ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದ್ದು, ಕಾಮಗಾರಿಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ಹಂಚಿಕೊಳ್ಳಲು ರಾಮ ಮಂದಿರ ಟ್ರಸ್ಟ್ ತಮ್ಮದೇ ಆದ ಅಫೀಶಿಯಲ್ ವೆಬ್ಸೈಟ್ ಒಂದನ್ನು ಶೀಘ್ರದಲ್ಲೇ ಆರಂಭಿಸಲಿದೆ.
ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ ಇರುವ, ಕಾಮಗಾರಿಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಇರುವ ಎಲ್ಲಾ ವಿಚಾರಗಳನ್ನು ಜನರಿಗೆ ತಲುಪಿಸುವ ಸಲುವಾಗಿ ಈ ಅಧಿಕೃತ ವೆಬ್ಸೈಟ್ಗೆ ಚಾಲನೆ ನೀಡಲಾಗುವುದು ಎಂದು ಟ್ರಸ್ಟ್ನ ಸದಸ್ಯರು ಮಾಹಿತಿ ನೀಡಿದ್ದಾರೆ.
ಎರಡು ಮಹಡಿಗಳ ರಾಮಮಂದಿರ ನಿರ್ಮಾಣಕ್ಕೆ ಈಗಾಗಲೇ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದ್ದು, ಅದಕ್ಕನುಗುಣವಾಗಿ ಈಗಾಗಲೇ ಕಾಮಗಾರಿಗಳೂ ಭರದಿಂದ ನಡೆಯುತ್ತಿವೆ. 268 ಅಡಿ ಉದ್ದ, 140 ಅಡಿ ಅಗಲ ಹಾಗೂ 128 ಅಡಿಗಳ ಎತ್ತರವನ್ನು ಈ ಭವ್ಯ ಮಂದಿರ ಹೊಂದಿರಲಿದೆ. ರಾಮಮಂದಿರಕ್ಕೆ ಬೇಕಾದ ಕಾರ್ಯಶಾಲಾ ಕಂಬಗಳನ್ನು ಈಗಾಗಲೇ ತರಲಾಗಿದ್ದು, ಅವುಗಳ ಪಾಲಿಶ್ ಕೆಲಸ ನಡೆಯಬೇಕಿದೆ. ದೇವಾಲಯ ನಿರ್ಮಾಣ ಕಾರ್ಯದಲ್ಲಿ 212 ಕಂಬಗಳನ್ನು ಬಳಸುವುದಾಗಿಯೂ ಟ್ರಸ್ಟ್ ಈಗಾಗಲೇ ಮಾಹಿತಿ ನೀಡಿದೆ.
ದೇವಾಲಯದ ಗ್ರೌಂಡ್ ಫ್ಲೋರ್ನಲ್ಲಿ ರಾಮ ಲಲ್ಲಾನ ಹುಟ್ಟು, ಬಾಲ್ಯದ ಜೀವನಕ್ಕೆ ಸಂಬಂಧಿಸಿದ ಕಥೆಗಳನ್ನು ತಿಳಿಸಲಾಗುವುದು. ಮೊದಲನೇ ಮಹಡಿಯಲ್ಲಿ ರಾಮಚಂದ್ರನ ದರ್ಬಾರ್ ನಿರ್ಮಾಣ ಮಾಡುವುದಾಗಿಯೂ ಟ್ರಸ್ಟ್ ಮಾಹಿತಿ ನೀಡಿದೆ. ಕೆಲವೇ ವಾರಗಳಲ್ಲಿ ಭೂಮಿಪೂಜೆಗೆ ದಿನ ನಿಗದಿ ಮಾಡಲಾಗುವುದು ಹಾಗೂ ಕಾಮಗಾರಿ ಕೆಲಸಗಳಿಗೆ ವೇಗ ನೀಡಲಾಗುವುದು ಎಂದೂ ಟ್ರಸ್ಟ್ ಹೇಳಿದೆ. 2022 ಒಳಗಾಗಿ ಕಾಮಗಾರಿಯನ್ನು ಸಂಪೂರ್ಣಗೊಳಿಸಲು ನಿರ್ಧಾರ ಮಾಡಲಾಗಿದೆ ಎಂದೂ ಟ್ರಸ್ಟ್ ಮಾಹಿತಿ ನೀಡಿದೆ.
ಕಳೆದ ಫೆಬ್ರವರಿ ತಿಂಗಳಿನಲ್ಲಿ ಪ್ರಧಾನಿ ಮೋದಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ತಿಳಿಸಿದ್ದರು. ಅದರಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪೂಜೆ ಪುನಸ್ಕಾರಗಳನ್ನು ನಡೆಸಿ ಶಾಸ್ತ್ರೋಕ್ತವಾಗಿ ಕಾಮಗಾರಿಗೆ ಸಹಾಯವಾಗುವಂತೆ ರಾಮ ಲಲ್ಲಾನ ವಿಗ್ರಹವನ್ನು ಸ್ಥಳಾಂತರ ಮಾಡಿದ್ದರು. ಮೇ 21 ರಂದುರಾಮಮಂದಿರ ನಿರ್ಮಾಣಕ್ಕೆ ಭೂಮಿ ಅಗೆಯುವಾಗ ಶಿವಲಿಂಗಗಳು, ಕಂಬಗಳು, ಕೆಂಪು ಮರಳು ಕಲ್ಲಿನ ಆರು ಕಂಬಗಳು, ದೇವತೆಗಳ ಮೂರ್ತಿಗಳು ಪತ್ತೆಯಾಗುವ ಮೂಲಕ ಹಿಂದೆಯೇ ಅಲ್ಲಿ ಭವ್ಯ ದೇವಾಲಯ ಇತ್ತು ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷ್ಯಗಳೂ ದೊರಕಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.