ಬೆಂಗಳೂರು: ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ರಾಜ್ಯದಲ್ಲಿಯೂ ಕೋವಿಡ್ ತನ್ನ ಆಟವನ್ನು ಮುಂದುವರಿಸಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಉಂಟಾಗಿದೆ, ಈ ಸಮಸ್ಯೆಯನ್ನು ಪರಿಹರಿಸಿ, ರೋಗಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆಯನ್ನು ಇರಿಸಿದೆ.
ನಗರದ ಬೆಂಗಳೂರು ಇಂಟರ್ ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ ಅನ್ನು ಇದೀಗ ಕೊರೋನಾ ಚಿಕಿತ್ಸಾ ಕೇಂದ್ರವಾಗಿ ಮಾರ್ಪಾಡು ಮಾಡಲಾಗಿದ್ದು, ಇಲ್ಲಿ ರೋಗಿಗಳ ಚಿಕಿತ್ಸೆಗೆಂದೇ 10,100 ಹಾಸಿಗೆಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕೇಂದ್ರ ಭಾರತದ ಅತೀ ದೊಡ್ಡ ಕೊರೋನಾ ಚಿಕಿತ್ಸಾ ಕೇಂದ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಕೇರ್ ಸೆಂಟರ್ನಲ್ಲಿ ಮಕ್ಕಳು ಸೇರಿದಂತೆ, ಲಕ್ಷಣ ರಹಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಸಜ್ಜಾಗಿದೆ. ಈ ಕೇಂದ್ರದಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳಿದ್ದು, ರೋಗಿಗಳ ಆರೈಕೆ ಮಾಡುವ ಪ್ರದೇಶಕ್ಕೆ ಉತ್ತಮವಾಗಿ ಗಾಳಿ, ಬೆಳಕು ಸಹ ಬೀಳುತ್ತಿದ್ದು, ಉಲ್ಲಾಸ ಹೆಚ್ಚಿಸುವಲ್ಲಿ ಇದು ಪರಿಣಾಮ ಬೀರಲಿದೆ ಎಂದೂ ಸಂಬಂಧಿಸಿದ ಮೂಲಗಳು ಮಾಹಿತಿ ನೀಡಿವೆ.
ಸುಮಾರು 150 ಮಂದಿ ವೈದ್ಯರು ಈ ಕೊರೋನಾ ಕೇರ್ ಸೆಂಟರ್ ನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ತುರ್ತು ಪರಿಸ್ಥಿತಿಯ ನಿರ್ವಹಣೆಗಾಗಿ ಈ ಕೇಂದ್ರದಲ್ಲಿ ಆಕ್ಸಿಜನ್ ಫೆಸಿಲಿಟಿ ಹೊಂದಿರುವ ಹಾಸಿಗೆಗಳ ವಿಭಾಗವನ್ನೂ ಆರಂಭಿಸಲಾಗಿದೆ. ಪ್ರತ್ಯೇಕ ಅಡುಗೆ ಮನೆ ವ್ಯವಸ್ಥೆ, ಸಾಕಷ್ಟು ಶೌಚಾಲಯಗಳ ವ್ಯವಸ್ಥೆಯೂ ಈ ಕೇಂದ್ರದಲ್ಲಿದ್ದು, ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸೌಕರ್ಯಗಳನ್ನು ಅಳವಡಿಸಲಾಗಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕೋವಿಡ್ ಕೇರ್ ಸೆಂಟರ್ ಅನ್ನು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ಶಾಸಕ ಎಸ್. ಆರ್. ವಿಶ್ವನಾಥ್ ಸೇರಿದಂತೆ ಇತರ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಇನ್ನು ನಿನ್ನೆಯಷ್ಟೇ ನಗರದಲ್ಲಿ 1925 ಮಂದಿಗೆ ಸೋಂಕು ತಗುಲಿರುವ ಬಗ್ಗೆಯೂ ವರದಿಯಾಗಿದೆ. 603 ಜನರು ಚೇತರಿಸಿಕೊಂಡಿದ್ದರೆ, 37 ಮಂದಿ ಮೃತಪಟ್ಟಿದ್ದಾರೆ. ಆ ಮೂಲಕ ಈ ವರೆಗೆ ರಾಜ್ಯದಲ್ಲಿ ಸುಮಾರು 23,474 ಜನರಿಗೆ ಸೋಂಕು ತಗುಲಿದ್ದು, 9847 ಮಂದಿ ಚೇತರಿಸಿಕೊಂಡಿದ್ದು, 13,251 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.