ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಇಡೀ ಜಗತ್ತೇ ಹೋರಾಟವನ್ನು ನಡೆಸುತ್ತಿದೆ. ಈ ಸಂದರ್ಭದಲ್ಲಿ ಲಸಿಕೆ ಕಂಡು ಹಿಡಿಯುವುದಕ್ಕಾಗಿ ಸಾಕಷ್ಟು ಪ್ರಯತ್ನಗಳನ್ನು ವಿವಿಧ ದೇಶಗಳ ನಡೆಸುತ್ತಿವೆ. ಅಮೆರಿಕ, ಯುಕೆ, ಚೀನಾ ಮತ್ತು ಭಾರತದಲ್ಲಿ ಈಗಾಗಲೇ ಲಸಿಕೆ ಕಂಡು ಹಿಡಿಯುವ ನಿಟ್ಟಿನಲ್ಲಿ ಹಲವಾರು ಪ್ರಯೋಗಗಳನ್ನು ನಡೆಸಲಾಗಿದೆ. ಆದರೂ ಇದುವರೆಗೆ ಪರಿಣಾಮಕಾರಿಯಾದ ಲಸಿಕೆಯನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ.
ಈ ಹೋರಾಟದಲ್ಲಿ ಜಗತ್ತನ್ನು ಒಂದುಗೂಡಿಸುವ ಸಲುವಾಗಿ ವಿಶ್ವಸಂಸ್ಥೆ ಪ್ರಯತ್ನ ಆರಂಭಿಸಿದೆ. ವಿಶ್ವ ನಾಯಕರನ್ನು, ಖಾಸಗಿ ವಲಯ, ವಿಜ್ಞಾನ ಮತ್ತು ಮಾನವೀಯ ಕಾರ್ಯಕರ್ತರು ಮತ್ತು ಇತರ ಪಾಲುದಾರರನ್ನು ಒಟ್ಟುಗೂಡಿಸಿ ಈ ಸಂಕಷ್ಟದ ಸಂದರ್ಭದಲ್ಲಿ ಆರೋಗ್ಯ ಉತ್ತೇಜನ ಮತ್ತು ವೈರಸ್ ಬಗೆಗಿನ ಮಾಹಿತಿ ಹಂಚಿಕೆ, ಯಾವುದೇ ರಾಜಕೀಯ ಗಡಿ ಇಲ್ಲದೆ ಅಂಕಿಅಂಶಗಳ ವಿನಿಮಯ ಇತ್ಯಾದಿಗಳನ್ನು ಉತ್ತೇಜಿಸುವ ಪ್ರಯತ್ನವನ್ನು ನಡೆಸಿದೆ.
ಈ ಸಹಯೋಗದ ಪ್ರಯತ್ನಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಅಧನೊಮ್ ಗೆಬ್ರೆಯೆಸಸ್, ಫ್ರೆಂಡ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರೋನ್, ಯುರೋಪಿಯನ್ ಕಮಿಶನ್ ಅಧ್ಯಕ್ಷ ವ್ರುಸುಲ್ ವೊನ್ ಡೆರ್ ಲೆಯಿನ್, ಬಿಲ್ ಆಂಡ್ ಮೆಲಿಂಡ ಗೇಟ್ಸ್ ಪೌಂಡೇಶನ್ ಕೈಜೋಡಿಸಿದೆ.
ಈ ಸಹಕಾರದ ಆರಂಭಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರಸ್ ಸಾಂಕ್ರಾಮಿಕ ರೋಗಕ್ಕೆ ಯುನಿವರ್ಸಲ್ ಸೊಲ್ಯೂಷನ್ ಒದಗಿಸುವ ಆಲೋಚನೆಯನ್ನು ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮಾಡಿರುವ ಆಂಟೋನಿಯೋ, “ಕೋವಿಡ್-19 ಲಸಿಕೆಯನ್ನು ಜಾಗತಿಕ ಆರೋಗ್ಯ ಸರಕು ಎಂದು ಪರಿಗಣಿಸುವುದು ಕಡ್ಡಾಯವಾಗಿದೆ. ಇದು ಒಂದು ದೇಶ, ಒಂದು ಪ್ರದೇಶಕ್ಕೆ ಸಂಬಂಧಿಸಿದ ಔಷಧಿಯಾಗಬಾರದು, ಇದು ಕೈಗೆಟುಕುವ, ಸುರಕ್ಷಿತ ಪರಿಣಾಮಕಾರಿ, ಸುಲಲಿತ ನಿರ್ವಹಣೆಯ ಮತ್ತು ಜಾಗತಿಕವಾಗಿ ಪ್ರತಿಯೊಬ್ಬರಿಗೂ ಪ್ರತಿಯೊಂದು ಕಡೆಯೂ ಲಭ್ಯವಿರುವ ಔಷಧಿ ಯಾಗಬೇಕು” ಎಂದಿದ್ದಾರೆ.
“ಕೊರೋನಾ ಮುಕ್ತವಾದ ಜಗತ್ತು ಜಾಗತಿಕ ಇತಿಹಾಸದಲ್ಲಿ ಅತಿದೊಡ್ಡ ಆರೋಗ್ಯ ಪ್ರಯತ್ನಗಳನ್ನು ಹೊಂದಿರಬೇಕು. ದತ್ತಾಂಶಗಳನ್ನು ಹಂಚಿಕೊಳ್ಳಬೇಕು, ಸಂಪನ್ಮೂಲಗಳನ್ನು ಕ್ರೋಢೀಕರಿಸಬೇಕು ಮತ್ತು ರಾಜಕೀಯವನ್ನು ಬರೆದಿರಬೇಕು. ನಾವು ನಮ್ಮ ಜೀವಕ್ಕಾಗಿ ಹೋರಾಡುತ್ತಿದ್ದೇವೆ, ಒಟ್ಟಾಗಿ ಹೋರಾಡುತ್ತಿದ್ದೇವೆ, ಅತಿ ಬಲಿಷ್ಠರಾಗಿ, ಅತಿ ಒಗ್ಗಟ್ಟಾಗಿ ನಾವು ಹೊರಹೊಮ್ಮಲಿದ್ದೇವೆ” ಎಂದು ಗುಟೇರಸ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.