ವಾಷಿಂಗ್ಟನ್: ಪೂರ್ವ ಲಡಾಕ್ನ ನೈಜ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆಯು ಏರ್ಪಟ್ಟ ಹಿನ್ನೆಲೆಯಲ್ಲಿ, ಚೀನಾದ ಧೋರಣೆಯನ್ನು ಖಂಡಿಸಿ ಹಲವಾರು ಭಾರತೀಯ-ಅಮೆರಿಕನ್ನರು ಯುನೈಟೆಡ್ ಸ್ಟೇಟ್ಸ್ನ (ಯುಎಸ್) ವಾಷಿಂಗ್ಟನ್ನಲ್ಲಿರುವ ಚೀನೀ ರಾಯಭಾರ ಕಚೇರಿಯ ಹೊರಗೆ ಶಾಂತಿಯುತ ಪ್ರತಿಭಟನೆ ನಡೆಸಿದರು ಎಂದು ವರದಿಗಳು ತಿಳಿಸಿವೆ.
ಪ್ರತಿಭಟನಾಕಾರರು ಚೀನಾ ವಿರೋಧಿ ಬ್ಯಾನರ್ಗಳನ್ನು ಪ್ರದರ್ಶಿಸಿದರು ಮತ್ತು ಚೀನಾ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಜಗತ್ತಿನಾದ್ಯಂತ ಹರಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಚೀನಾ ಹರಡಿದ ಕೊರೋನಾ ಜಾಗತಿಕ ಆರ್ಥಿಕತೆಯನ್ನು ಹಳಿ ತಪ್ಪಿಸಿರುವುದು ಮಾತ್ರವಲ್ಲ, ಲಕ್ಷಾಂತರ ಸಾವುಗಳಿಗೆ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಪ್ರತಿಭಟನಾಕಾರರು “ಚೀನಾ ಕಮ್ಯುನಿಸ್ಟ್: ಡೌನ್ ಡೌನ್” ನಂತಹ ಘೋಷಣೆಗಳನ್ನು ಕೂಗಿದರು ಮತ್ತು “ಚೀನೀ ವೈರಸ್ ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಕೊಂದಿದೆ ಮತ್ತು ಜಾಗತಿಕ ಆರ್ಥಿಕತೆಯನ್ನು ಕುಸಿತಗೊಳಿಸಿದೆ” ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಮುದಾಯ ಕಾರ್ಯಕರ್ತ ಮನೋಜ್ ಶ್ರೀನೀಲಂ, “ಲಡಾಖಿನಲ್ಲಿ ಭಾರತೀಯ ಭೂಪ್ರದೇಶದಲ್ಲಿ ಅಪ್ರಚೋದಿತ ಚೀನಾದ ಆಕ್ರಮಣ, ಭೂ ಕಬಳಿಕೆ ಮತ್ತು ಭಾರತೀಯರನ್ನು ಕೊಲ್ಲುವುದನ್ನು ನಾವು ಖಂಡಿಸುತ್ತೇವೆ, ಚೀನಾದ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಜಗತ್ತು ವಿಚಲಿತವಾಗಿದೆ” ಎಂದು ಹೇಳಿದ್ದಾರೆ.
ಕಳೆದ ಹಲವಾರು ದಶಕಗಳಿಂದ ಚೀನಾವು ಭಾರತ ಮತ್ತು ಹಲವಾರು ಸಣ್ಣ ರಾಷ್ಟ್ರಗಳನ್ನು ಬೆದರಿಸುತ್ತಿದೆ ಎಂದು ಮತ್ತೊಬ್ಬ ಕಾರ್ಯಕರ್ತ ಮಹೀಂದ್ರಾ ಸಾಪಾ ಆರೋಪಿಸಿದ್ದಾರೆ.
ಪ್ರತಿಭಟನಾಕಾರರು ಕೇರಳ ಅಸೋಸಿಯೇಷನ್ ಆಫ್ ಗ್ರೇಟರ್ ವಾಷಿಂಗ್ಟನ್, ದುರ್ಗಾ ಟೆಂಪಲ್ ಫ್ರೆಂಡ್ಸ್, ತಮಿಳು ಸಾಂಸ್ಕೃತಿಕ ಗುಂಪುಗಳು ಮತ್ತು ಹೊವಾರ್ಡ್ ಕೌಂಟಿಯ ಭಾರತೀಯ ಸಾಂಸ್ಕೃತಿಕ ಸಂಘಗಳು, ನ್ಯಾಷನಲ್ ಕೌನ್ಸಿಲ್ ಆಫ್ ಏಷ್ಯನ್ ಇಂಡಿಯನ್ ಅಸೋಸಿಯೇಷನ್ಸ್ ಮತ್ತು ಅಮೆರಿಕದ ವಿಶ್ವ ಹಿಂದೂ ಪರಿಷತ್ ಮುಂತಾದ ಭಾರತೀಯ-ಅಮೇರಿಕನ್ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆಗಳ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.