ವಾಷಿಂಗ್ಟನ್: ಗಾಳಿಯಲ್ಲಿ ಹರಡಿಕೊಂಡಿರುವ ಕೊರೋನಾವೈರಸ್ ಗಳು ಸಹ ಮಾನವನಿಗೆ ಸೋಂಕು ಹರಡಿಸುವ ಸಾಧ್ಯತೆ ಇದೆ. ಆದ್ದರಿಂದ ವಿಶ್ವ ಆರೋಗ್ಯ ಸಂಸ್ಥೆ ತನ್ನ ಮಾರ್ಗಸೂಚಿಯಲ್ಲಿ ಬದಲಾವಣೆಗಳನ್ನು ತರಬೇಕಾದ ಅಗತ್ಯತೆ ಇದೆ ಎಂದು ವಿಜ್ಞಾನಿಗಳು ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ನೀಡಿದ್ದಾರೆ.
ಗಾಳಿಯಲ್ಲಿ ಸೇರಿಕೊಂಡಿರುವ ವೈರಸನ ಅತೀ ಸಣ್ಣ ಕಣವೂ ಸಹ ಸೋಂಕನ್ನು ಹಬ್ಬಿಸುವ ಸಾಧ್ಯತೆ ಇದೆ. ಸೋಂಕಿತರು ಸೀನಿದಾಗ, ಕೆಮ್ಮುವಾಗ, ಮಾತನಾಡುವಾಗ ಬಾಯಿ, ಮೂಗಿನಿಂದ ಹೊರ ಬರುವ ಸೋಂಕಿನ ವೈರಸ್ ಕಣಗಳು ಗಾಳಿಯ ಮೂಲಕ ಇತರರ ದೇಹಕ್ಕೆ ಸೇರುವ ಸಾಧ್ಯತೆಗಳೂ ಇವೆ. ಈ ವಿಚಾರವನ್ನು ಸುಮಾರು 32 ರಾಷ್ಟ್ರಗಳ 239 ವಿಜ್ಞಾನಿಗಳು ವಿಶ್ವ ಆರೋಗ್ಯ ಸಂಸ್ಥೆಗೆ ಬಹಿರಂಗ ಪತ್ರದ ಮೂಲಕ ತಿಳಿಸಿದ್ದಾರೆ.
ಆದರೆ ಈ ವಿಚಾರಕ್ಕೆ ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರತಿಕ್ರಿಯೆ ನೀಡಿದೆ. ಇದನ್ನು ಪರಿಗಣನೆಗೆ ತೆಗೆದುಕೊಳ್ಳಬಹುದಾದರೂ, ಅದಕ್ಕೆ ಪೂರಕವಾದ ಆಧಾರಗಳು ಸಿಕ್ಕಿಲ್ಲವಾದ್ದರಿಂದ ಈ ಪ್ರತಿಪಾದನೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ ಎಂದೂ ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ವಿಭಾಗದ ಮುಖ್ಯಸ್ಥರು ತಿಳಿಸಿದ್ದಾರೆ.
ಇನ್ನು ಈ ಪತ್ರದಲ್ಲಿ ಮತ್ತೂ ಕೆಲವು ಅಂಶಗಳನ್ನು ತಿಳಿಸಿರುವ ವಿಜ್ಞಾನಿಗಳು, ಗಾಳಿಯಲ್ಲಿ ಸೋಂಕು ಹರಡುವ ಸಾಧ್ಯತೆ ಇದ್ದು ಸಾರ್ವಜನಿಕ ಸ್ಥಳ, ಮನೆ, ಕಛೇರಿ, ಒಳಾಂಗಣ, ಹೊರಾಂಗಣ ಹೀಗೆ ಎಲ್ಲಾ ದಿಕ್ಕುಗಳಲ್ಲಿಯೂ ಮಾಸ್ಕ್ ಧರಿಸುವುದು ಉತ್ತಮ. ಸಾಮಾಜಿರ ಅಂತರದ ಜೊತೆಗೆ ಮಾಸ್ಕ್ ಸಹ ಕಡ್ಡಾಯ ಮಾಡಿದಲ್ಲಿ ಒಳಿತು ಎಂದು ತಿಳಿಸಿದ್ದಾರೆ. ಪರಿಶುದ್ಧ ಗಾಳಿ ಎಲ್ಲಡೆ ಹರಡುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದೆ.
ಜೊತೆಗೆ ಅತಿ ನೇರಳೆ ಕಿರಣಗಳು ಗಾಳಿಯಲ್ಲಿ ವೈರಸ್ಗಳನ್ನು ನಾಶಪಡಿಸುವ ಶಕ್ತಿಯನ್ನು ಹೊಂದಿದೆ ಎಂದು ವಿಜ್ಞಾನಿಗಳು ಈ ಪತ್ರದಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.