ನವದೆಹಲಿ: ಭಾರತದ ಡಿಜಿಟಲ್ ಇಂಡಿಯಾವನ್ನು ಸಾಕಾರಗೊಳಿಸುತ್ತಿರುವ ಜಿಯೋ ಫ್ಲ್ಯಾಟ್ಫಾರ್ಮ್ ಜೊತೆಗೆ ಅಮೆರಿಕಾದ ವಿಸ್ಟಾ ಇಕ್ವಿಟಿ ಪಾರ್ಟ್ನರ್ಸ್ ಎಂಬ ತಂತ್ರಾಂಶ ಮತ್ತು ತಂತ್ರಜ್ಞಾನ ಹೂಡಿಕೆ ಸಂಸ್ಥೆಯೊಂದು ಕೈ ಜೋಡಿಸಿದೆ. 11,367 ಕೋಟಿ ರೂ. ಗಳನ್ನು ಈ ಸಂಸ್ಥೆ ಹೂಡಿಕೆ ಮಾಡಲಿರುವುದಾಗಿಯೂ ರಿಲಾಯನ್ಸ್ ಸಂಸ್ಥೆ ಮಾಹಿತಿ ನೀಡಿದೆ. ಇದು ರಿಲಾಯನ್ಸ್ ಸಂಸ್ಥೆಯ ಜಿಯೋದಲ್ಲಿ ಹೂಡಿಕೆ ಮಾಡಿದ ಅಮೆರಿಕಾದ ಎರಡನೇ ಕಂಪನಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಭಾರತದ ಸಣ್ಣ ಪ್ರಮಾಣದ ಹೂಡಿಕೆದಾರರನ್ನು ಡಿಜಿಟಲ್ ಇಂಡಿಯಾದಡಿಯಲ್ಲಿ ಬರುವಂತೆ ಮಾಡುವುದು ಜಿಯೋದ ಮುಖ್ಯ ಉದ್ದೇಶ. ಈ ಹಿನ್ನೆಲೆಯಲ್ಲಿ ಕಾರ್ಯ ನಿರ್ವಹಿಸುವ ಜಿಯೋ ಡಿಜಿಟಲ್ ಇಂಡಿಯಾ ಜೊತೆಗೆ ಇದೀಗ ವಿಸ್ಟಾ ಕೈ ಜೋಡಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಮುಖೇಶ್ ಅಂಬಾನಿ, ದೇಶದ ಜನರ ಅನುಕೂಲಕ್ಕೆ ಬೇಕಾದ ಡಿಜಿಟಲ್ ಇಕೋ ಸಿಸ್ಟಂ ಅನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಈ ಬಾಂಧವ್ಯ ಕೆಲಸ ಮಾಡಲಿದೆ ಎಂದು ತಿಳಿಸಿದ್ದಾರೆ. ಈ ಕೆಲಸದಲ್ಲಿ ವಿಸ್ಟಾ ಕಂಪನಿಯೂ ಸಹಕರಿಸಲಿದೆ ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಹೂಡಿಕೆಯಿಂದ ಸಂಸ್ಥೆಯ ಈಕ್ವಿಟಿ ಮೌಲ್ಯ 4.91 ಲಕ್ಷ ಕೋಟಿ ರೂ. ಮತ್ತು ಎಂಟರ್ಪ್ರೈಸಸ್ ಮೌಲ್ಯ 5.16 ಲಕ್ಷ ಕೋಟಿ ರೂ. ಮೌಲ್ಯಗಳಿಗೆ ಕೊಂಡೊಯ್ಯಲಿದೆ. ವಿಸ್ಟಾದ ಹೂಡಿಕೆಯೂ ಸೇರಿದಂತೆ ಜಿಯೋ ಕೇವಲ ಮೂರೇ ಮೂರು ವಾರದಲ್ಲಿ 50,596.37 ಕೋಟಿ ರೂ. ಗಳಷ್ಟು ಹೂಡಿಕೆತಸಳನ್ನು ಪಡೆದಿದೆ. ಸದ್ಯ ರಿಲಾಯನ್ಸ್ ಮತ್ತು ಫೇಸ್ಬುಕ್ ನಂತರದ ಅತಿ ದೊಡ್ಡ ಹೂಡಿಕೆದಾರನ ಸ್ಥಾನವನ್ನು ವಿಸ್ಟಾ ಅಲಂಕರಿಸಿದ್ದು, ಇದು ಜಾಗತಿಕ ಮಟ್ಟದಲ್ಲಿ ಹೆಚ್ಚು ವ್ಯಾಪಿಸುವುದಕ್ಕೂ ಸಹಕಾರಿಯಾಗಲಿದೆ. ಈಗಾಗಲೇ ಜಿಯೋಗೆ 388 ದಶಲಕ್ಷಕ್ಕೂ ಅಧಿಕ ಮಂದಿ ಚಂದಾದಾರರಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರು ಜೀಯೋ ಚಂದಾದಾರರಾಗುವ ನಿರೀಕ್ಷೆಯೂ ಇದೆ.
ಜಿಯೋ ಜೊತೆಗೆ ಹೂಡಿಕೆ ಮಾಡಿರುವ ಕುರಿತಂತೆ ಮಾತನಾಡಿರುವ ವಿಸ್ಟಾದ ಸಂಸ್ಥಾಪಕ, ಅಧ್ಯಕ್ಷ ಮತ್ತು ಸಿಇಒ ಆಗಿರುವ ರಾಬರ್ಟ್ ಎಫ್. ಸ್ಮಿತ್, ಜಿಯೋದ ಜೊತೆಗೆ ಸೇರಿರುವುದು ನಮ್ಮಲ್ಲಿ ಹೊಸ ಹುರುಪು ನೀಡಿದೆ. ಜಿಯೋದ ಜೊತೆಗೆ ತಂತ್ರಜ್ಞಾನ ಕ್ರಾಂತಿಯನ್ನು ಜಾಗತಿಕ ಮಟ್ಟದಲ್ಲಿ ಮಾಡಲು ಉತ್ಸುಕರಾಗಿದ್ದೇವೆ. ವಿಶ್ವದಲ್ಲಿ ಶೀಘ್ರ ಬೆಳವಣಿಗೆ ಕಾಣುತ್ತಿರುವ ತಂತ್ರಜ್ಞಾನ, ಡಿಜಿಟಲ್ ಆರ್ಥಿಕತೆಯ ಭವಿಷ್ಯವನ್ನು ಉತ್ತಮಗೊಳಿಸಲು ಸಣ್ಣ ಪ್ರಮಾಣದ ಉದ್ದಿಮೆ, ಗ್ರಾಹಕರನ್ನೊಳಗೊಂಡಂತೆ ಕೆಲಸ ಮಾಡಲು ಸಂತೋಷಪಡುವುದಾಗಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.