ತಾಯಿ ಜೀಜಾಬಾಯಿ ಗರ್ಭವತಿಯಾಗಿರುತ್ತಾರೆ. ಸಹಜವಾಗಿ ಬಯಕೆಗಳು ಉದಿಸುತ್ತವೆ ಅಲ್ಲವೇ? ಅವು ಸಾಮಾನ್ಯವಾದವು ಆಗಿರಲಿಲ್ಲ. “ಹದಿನೆಂಟು ಕೈಗಳಿರುವ ನಾನು ಸಿಂಹವನ್ನು ಓಡಿಸಿದಂತೆ ಕನಸು ಬೀಳುತ್ತಿದೆ. ಪ್ರತಿ ಕೈಯಲ್ಲೂ ಶಸ್ತ್ರ ಹಿಡಿದು ಭೂಮಿಯ ಮೇಲಿನ ಅಷ್ಟೂ ಶತ್ರುಗಳ ನಾಶ ಮಾಡಿ ಬೆಳ್ಗೊಡೆಯ ಅಡಿಯ ಸಿಂಹಾಸನ ಏರಿದ ಕನಸು ಬೀಳುತ್ತಿದೆ.” ಕೇಳಿದವರು ಮುಗುಳು ನಗೆ ಬೀರಿದರು. “ಮಾತೆ ನಮ್ಮ ಪರಂಪರೆಯಲ್ಲಿ ಅಧಿಕಾರವನ್ನು ದೈವದಿಂದ ಬೇಡಿ ಪಡೆದುದೇ ಹೆಚ್ಚು. ಹೀಗೆ ಕಾದು ಪಡೆದ ಇತಿಹಾಸವೇ ಇಲ್ಲ.”
ಹೌದು ಹಾಗಿತ್ತು ಕಾಲ. ಸನಾತನ ಧರ್ಮದಲ್ಲಿ ಅದೆಂತಹ ನಿಷ್ಠೆ, ಅದಮ್ಯ ಪ್ರಾಮಾಣಿಕತೆ ಎಂದರೆ ಪರಂಪರಾಗತ ಅಧಿಕಾರವನ್ನು ದೈವದ ಸಾಕ್ಷಿಯಾಗಿ, ಅದರ ಅಣತಿಯಂತೆ ಪಡೆದ ಇತಿಹಾಸ ಇರುವುದು. ಅದೆಂತಹ ವೈರಿಯೇ ಆಗಿರಲಿ ಹಿಂದೂ ಸಾಮ್ರಾಟರು ಮೋಸ ಮಾಡಿ ಸಿಂಹಾಸನ ಪಡೆದುದಿಲ್ಲ. ಅದು ಬಿಡಿ, ತಂದೆ, ತಾಯಿ, ಸಹೋದರ ಕಗ್ಗೊಲೆ ಮಾಡಿಯೋ, ಬಂಧಿಸಿಟ್ಟೋ ಅಧಿಕಾರ ಪಡೆದ ಒಂದು ಉದಾಹರಣೆಯೂ ಇಲ್ಲ.
ಮಹಾರಾಜರ ಜನ್ಮ ಸಂದರ್ಭದಲ್ಲಿ ಪರಿಸ್ಥಿತಿ ಹಾಗಿರಲಿಲ್ಲ. ಅಂದ ಮಾತ್ರಕ್ಕೆ ಯಾರನ್ನೂ ತುಳಿದು ಗದ್ದುಗೆ ಏರಬೇಕು ಅಂತಲ್ಲ, ಆದರೆ ದೈವ ಪ್ರೇರಣೆಗೆ ಕಾಯದೇ ಒಬ್ಬ ವೀರ ಧರ್ಮ ಕಾಯಲೇಬೇಕಿತ್ತು. ಅಂತೆಯೇ ಅಂತಹ ಸ್ವಪ್ನವೂ ಮಹಾಮಾತೆಗೆ ಬಿದ್ದಿತ್ತು.
ಕಾಬೂಲಿನ ಅತಿಕ್ರಮಣದಿಂದ ಹಿಡಿದು ಈ ಸುಮುಹೂರ್ತದ ತನಕವೂ ಭಾರತದ ತನ್ನ ಪರಂಪರೆಯ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಸೋಲುತ್ತಲೇ ಇತ್ತು. ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ, ಅದು ಶ್ರೀ ಕೃಷ್ಣ ಹೇಳಿದಂತೆ ಅಧರ್ಮದ ಪತಾಕೆ ಗಗನಕ್ಕೆ ಏರಿದಾಗೆಲ್ಲ ಧರ್ಮವನ್ನು ಎತ್ತಿ ಹಿಡಿಯಲು ಪುಣ್ಯಪುರುಷರು ಜನ್ಮವೆತ್ತಿ ಬರುತ್ತಾರೆ, ಬರುತ್ತಲೇ ಇದ್ದಾರೆ. ಶಿವನೇರಿ ಕೋಟೆಯಲ್ಲಿ ಫೆಬ್ರವರಿ 19, 1630 ರಲ್ಲಿ ಜನನವಾಯಿತು. ಆದರೆ ತಾಯಿ ಜೀಜಾಬಾಯಿಗೆ ಮಗ ಹಿಂದೂ ಧರ್ಮ ರಕ್ಷಕನಾಗುವ ಕನಸು. ಒಂದಿಷ್ಟು ಘಟನೆಗಳು ಜರುಗಿದವು. ಔರಂಗಜೇಬನ ತಿರಸ್ಕರಿಸಿ ಬಂದ ಕವಿ ಭೂಷಣ, ಕಾಶಿಯಿಂದ ಕಲಿಯೊಬ್ಬನ ಅರಸುತ್ತಾ ಬಂದ ಗಾಗಾ ಭಟ್ಟ ಹೀಗೆ ಇವರೆಲ್ಲರಿಗೂ ಮಹಾರಾಜರಲ್ಲಿ ಆ ತೇಜಸ್ಸು ಗಮನಕ್ಕೆ ಬಂದಿತು. ಅಂತಹ ಒಂದು ಬೃಹತ್ ಕನಸಿಗಾಗಿ ಶಿವಾಜಿ ಮಹಾರಾಜರ ಪದಗ್ರಹಣವಾಯಿತು.
ಕವಿ ಭೂಷಣ ಹೇಳಿದಂತೆ,
ಕಾಶಿಯ ಕಲೆಯ ನಶಿಸುತ್ತಿತ್ತು,
ಮಧುರೆಯು ಮಸೀದಿಯಾಗುತ್ತಿತ್ತು,
ಶಿವಾಜಿ ಮಹಾರಾಜರು ಇಲ್ಲದಿದ್ದರೆ,
ಪ್ರತಿ ಭಾರತೀಯನ ಸುನ್ನತ್ ಆಗಿರುತ್ತಿತ್ತು..
ಈ ಸಾಲುಗಳೇ ಹೇಳುತ್ತಿದ್ದವು, ಛತ್ರಪತಿಗಳ ಪದಾರೋಹಣದ ಅವಶ್ಯಕತೆ ಕುರಿತು. ಇತಿಹಾಸವನ್ನು ತಿರುವಿದಾಗ ಭಾರತದ ಉದ್ದಗಲದ ಪರಿಚಯವಾಗುತ್ತದೆ. ಅಂತಹ ಕಳೆದುಕೊಳ್ಳುವ ಸ್ಥಿತಿ ಮುಂದುವರಿದು ಇಂದು ಭಾರತ ಸುನ್ನತಿಗಳ ದೇಶವಾಗಿರುತ್ತಿತ್ತು. ಅಸ್ಸಾಂನ ರಾಜ ಚಕ್ರಧ್ವಜ್ ಸಿಂಗ್ ಹೇಳುತ್ತಾನೆ, ಎಲ್ಲಿಯ ತನಕ ನಾನು ಶಿವಾಜಿ ಮಹಾರಾಜರ ಕಾರ್ಯತಂತ್ರಗಳ ಅನುಸರಿಸುತ್ತೇನೋ ಅಲ್ಲಿಯ ತನಕ ನನ್ನ ರಾಜ್ಯವನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವೇ ಇಲ್ಲ ಎಂದು. ಅಂತೆಯೇ ಎಂದಿಗೂ ಅಸ್ಸಾಂ ತಲೆ ಬಾಗಲೇ ಇಲ್ಲ. ಹೀಗೆ ಶಿವಾಜಿ ಮಹಾರಾಜರ ಯುದ್ದ ನೈಪುಣ್ಯತೆ, ಕಾರ್ಯ ವೈಖರಿಯನ್ನು ಕೇಳಿ ಕೇಳಿ ಆನಂದಿಸಬೇಕು. ಅವರು ಸಾಮ್ರಾಟರಾಗಲೆಂದೇ ಹುಟ್ಟಿದವರು.
ಶಿವಾಜಿ ಮಹಾರಾಜರ ಬದುಕಿನಲ್ಲಿ ಮತ್ತೊಂದು ಗಮನಿಸುವ ಅಂಶವಿದೆ. ಅದೆಂದರೆ ಸೋತಂತೆ ನಟಿಸಿ ಗೆಲ್ಲುವುದು ಅಂತೆಯೇ ಎದುರಾಳಿಯ ಮಾನಸಿಕತೆಯ ಮೇಲೆ ದಾಳಿ ಮಾಡುವುದು. ಬಹಳಷ್ಟು ಬಾರಿ ಇಂತಹ ಘಟನೆಗಳು ಅವರ ಯಶೋಗಾಥೆಯಲ್ಲಿ ದೊರಕುತ್ತವೆ.
`ಹಿಂದವಿ ಸ್ವರಾಜ್ಯ ನಿರ್ಮಾಣ ವ್ಹಾವೆ, ಹೀಚ್ ಶ್ರೀಂಚಿ ಇಚ್ಛಾ’
ಇಡೀ ಬದುಕನ್ನು ಸನಾತನ ಸಂಸ್ಕೃತಿಯ ಉಳಿವಿಗಾಗಿಯೇ ಮುಡಿಪಿಟ್ಟ ಮಹಾಭಾರತೀಯನ ಸಿಂಹಾಸನಾರೋಹಣ ದಿನವಿಂದು. ಈ ದಿನವನ್ನು ನೆನೆದು ಪುಣ್ಯ ಪಡೆಯೋಣ. ಅವರು ಒಬ್ಬ ಸಾಮಾನ್ಯ ರಾಜನಾಗಿ ನೂರು ಕಾಲ ಬಾಳಬಹುದಿತ್ತು. ಅವತ್ತು ಅವರು ಹಾಗೆ ಬದುಕಿದ್ದರೆ ಇವತ್ತು ನಾನು ಈ ಲೇಖನ ಬರೆಯುವ ಪ್ರಸಂಗವೇ ಇರುತ್ತಿರಲಿಲ್ಲ ಅಲ್ಲವೇ? ಅಂದು ರಾಯಗಢದ ಅಂಗಣದಲ್ಲಿ ಭೂತಾಯಿಯ ಮಡಿಲಲ್ಲಿ ಮಲಗುವ ಮುನ್ನ ಕೇವಲ ಐವತ್ತು ವರ್ಷ ಬದುಕಿದರೂ ಐವತ್ತು ಶತಮಾನಗಳು ನೆನೆಯುವಂತಹ ಬದುಕು ಅವರದು. ಶಿವಛತ್ರಪತಿ ಮಹಾರಾಜ್ ಕೀ ಜೈ…
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.