ಉಸಿರಾಡುವ ಗಾಳಿ, ವಾಸಿಸುವ ಭೂಮಿ, ಕುಡಿಯುವ ನೀರು, ನೋಡುವ ಬೆಳಕು,ಪರ್ವತಗಳ ಸಾಲು, ನದಿ ಸರೋವರಗಳು, ಹಸಿರು ಗಿಡ ಮರಗಳು ಇವುಗಳನ್ನ ಒಳಗೊಂಡ ನಿಸರ್ಗದ ಸುಂದರ ಸೋಜಿಗವೇ ನಮ್ಮ ಈ ಪರಿಸರ. ಇಂತಹ ಪ್ರಕೃತಿ ಮಾತೆಯ ಮಡಿಲಲ್ಲಿ ಹಾಯಾಗಿ ದಿನಕಳೆಯುತ್ತಿರುವ ಮಾನವ ಶಿಶುಗಳು ನಾವು! ನಮೆಗೆಲ್ಲರಿಗೂ ಇರುವುದೊಂದೇ ಭೂಮಿ, ಒಂದೇ ಪರಿಸರ. ಎಲ್ಲವನ್ನು ನೀಡಿದ ಪರಿಸರದ ಕೊಡುಗೆ ಜೀವಸಂಕುಲಕ್ಕೆ ಅಗಣಿತ ಮತ್ತು ಅಮೂಲ್ಯ. ಪ್ರಕೃತಿ ಮಾತೆಯ ಋಣ ನಮ್ಮ ಮೇಲಿದೆ ಮತ್ತು ಅದರ ರಕ್ಷಣೆ, ಬೆಳೆಸುವಿಕೆಯ ಹೊಣೆಗಾರಿಕೆ ಮಾನವ ಸಮುದಾಯದ್ದು. ಸಮಾಜದ ಒಳಿತಿಗಾಗಿ ಸಾರ್ವತ್ರಿಕವಾಗಿ ಜಾಗೃತರಾಗಿ ಪರಿಸರದ ಅವಶ್ಯಕತೆ, ಅನಿವಾರ್ಯತೆ ಅರಿಯೋಣ.
ಜೂನ್ ತಿಂಗಳವೆಂದರೆ ಅದೆನೋ ವಿಶೇಷತೆ!. ಯಾಕೆ ಅಂತಿರಾ? ಜೂನ್ 5 “ವಿಶ್ವ ಪರಿಸರ ದಿನ”. ಪರಿಸರವನ್ನು ಉಳಿಸುವುದು ಆ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣವನ್ನು ನಿರ್ಮಾಣ ಮಾಡುವುದು, ಭೂಮಿಯ ಮೇಲಿನ ಜೀವಸಂಕುಲಗಳು ಮಾಲಿನ್ಯ ಮುಕ್ತ ಪರಿಸರದಲ್ಲಿ ಜೀವಿಸುವುದು, ಇಂತಹ ಮುಂತಾದ ಸಂದೇಶಗಳು ಜನತೆಯ ಅಭಿಯಾನವಾಗಬೇಕು, ಇದಕ್ಕಾಗಿಯೇ ಪ್ರಪಂಚದಾದ್ಯಂತ ಜಾಗೃತಿ ಅಭಿಯಾನವನ್ನು ಆಯೋಜಿಸಲಾಗುತ್ತದೆ. ಎಲ್ಲ ರಾಷ್ಟ್ರಗಳು ಪರಿಸರ ಸಂಬಂಧಿತ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ,ಈ ಸಮಸ್ಯೆಗಳಿಗೆ ವಿಶ್ವ ಮಟ್ಟದಲ್ಲಿ ಪರಿಹಾರ ಕಾರ್ಯಕ್ರಮಗಳನ್ನು ರೂಪಿಸಿ ಸ್ವಚ್ಛ,ಸುಂದರ ಪರಿಸರ ನಿರ್ಮಾಣದ ಗುರಿಯೇ ವಿಶ್ವ ಪರಿಸರ ದಿನಾಚರಣೆಯ ಮೂಲ ಉದ್ದೇಶ.
ನಮಗೆ ಇರುವುದೊಂದೇ ಭೂಮಿಯಾಗಿದ್ದು,ಅದರ ರಕ್ಷಣೆಯು ನಮ್ಮೆಲ್ಲರ ಹೊಣೆಗಾರಿಕೆ ಹಾಗೂ ಸಾರ್ವತ್ರಿಕವಾದ ಆಶಯ ಕೂಡಾ!. ಪ್ರಸ್ತುತ ಜಗತ್ತಿನಲ್ಲಿ ಆಧುನಿಕತೆ, ನಗರೀಕರಣ, ಕೈಗಾರೀಕರಣ, ವಿಜ್ಞಾನ-ತಂತ್ರಜ್ಞಾನದ ಅಭಿವೃದ್ಧಿಗಳೆಂಬ ಹತ್ತು ಹಲವು ಕಾರಣಗಳು ಪರಿಸರ ವಿನಾಶದಂಚಿನತ್ತ ತೆರಳಲು ಇವುಗಳ ಪಾತ್ರವಿದೆಯೆಂದರೆ ತಪ್ಪಾಗಲಾರದು.
ವಾಯುಮಾಲಿನ್ಯ, ಜಲಮಾಲಿನ್ಯ, ಅಧಿಕ ಉಷ್ಣಾಂಶ, ಮಣ್ಣಿನ ಮಾಲಿನ್ಯ, ಅರಣ್ಯ ನಾಶ….
ಹೀಗೆ ಒಂದೇ ಎರಡೇ! ಪರಿಸರದಲ್ಲಿ ಉಂಟಾಗುವ ಏರು ಪೇರುಗಳು. ಇದಕ್ಕೆ ಕಾರಣ ಅಭಿವೃದ್ದಿಯ ಹೆಸರಿನಲ್ಲಿ ನಾವು ಪರಿಸರದ ಮೇಲೆ ಮಾಡುತ್ತಿರುವ ದೌಜನ್ಯ. ಅದಕ್ಕೆ ಫಲವೇ ಹೃದಯ ಸಂಬಂಧಿ, ಉಸಿರಾಟ ಸಂಬಂಧಿ, ಅಪೌಷ್ಟಿಕತೆಯಂತಹ ಅನೇಕ ದುಷ್ಪರಿಣಾಮಗಳು.
ವ್ಯವಸಾಯ ಮಾಡುತ್ತಿದ್ದ ಭೂಮಿ ಇಂದು ಬಂಜರಾಗಿದ್ದು, ನದಿ ಕೆರೆಗಳೆಲ್ಲ ಬತ್ತಿ ಒಣಗಿ ಕ್ರಿಕೆಟ್ ಮೈದಾನಗಳಾಗಿವೆ. ಕೆರೆಗಳ ಬದುವಿನಲ್ಲಿ ಉತ್ತು ಬಿತ್ತು ಬೆಳೆದ ಬಗ್ಗೆ ಕವಿಯೊಬ್ಬರು ಹೀಗೆ ಹೇಳುತ್ತಾರೆ.
ಕೆರೆ ಬದುವಿನಲ್ಲಿ ಉತ್ತದ್ದು ಆ ಕಾಲ
ಕೆರೆಯಲ್ಲಿಯೇ ಉಳಿಯುವುದು ಈ ಕಾಲ
ಸ್ವಚ್ಛ ಪರಿಸರದ ಅಗತ್ಯತೆ, ಪರಿಸರ ಸಂರಕ್ಷಣೆ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಅಂಶ. ಸ್ವಚ್ಛಂದ ಗಾಳಿ, ಶುದ್ಧವಾದ ನೀರು, ಹಸಿದಾಗ ಹೊಟ್ಟೆ ತುಂಬಾ ಊಟ ಎಂಬ ಸಾಮಾನ್ಯ ಜೀವನ ರೀತಿಯನ್ನು ಬಿಟ್ಟು, ಮನುಷ್ಯ ನಾಗಾಲೋಟದ ಜೀವನ ಸಾಗಿಸುತ್ತಿದ್ದಾನೆ. ಮತ್ತೊಂದು ಕಡೆ ಕಾರ್ಖಾನೆಗಳಿಂದ ಬರುವ ಕಲುಷಿತ ಹೊಗೆ ವಾಯುಮಂಡಲವನ್ನು ಸೇರುತ್ತದೆ. ಮಲಿನ ನೀರು ಬಾವಿಗಳನ್ನ ಸೇರಿ ಉಪಯೋಗಿಸಲು ಅನರ್ಹವಾಗುತ್ತಿದೆ. ಜೊತೆಗೆ ವಾಹನಗಳ ಹೊಗೆ ವಾಯುಮಾಲಿನ್ಯಕ್ಕೆ ದಾರಿ ಮಾಡಿಕೊಟ್ಟಂತಾಗಿದೆ. ಮನುಷ್ಯ ಹೇಗೆ ಒಂದು ಮರವನ್ನು ಕಡಿಯುತ್ತಾನೊ, ಹಾಗೆ ಹತ್ತು ಗಿಡಗಳನ್ನು ನೆಡಬಲ್ಲನೇ? ಎಂಬ ಪ್ರಶ್ನೆಗೆ, ಸ್ವತಃ ಮಾನವನ ಬಳಿಯೇ ಉತ್ತರವಿಲ್ಲ. ಉತ್ತರ ಕೊಡುವ ಅಗತ್ಯತೆ, ವ್ಯವಧಾನ, ಜವಾದ್ಭಾರಿಯೆಂಬ ಪದಗಳು ಅವನಿಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾನೆ ಜೀವಿಗಳಲ್ಲೆ ಅತಿ ಬುದ್ಧಿವಂತ ಮಾನವ!.
ಪರಿಸರ ಮಾಲಿನ್ಯ ಜಗತ್ತನ್ನು ಅತ್ಯಂತ ತೀವ್ರವಾಗಿ ಕಾಡುತ್ತಿರುವ ಈ ಸಂದರ್ಭದಲ್ಲಿ ಪ್ರಕೃತಿಯನ್ನು ಉಳಿಸಿಕೊಳ್ಳುವುದೇ ಮಹತ್ವದ ಕರ್ತವ್ಯವಾಗಿದೆ. ಈ ಆಶಯದೊಂದಿಗೆ, ಜನಜಾಗೃತಿಯ ಅಭಿಯಾನಕ್ಕೆ ಪ್ರತೀ ವರ್ಷ ಜೂನ್ 5 ರಂದು ಆಚರಣೆಯಾಗುವ ವಿಶ್ವ ಪರಿಸರ ದಿನವು ಸ್ಫೂರ್ತಿಯಾಗಿದೆ. ವಿಶ್ವಸಂಸ್ಥೆಯು 70ರ ದಶಕದಲ್ಲಿ ಈ ಅಭಿಯಾನವನ್ನು ಆರಂಭಿಸಿತು.
ವಿಶ್ವಸಂಸ್ಥೆಯು ಸುರಕ್ಷತಾ ಪರಿಸರ ಭದ್ರತಾ ಹಾಗೂ ಆರೋಗ್ಯಪೂರ್ಣ ಭವಿಷ್ಯದ ಉದ್ದೇಶದಿಂದ “ಮಾನವ ಪರಿಸರಕ್ಕೆ ಸ್ಟಾಕ್ ಹೋಂ ಸಮ್ಮೇಳನ’ವನ್ನು 1972 ರಲ್ಲಿ ಏರ್ಪಡಿಸಿತು. ಪರಿಸರ ಸಂರಕ್ಷಣೆಗೆ ವಿವಿಧ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿತು. 1974ರಲ್ಲಿ ಜೂನ್ 5ರ ಘೋಷಣೆಯಾಗಿತ್ತು. 2018 ರಲ್ಲಿ ಭಾರತ ಇದರ ಆತಿಥೇಯ ರಾಷ್ಟ್ರವಾಗಿದ್ದು “ಪ್ಲಾಸ್ಟಿಕ್ ಮಾಲಿನ್ಯ ನಿವಾರಿಸಿ’ ಎಂಬುದಾಗಿತ್ತು. ಭಾರತ ಇದರ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕೆಂಬ ನೆಲೆಯಲ್ಲಿ ಕಾರ್ಯಕ್ರಮ ರೂಪಿಸಲಾಗಿತ್ತು. “ನಮ್ಮ ನಿಸರ್ಗವನ್ನು ಪ್ಲಾಸ್ಟಿಕ್ನಿಂದ ಮುಕ್ತಗೊಳಿಸಬೇಕು. ನಮ್ಮ ವನ್ಯಜೀವಿಗಳು, ಪರಿಸರದ ರಕ್ಷಣೆಯಾಗಬೇಕು. ಪ್ಲಾಸ್ಟಿಕ್ನ ಘೋರ ಪರಿಣಾಮಗಳಿಂದ ಜಗತ್ತಿನ ರಕ್ಷಣೆಯಾಗಬೇಕು’ ಎಂದು ಅಭಿಯಾನ ಸಾಗಿತು. 2019ರ ಆತಿಥೇಯ ದೇಶ ಚೀನಾ ಆಗಿತ್ತು. ಇದರ ಧೇಯವಾಕ್ಯ ವಾಯುಮಾಲಿನ್ಯವನ್ನು ನಿವಾರಿಸಿ (ಬೀಟ್ ಏರ್ ಪೊಲ್ಯೂಶನ್) ಎಂಬುದು. ಅಂದಹಾಗೆ 2022 ರೊಳಗೆ ಭಾರತವನ್ನು ಪ್ಲಾಸ್ಟಿಕ್ ಮುಕ್ತ ದೇಶವನ್ನಾಗಿ ಮಾಡುವ ಪ್ರತಿಜ್ಞೆಯನ್ನು ಭಾರತ ಸರಕಾರ ಕೈಗೊಂಡಿದೆ. ವಿಶ್ವಸಂಸ್ಥೆಯ ಪರಿಸರ ಭದ್ರತಾ ಆರೋಗ್ಯಪೂರ್ಣ ಭವಿಷ್ಯದ ದೃಷ್ಠಿಯಿಂದ “ವಿಶ್ವ ಪರಿಸರ ದಿನ “ವನ್ನು ವಿವಿಧ ಯೋಜನೆ ಕಾರ್ಯಕ್ರಮಗಳೊಂದಿಗೆ ರೂಪಿಸಿತು. ಕೆನ್ಯಾದ ನೈರೋಬಿಯಾದಲ್ಲಿ ಕೇಂದ್ರ ಹೊಂದಿರುವ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮವು ಈ ದಿನದ ಅಭಿಯಾನವನ್ನು ನಿರ್ವಹಿಸುತ್ತದೆ. ಪ್ರತಿ ವರ್ಷ ವಿಶ್ವ ಪರಿಸರ ದಿನಾಚರಣೆಗೆ ನಿರ್ದಿಷ್ಟವಾದ ಧ್ಯೇಯವನ್ನು ಘೋಷಿಸಲಾಗುತ್ತದೆ.
ಪರಿಸರ ಮಾಲಿನ್ಯವನ್ನು ಸಂಪೂರ್ಣವಾಗಿ ನಿವಾರಿಸಿ, ಸಮಗ್ರ ಹಿತಾಸಕ್ತಿಯ ರಕ್ಷಣೆಗಾಗಿ ಸುಂದರ ಭೂಮಿಯನ್ನು ರೂಪಿಸಲು ಈ ವಿಶ್ವ ಪರಿಸರ ದಿನದ ಆಚರಣೆಯು ಮನುಕುಲವನ್ನು ಪ್ರೇರೇಪಿಸಲಿಯೆನ್ನುವ ಮುಖ್ಯ ಸಂದೇಶ ಇದರಲ್ಲಿ ಅಡಕವಾಗಿದೆ.
ಪರಿಸರವೆಂದರೆ ಭೂಮಿ, ನೀರು, ಹವಾಮಾನಗಳನ್ನು ಒಳಗೊಂಡ ಭೌತಿಕ ಅಥವಾ ಬಾಹ್ಯ ಪರಿಸರವಷ್ಟೇ ಅಲ್ಲ, ದೇಹದೊಳಗಿನ ಆಂತರಿಕ ಪರಿಸರವನ್ನು- ಮಾನವನನ್ನು ಒಳಗೊಂಡಿರುವ ಸಾಮಾಜಿಕ ಪರಿಸರ ಸಹಿತ ಸೇರಿಸಿಕೊಳ್ಳಬಹುದು ಎಂದು ಸಂಶೋದನಾ ಲೇಖನವೊಂದು ವ್ಯಾಪಕ ಅರ್ಥದಲ್ಲಿ ಹೇಳಲ್ಪಡುತ್ತದೆ.
ಆರೋಗ್ಯಪೂರ್ಣ ಪರಿಸರದ ಮಹತ್ವದ ಅರಿವು ಮೂಡಿಸುವುದು, ಪರಿಸರ ಸಹ್ಯವಾದ ಅಭಿವೃದ್ಧಿ ಕಾರ್ಯಗಳಿಗಷ್ಟೇ ಜಗತ್ತಿನಾದ್ಯಂತ ಆದ್ಯತೆ ನೀಡುವುದು, ಜನತೆ ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಇತ್ಯಾದಿ ಆಶಯಗಳಿವೆ. ಪರಿಸರ ಸಂಬಂಧಿತ ಸಂಗತಿಗಳ ಬಗ್ಗೆ ಜನತೆ ಸದಾ ಜಾಗೃತರಾಗಿರಬೇಕು; ಸುಭದ್ರ ಮತ್ತು ಆರೋಗ್ಯಪೂರ್ಣ ಜೀವನಕ್ಕೆ ಪರಿಸರ ಸಂರಕ್ಷಣೆ ಮುಖ್ಯವಾಗಿರುತ್ತದೆ ಎಂಬ ತಿಳುವಳಿಕೆಯ ಪ್ರಸರಣವನ್ನು ಕೂಡಾ ನಡೆಸಲಾಗುತ್ತಿದೆ. ಸರಿಯಾದ ಮಾರ್ಗದರ್ಶನ, ಪರಿಸರದ ಬಗ್ಗೆ ಅರಿವು ತಿಳುವಳಿಕೆ ಜಾಗೃತಿ ಮೂಡಿಸುವುದು ವಿಶ್ವ ಪರಿಸರ ದಿನಾಚರಣೆಯ ಮೂಲ ಉದ್ದೇಶವಾಗಿದೆ.
ಕೇವಲ ವರ್ಷಕ್ಕೆ ಒಂದು ದಿನ ಪರಿಸರ ರಕ್ಷಣೆಯೆಂಬುದು ಸೀಮಿತವಾಗದೇ, ವರ್ಷದ ಪ್ರತಿ ದಿನವೂ ನಮಗೆ ಪರಿಸರ ದಿನವಾಗಬೇಕು. ಏಕೆಂದರೆ ಪರಿಸರವೊಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ಪರಿಸರವಿಲ್ಲದೆ ಮಾನವನಿಲ್ಲ ಎಂಬ ನಿತ್ಯ ಸತ್ಯವನ್ನು ಅರಿತು ನಾವಿಂದು ಪರಿಸರ ಸಂರಕ್ಷಣೆಯತ್ತ ಅಡಿಯಿಡೋಣ ಮತ್ತು ಬೆಳೆಸುವಲ್ಲಿ ಕಾರ್ಯಪ್ರವೃತ್ತರಾಗೋಣ.ಇದು ನಮ್ಮ ಆದ್ಯ ಕರ್ತವ್ಯ ಕೂಡಾ!.
✍️ ಸುಮಾ ಸತೀಶ್, ಶಿರಸಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.