ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸಮಸ್ಯೆ ಹೆಚ್ಚಾಗುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಒಂದು ಕಡೆಯಲ್ಲಿ ರೋಗಿಗಳನ್ನು ದಾಖಲಿಸಿಕೊಳ್ಳಲು ಬೇಕಾದ ಹಾಸಿಗೆಗಳ ಸಮಸ್ಯೆಯನ್ನೂ ಆಸ್ಪತ್ರೆಗಳು ಎದುರಿಸಬೇಕಾಗಿದೆ. ಮತ್ತೊಂದು ಕಡೆ ಚಿಕಿತ್ಸೆ ನೀಡಲು ಬೇಕಾದ ವೈದ್ಯಕೀಯ ಸಿಬ್ಬಂದಿಗಳ ಕೊರತೆಯನ್ನು ಎದುರಿಸುವ ಪರಿಸ್ಥಿತಿ ಇದೆ.
ಇಂತಹ ಸಂದರ್ಭವನ್ನು ನಿಭಾಯಿಸಲು ರಾಜ್ಯದ ವೈದ್ಯಕೀಯ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡಿರುವ ಎಲ್ಲಾ ವೈದ್ಯರೂ ಕೊರೋನಾ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಸರ್ಕಾರ ಮನವಿ ಮಾಡಿಕೊಂಡಿದೆ. ಪರಿಷತ್ತಿನಲ್ಲಿ ಸದಸ್ಯತನ ಹೊಂದಿರುವ ಎಲ್ಲಾ ವೈದ್ಯರುಗಳೂ ರಾಜ್ಯದಲ್ಲಿರುವ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕೈಜೋಡಿಸುವ ಮೂಲಕ ಸೇವೆ ಸಲ್ಲಿಸುವಂತೆ ತಿಳಿಸಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ವೈದ್ಯರುಗಳ ನಿಸ್ವಾರ್ಥ ಸೇವೆಯ ಅವಶ್ಯಕತೆ ರಾಜ್ಯಕ್ಕಿದೆ ಎಂದೂ ಸರ್ಕಾರ ಹೇಳಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೆಎಂಸಿ ಅಧ್ಯಕ್ಷ ಡಾ. ಹೆಚ್ ವೀರಭದ್ರಪ್ಪ, ರಾಜ್ಯದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ವೈದ್ಯರುಗಳು ತಮ್ಮ ಬಿಡುವಿನ ಅವಧಿಯಲ್ಲಿ ಸಮೀಪದ ಸರ್ಕಾರಿ ಅಥವಾ ಖಾಸಗಿ ಕೊರೋನಾ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವಂತೆ ತಿಳಿಸಿದ್ದಾರೆ. ದಿನಕ್ಕೆ ಇಂತಿಷ್ಟೇ ಸಮಯ ಎಂದು ನಿಗದಿ ಮಾಡಿಕೊಳ್ಳದೆ ಕಾರ್ಯನಿರ್ವಹಿಸಿ ಎಂಬುದಾಗಿಯೂ ಮನವಿ ಮಾಡಿಕೊಂಡಿದ್ದಾರೆ. ತುರ್ತು ಸಂದರ್ಭಗಳಲ್ಲಿ ತಜ್ಞ ವೈದ್ಯರ ಜೊತೆಗೆ ಸಮಾಲೋಚನೆಗಳನ್ನು ನಡೆಸಿ ಚಿಕಿತ್ಸೆ ನೀಡುವಂತೆಯೂ ಸೂಚಿಸಿದ್ದಾರೆ.
ಇನ್ನು ಈ ರೀತಿಯಲ್ಲಿ ಸ್ವಯಂ ಪ್ರೇರಿತರಾಗಿ ಕಾರ್ಯ ನಿರ್ವಹಿಸಲು ಸಿದ್ಧರಿರುವ ವೈದ್ಯರು ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯಲ್ಲಿ ನೋಂದಣಿ ಮಾಡಿಕೊಳ್ಳುವಂತೆಯೂ ಅವರು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.