ಭಾರತೀಯ ಜೀವನ ಪದ್ಧತಿ, ನಮಸ್ಕಾರ, ಯೋಗ ಮತ್ತು ಆಯುರ್ವೇದ ಇತ್ಯಾದಿಗಳು ವಿಶ್ವವ್ಯಾಪಿ ಮಹತ್ವ ಪಡೆಯುತ್ತಿವೆ
ಕೋವಿಡ್-19 ಸಂಬಂಧಿಸಿದಂತೆ ಭಾರತ ತೆಗೆದುಕೊಂಡ ನಿರ್ಧಾರಗಳ ಪರಿಣಾಮವಾಗಿ ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಕೆ ಮಾಡಿದಲ್ಲಿ ಕೊರೊನಾ ಇಲ್ಲಿ ಹೆಚ್ಚು ತೀವ್ರವಾಗಿ ಬಾಧಿಸಿಲ್ಲ. ಲಾಕ್ಡೌನ್ 1 ಮತ್ತು 2, ಕ್ವಾರಂಟೈನ್, ವಿಮಾನ ನಿಲ್ದಾಣಗಳಲ್ಲಿ ತಪಾಸಣೆ, ವೈದ್ಯಕೀಯ ಮತ್ತು ಔಷಧಗಳ ವ್ಯವಸ್ಥೆ ಹೀಗೆ ಹಲವಾರು ವಿಷಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ತೆಗೆದುಕೊಂಡ ಕಠಿಣ ಮತ್ತು ಸೂಕ್ತ ಕ್ರಮಗಳ ಬಗ್ಗೆ ವಿಶ್ವ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ಮೇರೆಗೆ ಜನವರಿ ಮೊದಲ ವಾರದಲ್ಲಿ ಪ್ರಧಾನಿ ನೇತೃತ್ವದಲ್ಲಿ ಕೋವಿಡ್ಗೆ ಸಂಬಂಧಿಸಿ ಎಲ್ಲ ಮುಖ್ಯ ಕಾರ್ಯದರ್ಶಿಗಳ ಪ್ರಥಮ ಸಭೆ ಜರುಗಿತು. ಜ. 17 ರಿಂದಲೇ ಚೀನಾದಿಂದ ಭಾರತಕ್ಕೆ ಆಗಮಿಸುವವರ ಆರೋಗ್ಯ ತಪಾಸಣೆ ಪ್ರಾರಂಭಿಸಲಾಯಿತು. ಶಂಕಿತರನ್ನು ಕ್ವಾರಂಟೈನ್ಗೆ ಒಳಪಡಿಸಲಾಯಿತು. ಜನವರಿ ಕೊನೆಯಲ್ಲಿ ಮತ್ತೆ ಪ್ರಧಾನಿ ಮುಖ್ಯ ಕಾರ್ಯದರ್ಶಿಗಳ ಪುನರ್ ಪರಿಶೀಲನಾ ಸಭೆ ನಡೆಸಿ, ಎನ್-95 ಮಾಸ್ಕ್ ಮತ್ತು ಪಿಪಿಎ ಕಿಟ್ಗಳ ರಫ್ತು ನಿಷೇಧಿಸಿದರು. ಜ.30 ರಂದು ಭಾರತದಲ್ಲಿ ಮೊದಲ ಕೋವಿಡ್ ಪಾಸಿಟಿವ್ ಪ್ರಕರಣ ಕಂಡು ಬಂದಾಗ ಕೊರೋನಾ ಪರೀಕ್ಷೆಗೆ 6 ಲ್ಯಾಬ್ ಮತ್ತು 6 ಕ್ವಾರಂಟೈನ್ಗಳು ಕಾರ್ಯ ನಿರ್ವಹಿಸುತ್ತಿದ್ದವು. ಫೆಬ್ರವರಿ ಪ್ರಾರಂಭದಿಂದಲೇ ಭಾರತದಿಂದ ಚೀನಾ ಪ್ರವಾಸ ನಿಷೇಧಿಸಲಾಯಿತು. ನಂತರದ ದಿನಗಳಲ್ಲಿ ಸಿಂಗಾಪುರ, ದ. ಕೊರಿಯಾ ಮತ್ತು ಇಟಲಿಗಳಿಂದ ಆಗಮಿಸುವವರನ್ನು ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಆದೇಶ ಹೊರಡಿಸಲಾಯಿತು. ಫೆಬ್ರವರಿ 2ನೇ ವಾರದಲ್ಲಿ ಕೇವಲ 3 ಪಾಸಿಟಿವ್ ಪ್ರಕರಣ ಕಂಡುಬಂದಿದ್ದರೂ ಮುಂಜಾಗ್ರತಾ ಕ್ರಮವಾಗಿ 1.39 ಕೋಟಿ ಜನರನ್ನು ಸ್ಕ್ರೀನಿಂಗ್ ಮಾಡಲಾಗಿತ್ತು ಮತ್ತು 7000 ಜನರನ್ನು ಗುರುತಿಸಿ ನಿಗಾ ಇಡಲಾಗಿತ್ತು.
ಮಾ.3ರ ವರೆಗೆ ಭಾರತದಲ್ಲಿ ಒಟ್ಟು 6 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ವಿದೇಶದಿಂದ ಆಗಮಿಸುವ ಎಲ್ಲರ ವೈದ್ಯಕೀಯ ಪರೀಕ್ಷೆ ಮಾಡುವ ಕ್ರಮ ಕೈಗೊಳ್ಳಲಾಯಿತು. ಶಂಕಿತರನ್ನು 14 ದಿನಗಳ ಹೋಮ್ ಕ್ವಾರಂಟೈನ್ಗೆ ಸೂಚಿಸಲಾಯಿತು. ಪ್ರಧಾನಿ ಹೋಳಿ ಆಚರಣೆ ರದ್ದುಗೊಳಿಸಿದರು. ಮಾ.15ರ ವರೆಗೆ ಭಾರತದಲ್ಲಿ ಕೋವಿಡ್ ಪರೀಕ್ಷೆಗೆ 52 ಲ್ಯಾಬ್ ಸಿದ್ಧಪಡಿಸಲಾಗಿತ್ತು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದವು. ಸಾರ್ವಜನಿಕವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಜಾಹೀರಾತು ಮತ್ತು ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಯಿತು. ಎಲ್ಲ ಪ್ರವಾಸಿ ತಾಣ ವೀಕ್ಷಣೆ ನಿರ್ಬಂಧಿಸಲಾಯಿತು. ವಿದೇಶಗಳಲ್ಲಿದ್ದ ಭಾರತೀಯರನ್ನು ಮರಳಿ ಸ್ವದೇಶಕ್ಕೆ ಕರೆತರಲಾಯಿತು. ಸಾರ್ಕ್ ಒಕ್ಕೂಟ ಸಭೆ ಆಯೋಜಿಸಿ, ಪ್ರಧಾನಿ ಮೋದಿ 15 ಸಾವಿರ ಕೋಟಿ ಅನುದಾನ ಘೋಷಿಸಿದರು. ಜಿ-20 ದೇಶಗಳ ಸಭೆ ಕರೆದು ಚರ್ಚಿಸಿದರು. ಮಾ. 19 ರ ವರೆಗೆ ಭಾರತದಲ್ಲಿ 200 ಪಾಸಿಟಿವ್ ಪ್ರಕರಣ ದಾಖಲಾಯಿತು. ಮಾ.19 ರಂದು ಎಕಾನಾಮಿಕ್ ಟಾಸ್ಕ್ ಫೋರ್ಸ್ ರಚಿಸಿದ್ದಷ್ಟೇ ಅಲ್ಲದೆ ಮಾಧ್ಯಮಗಳ ಮೂಲಕ ಪ್ರಧಾನಿ ಮಾ. 22 ರಂದು ಜನತಾ ಕರ್ಫ್ಯೂಗೆ ಕರೆ ನೀಡಿದರು. ಅದಕ್ಕೆ ವ್ಯಾಪಕ ಬೆಂಬಲ ದೇಶದ ಜನರಿಂದ ವ್ಯಕ್ತವಾಯಿತು.
ಮಾ. 22 ರಿಂದ ಅಂತಾರಾಷ್ಟ್ರೀಯ ವಿಮಾನಯಾನ ರದ್ದುಗೊಳಿಸಲಾಯಿತು. ಮಾರ್ಚ್ 3ನೇ ವಾರದಲ್ಲಿ ಕೊರೊನಾ ವ್ಯಾಪಕತೆ ಹೆಚ್ಚಾಗುತ್ತಿದ್ದಂತೆ ಲಾಕ್ಡೌನ್ ಘೋಷಿಸಿ ಹರಡುವಿಕೆಯ ಸರಪಳಿಗೆ ತಡೆ ಹಾಕಲಾಯಿತು. ನಂತರದ ದಿನಗಳಲ್ಲಿ ಲಾಕ್ಡೌನ್-1, ಲಾಕ್ಡೌನ್-2 ನಿರ್ಧಾರಗಳನ್ನು ಘೋಷಿಸಿದಾಗಲೂ ಸಮಸ್ತ ಭಾರತೀಯರು ಲಾಕ್ಡೌನ್ಗೆ ಬೆಂಬಲ ನೀಡಿದರು; ಸಂಯಮ ಮತ್ತು ಶಿಸ್ತು ಕಾಪಾಡಿಕೊಂಡು ಬಂದರು. ಶಕ್ತಿಶಾಲಿ ರಾಷ್ಟ್ರಗಳಾದ ಅಮೆರಿಕ, ಬ್ರೆಜಿಲ್, ಸ್ಪೇನ್, ಇಟಲಿ, ಲಂಡನ್ ಮತ್ತು ಫ್ರಾನ್ಸ್ ದೇಶಗಳಲ್ಲಿ ಸೋಂಕಿತರ ಸಂಖ್ಯೆ ಲಕ್ಷ ದಾಟಿದ್ದರೆ, ಮೃತರ ಸಂಖ್ಯೆ ಐದಂಕಿ ದಾಟಿವೆ.
ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಸಂಶೋಧನೆಗಳಾಗುತ್ತಿವೆ. ದಿಲ್ಲಿ ಐಐಟಿ ಸೇರಿದಂತೆ ವಿವಿಧ ಸಂಶೋಧನಾ ಕೇಂದ್ರಗಳು ಕೊರೊನಾ ಪರೀಕ್ಷಾ ಕಿಟ್ಗಳ ತಯಾರಿಕೆಗೆ ಮುಂದಾಗಿವೆ. ಮೇ ತಿಂಗಳಲ್ಲಿ ರ್ಯಾಪಿಡ್ ಪರೀಕ್ಷೆಗೆ ಅವಶ್ಯವಿರುವ ಲಕ್ಷಾಂತರ ಕಿಟ್ಗಳು ದೊರೆಯುತ್ತವೆ. ಫೆಬ್ರವರಿಯಲ್ಲಿ ಪರೀಕ್ಷೆಗೆ ಕೇವಲ 3 ಲ್ಯಾಬ್ಗಳಿದ್ದವು; ಇಂದು 372ಕ್ಕೂ ಹೆಚ್ಚು ಲ್ಯಾಬ್ಗಳನ್ನು ಸಿದ್ಧಪಡಿಸಲಾಗಿದೆ. ಮೇ ಅಂತ್ಯದವರೆಗೆ 750 ಲ್ಯಾಬ್ ಸ್ಥಾಪನೆಯ ಗುರಿ ಹೊಂದಲಾಗಿದೆ. ದೇಶದಲ್ಲಿ 19 ಸಾವಿರ ವೆಂಟಿಲೇಟರ್ಗಳನ್ನು ಕೋವಿಡ್ಗೆ ಮೀಸಲಿರಿಸಿದೆ. ಮೇ ತಿಂಗಳ ಅಂತ್ಯದವರೆಗೆ ಇನ್ನೂ 30 ಸಾವಿರ ದೊರೆಯಲಿವೆ. 22 ಲಕ್ಷ ಎನ್95 ಮಾಸ್ಕ್ಗಳನ್ನು ಒದಗಿಸಲಾಗಿದೆ. ಭಾರತ ಬಡರಾಷ್ಟ್ರಗಳಿಗೆ ನೆರವು ನೀಡುತ್ತಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಒದಗಿಸಿ ಸಂಜೀವಿನಿಯಾಗಿದೆ.
ಭಾರತದ ಬಯೊಟೆಕ್ನಾಲಜಿ ವಿಭಾಗವು ಕೋವಿಡ್ ಲಸಿಕೆ ಸಂಶೋಧನೆಗಾಗಿ ಕ್ಯಾಂಡಿಲಾ ಇಂಡಿಯಾ ಲಿಮಿಟೆಡ್, ಸೆರ್ಮನ್ ಇನ್ಸ್ಟಿಟ್ಯೂಟ್ ಮತ್ತು ಭಾರತ ಲ್ಯಾಬ್ ಎಂಬ ಸಂಸ್ಥೆಗಳಿಗೆ ಹಣಕಾಸಿನ ನೆರವು ನೀಡುತ್ತಿದೆ. ಕೋವಿಡ್ ವೈರಸ್ನ ಮೂರು ಸರಣಿಗಳಿರುವುದನ್ನು ಪತ್ತೆ ಹಚ್ಚಲಾಗಿದೆ. ಆಯುಷ್ ವಿಭಾಗದ ಮೂಲಕ ಮಾನವನ ರೋಗನಿರೋಧಕ ಶಕ್ತಿ ವೃದ್ಧಿಗೆ ಔಷಧೋಪಚಾರಗಳನ್ನು ಅಭಿವೃದ್ಧಿಪಡಿಸಲಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೊಬೋಟ್ಗಳನ್ನು ಸೋಂಕಿತರಿಗೆ ಔಷಧ, ಆಹಾರ ನೀಡುವ ಕಾರ್ಯಗಳಲ್ಲಿ ಬಳಸಲಾಗುತ್ತಿದೆ. ಎನ್95 ಮಾಸ್ಕ್, ಗುಣಮಟ್ಟದ ಪಿಪಿಇ ಕಿಟ್ಗಳ ತಯಾರಿಕೆಯಲ್ಲಿ ದೇಶ ಸ್ವಾವಲಂಬಿಯಾಗಿದೆ.
ಪಂಜಾಬ್ನಲ್ಲಿ ಈ ಬಾರಿ ಒಂದೂವರೆ ಪಟ್ಟು ಹೆಚ್ಚು ಗೋಧಿಯ ಇಳುವರಿ ಬಂದಿದ್ದು, ಭಾರತೀಯ ರೈಲ್ವೆ ಅದರ ಸಾಗಣೆಗಾಗಿ 84 ಬೋಗಿಗಳನ್ನು ಮೀಸಲಿಟ್ಟಿದೆ. ಗೂಡ್ಸ್ ರೈಲುಗಳು ಅವಶ್ಯಕ ವಸ್ತುಗಳ ಸಾಗಾಟ ಮಾಡುತ್ತಿವೆ. 70ಕ್ಕೂ ಹೆಚ್ಚು ಅನ್ನಪೂರ್ಣ ಗೂಡ್ಸ್ ರೈಲು ಪ್ರತಿನಿತ್ಯ ತಮ್ಮ ಮೂರುಪಟ್ಟು ಹೆಚ್ಚಿನ ವೇಗದಲ್ಲಿ ಸಂಚರಿಸುತ್ತಿವೆ. ಕ್ವಾರಂಟೈನ್ಗಾಗಿ ದೇಶದ ಬಹುತೇಕ ಕಡೆ ರೈಲ್ವೆ ಬೋಗಿಗಳನ್ನು ಆಸ್ಪತ್ರೆಗಳನ್ನಾಗಿ ಸಿದ್ಧಪಡಿಸಲಾಗಿದೆ.
ಮಾರ್ಚ್ ಮತ್ತು ಏಪ್ರಿಲ್ ತಿಂಗಳು ದೇಶಕ್ಕೆ ಶೇ.30ರಷ್ಟು ಜಿಡಿಪಿ ಒದಗಿಸುವ ಮಾಸಗಳಾಗಿವೆ. ಆ ತಿಂಗಳಲ್ಲಿ ದೇಶದ ಬಹುತೇಕ ಧಾರ್ಮಿಕ ಹಬ್ಬಗಳು, ಜಾತ್ರೆ, ರಥೋತ್ಸವ, ಮದುವೆ ಸಮಾರಂಭಗಳು ನಡೆಯುತ್ತವೆ. ಕೈಗಾರಿಕಾ ವಲಯಗಳಲ್ಲಿಹೆಚ್ಚಿನ ಉತ್ಪಾದನೆಯಾಗುತ್ತದೆ. ಆದರೆ ಈ ತಿಂಗಳಲ್ಲಿ ಲಾಕ್ಡೌನ್ ಇರುವ ಕಾರಣ ದೇಶದ ಜಿಡಿಪಿ ಕುಸಿಯುವ ಸಾಧ್ಯತೆಯಿದೆ. ಮೂರು ಹಂತದಲ್ಲಿ ಕೇಂದ್ರ ಸರಕಾರ ಜನರ ನೆರವಿಗೆ ಅನೇಕ ಕ್ರಮ ತೆಗೆದುಕೊಂಡಿದೆ. ಗರೀಬ್ ಕಲ್ಯಾಣ ಆರ್ಥಿಕ ಪ್ಯಾಕೇಜ್ ಅಡಿಯಲ್ಲಿ 20.02 ಕೋಟಿ ಮಹಿಳೆಯರ ಜನಧನ ಖಾತೆಗಳಿಗೆ ರೂ.500ರಂತೆ ಮೂರು ತಿಂಗಳು ಸಂದಾಯ ಮಾಡಲಿದ್ದಾರೆ. ಕಿಸಾನ್ ಸನ್ಮಾನ್ ನಿಧಿಯ ಮೊದಲ ಕಂತು ರೂ.2000 ಅನ್ನು 8 ಕೋಟಿ ರೈತರ ಖಾತೆಗೆ ಸಂದಾಯ ಮಾಡಲಾಗಿದೆ. 8 ಕೋಟಿ ಕುಟುಂಬಗಳಿಗೆ ಉಜ್ವಲ ಸಿಲಿಂಡರ್ ಮೂರು ತಿಂಗಳು ಉಚಿತವಾಗಿ ನೀಡಲಾಗುತ್ತದೆ. 2.8 ಕೋಟಿ ದಿವ್ಯಾಂಗ, ವಿಧವೆ ಮತ್ತು ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿ ಹೆಚ್ಚುವರಿ ಒಂದು ಸಾವಿರ ರೂಪಾಯಿ ಮೂರು ತಿಂಗಳು ನೀಡಲಾಗುತ್ತಿದೆ. 2.17 ಕೋಟಿ ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ತಿಂಗಳಿಗೆ 1500 ರೂ. ಸಹಾಯಧನ ನೀಡಲಾಗುತ್ತಿದೆ.
ಕೋವಿಡ್ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ದಾದಿಯರಿಗೆ 50 ಲಕ್ಷ ಮೌಲ್ಯದ ವಿಮೆ ನೀಡಲಾಗುತ್ತಿದೆ. 15 ಸಾವಿರ ಕೋಟಿ ಅನುದಾನವನ್ನು ಪ್ರತಿ ರಾಜ್ಯಗಳಿಗೆ ನೀಡಲಾಗಿದ್ದು ಆರೋಗ್ಯ ಸೌಲಭ್ಯ ಬಳಕೆ ಮತ್ತು ಸುಧಾರಣೆಗೆ ಮಹತ್ವ ನೀಡಲು ಕೇಂದ್ರ ಸೂಚನೆ ನೀಡಿದೆ. ಐಟಿ ರಿಟರ್ನ್, ಜಿಎಸ್ಟಿ ಮತ್ತು ಇಎಂಐ ಕಂತು ತುಂಬುವುದಕ್ಕೆ ಮೂರು ತಿಂಗಳು ಅವಕಾಶ ಕಲ್ಪಿಸಲಾಗಿದೆ. ಆರ್ಬಿಐ ಕೂಡಾ ಲಘು ಮತ್ತು ಮಧ್ಯಮ ಉದ್ಯಮದಾರರಿಗೆ ಸಹಾಯಾರ್ಥ ಬಡ್ಡಿ ನೀಡಲು 50 ಸಾವಿರ ಕೋಟಿ ಹಣವನ್ನು ವಿವಿಧ ಹಣಕಾಸು ಸಂಸ್ಥೆಗಳಿಗೆ ನೀಡಿದೆ. ಮ್ಯೂಚುವಲ್ ಫಂಡ್ನಲ್ಲಿ ಹಣ ಹೂಡಿಕೆಗೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಗೆ ಚೈತನ್ಯ ತುಂಬಲು ಆರ್ಬಿಐ ಅನೇಕ ಕ್ರಮಗಳನ್ನು ಕೈಗೊಂಡಿದೆ.
ಈ ಎಲ್ಲ ಅನುದಾನ ಮತ್ತು ಸಹಾಯ ಈ ವಿಷಮ ಪರಿಸ್ಥಿತಿಯಲ್ಲಿ ಕಡುಬಡವರ ಜೀವನೋಪಾಯಕ್ಕೆ ಮತ್ತು ಮುಂದಿನ ದಿನಗಳ ಅರ್ಥಿಕ ಚೈತ್ಯನಕ್ಕೆ ಅಲ್ಪ ಪ್ರಮಾಣದ ನೆರವು ಎಂದು ಹೇಳಬಹುದು. ಈ ಲಾಕ್ಡೌನ್ ಸಂದರ್ಭದಲ್ಲಿ ನಾವು ಬದುಕುಳಿಯುವುದಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ನಂತರದ ದಿನಗಳಲ್ಲಿ ಬದುಕು ಸಾಗಿಸಲು ಅವಶ್ಯವಿರುವ ಸಂಗತಿಗಳಿಗೆ ಸಂದರ್ಭಕ್ಕೆ ತಕ್ಕಂತೆ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಮುಂದಾಗಲಿದೆ. ಲಾಕ್ಡೌನ್ನ 45 ದಿನಗಳ ಜೀವ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಬಹುತೇಕ ಯಶಸ್ಸನ್ನು ಭಾರತ ಕಂಡಿದೆ. ಬದುಕು ಕಟ್ಟಿಕೊಳ್ಳಲು ಮುಂದಿನ ಆರು ತಿಂಗಳು ಅತ್ಯಂತ ನಿರ್ಣಾಯಕ ಹೋರಾಟ ಎಲ್ಲರೂ ಮಾಡಬೇಕಿದೆ. ಸತತ ಹೋರಾಟದ ಫಲದಿಂದ ಮೂರು ವರ್ಷಗಳ ತರುವಾಯ ಭಾರತ ವಿಶ್ವಶಕ್ತಿಯಾಗಿ ಬೆಳೆಯುವುದರಲ್ಲಿ ಸಂದೇಹವಿಲ್ಲ.
130 ಕೋಟಿ ಜನಸಂಖ್ಯೆ, 8.25 ಗ್ರಾಮಗಳು, ಪ್ರಜಾಪ್ರಭುತ್ವ, ಬಹುಪಕ್ಷ ಆಡಳಿತ ರಾಜಕೀಯ ವ್ಯವಸ್ಥೆ, ಅಧಿಕಾರ ವಿಕೇಂದ್ರಿಕರಣ, ವಿವಿಧ ರಾಜ್ಯಗಳಲ್ಲಿ 10 ಕ್ಕೂ ಹೆಚ್ಚು ರಾಜಕೀಯ ಪಕ್ಷಗಳ ಆಡಳಿತ ಹೀಗೆಲ್ಲಾ ಇದ್ದರೂ, ಪಶ್ಚಿಮ ಬಂಗಾಳ ರಾಜ್ಯ ಹೊರತುಪಡಿಸಿ ಸಂಪೂರ್ಣ ಭಾರತ ‘ಒಂದು ದೇಶ ಒಂದು ಆಡಳಿತ ವ್ಯವಸ್ಥೆ’ ಎಂಬ ನೀತಿಯಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಸಾಗುತ್ತಿದೆ. ಸಾವಿರಾರು ವಲಸೆ ಕಾರ್ಮಿಕರು ತಮ್ಮ ಸ್ವಂತ ಊರಿಗೆ ಹೋಗಲು ಮುಂದಾಗಿದ್ದರೂ, ಸರಕಾರದ ವಿರುದ್ಧ ಯಾವುದೇ ದೂರು ಹೊಂದಿರಲಿಲ್ಲ. ಇದು ನಮ್ಮ ಪ್ರಜೆಗಳ ಸಂಯಮ ಮತ್ತು ಶಿಸ್ತಿನ ಜೊತೆಗೆ ಪ್ರಧಾನಿಗಳ ದಿಟ್ಟ ಆಡಳಿತ ಸೂತ್ರ ತೋರುತ್ತದೆ. ಎಲ್ಲಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ಅಧಿಕಾರಿ ವರ್ಗ, ವೈದ್ಯಕೀಯ ಇಲಾಖೆ, ಸ್ಥಳೀಯ ಸಂಸ್ಥೆಗಳು, ಪೊಲೀಸ್ ವ್ಯವಸ್ಥೆ ಇವೆಲ್ಲವೂ ಪರಸ್ಪರ ಸಹಕಾರದೊಂದಿಗೆ ಈ ವಿಪತ್ತಿನಲ್ಲಿ ಕಾರ್ಯ ನಿರ್ವಹಿಸಿರುವುದನ್ನು ಕಂಡರೆ, ಭಾರತದ ಆಡಳಿತ ವ್ಯವಸ್ಥೆಯಲ್ಲಿ ಅಡಗಿದ ಅದಮ್ಯ ಶಕ್ತಿಯ ಪರಿಚಯವಾಗುತ್ತದೆ.
ಭಾರತೀಯ ಜೀವನ ಪದ್ಧತಿ, ಕೈ ಜೋಡಿಸುವ ನಮಸ್ಕಾರ ಆಚರಣೆ, ಯೋಗ ಮತ್ತು ಆಯುರ್ವೇದ ಮಹತ್ವ ಹೀಗೆ ಅನೇಕ ಸಂಗತಿಗಳು ವಿಶ್ವವ್ಯಾಪಿ ಮಹತ್ವ ಪಡೆಯುತ್ತಿವೆ. ಕೊರೊನಾ ಸಂಕಟ ಅನೇಕ ಪ್ರಶಿಕ್ಷಣವನ್ನು ಭಾರತ ಸರಕಾರಕ್ಕೆ ಮತ್ತು ಭಾರತೀಯರಿಗೆ ನೀಡಿದೆ. ಸ್ವಾವಲಂಬನೆಯ ಮಹತ್ವ ತಿಳಿಸಿಕೊಟ್ಟಿದೆ. ಚೀನಾ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಪರಿಣಾಮ ಅನೇಕ ರಾಷ್ಟ್ರಗಳು ತಮ್ಮ ಉದ್ಯಮಗಳನ್ನು ಚೀನಾದಿಂದ ಸ್ಥಳಾಂತರಿಸಲು ಮುಂದಾಗಿವೆ. ಈ ಅವಕಾಶವ ಸದುಪಯೋಗ ಪಡಿಸಿಕೊಳ್ಳುವತ್ತ ಸರಕಾರ ಗಮನ ನೀಡಿದೆ. ಭಾರತೀಯರಲ್ಲಿ ಸ್ವದೇಶಿ ವಸ್ತುಗಳ ಬಳಕೆ ಬಗ್ಗೆ ಜಾಗೃತಿ ಮೂಡಿದೆ. ಒಟ್ಟಾರೆ ಈಗಿನ ಸನ್ನಿವೇಶ ಇಡೀ ವಿಶ್ವ ಭಾರತದತ್ತ ಹೊರಳಿ ನೋಡಲು, ಭಾರತ ತನ್ನ ಸಿಂಹಾವಲೋಕನ ಮಾಡಿಕೊಳ್ಳಲು ಕಾರಣವಾಗಿದೆ ಎಂದರೆ ತಪ್ಪಲ್ಲ.
✍️ ಬಿ.ಎಲ್. ಸಂತೋಷ್
ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ, ಬಿಜೆಪಿ
ಕೃಪೆ : ವಿಜಯ ಕರ್ನಾಟಕ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.