ಯುರೋಪ್: ಯುರೋಪ್ ಖಂಡದಲ್ಲಿ ನಾಗರಿಕ ವಿಮಾನಯಾನ ಸುರಕ್ಷತೆಯ ಜವಾಬ್ದಾರಿಯನ್ನು ಹೊಂದಿರುವ ಯುರೋಪಿಯನ್ ಒಕ್ಕೂಟದ ನೋಡಲ್ ಏಜೆನ್ಸಿಯಾದ ಯುರೋಪಿಯನ್ ಯೂನಿಯನ್ ಏರ್ ಸೇಫ್ಟಿ ಏಜೆನ್ಸಿ (ಇಎಎಸ್ಎ) ಯುರೋಪ್ನಲ್ಲಿ ಕಾರ್ಯನಿರ್ವಹಿಸಲು ಪಾಕಿಸ್ಥಾನ ಇಂಟರ್ನ್ಯಾಷನಲ್ ಏರ್ಲೈನ್ಸ್ (ಪಿಐಎ)ಗೆ ಆರು ತಿಂಗಳ ಕಾಲ ನಿರ್ಬಂಧವನ್ನು ಹೇರಿದೆ ಎಂದು ವರದಿಗಳು ತಿಳಿಸಿವೆ.
ಪಾಕಿಸ್ತಾನದ ನಾಗರಿಕ ವಿಮಾನಯಾನ ಸಚಿವಾಲಯವು 250ಕ್ಕೂ ಹೆಚ್ಚು ಪೈಲಟ್ಗಳ ಹಾರುವ ಪರವಾನಗಿಗಳನ್ನು “ಸಂಶಯಾಸ್ಪದ” ಎಂದು ಹೇಳಿದ ನಂತರ ಈ ಬೆಳವಣಿಗೆ ನಡೆದಿದೆ.
ಪಾಕಿಸ್ಥಾನದ ಸುಮಾರು 250ಕ್ಕೂ ಹೆಚ್ಚಿನ ಪೈಲಟ್ಗಳ ಲೈಸನ್ಸ್ನ ಮೇಲೆ ಸಂದೇಹ ವ್ಯಕ್ತಪಡಿಸಿರುವ ಯುರೋಪ್ ನ ಸಂಸ್ಥೆ ಪಾಕಿಸ್ಥಾನದ ವಿಮಾನಗಳ ಹಾರಾಟವನ್ನು ನಿಷೇಧಿಸಿದೆ ಎಂದು ಹೇಳಲಾಗಿದೆ.
ಕಳೆದ ಬುಧವಾರ ಪೈಲಟ್ ಗಳಿಗೆ ನಡೆಸಲಾದ ಅರ್ಹತಾ ಪರೀಕ್ಷೆಯ ಸಂದರ್ಭದಲ್ಲಿ ಪಾಕಿಸ್ಥಾನದ 262 ಪೈಲಟ್ಗಳು ತಮ್ಮ ಬದಲಾಗಿ ಬೇರೆಯವರಿಂದ ಪರೀಕ್ಷೆಗಳನ್ನು ನೀಡಿದ್ದು, ಇದರಿಂದಾಗಿ ಅವರ ಪರವಾನಗಿ ಮೇಲೆ ಸಂದೇಹಗಳು ಸೃಷ್ಟಿಯಾಗಿರುವುದಾಗಿ ಪಾಕಿಸ್ಥಾನದ ವಿಮಾನಯಾನ ಸಚಿವ ಗುಲಾಂ ಸರ್ವಾರ್ ಖಾನ್ ಹೇಳಿದ್ದರು. ಇನ್ನು ಪಾಕಿಸ್ಥಾನದ 860 ಪೈಲಟ್ಗಳು ವಿಮಾನಯಾನ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಯಾನ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಪಾಕ್ ವಿಮಾನ ಹಾರಾಟಕ್ಕೆ ನಿರ್ಬಂಧ ಹೇರಿರುವ ಬಗ್ಗೆ ಮಾಹಿತಿ ನೀಡಿರುವ ಪಿಐಎನ ವಕ್ತಾರ ಅಬ್ದುಲ್ಲಾ ಖಾನ್ ಅವರು, ಪಾಕಿಸ್ಥಾನದ ಪೈಲಟ್ಗಳ ಮೇಲೆ ಯುರೋಪಿಯನ್ ಯೂನಿಯನ್ ಏರ್ ಸೇಫ್ಟಿ ಏಜೆನ್ಸಿಯು ನಂಬಿಕೆ ಇಲ್ಲವೆಂದು ತಿಳಿಸಿದೆ ಎಂದು ಹೇಳಿದ್ದಾರೆ. ಅವರು ಪಾಕಿಸ್ಥಾನದ ಪೈಲಟ್ ಗಳ ಮೇಲೆ ಯುರೋಪ್ ವಿಶ್ವಾಸ ಕಳೆದುಕೊಂಡಿದ್ದಾರೆ, ಈ ಕಾರಣದಿಂದ ಜುಲೈ 1 ರಿಂದಲೇ ತೊಡಗಿದಂತೆ 6 ತಿಂಗಳುಗಳ ಕಾಲ ತಾತ್ಕಾಲಿಕ ನಿರ್ಬಂಧ ಹೇರಿರುವುದಾಗಿ ಯುರೋಪಿಯನ್ ಏಜೆನ್ಸಿ ತಿಳಿಸಿದೆ, ಈ ಸಂಬಂಧ ಮೇಲ್ಮನವಿ ಸಲ್ಲಿಸುವ ಅವಕಾಶವನ್ನು ಪಾಕಿಸ್ಥಾನ ಪಡೆದುಕೊಂಡಿದೆ ಎಂದಿದ್ದಾರೆ.
ಈ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿರುವ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್, ಪಿಐಎ ಮತ್ತು ಇತರ ಸರ್ಕಾರಿ ಸಂಸ್ಥೆಗಳ ಸುಧಾರಣೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸುಧಾರಣೆಯ ಹೊರತಾದ ಬೇರೆ ಆಯ್ಕೆಗಳೂ ದೇಶದ ಮುಂದಿಲ್ಲವಾಗಿದ್ದು, ಸರಿಪಡಿಸುವ ಭರವಸೆ ನೀಡಿದ್ದಾರೆ.
ಇನ್ನು ಮೇ 22 ರಂದು ಕರಾಚಿಯಲ್ಲಿ ಪಾಕ್ ವಿಮಾನ ಮನೆಗಳ ಮೇಲೆ ಬಿದ್ದು 97 ಪ್ರಯಾಣಿಕರು ಮೃತಪಟ್ಟಿದ್ದ ಘಟನೆಯೂ ನಡೆದಿತ್ತು. ವಾಯು ಸಂಚಾರ ನಿಯಂತ್ರಕ ಸಂದೇಶಗಳನ್ನು ನಿರ್ಲಕ್ಷಿಸಿದರ ಪರಿಣಾಮವಾಗಿ ಈ ವಿಮಾನ ದುರಂತ ಸಂಭವಿಸಿದ್ದಾಗಿಯೂ ಪ್ರಾಥಮಿಕ ವರದಿಗಳು ಮಾಹಿತಿ ನೀಡಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.