ನವದೆಹಲಿ: ಭಾರತ ಸರ್ಕಾರದ ಸ್ವಚ್ಛ ಸರ್ವೇಕ್ಷಣದ ಭಾಗವಾಗಿ ನಡೆದ ಘನತ್ಯಾಜ್ಯ ಮುಕ್ತ ಪ್ರದೇಶಗಳ ಪಟ್ಟಿಯಲ್ಲಿ ಕರ್ನಾಟಕದ ಅರಮನೆ ನಗರಿ ಮೈಸೂರು ಎರಡನೇ ಬಾರಿ ಸ್ಥಾನ ಪಡೆದಿದೆ. ಸ್ವಚ್ಛ ನಗರಗಳ 5 ಸ್ಟಾರ್ ರೇಟಿಂಗ್ ಪಟ್ಟಿಯನ್ನು ನಿನ್ನೆಯಷ್ಟೇ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಅದರಲ್ಲಿ ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರು ಸಹ ಸ್ಥಾನ ಪಡೆದಿದ್ದು, ಆ ಮೂಲಕ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದೆ.
ಇನ್ನು ಮೈಸೂರು ಸೇರಿದಂತೆ ಈ ಪಟ್ಟಿಯಲ್ಲಿ ಛತ್ತೀಸ್ಘಡದ ಅಂಬಿಕಾಪುರ, ಗುಜರಾತಿನ ರಾಜ್ಕೋಟ್, ಮಧ್ಯಪ್ರದೇಶದ ಇಂಧೋರ್ ಮತ್ತು ಮಹಾರಾಷ್ಟ್ರದ ನವೀ ಮುಂಬೈ ನಗರಗಳು ಫೈವ್ ಸ್ಟಾರ್ ಗಾರ್ಬೆಜ್ ಫ್ರೀ ಸಿಟಿ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿವೆ. ತ್ರಿ ಸ್ಟಾರ್ ರೇಟಿಂಗ್ನಲ್ಲಿ ಕರ್ನೂಲ್, ತಿರುಪತಿ, ವಿಜಯವಾಡ, ನವದೆಹಲಿ, ಬಿಲಾಯ್ ನಗರ, ಅಹಮದಾಬಾದ್, ಚಂಢೀಗಡ ಸೇರಿದಂತೆ 65 ನಗರಗಳು ಸ್ಥಾನ ಪಡೆದಿವೆ. ವಡೋದರ, ದೆಹಲಿ ಕಂಟೋನ್ಮೆಂಟ್, ರೋಹ್ಟಕ್ ಸೇರಿದಂತೆ 70 ನಗರಗಳು ಸಿಂಗಲ್ ಸ್ಟಾರ್ ಪಡೆದುಕೊಂಡಿವೆ.
ಈ ಸ್ಪರ್ಧೆಯಲ್ಲಿ ದೇಶದ 1435 ನಗರಗಳು ಅರ್ಜಿ ಸಲ್ಲಿಸಿದ್ದು, ಅವುಗಳಲ್ಲಿ ಯಾವ ನಗರ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿವೆ ಎಂಬುದರ ಆಧಾರದಲ್ಲಿ ಪರಿಶೀಲಿಸಿದ ನಂತರ ಈ ಫಲಿತಾಂಶ ನೀಡಿರುವುದಾಗಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ.
ಮೈಸೂರು ಫೈವ್ ಸ್ಟಾರ್ ರೇಟಿಂಗ್ನಲ್ಲಿ ಸ್ಥಾನ ಪಡೆದಿರುವ ಬಗ್ಗೆ ಸುದ್ದಿಗೋಷ್ಠಿ ನಡೆಸಿರುವ ನಗರ ಪಾಲಿಕೆ, ಈ ರೇಟಿಂಗ್ನಲ್ಲಿ 1000 ಅಂಕಗಳಲ್ಲಿ 800 ಅಂಕಗಳನ್ನು ಮೈಸೂರು ಪಡೆದುಕೊಂಡಂತಾಗಿದ್ದು, ಮುಂದಿನ ಬಾರಿ 7 ಸ್ಟಾರ್ ರೇಟಿಂಗ್ಗೆ ಪ್ರಯತ್ನಿಸಲಾಗುವುದು. ಜೊತೆಗೆ ಈ ಬಾರಿಯ ಈ ರೇಟಿಂಗ್ ಸ್ವಚ್ಛ ನಗರಿ ಪ್ರಶಸ್ತಿ ಪಡೆಯುವ ವಿಚಾರದಲ್ಲಿಯೂ ಪೂರಕವಾಗಿ ಕೆಲಸ ಮಾಡಲಿದ್ದು, ಇನ್ನು ಒಂದೆರಡು ವಾರದಲ್ಲಿಯೇ ಸ್ವಚ್ಛನಗರಿ ಪ್ರಶಸ್ತಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಜೊತೆಗೆ, ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಶ್ರಮಿಸುತ್ತಿರುವ ಪೌರ ಕಾರ್ಮಿಕರು, ಸ್ವಚ್ಛತಾ ರಾಯಭಾರಿಗಳು, ನಗರಪಾಲಿಕೆಯ ಅಧಿಕಾರಿಗಳು,ಸದಸ್ಯರು, ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕರಿಗೆ ಪಾಲಿಕೆ ಧನ್ಯವಾದ ಅರ್ಪಿಸಿದೆ.
Mysuru has been Certified 5 Star for the Garbage Free City. Union Minister Sri @HardeepSPuri announces Star Rating of cities#StarRating is holistic evaluation across the entire Sanitation & Solid Waste Management chain starting from door-to-door collection& segregation at source pic.twitter.com/sHSunFovQh
— Pratap Simha (@mepratap) May 19, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.