ಕೋವಿಡ್-19 ನಿಂದಾಗಿ ಅದೆಷ್ಟೋ ಜನರು ತೊಂದರೆಗೀಡಾಗಿದ್ದಾರೆ. ಕೆಲವು ಜನರಿಗೆ ಕೊರೋನಾ ಆರೋಗ್ಯಕ್ಕೆ ತೊಂದರೆ ನೀಡಿದ್ದರೆ, ಇನ್ನು ಕೆಲವರ ಆರ್ಥಿಕ ಸ್ಥಿತಿಯನ್ನೇ ಬುಡಮೇಲು ಮಾಡಿದೆ. ಇಂತಹ ಸಂದರ್ಭದಲ್ಲಿ ಅದೆಷ್ಟೋ ಸಹೃದಯಿಗಳು ಆಹಾರ ಒದಗಿಸಿಕೊಳ್ಳುವುದಕ್ಕೂ ಕಷ್ಟ ಪಡುತ್ತಿರುವ ಜನರಿಗೆ ಸಹಾಯ ಮಾಡುವ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿದ್ದಾರೆ ಸೆಲೆಬ್ರಿಟಿ ಚೆಫ್ ವಿಕಾಸ್ ಖನ್ನಾ.
ಪ್ರಸ್ತುತ ನ್ಯೂಯಾರ್ಕ್ನಲ್ಲಿ ಇರುವ ವಿಕಾಸ್, ಅಲ್ಲಿಂದಲೇ ಬಡ ಜನರಿಗೆ ಆಹಾರ ಸಂಗ್ರಹಿಸಿ ನೀಡುವ ಕೆಲಸ ಮಾಡುತ್ತಿದ್ದಾರೆ. ಆರಂಭದಲ್ಲಿ ಅಲಿಘರ್ನ ಕುಟುಂಬವೊಂದು ಆಹಾರವಿಲ್ಲದೆ ಕಷ್ಟಪಡುವುದನ್ನು ಮನಗಂಡ ವಿಕಾಸ್, ಇಫ್ತಾರ್ಗೂ ಮುನ್ನ ಆ ಕುಟುಂಬಕ್ಕೆ ಆಹಾರ ಒದಗಿಸಿಕೊಡುವ ಭರವಸೆಯನ್ನು ನೀಡುತ್ತಾರೆ. ಆದರೆ ಆ ಭರವಸೆಯನ್ನು ಪೂರೈಸಲಾಗಲಿಲ್ಲ. ನಂತರದಲ್ಲಿ ವಾಟ್ಸಾಪ್ ಮೂಲಕವೂ ಅಶಕ್ತರಿಗೆ ನೆರವಾಗುವ ವಿಚಾರದಲ್ಲಿ ಮೋಸ ಹೋದ ಇವರು ನಂತರದ ದಿನಗಳಲ್ಲಿ ಎಚ್ಚರಿಕೆಯಿಂದ ಸಹಾಯ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ.
ಭಾರತದ ಹಲವು ಜನರನ್ನು ಸಂಪರ್ಕಿಸಿ, ಹಲವು ಸ್ವಯಂ ಸೇವಾ ಸಂಸ್ಥೆಗಳ ನೆರವು ಪಡೆದುಕೊಂಡು ಬಡವರಿಗೆ ಸರಿಯಾದ ರೀತಿಯಲ್ಲಿ, ಅಗತ್ಯವುಳ್ಳವರಿಗೆ ಆಹಾರ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಜನರ ಮತ್ತು ಎನ್ಜಿಒಗಳ ಸಹಾಯದಿಂದಲೇ ದೇಶದ ಬಡ ಜನರಿಗೆ ಅಗತ್ಯ ದಿನಸಿ ವಸ್ತುಗಳನ್ನು ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಲದೆ ಸಹಾಯ ಯಾಚಿಸಿ ಕರೆ ಮಾಡುವ ಜನರಿಗೆ, ಅಗತ್ಯವುಳ್ಳವರ ಮಾಹಿತಿ ನೀಡಿದವರ ಮೂಲಕವೂ ವಿಕಾಸ್ ಅವರು ಸಹಾಯ ಮಾಡಲು ಟೊಂಕಕಟ್ಟಿ ನಿಂತಿದ್ದಾರೆ.
ಹಸಿದವರಿಗೆ ಅನ್ನ ನೀಡುವುದು ಮಾತ್ರವಲ್ಲದೆ, ದೀನನಾಥ್ ಮಂಗೇಶ್ಕರ್ (ಲತಾ ಮಂಗೇಶ್ಕರ್ ಅವರ ತಂದೆ) ರ ಸ್ಮರಣಾರ್ಥ ಕಟ್ಟಿಸಲಾದ ಆಸ್ಪತ್ರೆಗೆ 1,000 ಪಿಪಿಇ ಕಿಟ್ಗಳನ್ನು ನೀಡುವ ಮೂಲಕವೂ ಕೊರೋನಾ ವಾರಿಯರ್ಸ್ಗೆ ಸಹಾಯ ಮಾಡಿದ್ದಾರೆ. ಇದನ್ನು ಸ್ಮರಿಸಿ ಲತಾ ಮಂಗೇಶ್ಕರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅವರಿಗೆ ಧನ್ಯವಾದ ಸಮರ್ಪಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ವಿಕಾಸ್, ಕೊರೋನಾದಿಂದ ತಾನು ತನ್ನ ಆಂಟಿ ಮತ್ತು ಅನೇಕ ಸ್ನೇಹಿತರನ್ನು ಕಳೆದುಕೊಂಡಿದ್ದೇನೆ. ಈ ನೋವು ಏನೆಂದು ನನಗೆ ಗೊತ್ತು. ಆದ್ದರಿಂದ ಇಂತಹ ಸಮಾಜಕ್ಕೆ ಬೇಕಾದ ಸಹಾಯ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಆ ಮೂಲಕ ಮನಸ್ಸಿದ್ದರೆ ಮಾರ್ಗ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.