ಬೆಂಗಳೂರು: ಕೋವಿಡ್-19 ನಂತರದಲ್ಲಿ ದೇಶದಾದ್ಯಂತ ಸಾರ್ವಜನಿಕ ಸ್ಥಳಗಳಿಗೆ ತೆರಳಬೇಕಾದರೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಗುರುವಾರ ರಾಜ್ಯಾದ್ಯಂತ ಮಾಸ್ಕ್ ಡೇ ಯಾಗಿ ಆಚರಿಸಲು ನಿರ್ಧರಿಸಿದೆ.
ಸೋಂಕು ನಿಯಂತ್ರಣದ ಹಿನ್ನೆಲೆಯಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಮುಂದಾಗಿದ್ದು, ಅದಕ್ಕಾಗಿ ಈಗಾಗಲೇ ಮಾರ್ಗಸೂಚಿಯನ್ನು ಸಿದ್ಧಪಡಿಸಿಕೊಂಡಿದೆ. ಅದರಂತೆ ಗುರುವಾರ ರಾಜ್ಯದ ಜಿಲ್ಲೆ, ತಾಲೂಕು, ಕಾರ್ಪೊರೇಶನ್ ಮಟ್ಟದಲ್ಲಿ ಆಡಳಿತ ವರ್ಗ, ಚುನಾಯಿತ ಪ್ರತಿನಿಧಿಗಳು, ಗಣ್ಯ ವ್ಯಕ್ತಿಗಳು, ವೈದ್ಯಕೀಯ ಸಿಬ್ಬಂದಿ ಪಾದಯಾತ್ರೆ ನಡೆಸುವ ಮೂಲಕ ಜನಜಾಗೃತಿ ಕಾರ್ಯಕ್ರಮ ನಡೆಸುವಂತೆ ಸೂಚಿಸಲಾಗಿದೆ.
ಪಾದಯಾತ್ರೆಯಲ್ಲಿ 50 ಮಂದಿ ಭಾಗವಹಿಸುವ ಅವಕಾಶವನ್ನು ನೀಡಲಾಗಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವ ಮೂಲಕವೇ ಈ ಜನಜಾಗೃತಿ ಜಾಥಾ ನಡೆಸುವಂತೆಯೂ ಈ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆಯ ಅಗತ್ಯತೆಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಮಾಹಿತಿ ಫಲಕಗಳನ್ನು ಬಳಕೆ ಮಾಡಬೇಕು ಎಂದೂ ರಾಜ್ಯ ಸರ್ಕಾರ ತನ್ನ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.
ಕೊರೋನಾ ಸಂಕಷ್ಟದಿಂದ ಪಾರಾಗಲು ಮಾಸ್ಕ್ ಧಾರಣೆ ಎಷ್ಟು ಸಹಕಾರಿ ಎಂಬುದರ ಬಗ್ಗೆ ಜನತೆ ಹೆಚ್ಚು ಕಾಳಜಿ ವಹಿಸುತ್ತಿಲ್ಲ. ಮಾಸ್ಕ್ ರಹಿತ ಓಡಾಟವೂ ಕಂಡುಬರುತ್ತಿದ್ದು, ಜನರಲ್ಲಿ ಮಾಸ್ಕ್ ಬಳಕೆಯ ಅಗತ್ಯತೆಯನ್ನು ಅರ್ಥಮಾಡಿಸಿ ಕೊಡುವ ಉದ್ದೇಶದಿಂದ ಗುರುವಾರ ಮಾಸ್ಕ್ ಡೇ ಆಚರಿಸುತ್ತಿರುವುದಾಗಿ ಸರ್ಕಾರ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.