ದೇಶದ ಸಾರ್ವಭೌಮತ್ವ ಮತ್ತು ಭದ್ರತೆಗೆ ಧಕ್ಕೆ ತರುತ್ತಿದ್ದ ಅಪ್ಲಿಕೇಶನ್ಗಳು ಒಡ್ಡುತ್ತಿದ್ದ ಸವಾಲಿಗೆ ಪ್ರತಿ ಸವಾಲು ಹಾಕುವ ಸಲುವಾಗಿ ಭಾರತ ಸರ್ಕಾರವು ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಟಿಕ್ಟಾಕ್, ಹೆಲೋ ಮತ್ತು ವೀಚಾಟ್ ಸೇರಿದಂತೆ 59 ಚೀನೀ ಮೊಬೈಲ್ ಅಪ್ಲಿಕೇಶನ್ಗಳನ್ನು ನಿಷೇಧಿಸಿದೆ. ಜೂನ್ 29 ರಂದು ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಶೇರ್ಇಟ್, ಯುಸಿ ಬ್ರೌಸರ್ ಮತ್ತು ಶಾಪಿಂಗ್ ಅಪ್ಲಿಕೇಶನ್ ಕ್ಲಬ್ ಫ್ಯಾಕ್ಟರಿ ನಿರ್ಬಂಧಿಸಲಾದ ಇತರ ಪ್ರಮುಖ ಅಪ್ಲಿಕೇಶನ್ಗಳಲ್ಲಿ ಸೇರಿವೆ.
ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಭಾಗವಾಗಿರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು ದುರುದ್ದೇಶಪೂರಿತ ಅಪ್ಲಿಕೇಶನ್ಗಳನ್ನು ನಿರ್ಬಂಧಿಸಲು ಸಮಗ್ರವಾಗಿ ಶಿಫಾರಸ್ಸನ್ನು ಕಳುಹಿಸಿದೆ. 30 ಕೋಟಿ ಭಾರತೀಯ ಸ್ಮಾರ್ಟ್ಫೋನ್ ಬಳಕೆದಾರರು ಚೀನಿ ಅಪ್ಲಿಕೇಶನ್ಗಳನ್ನು ಇನ್ಸ್ಟಾಲ್ ಮಾಡಿಕೊಂಡಿದ್ದಾರೆ. ಟಿಕ್ಟಾಕ್ 3.2 ಕೋಟಿ ಬಳಕೆದಾರರನ್ನು, ಹೆಲೋ ಆ್ಯಪ್ 5 ಕೋಟಿ ಬಳಕೆದಾರರನ್ನು (ಬೈಟ್ ಡ್ಯಾನ್ಸ್ ಹೆಲೋ ಮತ್ತು ಟಿಕ್ಟಾಕ್ ಎರಡನ್ನೂ ಹೊಂದಿದ್ದಾರೆ) ಮತ್ತು ಶೇರ್ಇಟ್ನ 5 ಕೋಟಿ ಡೌನ್ಲೋಡ್ಗಳನ್ನು ಹೊಂದಿತ್ತು. ಚೀನಿ ಆ್ಯಪ್ಗಳ ನಿಷೇಧಕ್ಕೆ ಜನರಿಂದ ಬಂದ ಪ್ರತಿಕ್ರಿಯೆಯು ಸಕಾರಾತ್ಮಕವಾಗಿದ್ದರೂ, ಕೆಲವು ಹುಸಿ ಬುದ್ಧಿಜೀವಿಗಳು “ಅಪ್ಲಿಕೇಶನ್ಗಳ ನಿಷೇಧದಿಂದ ಏನು ಸಾಧಿಸಬಹುದು?” ಎಂಬಂತಹ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಇದನ್ನು ಅರ್ಥಮಾಡಿಕೊಳ್ಳಲು ನಾವು 2001ರತ್ತ ಹಿಂದಿರುಗಿ ನೋಡಬೇಕಿದೆ.
2001ರಲ್ಲಿ, ಇಂಟರ್ನೆಟ್ ಸೇವಾ ಪೂರೈಕೆದಾರ ‘ನೌ ಇಂಡಿಯಾ’ ಆಕ್ರಮಣಕಾರಿ ಬೆಲೆಗೆ ಇಂಟರ್ನೆಟ್ ಸಂಪರ್ಕವನ್ನು ನೀಡುವ ಅಗ್ರೆಸಿವ್ ಮಾರ್ಕೆಟಿಂಗ್ ಅಭಿಯಾನವನ್ನು ಪ್ರಾರಂಭಿಸಿತು. ಇದು ಗ್ರಾಹಕರ ಸಂಖ್ಯೆಯನ್ನು ದೊಡ್ಡ ಮಟ್ಟದಲ್ಲಿ ಆಕರ್ಷಿಸಿತು. ಆದರೆ, ಸಾಫ್ಟ್ವೇರ್ ಇನ್ಸ್ಟಾಲ್ ಆದಾಗ ಒಂದು ವಿಚಿತ್ರ ಸಂಗತಿ ಬೆಳಕಿಗೆ ಬಂದಿತು. ಅದೇನೆಂದರೆ ‘ಯೂನಿಸೆಂಟರ್’ ಎಂಬ ಸಾಧನ ಸ್ವಯಂಚಾಲಿತವಾಗಿ “ರಿಮೋಟ್ ಕಂಟ್ರೋಲ್ ಟ್ರಬಲ್ಸೂಟಿಂಗ್ ಟೂಲ್” ಆಗಿ ಇನ್ಸ್ಟಾಲ್ ಆಗುತ್ತಿತ್ತು . ಅಂತಿಮ-ಬಳಕೆದಾರ ಒಪ್ಪಂದದಲ್ಲಿ ಇದನ್ನು ಪಟ್ಟಿ ಮಾಡಲಾಗಿರಲಿಲ್ಲ. ಸಾಮಾನ್ಯ ಬಳಕೆದಾರರಿಗೆ ಈ ಸಾಧನವನ್ನು ನೋಡಲು ಸಾಧ್ಯವಾಗಲಿಲ್ಲ. ಈ ಸಾಧನವು ಸೇವಾ ಪೂರೈಕೆದಾರರಿಗೆ ಬಳಕೆದಾರರ ವೈಯಕ್ತಿಕ ಕಂಪ್ಯೂಟರ್ಗೆ ನೇರ ಪ್ರವೇಶವನ್ನು ನೀಡಿತ್ತು. ಈ ವಿಷಯ ಮುನ್ನಲೆಗೆ ಬಂದಾಗ ‘ನೌ ಇಂಡಿಯಾ’ ಇದನ್ನು ನಿರಾಕರಿಸಿತು, ಆದರೆ ಸಾಕ್ಷ್ಯಗಳಿಂದ ಮುಖಭಂಗ ಎದುರಿಸಿತು.
‘ನೌ ಇಂಡಿಯಾ’ ಚೀನಾದ ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಉದ್ಯಮಿಯ ನೇತೃತ್ವದ ಹಾಂಗ್ ಕಾಂಗ್ ಮೂಲದ ಗ್ರೂಪ್ನ ಅಂಗಸಂಸ್ಥೆಯಾಗಿತ್ತು. ‘ನೌ ಇಂಡಿಯಾ’ ಪೆಸಿಫಿಕ್ ಕನ್ವರ್ಜೆನ್ಸ್ (ಮಾರಿಷಸ್) ಲಿಮಿಟೆಡ್ ಎಂಬ ವಿದೇಶಿ ಪಾರ್ಟಿಸಿಪೆಂಟ್ ಪಟ್ಟಿ ಮಾಡಿತ್ತು. ಇದು ಕೂಡ ಅದೇ ಹಾಂಗ್ ಕಾಂಗ್ ಕಂಪನಿಯ ಅಂಗಸಂಸ್ಥೆ ಎಂದು ವಿಚಾರಣೆಯಿಂದ ತಿಳಿದುಬಂದಿದೆ. ಇಂಟರ್ನೆಟ್ ಟ್ರಾಫಿಕ್ ಮತ್ತೊಂದು ಐಎಸ್ಪಿಯ ಎರಡು ಸರ್ವರ್ಗಳ ಮೂಲಕ ರವಾನೆಗೊಳ್ಳುತ್ತಿತ್ತು ಮತ್ತು ಹಾಂಗ್ ಕಾಂಗ್ನ ಮತ್ತೊಂದು ಚೀನಾದ ಕಂಪನಿಯ ಗೇಟ್ವೇಗೆ ಇದು ತಲುಪುತ್ತಿತ್ತು.
ದುಃಖಕರವೆಂದರೆ, ಇದನ್ನು ಆರಂಭದಲ್ಲಿ ಸಂಬಂಧಿಸಿದವರ ಗಣನೆಗೆ ತಂದಾಗ ನಿರ್ಲಕ್ಷ್ಯ ಮಾಡಲಾಗಿತ್ತು.
ಶತ್ರು ದೇಶದ ನಾಯಕರನ್ನು ಜನರಿಂದ ಮತ್ತು ಸೈನ್ಯದ ಕಮಾಂಡರ್ಗಳನ್ನು ತಮ್ಮ ಸೈನಿಕರಿಂದ ದೂರಮಾಡುವ ಸಾಧನಗಳನ್ನು ಅಭಿವೃದ್ಧಿಪಡಿಸಲು ಚೀನಾ ಕೆಲಸ ಮಾಡುತ್ತಿದೆ. ಶತ್ರುಗಳ ಮೆದುಳು, ಹೃದಯ ಮತ್ತು ನರಮಂಡಲಕ್ಕೆಯೇ ಹೊಡೆತ ನೀಡುವುದು ಅದರ ಕುತಂತ್ರ. ಸಮಾಜವು ಎಷ್ಟು ಆಧುನಿಕವಾಗುತ್ತದೆಯೋ ಅಷ್ಟು ಅದು ತಂತ್ರಜ್ಞಾನವನ್ನು ಅವಲಂಬಿಸಿರುತ್ತದೆ ಮತ್ತು ಸಂಯೋಜಿತ ವ್ಯವಸ್ಥೆಗಳನ್ನು ಪಡೆಯುತ್ತದೆ. ಚೀನಾವು ಶತ್ರು ದೇಶಗಳ ಕಂಪ್ಯೂಟರ್ ಮೇಲೆ ವೈರಸ್ ದಾಳಿ ನಡೆಸಲು ವೈರಲೆಸ್ ತಂತ್ರಜ್ಞಾನ ಅನುಸರಿಸುವತ್ತ ದೊಡ್ಡ ಮಟ್ಟದ ಅಧ್ಯಯನವನ್ನು ನಡೆಸುತ್ತಲೇ ಇದೆ ಎಂಬುದು ಮಾರ್ಕ್ ಎ ಸ್ಟೋಕ್ಸ್ ತನ್ನ RAND ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಕಾರಣಕ್ಕಾಗಿಯೇ ಭಾರತದ ರಕ್ಷಣಾ, ಕಣ್ಗಾವಲು ಮತ್ತು ಬಾಹ್ಯಾಕಾಶ ಉಪಕ್ರಮಗಳಲ್ಲಿ ಚೀನಾದ ಅನೇಕ ಹಾರ್ಡ್ವೇರ್ ಕಂಪನಿಗಳು ಮತ್ತು ಅಪ್ಲಿಕೇಶನ್ಗಳನ್ನು ಈಗಾಗಲೇ ಸೂಕ್ಷ್ಮ ಸ್ಥಳಗಳಿಂದ ನಿಷೇಧಿಸಲಾಗಿದೆ. ಆದರೆ ಗ್ರಾಹಕರ ಬಳಕೆಯು ಭದ್ರತೆಗೆ ಹೇಗೆ ಬೆದರಿಕೆ ಹಾಕುತ್ತದೆ?
ಉತ್ತರ ಬಾಟ್ನೆಟ್ ಮತ್ತು ಎಐನಲ್ಲಿದೆ. ಬಾಟ್ನೆಟ್ ಎನ್ನುವುದು ಒಂದು ಕಾರ್ಯವನ್ನು ನಿರ್ವಹಿಸಲು ಒಟ್ಟಿಗೆ ಸಂಯೋಜಿಸಲ್ಪಟ್ಟ ಸಂಪರ್ಕಿತ ಕಂಪ್ಯೂಟರ್ಗಳ ಸರಮಾಲೆಯಾಗಿದೆ. ಅದು ಚಾಟ್ರೂಮ್ ಅನ್ನು ನಿರ್ವಹಿಸುತ್ತಿರಬಹುದು ಅಥವಾ ಅದು ನಮ್ಮ ಕಂಪ್ಯೂಟರ್ನ ಮೇಲೆ ಹಿಡಿತ ಸಾಧಿಸಬಹುದು. ಬಾಟ್ನೆಟ್ಗಳು ಅಂತರ್ಜಾಲದ ವರ್ಕ್ಹಾರ್ಸ್ಗಳಾಗಿವೆ. ವೆಬ್ಸೈಟ್ಗಳನ್ನು ಮುಂದುವರಿಸಲು ಇವುಗಳು ಹಲವಾರು ಪುನರಾವರ್ತಿತ ಕಾರ್ಯಗಳನ್ನು ನಿರ್ವಹಿಸುವ ಕಂಪ್ಯೂಟರ್ಗಳನ್ನು ಸಂಪರ್ಕಿಸಲ್ಪಟ್ಟಿವೆ. ಇಂಟರ್ನೆಟ್ ರಿಲೇ ಚಾಟ್ಗೆ ಸಂಬಂಧಿಸಿದಂತೆ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಅನೇಕ ಬಾಟ್ನೆಟ್ಗಳು ಕಾನೂನುಬದ್ಧ ಮತ್ತು ಉಪಯುಕ್ತವಾಗಿದ್ದರೂ, ಕಾನೂನುಬಾಹಿರ ಮತ್ತು ದುರುದ್ದೇಶಪೂರಿತ ಬಾಟ್ನೆಟ್ಗಳು ದುರುದ್ದೇಶಪೂರಿತ ಕೋಡಿಂಗ್ ಮೂಲಕ ನಮ್ಮ ಯಂತ್ರಕ್ಕೆ ಪ್ರವೇಶವನ್ನು ಪಡೆಯುತ್ತವೆ. ಕೆಲವು ಸಂದರ್ಭಗಳಲ್ಲಿ, ಯಂತ್ರವನ್ನು ಹ್ಯಾಕ್ ಮಾಡಲಾಗುತ್ತದೆ, ಆದರೆ ಹೆಚ್ಚಿನ ಸಂದರ್ಭಗಳಲ್ಲಿ “ಸ್ಪೈಡರ್” (ದುರ್ಬಳಕೆಗಾಗಿ ಸುರಕ್ಷತೆಯ ರಂಧ್ರಗಳನ್ನು ಹುಡುಕುವ ಅಂತರ್ಜಾಲವನ್ನು ಕ್ರಾಲ್ ಮಾಡುವ ಪ್ರೋಗ್ರಾಂ) ಸ್ವಯಂಚಾಲಿತವಾಗಿ ಹ್ಯಾಕಿಂಗ್ ಮಾಡುತ್ತದೆ.
ಹೆಚ್ಚಾಗಿ, ನಮ್ಮ ಕಂಪ್ಯೂಟರ್ ಅನ್ನು ಅದರ ವೆಬ್ಗೆ ಸೇರಿಸುವುದು ಬಾಟ್ನೆಟ್ಗಳು ಮಾಡಲು ಬಯಸುವ ಕಾರ್ಯ. ಅದು ಸಾಮಾನ್ಯವಾಗಿ ಡ್ರೈವ್-ಬೈ ಡೌನ್ಲೋಡ್ ಮೂಲಕ ಅಥವಾ ನಮ್ಮ ಮೊಬೈಲ್ / ಕಂಪ್ಯೂಟರ್ನಲ್ಲಿ ಟ್ರೋಜನ್ ಹಾರ್ಸ್ ಅನ್ನು ಸ್ಥಾಪಿಸಲು ನಮ್ಮನ್ನು ಮರುಳು ಮಾಡುತ್ತದೆ. ಸಾಫ್ಟ್ವೇರ್ ಡೌನ್ಲೋಡ್ ಮಾಡಿದ ನಂತರ, ಬೋಟ್ನೆಟ್ ಈಗ ತನ್ನ ಮಾಸ್ಟರ್ ಕಂಪ್ಯೂಟರ್ ಅನ್ನು ಸಂಪರ್ಕಿಸುತ್ತದೆ ಮತ್ತು ಎಲ್ಲವೂ ಸಿದ್ಧವಾಗಿದೆ ಎಂದು ತಿಳಿಸುತ್ತದೆ. ಆಗ ನಮ್ಮ ಕಂಪ್ಯೂಟರ್, ಫೋನ್ ಅಥವಾ ಟ್ಯಾಬ್ಲೆಟ್ ಸಂಪೂರ್ಣವಾಗಿ ಬೋಟ್ನೆಟ್ ರಚಿಸಿದ ವ್ಯಕ್ತಿಯ ನಿಯಂತ್ರಣದಲ್ಲಿರುತ್ತದೆ. ಒಮ್ಮೆ ಬೋಟ್ನೆಟ್ ಮಾಲೀಕರು ನಮ್ಮ ಕಂಪ್ಯೂಟರ್ ಅನ್ನು ನಿಯಂತ್ರಣದಲ್ಲಿಟ್ಟುಕೊಂಡರೆ, ನಮ್ಮ ಯಂತ್ರವನ್ನು ಇತರ ದುಷ್ಕೃತ್ಯಗಳನ್ನು ನಿರ್ವಹಿಸಲು ಬಳಸುವುದು ಖಂಡಿತ.
ನಿಷೇಧಿತ ಚೀನಿ ಅಪ್ಲಿಕೇಶನ್ಗಳು
ಅಪ್ಲಿಕೇಶನ್ಗಳಲ್ಲಿ ಅಗ್ರಿಮೆಂಟ್
ಹೆಚ್ಚಿನ ಸಂದರ್ಭಗಳಲ್ಲಿ, ಅಪ್ಲಿಕೇಶನ್ಗಳನ್ನು ಇನ್ಸ್ಟಾಲ್ ಮಾಡುವಾಗ “ಐ ಅಗ್ರಿ” ಟ್ಯಾಬ್ ಮೂಲಕ ನಾವು ಬಳಕೆದಾರರ ಒಪ್ಪಂದಗಳಿಗೆ ಸಹಿ ಮಾಡುತ್ತೇವೆ. ಇದು ನಮ್ಮ ಮೊಬೈಲ್ನಲ್ಲಿನ ಡೇಟಾವನ್ನು ಪ್ರವೇಶಿಸಲು ಅಪ್ಲಿಕೇಶನ್ ಹೋಸ್ಟಿಂಗ್ ಮಾಡುವ ಕಂಪನಿಗೆ ನೀಡುತ್ತದೆ. ನಾವು ಅವರಿಗೆ ಫೋನ್ ಸಂಪರ್ಕಗಳು, SMS, ಆಡಿಯೊ ಫೈಲ್ಗಳು, ವೀಡಿಯೊಗಳು ಮತ್ತು ಟಿಪ್ಪಣಿಗಳಿಗೆ ಪ್ರವೇಶವನ್ನು ಒದಗಿಸುತ್ತೇವೆ. ಕೆಲವು ಅಪ್ಲಿಕೇಶನ್ಗಳು ಕ್ಲಿಪ್ಬೋರ್ಡ್ಗೆ ಪ್ರವೇಶವನ್ನು ಸಹ ಹೊಂದಿವೆ. ಈಗ, ಅನೇಕ ಸಂದರ್ಭಗಳಲ್ಲಿ, ನಾವು ಪಾಸ್ವರ್ಡ್ಗಳು, ಬಳಕೆದಾರ ಐಡಿಗಳನ್ನು ಕಾಪಿ ಮತ್ತು ಪೇಸ್ಟ್ ಮಾಡುತ್ತೇವೆ. ಅಂತಹ ಸಂದರ್ಭಗಳಲ್ಲಿ, ಅವುಗಳು ಕ್ಲಿಪ್ಬೋರ್ಡ್ನಲ್ಲಿ ಸಂಗ್ರಹವಾಗುತ್ತವೆ. ಕ್ಲಿಪ್ಬೋರ್ಡ್ಗೆ ಪ್ರವೇಶ ಪಡೆಯುವುದು ಎಂದರೆ, ನಮ್ಮ ಸೂಕ್ಷ್ಮ ಮಾಹಿತಿಗೆ ಪ್ರವೇಶವನ್ನು ಪಡೆಯುವುದು ಎಂದೇ ಅರ್ಥ.
ಕೃತಕ ಬುದ್ಧಿಮತ್ತೆ ಮತ್ತು ಮೆಶಿನ್ ಲರ್ನಿಂಗ್
ಇದು ಚೀನೀ ಅಪ್ಲಿಕೇಶನ್ಗಳು ಮಾತ್ರವಲ್ಲ, ಇತರ ಕಂಪನಿಗಳು ಸಹ ಗ್ರಾಹಕರ ನಡವಳಿಕೆಯನ್ನು ಅಳೆಯಲು ಕೃತಕ ಬುದ್ಧಿಮತ್ತೆಯನ್ನು ಬಳಸುತ್ತವೆ. ಒಂದು ಬಾರಿ ನಾವು ಹೋಟೆಲ್ಗಳಿಗಾಗಿ ಹುಡುಕಿ ನಿರ್ಗಮಿದರೆ, ಕೆಲವು ಗಂಟೆಗಳ ನಂತರ ನಮ್ಮ ಹತ್ತಿರದ ಹೋಟೆಲ್ಗಳಲ್ಲಿನ ರಿಯಾಯಿತಿಯ ಕೊಡುಗೆಗಳನ್ನು ನಾವು ಪಡೆಯುತ್ತೇವೆ. ಅಂದರೆ ಅಪ್ಲಿಕೇಶನ್ ಕಂಪನಿಗಳು ನಮ್ಮ ಡೇಟಾ ಪ್ರಯಾಣ, ಆಹಾರ, ಬಟ್ಟೆ ಮತ್ತು ಇತರ ಆಯ್ಕೆಗಳನ್ನು ಮಾರಾಟ ಮಾಡಿ ಕೋಟ್ಯಾಂತರ ಗಳಿಸುತ್ತಿವೆ. ಹೆಚ್ಚಿನ ಸಂದರ್ಭಗಳಲ್ಲಿ, ನಾವು “ಐ ಅಗ್ರಿ” ಎಂದು ಒತ್ತಿ ಅದಾಗಲೇ ಈ ಬಗೆಗಿನ ಒಪ್ಪಂದಕ್ಕೆ ಸಹಿ ಹಾಕಿರುತ್ತೇವೆ.
ತಂತ್ರಜ್ಞಾನದ ಅತಿಯಾದ ಅವಲಂಬನೆಯ ಅಪಾಯಗಳು ಇವು ಆಗಿದೆ. ಆದ್ದರಿಂದ ನಮ್ಮ ಯಂತ್ರಗಳು ಮತ್ತು ಮೊಬೈಲ್ಗಳಲ್ಲಿ ನಾವು ಇನ್ಸ್ಟಾಲ್ ಮಾಡುವ ಸಾಫ್ಟ್ವೇರ್ ನಾವು ಅವಲಂಬಿಸಬಹುದಾದ ವಿಶ್ವಾಸಾರ್ಹ ಮೂಲಗಳಿಂದ ಬಂದಿರುವುದು ಬಹಳ ಮುಖ್ಯ. ಚೀನಾ ಖಂಡಿತವಾಗಿಯೂ ನಂಬಿಕೆಗೆ ಯೋಗ್ಯ ಅಲ್ಲವೇ ಅಲ್ಲ.
ಚೀನೀ ಸೇನೆಯ ಹೂಡಿಕೆಗಳು
ಪಿಎಲ್ಎ ಎಂದು ಕರೆಯಲ್ಪಡುವ ಚೀನೀ ಸೈನ್ಯವು ಕಾರ್ಯತಂತ್ರದ ವ್ಯವಹಾರ ಹೂಡಿಕೆಗಳನ್ನು ಸಹ ಮಾಡುತ್ತದೆ. ರಾಜಕೀಯ ಮತ್ತು ವ್ಯವಹಾರದಿಂದ ಮುಕ್ತವಾಗಿರುವ ನಮ್ಮ ಭಾರತೀಯ ಸೈನ್ಯವನ್ನು ನೋಡಿರುವ ಭಾರತದ ಜನರಿಗೆ ಇದನ್ನು ಊಹಿಸಲೂ ಸಾಧ್ಯವಿಲ್ಲ. ಚೀನೀ ಮಾರುಕಟ್ಟೆಗಳಲ್ಲಿ ಕೆಲಸ ಮಾಡಲು ಡೋಲ್ಗಳನ್ನು ನೀಡುತ್ತಿರುವ ಸಂಸ್ಥೆಗಳ ಬಗ್ಗೆ ನಮಗೆ ತಿಳಿದಿರಲೇಬೇಕು.
ಪ್ರವಾಸಿಗರು, ವಿಜ್ಞಾನಿಗಳು, ಚೀನಾದ ಕಾರ್ಯಾಚರಣೆಗಳಿಂದ ಲಾಭ ಪಡೆಯುವ ಅಥವಾ ಲಾಭ ಪಡೆಯುವ ಆಶಯ ಹೊಂದಿರುವ ಸಂಸ್ಥೆಗಳ ಸಿಬ್ಬಂದಿ – ಹೀಗೆ ಚೀನಾ ತಮ್ಮ ಉಪಯೋಗಕ್ಕೆ ಬರುವ ಪ್ರತಿಯೊಬ್ಬರನ್ನು ಕೂಡ ಬಳಸುತ್ತದೆ. ಅವರು ಲಾಬಿಗಳ ಮೇಲೆ ಹೂಡಿಕೆ ಮಾಡುತ್ತಾರೆ, ಪತ್ರಕರ್ತರ ಮಾಧ್ಯಮದ ಮೇಲೆ ಹಿಡಿತ ಸಾಧಿಸುತ್ತಾರೆ, ಕಡಿಮೆ ವೆಚ್ಚದಲ್ಲಿ ಸೇವೆಯನ್ನು ಒದಗಿಸುತ್ತಾರೆ. ಈ ದೃಢನಿಶ್ಚಯದ ಅನ್ವೇಷಣೆ ಮತ್ತು ಬೇಹುಗಾರಿಕೆ ಕೂಡ ಚೀನಿ ಸೇನೆಯ ಕಾರ್ಯಗಳಲ್ಲಿ ಒಂದು.
ಭಾರತೀಯ ಸಶಸ್ತ್ರ ಪಡೆಗಳು ಚೀನಾದ ಸಶಸ್ತ್ರ ಪಡೆಗಳಿಗೆ ಸೂಕ್ತವಾದ ಉತ್ತರವನ್ನು ನೀಡುತ್ತವೆಯಾದರೂ, ನಾವು ಮಾಡಬೇಕಾದುದು ಏನೆಂದರೆ ಚೀನಾದ ಅಪ್ಲಿಕೇಶನ್ಗಳು, ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ಗಳನ್ನು ಹಂತ ಹಂತವಾಗಿ ಲಾಕ್ಡೌನ್ ಮಾಡುವುದು.
ಚೀನಾದ ಬೆದರಿಕೆಯ ಬಗ್ಗೆ ಅಮೆರಿಕಾ ಸದಾ ಎಚ್ಚರಿಕೆಯಿಂದ ಇರುತ್ತದೆ. TIME ನಿಯತಕಾಲಿಕೆ ವರದಿಯ ಪ್ರಕಾರ, ಚೀನಾಕ್ಕೆ ಮಾಹಿತಿ ಸಂಗ್ರಹಿಸುತ್ತಿರುವ ಸಂಶಯದ ಮೇಲೆ ಯುಎಸ್ನ 3000 ಕ್ಕೂ ಹೆಚ್ಚು ಕಂಪನಿಗಳ ಮೇಲೆ ಅಮೆರಿಕಾದ ಎಫ್ಬಿಐ ನಿಗಾ ಇಟ್ಟಿದೆ.
ಹಾಗಾದರೆ ಕೆಲವು ‘ಬುದ್ಧಿಜೀವಿಗಳು’ ನಿಷೇಧವನ್ನು ಏಕೆ ವಿರೋಧಿಸುತ್ತಿದ್ದಾರೆ?
ಚೀನಾ ವಿಶ್ವಾದ್ಯಂತ ಮಾಧ್ಯಮ ಪ್ರಚಾರಕ್ಕಾಗಿ 1.3 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಮಾಡುತ್ತಿದೆ. ಚೀನಾದ ಕಾರ್ಯಸೂಚಿಯನ್ನು ಹೆಚ್ಚಿಸುತ್ತಿರುವ ಪತ್ರಕರ್ತರು, ವಿದೇಶಿ ನಾಗರಿಕ ಸೇವಕರು, ಥಿಂಕ್ ಟ್ಯಾಂಕ್ಗಳು ಮತ್ತು ಇತರರಿಗೆ ಗಮನಾರ್ಹ ಪ್ರಮಾಣದ ಮೊತ್ತ ಸೇರುತ್ತದೆ.
ಕ್ಸಿನ್ಹುವಾ (ಚೀನೀ ಸುದ್ದಿ ಸಂಸ್ಥೆ) 170 ವಿದೇಶಿ ಬ್ಯೂರೋಗಳನ್ನು ಹೊಂದಿದೆ. ಚೀನಾ ರೇಡಿಯೋ 14 ದೇಶಗಳಲ್ಲಿ 30+ ರೇಡಿಯೋ ಕೇಂದ್ರಗಳನ್ನು ನಿಯಂತ್ರಿಸುತ್ತದೆ. 100+ ಗ್ಲೋಬಲ್ ಥಿಂಕ್ ಟ್ಯಾಂಕ್ಗಳನ್ನು ರಚಿಸಲು ಚೀನಾ ಹೂಡಿಕೆ ಮಾಡುತ್ತಿದೆ. ಆ ಹುಸಿ ಬುದ್ಧಿಜೀವಿಗಳು ವಾಸ್ತವವಾಗಿ ಚೀನಾದ ಪ್ರಚಾರ ಯಂತ್ರೋಪಕರಣಗಳ ವೇತನ ಪಡೆಯುವವರಾಗಿದ್ದಾರೆ ಎಂಬುದು ಬಹುಶಃ ಬಹಿರಂಗವಾದ ವಿಷಯ.
ಭಾರತೀಯ ಸಶಸ್ತ್ರ ಪಡೆಗಳು ಚೀನಾದ ಸಶಸ್ತ್ರ ಪಡೆಗಳಿಗೆ ಸೂಕ್ತವಾದ ಉತ್ತರವನ್ನು ನೀಡುತ್ತವೆಯಾದರೂ, ನಾವು ಜನಸಾಮಾನ್ಯರು ಚೀನೀ ಅಪ್ಲಿಕೇಶನ್ಗಳು, ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ಗಳನ್ನು ಹಂತ ಹಂತವಾಗಿ ಲಾಕ್ಡೌನ್ ಮಾಡುವುದು ಅನಿವಾರ್ಯ. ಭಾರತೀಯರಾದ ನಾವು ಅವುಗಳಿಗೆ ಪರ್ಯಾಯವನ್ನು ಕಂಡು ಹಿಡಿಯುವುದು ಕೂಡ ಅನಿವಾರ್ಯ.
ಮೂಲ: ಆರ್ಗನೈಝರ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.