ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯಬೇಕಾಗಿದ್ದ ಗ್ರಾಮ ಪಂಚಾಯತ್ ಚುನಾವಣೆಗಳನ್ನು ಮುಂದೂಡಿ ಚುನಾವಣಾ ಆಯೋಗ ಆದೇಶವನ್ನು ಹೊರಡಿಸಿದೆ.
ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿಕೆಯ ಬಗ್ಗೆ ಆಯೋಗ ಅಧಿಕೃತ ಪ್ರಕಟಣೆಯನ್ನೂ ಹೊರಡಿಸಿದ್ದು, ಕೊರೋನಾ ಪರಿಸ್ಥಿತಿಯಲ್ಲಿ ಚುನಾವಣೆಗಳ ಆಯೋಜನೆ ಕಷ್ಟವಾಗಿದ್ದು, ಆ ಕಾರಣದಿಂದಲೇ ತಾತ್ಕಾಲಿಕವಾಗಿ ಚುನಾವಣೆಗಳನ್ನು ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದೆ. ರಾಜ್ಯದ ಸುಮಾರು 6,025 ಗ್ರಾಮ ಪಂಚಾಯತ್ಗಳ ಪೈಕಿ 5,800 ಪಂಚಾಯತ್ಗಳ ಐದು ವರ್ಷದ ಅವಧಿ ಜೂನ್ 2020 ಕ್ಕೆ ಮುಕ್ತಾಯವಾಗಲಿದ್ದು, ಚುನಾವಣೆಗಳು ನಡೆಯಬೇಕಿತ್ತು. ಆದರೆ ಕೊರೋನಾ ಲಾಕ್ಡೌನ್ ಕ್ರಮಗಳಿಂದಾಗಿ ಚುನಾವಣೆಗಳನ್ನು ನಡೆಸುವುದು ಸಾಧ್ಯವಿಲ್ಲ ಎಂದೂ ತಿಳಿಸಿದೆ.
ಜೊತೆಗೆ ಈ ಸಂದರ್ಭದಲ್ಲಿ ಚುನಾವಣೆಗಳನ್ನು ಆಯೋಜಿಸಿದರೆ ಸಿಬ್ಬಂದಿ ಕೊರತೆ, ಸಾರಿಗೆ ಅವ್ಯವಸ್ಥೆ, ಕಾನೂನು ಪಾಲನೆಗಳೂ ಕಷ್ಟವಾಗಲಿದೆ. ಜೊತೆಗೆ ಸಾರ್ವಜನಿಕರ ಆರೋಗ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದ್ದು, ಚುನಾವಣೆ ಮುಂದೂಡುವುದೇ ಇವೆಲ್ಲಕ್ಕೂ ಸೂಕ್ತ ಪರಿಹಾರ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಅಸಾಧಾರಣ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ, ಮುಂದಿನ ದಿನಗಳಲ್ಲಿ ಗ್ರಾ.ಪಂ. ಚುನಾವಣೆ ಕುರಿತಂತೆ ಸಮಾಲೋಚನೆಗಳನ್ನು ನಡೆಸಿ ಕ್ರಮ ಕೈಗೊಳ್ಳಲಾಗುವುದಾಗಿಯೂ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.