ಬೆಂಗಳೂರು: ಕೊರೋನಾ ಸೋಂಕು ತಡೆಯ ವಿಚಾರದಲ್ಲಿ ತೆಗೆದುಕೊಳ್ಳಲಾಗಿರುವ ಅಗತ್ಯ ಕ್ರಮಗಳ ಪರಿಶೀಲನೆಗಾಗಿ ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳು ತಮ್ಮ ವ್ಯಾಪ್ತಿಯ ತಾಲೂಕು ಕೇಂದ್ರಗಳಲ್ಲಿ ವಾಸ ಮಾಡಬೇಕು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೂಚಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಉಡುಪಿ, ಯಾದಗಿರಿ, ಕಲಬುರ್ಗಿ, ವಿಜಯಪುರ, ಬೆಳಗಾವಿ ಮತ್ತು ರಾಯಚೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಅವರು ತಾಲೂಕು ಕೇಂದ್ರಗಳಲ್ಲಿ ವಾಸ್ತವ್ಯ ಹೂಡಿ ಸೋಂಕು ನಿವಾರಕ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುವಂತೆ ತಿಳಿಸಿದ್ದಾರೆ.
ಮುಂದಿನ ವಾರದಿಂದ ತೊಡಗಿದಂತೆ ಅನ್ಲಾಕ್ ನಿಯಮಗಳನ್ನು ಜಾರಿಗೆ ತರಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಸೋಂಕು ಹೆಚ್ಚಾಗಿರುವ ರಾಜ್ಯದಿಂದಲೂ ಜನರು ಬರುವುದರಿಂದಾಗಿ, ಸೋಂಕು ಹರಡುವಿಕೆಯ ಪ್ರಮಾಣವನ್ನು ತಗ್ಗಿಸಲು ಕೈಗೊಳ್ಳಬೇಕಾದ ಕ್ರಮಗಳತ್ತ ಗಮನ ಹರಿಸುವಂತೆ ತಿಳಿಸಿದ್ದಾರೆ. ವಿಮಾನ, ಬಸ್ಸು, ರೈಲು ನಿಲ್ದಾಣಗಳಲ್ಲಿಯೂ ಹೆಚ್ಚಿನ ಭದ್ರತಾ ಕ್ರಮಗಳನ್ನು ಅನುಸರಿಸುವಂತೆ ಹೇಳಿದ್ದಾರೆ. ಅಲ್ಲದೆ ಹೋಂ ಕ್ವಾರಂಟೈನ್ನಲ್ಲಿರುವ ಜನರ ಬಗೆಗೆ ಎಚ್ಚರ ವಹಿಸಲು ಸೂಚಿಸಿದ್ದಾರೆ.
ಗ್ರಾಮ ಪಂಚಾಯತ್ಗಳೂ ಸಹ ತಮ್ಮ ಗ್ರಾಮಕ್ಕೆ ಸಂಬಂಧಿಸಿದಂತೆ ಇರುವ ಕ್ವಾರಂಟೈನ್ ವ್ಯಕ್ತಿಗಳ ಬಗ್ಗೆ ಗಮನ ಹರಿಸಬೇಕು. ಪೊಲೀಸ್ ಇಲಾಖೆಯೂ ಹೋಂ ಕ್ವಾರಂಟೈನ್ನಲ್ಲಿರುವ ವ್ಯಕ್ತಿಗಳ ಮನೆಯ ಸುತ್ತ ಪೊಲೀಸರನ್ನು ಇಡುವ ಮೂಲಕವೂ ಎಚ್ಚರಿಕೆ ವಹಿಸಲು ಆದೇಶ ನೀಡಿದ್ದಾರೆ. ಜೊತೆಗೆ ಅಂತಹ ಪ್ರಕರಣಗಳ ಬಗ್ಗೆ ಪ್ರತಿನಿತ್ಯ ವರದಿ ಸಲ್ಲಿಸಲು ಸೂಚಿಸಿದ್ದಾರೆ. ನಿಯಮ ಉಲ್ಲಂಘನೆ ಮಾಡಿದವರಿಗೆ ಕಠಿಣ ಕಾನೂನು ಕ್ರಮ ದಾಖಲಿಸುವಂತೆ ಸೂಚಿಸಿದ್ದಾರೆ.
ಇನ್ನು ನೆರೆ ರಾಜ್ಯಗಳಿಂದ ಅಕ್ರಮ ಪ್ರವೇಶಿಸುವವರ ಬಗ್ಗೆ ಗಮನ ಹರಿಸಬೇಕು. ಬೇರೆ ರಾಜ್ಯಗಳಿಂದ ರಾಜ್ಯದೊಳಕ್ಕೆ ಶವಗಳನ್ನು ತರದಂತೆಯೂ ಕ್ರಮ ಕೈಗೊಂಡು ಸೋಂಕು ವ್ಯಾಪಿಸುವುದನ್ನು ತಡೆಯುವಂತೆ ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.
ಈ ಸಭೆಯಲ್ಲಿ ಗೃಹಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಸೇರಿದಂತೆ ಇನ್ನೂ ಹಲವು ಗಣ್ಯರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.