ವಾಷಿಂಗ್ಟನ್: ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಂದೆ ಸರಿಯುವ ಕುರಿತಂತೆ ಅಮೆರಿಕಾದ ಡೊನಾಲ್ಡ್ ಟ್ರಂಪ್ ಆಡಳಿತ WHOಗೆ ಔಪಚಾರಿಕ ಸೂಚನೆಯನ್ನು ನೀಡಿದೆ. ಅಮೆರಿಕಾದ ಈ ನಿರ್ಧಾರ ಮುಂದಿನ ವರ್ಷದ ಜುಲೈ 6ರಿಂದ ಅನ್ವಯವಾಗಲಿದೆ ಎಂದು ವರದಿಗಳು ತಿಳಿಸಿವೆ.
ಚೀನಾದಿಂದ ಜಗತ್ತಿಗೆ ಹರಡಿರುವ ಕೊರೋನಾ ವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ತೋರಿದ ಧೋರಣೆ ವಿರುದ್ಧ ಅಮೆರಿಕಾ ಅಸಮಧಾನ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿಯೇ ಅಮೆರಿಕಾ WHO ದಿಂದ ಹೊರನಡೆಯುವುದಾಗಿ ಅಧಿಸೂಚನೆಯ ಮೂಲಕವೇ ವಿಶ್ವ ಸಂಸ್ಥೆಗೆ ತಿಳಿಸಿದ್ದು, ಮುಂದಾನ ವರ್ಷ ಈ ಅಧಿಸೂಚನೆ ಜಾರಿಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಟ್ರಂಪ್ ಆಡಳಿತ ಯುನೈಟೆಡ್ ನೇಶನ್ಸ್ ನ ಸೆಕ್ರೆಟರಿ ಜನರಲ್ ಆಂಟೊನಿಯೊ ಗುಟೆರಸ್ ಅವರಿಗೆ ಮಾಹಿತಿ ಪತ್ರವನ್ನು ಕಳುಹಿಸಿರುವುದಾಗಿಯೂ ತಿಳಿದು ಬಂದಿದೆ.
ಅಮೆರಿಕಾದ ಈ ನಿಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗುಟೆರಸ್, WHO ದಿಂದ ಹೊರ ಹೋಗಲು ಬಯಸುವ ರಾಷ್ಟ್ರಗಳು ಕೆಲವು ಷರತ್ತುಗಳನ್ನು ನಿರ್ವಹಿಸಬೇಕಿದೆ. ಅಂತಹ ಷರತ್ತುಗಳನ್ನು ಅಮೆರಿಕಾ ಪೂರೈಸಿದೆಯೇ ಎಂದು ಪರಿಶೀಲನೆ ನಡೆಸಲಾಗುತ್ತಿದೆ ಎಂಬುದಾಗಿಯೂ ತಿಳಿಸಿದ್ದಾರೆ.
ತನ್ನ ಸದಸ್ಯತ್ವ ವಾಪಾಸಾತಿಗೂ ಮುನ್ನ ಅದಕ್ಕಿರುವ ಹಣಕಾಸಿನ ವ್ಯವಹಾರಗಳನ್ನೂ ಸಂಪೂರ್ಣಗೊಳಿಸಬೇಕಾಗಿದ್ದು, ಹಿಂದಿನ ಬಾಕಿಗಳನ್ನು ತೀರಿಸಬೇಕಾಗಿದೆ ಎಂದು WHO ಮಾಹಿತಿ ನೀಡಿದೆ. ಸುಮಾರು 200 ಮಿಲಿಯನ್ ಬಾಕಿ ಹಣವನ್ನು ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಗೆ ನೀಡಬೇಕಿದೆ ಎಂದೂ ತಿಳಿಸಿದ್ದಾರೆ.
ಇನ್ನು ಕೊರೋನಾವೈರಸ್ ವಿಚಾರವಾಗಿ ವಿಶ್ವ ಆರೋಗ್ಯ ಸಂಸ್ಥೆಯು ಚೀನಾ ಪರವಾಗಿತ್ತು. ಚೀನಾ ವೈರಸ್ ಕುರಿತಂತೆ ಮಾಹಿತಿ ನೀಡುವಾಗ ಸಂಸ್ಥೆಯ ಕಟ್ಟುಪಾಡು, ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಿರುವುದಾಗಿಯೂ ಅಮೆರಿಕಾ ತಿಳಿಸಿದೆ. ಸಾರ್ವಜನಿಕರ ದಾರಿ ತಪ್ಪಿಸುವಂತೆ ಚೀನಾ ಸುಳ್ಳು ಮಾಹಿತಿಗಳನ್ನು ನೀಡಲು ಸಂಸ್ಥೆಗೆ ಒತ್ತಡ ಹೇರಿದೆ ಎಂದೂ ಅಮೆರಿಕ ತಿಳಿಸಿದೆ. ಅಲ್ಲದೆ, ವೈರಸ್ ನಿಯಂತ್ರಣಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸಿ ಕೊಡುವಲ್ಲಿಯೂ ಸಂಸ್ಥೆ ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ಅಮೆರಿಕಾ ಹೊರ ನಡೆಯುವುದಾಗಿಯೂ ಟ್ರಂಪ್ ತಿಳಿಸಿದ್ದಾರೆ.
ಈ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿರುವ ಯು.ಎನ್. ಫೌಂಡೇಶನ್ ಅಧ್ಯಕ್ಷ ಎಲಿಜಬೆತ್ ಕೌಸೆನ್, ಇಂತಹ ಕಠಿಣ ಸಂದರ್ಭದಲ್ಲಿ ಅಮೆರಿಕ ಸದಸ್ಯತ್ವ ಬಿಡಲು ನಿರ್ಧರಿಸಿರುವುದು ಆತಂಕಕಾರಿಯೇ ಸರಿ ಎಂದಿದ್ದಾರೆ. ಇದು ಕೊರೋನಾ ವಿರುದ್ಧದ ಜಾಗತಿಕ ಹೋರಾಟದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂದೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.