ಬೆಂಗಳೂರು: ಕೊರೋನಾ ವೈರಸ್ನಿಂದಾಗಿ ಹೊರಡಿಸಲಾಗಿದ್ದ ಲಾಕ್ಡೌನ್ ಕ್ರಮಕ್ಕೆ ಪೂರಕವಾಗಿ ಸಮಯ ಸಂದರ್ಭಕ್ಕನುಸಾರವಾಗಿ ನಿಯಂತ್ರಣ ನಿಯಮಗಳಲ್ಲಿ ಅನೇಕ ಬದಲಾವಣೆಗಳನ್ನು ತರಲಾಗಿದೆ. ಅದರನ್ವಯ ಮದುವೆ ಸಮಾರಂಭಗಳಿಗೆ ಸಂಬಂಧಿಸಿದಂತೆಯೂ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಈ ಹೊಸ ನಿಯಮಗಳ ಪ್ರಕಾರ, ವಿವಾಹ ಸಮಾರಂಭ ನಡೆಸುವುದಕ್ಕೆ ಸಂಬಂಧಿಸಿದಂತೆ ಕಡ್ಡಾಯವಾಗಿ ಸರ್ಕಾರದ ಅನುಮತಿ ಪಡೆಯಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಕೆಲವೆಡೆಗಳಲ್ಲಿ ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿ ಮದುವೆ ಸಮಾರಂಭಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಹೊಸ ಆದೇಶವನ್ನು ಹೊರಡಿಸಿದೆ. ಇದಕ್ಕಾಗಿ ಹೊರಡಿಸಲಾದ 17 ಅಂಶಗಳನ್ನೊಳಗೊಂಡ ಹೊಸ ಮಾರ್ಗಸೂಚಿ ಹೀಗಿದೆ.
ಸಭೆ ಸಮಾರಂಭಗಳನ್ನು ನಡೆಸಲು ಸ್ಥಳೀಯ ಮಟ್ಟದ ಅಧಿಕಾರಿಗಳ ಅನುಮತಿ ತೆಗೆದುಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ. ಇನ್ನು ಈ ಸಮಾರಂಭಗಳಲ್ಲಿ 50 ಜನರಿಗಿಂತ ಹೆಚ್ಚು ಮಂದಿ ಭಾಗವಹಿಸುವುದನ್ನು ನಿಷೇಧಿಸಲಾಗಿದೆ. ಉತ್ತಮ ವಾತಾವರಣದಲ್ಲಿ ಕಾರ್ಯಕ್ರಮ ನಡೆಸಬೇಕು. ಸಮಾರಂಭಗಳನ್ನು ನಡೆಸಲು ಎಸಿ ರೂಂಗಳನ್ನು ಬಳಕೆ ಮಾಡುವಂತಿಲ್ಲ. ಕೊರೋನಾ ಕಂಟೇನ್ಮೆಂಟ್ ಝೋನ್ಗೆ ಸಂಬಂಧಪಟ್ಟ ವ್ಯಕ್ತಿಗಳು ಭಾಗವಹಿಸುವಂತಿಲ್ಲ. ಸಮಾರಂಭದಲ್ಲಿ ವೃದ್ಧರು, ಮಕ್ಕಳು ಮತ್ತು ಅನಾರೋಗ್ಯ ಪೀಡಿತರು, ಬಾಣಂತಿಯರು ಭಾಗವಹಿಸುವಂತಿಲ್ಲ.
ಜೊತೆಗೆ ಸಮಾರಂಭದಲ್ಲಿ ಸ್ಯಾನಿಟೈಸರ್ ಕಡ್ಡಾಯ, ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಆಗಮಿಸುವ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ, ಜ್ವರ ,ಕೆಮ್ಮು ತಪಾಸಣೆಗೆ ಕ್ರಮ, ಕನಿಷ್ಟ1 ಮೀಟರ್ ಅಂತರ ಕಾಪಾಡಿಕೊಳ್ಳುವುದು, ಕೊಠಡಿಗಳಲ್ಲಿ ಹ್ಯಾಂಡ್ ವಾಷ್, ನೀರಿನ ವ್ಯವಸ್ಥೆ, ವಾಷ್ ರೂಂ ವ್ಯವಸ್ಥೆಗಳಿರುವಂತೆಯೂ ಜಾಗ್ರತೆ ವಹಿಸುವಂತೆ ಸರ್ಕಾರ ತನ್ನ ಈ ಹೊಸ ಆದೇಶದಲ್ಲಿ ತಿಳಿಸಿದೆ. ಜೊತೆಗೆ ಸಮಾರಂಭದಲ್ಲಿ ಮದ್ಯಪಾನ, ಗುಟ್ಕಾ, ಸಿಗರೇಟ್ ಗಳ ಬಳಕೆ ನಿಷೇಧಿಸಲಾಗಿದೆ. ನೋಡಲ್ ಅಧಿಕಾರಿ ಸ್ಥಳ ಪರಿಶೀಲನೆ ನಡೆಸಿದ ನಂತರವೇ ಅಲ್ಲಿ ಸಮಾರಂಭಗಳನ್ನು ನಡೆಸುವಂತೆ ಸೂಚನೆ ನೀಡಲಾಗಿದೆ.
ಬಹಳ ಪ್ರಮುಖವಾಗಿ ಸಮಾರಂಭದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಅನ್ನು ಬಳಕೆ ಮಾಡುವಂತೆಯೂ ಈ ಮಾರ್ಗಸೂಚಿಯಲ್ಲಿ ಆದೇಶ ನೀಡಲಾಗಿದೆ. ಈ ಎಲ್ಲಾ ಕ್ರಮಗಳನ್ನು ಪಾಲಿಸಿಕೊಂಡು ಸಮಾರಂಭಗಳನ್ನು ನಡೆಸುವಂತೆ ಸರ್ಕಾರ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.