಸ ಮಾಡುವ ಹ್ಯಾಕರ್ಸ್ ಗಳು ವಿಶ್ವದ ಹಲವಾರು ಕಂಪೆನಿಗಳ ಬೌದ್ಧಿಕ ಮತ್ತು ವ್ಯಾವಹಾರಿಕ ರಹಸ್ಯಗಳಿಗೆ ಕನ್ನ ಹಾಕಿ ಹಣ ಗಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.
ಇತ್ತೀಚೆಗೆ ಚೀನಾಗೆ ಸಂಬಂಧಪಟ್ಟ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವಿ ಪಡೆದಿರುವ ಇಬ್ಬರು ಹ್ಯಾಕರ್ಸ್ ಗಳು ಔಷಧ ಕಂಪೆನಿಯೊಂದರ ವ್ಯವಹಾರಕ್ಕೆ ಸಂಬಂಧಿಸಿದ ರಹಸ್ಯಗಳನ್ನು ಹ್ಯಾಕ್ ಮಾಡುವ ಮೂಲಕ ಸುದ್ದಿಯಾಗಿದ್ದರು. ಕೊರೋನಾ ಸಂಬಂಧಿಸಿದಂತೆ ಲಸಿಕೆಗಳನ್ನು ಕಂಡುಹಿಡಿಯುವ ಸಂಸ್ಥೆಗಳನ್ನು ಗುರಿಯಾಗಿಸಿ ಈ ಕೃತ್ಯವನ್ನು ಆರೋಪಿಗಳು ಎಸಗಿದ್ದರು. ಈ ಆರೋಪಿಗಳ ವಿರುದ್ಧ ವ್ಯವಹಾರ ರಹಸ್ಯ ಕಳ್ಳತನ ಮತ್ತು ವಂಚನೆ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ. ಈ ಇಬ್ಬರೂ ಹತ್ತು ವರ್ಷಕ್ಕೂ ಅಧಿಕ ಸಮಯಗಳಿಂದ ಪ್ರಪಂಚದ ವಿವಿಧ ಸಂಸ್ಥೆಗಳ ರಹಸ್ಯ ಮಾಹಿತಿಗಳಿಗೆ ಕನ್ನ ಹಾಕುತ್ತಿದ್ದರು ಎಂದೂ ತಿಳಿದು ಬಂದಿದೆ. ಈ ಪ್ರಕರಣವೂ ಸದ್ಯ ಅಮೆರಿಕಾ ನ್ಯಾಯಾಂಗ ಇಲಾಖೆಯ ಆರೋಪಕ್ಕೆ ಪುಷ್ಟಿ ನೀಡಿದಂತಿದೆ.
ಈ ಹಿಂದಿನಿಂದಲೂ ಜಗತ್ತಿಗೆ ಕೊರೋನಾ ಎಂಬ ಮಹಾಮಾರಿ ಹಬ್ಬಲು ಚೀನಾ ದೇಶವೇ ಕಾರಣ ಎಂದು ಅಮೆರಿಕಾ ಹೇಳಿಕೊಂಡೇ ಬಂದಿದೆ. ಈ ಹಿನ್ನೆಲೆಯಲ್ಲಿಯೂ ಈ ಹೊಸ ಆರೋಪ ಮಹತ್ವ ಪಡೆದಿದೆ. ಈ ಬಗ್ಗೆ ಸ್ಪಷ್ಟನೆಯನ್ನೂ ನೀಡಿರುವ ಇಲಾಖೆ, ಚೀನಾ ಮೂಲದ ಹ್ಯಾಕರ್ಸ್ ಗಳು ಕೊರೋನಾ ಲಸಿಕೆಗಳನ್ನು ಸಂಶೋಧನೆ ಮಾಡುತ್ತಿರುವ ಸಂಸ್ಥೆಗಳಿಂದ ಮಾಹಿತಿಗಳನ್ನು ರಹಸ್ಯವಾಗಿ ಕಳ್ಳತನ ಮಾಡಿರುವುದಾಗಿ ಹೇಳುತ್ತಿಲ್ಲ. ಆದರೆ ಅಮೆರಿಕಾದ ಸಂಸ್ಥೆಗಳ ಹೊಸ ಆವಿಷ್ಕಾರಗಳಿಗೆ ಕನ್ನ ಹಾಕುವ ಯೋಜನೆಯನ್ನು ವಿದೇಶಿ ಹ್ಯಾಕರ್ ಗಳು ಹೇಗೆ ಗುರಿಯಾಗಿಸಿಕೊಂಡಿದ್ದಾರೆ ಎಂಬುದನ್ನು ತಿಳಿಸುವಲ್ಲಿ ಈ ಪ್ರಕರಣವನ್ನು ಉದಾಹರಿಸಿರುವುದಾಗಿ ತಿಳಿಸಿದೆ.
ಅಲ್ಲದೆ ರೋಗ ನಿಯಂತ್ರಕ ಲಸಿಕೆ ಮತ್ತು ಪರೀಕ್ಷಾ ಕಿಟ್ ಗಳನ್ನು ಅಭಿವೃದ್ಧಿ ಮಾಡುವ ಸಂಸ್ಥೆಗಳಲ್ಲಿನ ಕಂಪ್ಯೂಟರ್ ನೆಟ್ವರ್ಕ್ ಗಳ ನ್ಯೂನ್ಯತೆಗಳನ್ನು ಇಂತಹ ಹ್ಯಾಕರ್ಸ್ ಗಳು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದರ ಸಂಪೂರ್ಣ ಉಪಯೋಗವನ್ನು ಅವರು ಪಡೆದುಕೊಳ್ಳುತ್ತಿದ್ದಾರೆ ಎಂದೂ ಇಲಾಖೆ ತಿಳಿಸಿದೆ. ಸ್ವ ಅನುಕೂಲಕ್ಕಾಗಿ ಹ್ಯಾಕ್ ಮಾಡುವ ಹ್ಯಾಕರ್ಸ್ ಗಳಿಗೆ ಚೀನಾ ಬೆಂಬಲ ನೀಡುತ್ತಿದ್ದು, ಅಗತ್ಯ ಸಂದರ್ಭದಲ್ಲಿ ಅವರನ್ನು ತನ್ನ ಉಪಯೋಗಕ್ಕಾಗಿ ಬಳಕೆ ಮಾಡಿಕೊಳ್ಳುವ ಕೆಲಸವನ್ನು ಚೀನಾ ಮಾಡುತ್ತಿದೆ ಎಂದು ಅಮೆರಿಕದ ಸಹಾಯಕ ಅಟಾರ್ನಿ ಜನರಲ್ ಜಾನ್ ಡಿಮರ್ಸ್ ಅವರು ಹೇಳಿಕೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.