ಬಲೂಚಿಸ್ಥಾನ: ಪಾಕಿಸ್ಥಾನಿ ಸೈನ್ಯದ ವಿರುದ್ಧ ಬಲೂಚಿಸ್ಥಾನದಲ್ಲಿ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಯಲ್ಲಿ, ಅಲ್ಲಿ ನಿರ್ಮಿಸಲಾಗಿರುವ ತನ್ನ ಮಿಲಿಟರಿ ಶಿಬಿರಗಳನ್ನು ಪಾಕಿಸ್ಥಾನ ತೆರವು ಮಾಡಿದೆ ಎಂದು ವರದಿಗಳು ತಿಳಿಸಿವೆ.
ಬಲೂಚಿಸ್ಥಾನದಲ್ಲಿ ಪಾಕಿಸ್ಥಾನದ ಹೊರಠಾಣೆ, ಮಿಲಿಟರಿ ಕಟ್ಟಡಗಳಿಗೂ ಪ್ರತಿಭಟನಾನಿರತರು ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದ್ದಾರೆ. ಈ ಹಿನ್ನಲೆಯಲ್ಲಿ ಪಾಕ್ ಸೈನಿಕರು, ತಮ್ಮ ಶಸ್ತ್ರಾಸ್ತ್ರಗಳನ್ನು, ಸಾಮಾನು ಸರಂಜಾಮುಗಳನ್ನು ತೆಗೆದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಬಲೂಚಿಸ್ಥಾನ ಮತ್ತು ಪಾಕಿಸ್ಥಾನಗಳ ಗಡಿ ರೇಖೆಯ ಬಳಿ ಅನಧಿಕೃತವಾಗಿ ಪಾಕ್ ಸೈನಿಕರು ಶಿಬಿರ ಸ್ಥಾಪಿಸಿದ್ದು, ಹಲವು ಮಿಲಿಟರಿ ಕಟ್ಟಡಗಳನ್ನೂ ನಿರ್ಮಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದರು. ಜೊತೆಗೆ ಬಲೂಚಿಸ್ಥಾನದ ಭದ್ರತಾ ಸಿಬ್ಬಂದಿಗಳಿಗೂ ಪಾಕ್ ಸೇನೆ ಉಪಟಳ ನೀಡುತ್ತಿತ್ತು. ಇದರಿಂದ ರೊಚ್ಚಿಗೆದ್ದಿದ್ದ ಬಲೂಚಿಸ್ಥಾನಿಯರು ಪಾಕ್ ಸೇನಾ ಶಿಬಿರಗಳ ಮೇಲೆ ಕಲ್ಲು ತೂರಾಟ ಮಾಡಿದ್ದರು ಮತ್ತು ಬೆಂಕಿ ಹಚ್ಚಿದ್ದರು. ಪರಿಸ್ಥಿತಿ ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದಂತೆ ಇದೀಗ ಗಡಿ ಪ್ರದೇಶದಿಂದ ಪಾಕ್ ಸೇನೆ ಕಾಲ್ಕಿತ್ತಿದೆ.
ಪಾಕ್ ಸೈನ್ಯ ಮತ್ತು ಪಾಕ್ ಸರ್ಕಾರದ ವಿರುದ್ಧ ಸಿಡಿದೆದ್ದ ಬಲೂಚಿಸ್ಥಾನದ ಜನತೆ ಪ್ರತಿಭಟನೆಯ ಮೂಲಕ ತಕ್ಕ ಶಾಸ್ತಿ ಮಾಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಬಲೂಚಿಸ್ಥಾನದ ಯುವತಿಯೊಬ್ಬಳನ್ನು ಪಾಕಿಸ್ಥಾನದ ಪಾಪಿ ಸೈನಿಕರು ಅತ್ಯಾಚಾರ ಎಸಗಿ ಹತ್ಯೆ ನಡೆಸಿದ್ದ ಬೆನ್ನಲ್ಲೇ ಪಾಕಿಸ್ಥಾನದ ವಿರುದ್ಧ ಬಲೂಚಿಸ್ಥಾನದಲ್ಲಿ ಪ್ರತಿಕಾರದ ಕಿಡಿ ಹಬ್ಬಿಕೊಂಡಿತ್ತು. ಅಲ್ಲದೆ ಬಲೂಚಿಸ್ಥಾನದಲ್ಲಿ ಪಾಕ್ ವಿರುದ್ಧ, ಪಾಕ್ ಸೇನೆಯ ವಿರುದ್ಧ ಮಾತಾಡಿದವರನ್ನು ಹಿಂಸಿಸುವ, ಹತ್ಯೆ ಮಾಡುವ ಕ್ರಮವನ್ನೂ ಪಾಕಿಸ್ಥಾನದ ಸೈನಿಕರು ಅನುಸರಿಸುತ್ತಿದ್ದರು. ಅಲ್ಲದೆ ಬಲೂಚಿಸ್ಥಾನ್ ಟೈಮ್ಸ್ ನ ಸಂಪಾದಕ ಸಾಜಿದ್ ಹುಸೇನ್ ಅವರನ್ನು ಪಾಕ್ ವಿರುದ್ಧ ಲೇಖನ ಪ್ರಕಟಿಸಿದ ಕಾರಣಕ್ಕೆ ಅಪಹರಿಸಿ ಹತ್ಯೆ ಮಾಡಲಾಗಿತ್ತು.ಈ ಎಲ್ಲಾ ಘಟನೆಗಳು ಬಲೂಚಿಸ್ಥಾನಿಯರ ಮನಸ್ಸಿನಲ್ಲಿ ಪಾಕಿಸ್ಥಾನದ ವಿರುದ್ಧ ಆಕ್ರೋಶ ಹೆಚ್ಚಾಗುವಂತೆ ಮಾಡಿದೆ.
ಪಾಕಿಸ್ಥಾನದ ಈ ಎಲ್ಲಾ ಕುಕೃತ್ಯಗಳಿಂದ ಬೇಸತ್ತಿದ್ದ ಬಲೂಚಿಸ್ಥಾನ ಪಾಕ್ ವಿರುದ್ಧ ಪ್ರತಿಭಟನೆ ಆರಂಭಿಸಿತ್ತು. ಸದ್ಯ ಪ್ರತಿಭಟನೆ ವಿಕೋಪಕ್ಕೆ ಹೋಗಿದ್ದು, ಪಾಕ್ ಸೈನಿಕರು ಗಡಿಯಿಂದ ಕಾಲ್ಕೀಳುವ ಪರಿಸ್ಥಿತಿ ತಂದಿಟ್ಟಿದೆ. ಪ್ರತಿಭಟನೆಯಿಂದಾಗಿ ಗಡಿಯಲ್ಲಿ ಪಾಕಿಸ್ಥಾನ ನಿರ್ಮಿಸಿದ್ದ ಮಿಲಿಟರಿ ಕಟ್ಟಡಗಳನ್ನು ಬೆಂಕಿ ಇಟ್ಟು ನಿರ್ನಾಮ ಮಾಡುವ ಮೂಲಕ ಬಲೂಚಿಸ್ಥಾನೀಯರು ಪಾಕ್ ವಿರುದ್ಧ ಹಗೆ ತೀರಿಸಲಾರಂಭಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.