ನವದೆಹಲಿ: ಡಚ್ ಸೇನೆ ಮತ್ತು ಪೊಲೀಸ್ ಸಿಬ್ಬಂದಿ ಭಾನುವಾರ ನೆದರ್ಲ್ಯಾಂಡ್ಸ್ನಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಆನ್ಲೈನ್ ಮೂಲಕ ಯೋಗ ಆಸನಗಳನ್ನು ಪ್ರದರ್ಶಿಸಲಿದ್ದಾರೆ. ಹೇಗ್ನಲ್ಲಿ ಭಾರತದ ರಾಯಭಾರ ಕಚೇರಿ ಆಯೋಜಿಸಿರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಡಚ್ ಸಶಸ್ತ್ರ ಪಡೆಗಳು ಭಾಗವಹಿಸುವುದು ಇದು ಎರಡನೇ ಬಾರಿ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಡಚ್ ರಕ್ಷಣಾ ಸಚಿವಾಲಯವು ತನ್ನ ಸಶಸ್ತ್ರ ಪಡೆಗಳ ತರಬೇತಿ ಕಾರ್ಯಕ್ರಮವನ್ನು ಉತ್ಕೃಷ್ಟಗೊಳಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಯೋಗಾಭ್ಯಾಸವನ್ನು ವಾರಕ್ಕೊಮ್ಮೆ ನಡೆಸುತ್ತದೆ. ಸೈನಿಕರ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಮತ್ತು ಚುರುಕುತನವನ್ನು ಬಲಪಡಿಸಲು ಯೋಗ ತರಬೇತುದಾರರನ್ನು ನೇಮಕ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿಯವರ ಯೋಗ ದಿನದ ಸಂದೇಶ ಮತ್ತು ಅವರು ಯೋಗ ಮಾಡುವ 3 ಡಿ ಆನಿಮೇಟೆಡ್ ಚಿತ್ರಗಳು ಸಹ ಆಚರಣೆಯ ಭಾಗವಾಗಲಿವೆ. ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ನೆದರ್ಲ್ಯಾಂಡ್ಸ್ನ ಭಾರತದ ರಾಯಭಾರಿ ವೇಣು ರಾಜಮೋನಿ ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಆನ್ಲೈನ್ ಆಚರಣೆಯ ಅಂಗವಾಗಿ ಡಚ್ ಸೈನ್ಯ ಮತ್ತು ಪೊಲೀಸರ ಪ್ರತಿನಿಧಿಗಳು ತಮ್ಮ ಯೋಗ ಕೌಶಲ್ಯವನ್ನು ಪ್ರದರ್ಶಿಸಲಿದ್ದಾರೆ. ಈ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಕೊಳಲು ವಾದಕ ಪಂಡಿತ್ ಹರಿಪ್ರಸಾದ್ ಚೌರಾಸಿಯಾ, ಪಿಟೀಲು ಮಾಸ್ಟ್ರೋ ಎಲ್ ಸುಬ್ರಮಣ್ಯಂ, ಹಿನ್ನೆಲೆ ಗಾಯಕರಾದ ಕವಿತಾ ಕೃಷ್ಣಮೂರ್ತಿ ಮತ್ತು ವಿಜಯ್ ಪ್ರಕಾಶ್ ಪ್ರದರ್ಶನ ನೀಡಲಿದ್ದಾರೆ. ಸಂಭ್ರಮಾಚರಣೆಯಲ್ಲಿ ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಭಾಗವಹಿಸಲಿದ್ದಾರೆ.
ಭಾನುವಾರದ ಆಚರಣೆಯಲ್ಲಿ ಡಚ್ ನೃತ್ಯ ಸಂಯೋಜಕ ಲಿಯೋ ಸ್ಪ್ರೆಕ್ಸೆಲ್ ನೃತ್ಯ ಸಂಯೋಜನೆ ಮಾಡಿದ ‘ಆಯುಷ್’ ಕುರಿತ ಕಥಕ್ ವಾಚನ ಮತ್ತು ಪ್ರಖ್ಯಾತ ಕಥಕ್ ನರ್ತಕರಾದ ಹರಿ ಮತ್ತು ಚೇತನಾ ಅವರ ಪ್ರದರ್ಶನ ಇರಲಿದೆ.
ಯೋಗವನ್ನು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿರುವ ಹಾಲಿವುಡ್ ಮತ್ತು ಬಾಲಿವುಡ್ ಸೆಲೆಬ್ರಿಟಿಗಳ ಪ್ರದರ್ಶನ ಕೂಡ ಇರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.