ಚಿಕಾಗೋ: ಅನೇಕ ಅನಿವಾಸಿ ಭಾರತೀಯರು ವಿದೇಶಗಳಲ್ಲಿ ಅಮೋಘ ಸಾಧನೆಗಳನ್ನು ಮಾಡಿ ಕೀರ್ತಿ ಗಳಿಸುತ್ತಿದ್ದಾರೆ. ಅಂತಹವರ ಸಾಲಿಗೆ ಇದೀಗ ಅಮೆರಿಕಾದಲ್ಲಿನ ಭಾರತೀಯ ಮೂಲದ ವೈದ್ಯ ಅಂಕಿತ್ ಭರತ್ ಅವರು ಕೂಡ ಸೇರಿದ್ದಾರೆ. ಕೊರೋನಾವೈರಸ್ ಕಾರಣದಿಂದಾಗಿ ತೀವ್ರ ಸ್ವರೂಪದ ಶ್ವಾಸಕೋಶದ ಹಾನಿಗೆ ಒಳಗಾಗಿದ್ದ ಯುವತಿಗೆ ಯಶಸ್ವಿಯಾಗಿ ಶ್ವಾಸಕೋಶ ಕಸಿ (Lungs transplant) ಮಾಡಿದ್ದಾರೆ. ಇದು ಕೊರೋನಾ ಸಾಂಕ್ರಾಮಿಕದ ಅವಧಿಯಲ್ಲಿನ ಅಮೆರಿಕಾದ ಸೇರಿದಂತೆ ವಿಶ್ವದ ಮೊದಲ ಶ್ವಾಸಕೋಶದ ಯಶಸ್ವಿ ಕಸಿ ಎನ್ನಲಾಗಿದೆ.
ವರದಿಗಳ ಪ್ರಕಾರ, ಯುವತಿ 20 ವರ್ಷದವಳಾಗಿದ್ದು, ಒಂದು ವೇಳೆ ಆಕೆಗೆ ಶ್ವಾಸಕೋಶದ ಕಸಿ ಮಾಡದೇ ಹೋಗಿದ್ದರೆ ಆಕೆ ಬದುಕುಳಿಯುವ ಸಾಧ್ಯತೆಯೇ ಇರಲಿಲ್ಲ ಎಂದು ಚಿಕಾಗೋದ ನಾರ್ತ್ವೆಸ್ಟರ್ನ್ ಮೆಡಿಸಿನ್ ಹೇಳಿದೆ.
ಪ್ರಸ್ತುತ ಆಕೆಯನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿದ್ದು, ಪೂರ್ಣ ಪ್ರಮಾಣದ ಚೇತರಿಕೆಗೆ ಆಕೆಗೆ ಎರಡು ತಿಂಗಳು ಬೇಕಾಗಿದೆ. ಹೃದಯ ಮತ್ತು ಶ್ವಾಸಕೋಶದ ಸರ್ಜರಿಯಾದ ಬಳಿಕ ಚೇತರಿಕೆಗೆ ಎರಡು ತಿಂಗಳ ಅವಧಿ ಅನಿವಾರ್ಯವಾಗಿದೆ.
“ಇದು ನಾನು ಮಾಡಿದ ಕಠಿಣ ಕಸಿಗಳಲ್ಲಿ ಒಂದಾಗಿದೆ. ಇದು ನಿಜಕ್ಕೂ ಅತ್ಯಂತ ಸವಾಲಿನ ಪ್ರಕರಣಗಳಲ್ಲಿ ಒಂದಾಗಿದೆ” ಎಂದು ಮೀರತ್ ಮೂಲದ ಭರತ್ ಹೇಳಿದ್ದಾರೆ.
ಕೋವಿಡ್-19 ಸೋಂಕು ಸಾಮಾನ್ಯವಾಗಿ ಉಸಿರಾಟದ ವ್ಯವಸ್ಥೆಯನ್ನು ಆಕ್ರಮಿಸುತ್ತದೆ. ಆದರೆ ಇದು ಮೂತ್ರಪಿಂಡಗಳು, ಹೃದಯಗಳು, ರಕ್ತನಾಳಗಳು ಮತ್ತು ನರವೈಜ್ಞಾನಿಕ ವ್ಯವಸ್ಥೆಯ ಮೇಲೂ ಇದು ಹಾನಿಯನ್ನುಂಟುಮಾಡುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗಿದೆ.
“ಕೊರೋನಾ ರೋಗಿಗಳಲ್ಲಿ ಕೆಲವರು ತೀವ್ರ ಸ್ವರೂಪದ ಶ್ವಾಸಕೋಶದ ಸಮಸ್ಯೆಯನ್ನು ಹೊಂದಿದ್ದು, ಅವರ ಶ್ವಾಸಕೋಶವನ್ನು ಕಸಿ ಮಾಡದೆ ಮುಂದುವರಿಯಲು ಸಾಧ್ಯವಾಗುವುದಿಲ್ಲ ಎಂದು ನಾನು ಖಚಿತವಾಗಿ ಹೇಳಬಲ್ಲೆ” ಎಂದು ವೈದ್ಯ ಭರತ್ ಹೇಳುತ್ತಾರೆ.
ಅಂಕಿತ್ ಭರತ್ ಅವರು ನಾರ್ತ್ವೆಸ್ಟರ್ನ್ ಲಂಗ್ ಟ್ರಾನ್ಸ್ಪ್ಲಾಂಟ್ ಪ್ರೋಗ್ರಾಂನ ಥೊರೊಸಿಕ್ ಸರ್ಜರಿ ಮತ್ತು ಸರ್ಜಿಕಲ್ನ ಮುಖ್ಯಸ್ಥರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.