ನವದೆಹಲಿ : ಸಾಂಕ್ರಾಮಿಕ ರೋಗ ಎಂದೇ ಪರಿಗಣಿತವಾಗಿ ಜಗತ್ತನ್ನೇ ನಡುಗಿಸಿರುವ ಕೊರೋನಾಗೆ ಅದೆಷ್ಟೋ ಮಂದಿ ಬಲಿಯಾಗಿದ್ದಾರೆ. ಭಾರತದಲ್ಲಿಯೂ ತನ್ನ ಅಟ್ಟಹಾಸ ಮೆರೆಯುತ್ತಿರುವ ಕೋವಿಡ್ -19 ಜೀವ, ಜೀವನ ಬಲಿ ಪಡೆದಿದೆ. ಇಂತಹ ತುರ್ತು ಸಂದರ್ಭದಲ್ಲಿ ದೇಶದ ಆರೋಗ್ಯ ರಕ್ಷಣಾ ಸಿಬ್ಬಂದಿ ಮತ್ತು ಪೊಲೀಸರನ್ನು ಹೊರತುಪಡಿಸಿ ಉಳಿದೆಲ್ಲರೂ ಲಾಕ್ಡೌನ್ ಕ್ರಮದಿಂದಾಗಿ ಮನೆಯಲ್ಲಿದ್ದಾರೆ. ಪೊಲೀಸರು ಬೀದಿ ಬೀದಿಗಳಲ್ಲಿ ನಿಂತು ತಮ್ಮ ಜೀವ, ಜೀವನವನ್ನು ಲೆಕ್ಕಿಸದೆ ಜನರು ನಿಯಮಗಳನ್ನು ಪಾಲಿಸುವಂತೆ ನೋಡಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನವದೆಹಲಿಯ ಸಂಸ್ಕೃತ ಶಾಲೆಯೊಂದರ ವಿದ್ಯಾರ್ಥಿಗಳು ವಾಟ್ಸಾಪ್ ಗ್ರೂಪ್ ಒಂದನ್ನು ಆರಂಭಿಸಿ, ಸುಮಾರು 2.5 ಲಕ್ಷ ದೇಣಿಗೆ ಸಂಗ್ರಹಿಸಿ, ಆ ಹಣದಿಂದ ಅರಕ್ಷಕ ಸಿಬ್ಬಂದಿಗಳಿಗೆ 1000 ಲೀ. ಸ್ಯಾನಿಟೈಸರ್ ನೀಡುವ ಕೆಲಸ ಮಾಡಿದ್ದಾರೆ.
ರಾಷ್ಟ್ರ ರಾಜಧಾನಿಯ ಸಂಸ್ಕೃತ ಶಾಲೆಯ ಶುನಕ್ ಮೆಲ್ಹೋತ್ರಾ ಲಾಕ್ಡೌನ್ ನಂತರದಲ್ಲಿ ಆರಂಭಿಸಿದ ವಾಟ್ಸಾಪ್ ಗ್ರೂಪ್ ‘ಪ್ರೊಟೆಕ್ಟ್ ದ ಪ್ರೊಟೆಕ್ಟರ್ಸ್’ ಮೂಲಕ ಆರಂಭವಾದ ಈ ಸಮಾಜ ಸ್ನೇಹಿ ಕಾರ್ಯ, ಇಂದು ನಗರದ ಸುಮಾರು 187 ಆರಕ್ಷಕ ಠಾಣೆಗಳಿಗೆ 2.5 ಲಕ್ಷ ಹಣದಲ್ಲಿ 1000 ಲೀ. ಸ್ಯಾನಿಟೈಸರ್ ನೀಡಿದೆ. ಅಲ್ಲದೆ ಇನ್ನೂ 87 ಠಾಣೆಗಳಿಗೆ ಸ್ಯಾನಿಟೈಸರ್ ವಿತರಿಸಲು ಬಾಕಿ ಇದ್ದು, ಅದನ್ನು ಶೀಘ್ರದಲ್ಲೇ ವಿತರಿಸುವುದಾಗಿಯೂ ಅವರು ತಿಳಿಸಿದ್ದಾರೆ.
ಶುನಕ್ ತಂದೆ ಯಾರೊಂದಿಗೋ ಮಾತನಾಡುವ ವೇಳೆ, ದೆಹಲಿ ಪೊಲೀಸರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸುತ್ತಿದ್ದರು. ಇಂತಹ ಗಂಭೀರ ಸಂದರ್ಭದಲ್ಲಿ ಸ್ಯಾನಿಟೈಸರ್, ಮಾಸ್ಕ್, ಸೇರಿದಂತೆ ಅಗತ್ಯ ಪಿಪಿಇ ಸೌಲಭ್ಯಗಳ ಕೊರತೆಯನ್ನು ಪೊಲೀಸರು ಎದುರಿಸುವುದನ್ನು ತಿಳಿದುಕೊಂಡ ಶುನಕ್ ವಾಟ್ಸಾಪ್ ಗ್ರೂಪ್ ರಚಿಸಿ ಹಣ ಸಂಗ್ರಹಿಸಿ ಇಂತಹ ಮಾದರಿ ಕಾರ್ಯ ಮಾಡಿದ್ದಾರೆ. ಇನ್ನು ಪ್ರಧಾನಿ ಮೋದಿ ಅವರ ಇನ್ನೊಬ್ಬರಿಗೆ ಸಹಾಯ ಮಾಡಲು ತಿಳಿಸಿರುವ ಮಾತುಗಳಿಂದ ಪ್ರೇರಣೆಗೆ ಒಳಗಾಗಿರುವ ಶುನಕ್ ಈ ಕೆಲಸಕ್ಕೆ ಮುಂದಾಗಿದ್ದಾರೆ.
ದೇಶದ ರಕ್ಷಣೆ ಮಾಡುತ್ತಿರುವ ಆರೋಗ್ಯ ರಕ್ಷಕರು ಮತ್ತು ಪೊಲೀಸರು ಅಗತ್ಯ ಸಂದರ್ಭದಲ್ಲಿ ವೈದ್ಯಕೀಯ ಸೌಲಭ್ಯ, ಪಿಪಿಇ, ಸ್ಯಾನಿಟೈಸರ್ ಮೊದಲಾದವುಗಳ ಕೊರತೆಯಿಂದ ಕಷ್ಟ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮನ್ನು ರಕ್ಷಿಸುವವರ ರಕ್ಷಣೆಗೆ ನಾವೂ ಏನಾದರೂ ಮಾಡಬೇಕು ಎನ್ನುವ ಮೂಲಕ ಶುನಕ್ ಮೆಲ್ಹೋತ್ರಾ ಮಾದರಿಯಾಗಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.