ನವದೆಹಲಿ: ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಲೇ ಇದೆ. ಶಂಕಿತ, ಸೋಂಕಿತರ ತಪಾಸಣೆ ನಡೆಸುವುದೇ ವೈದ್ಯಕೀಯ ಲೋಕಕ್ಕೆ ಸವಾಲೆಂಬಂತಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹೈ ಸ್ಪೀಡ್ ಟೆಸ್ಟಿಂಗ್ ಕಿಟ್ಗಳನ್ನು ಯುಎಸ್ ನಿಂದ ಖರೀದಿ ಮಾಡಲು ಮುಂದಾಗಿದ್ದು, ಈ ಕಿಟ್ ಸುಮಾರು 6000 ದಿಂದ 8000 ಪರೀಕ್ಷೆಗಳನ್ನು ಏಕಕಾಲಕ್ಕೆ ನಡೆಸುವ ಸಾಮರ್ಥ್ಯ ಹೊಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಎಂಇಎ ವಕ್ತಾರ ಅನುರಾಗ್ ಶ್ರೀ ವಾಸ್ತವ್ ಅವರು, ಸೋಂಕಿತರ ಪರೀಕ್ಷೆ ನಡೆಸಲು ಅಗತ್ಯ ಇರುವ ಮತ್ತು ಬೇಡಿಕೆ ಇರುವ ಆರು ಎಸ್ ಯು ವಿ ಗಾತ್ರದ ಹೈಸ್ಪೀಡ್ ಟೆಸ್ಟಿಂಗ್ ಯಂತ್ರಗಳನ್ನು ಯು ಎಸ್ ನಿಂದ ಖರೀದಿ ಮಾಡುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಭಾರತದಿಂದ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತಿಗೆ ಭಾರತ ಒಪ್ಪಿಕೊಂಡ ನಂತರ, ಇದೀಗ ಇಂತಹ ತುರ್ತು ಸ್ಥಿತಿಯಲ್ಲಿಯೂ ಭಾರತಕ್ಕೆ ಹೈ ಸ್ಪೀಡ್ ಯಂತ್ರಗಳನ್ನು ನೀಡಲು ಯು ಎಸ್ ಮುಂದಾಗಿದೆ ಎಂದು ಅನುರಾಗ್ ಮಾಹಿತಿ ನೀಡಿದ್ದಾರೆ.
ಕಳೆದೆರಡು ವಾರಗಳಲ್ಲಿ ಚೀನಾದಿಂದಲೂ ಕೊರೋನಾ ನಿಯಂತ್ರಣಕ್ಕೆ ಬೇಕಾದ ಪಿಪಿಇ ಕಿಟ್ಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸುಮಾರು 20 ವಿಮಾನಗಳಲ್ಲಿ ಚೀನಾದಿಂದ ಪಿಪಿಇ, ಟೆಸ್ಟಿಂಗ್ ಕಿಟ್ಗಳು ಸೇರಿದಂತೆ ಆರೋಗ್ಯ ತಪಾಸಣೆಗೆ ಬೇಕಾದ ಸಾಮಗ್ರಿಗಳು ಬರುವ ಸಾಧ್ಯತೆ ಇರುವುದಾಗಿಯೂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಆರೋಗ್ಯ ಸಂಬಂಧಿ ಉಪಕರಣಗಳನ್ನ ಹೆಚ್ಚು ಮಟ್ಟದಲ್ಲಿ ಖರೀದಿ ಮಾಡಲಾಗುವುದಾಗಿಯೂ ಅವರು ಹೇಳಿಕೆ ನೀಡಿದ್ದಾರೆ.
ಕೋವಿಡ್ನಂತಹ ತುರ್ತು ಸಂದರ್ಭದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಭಾರತೀಯ ಮತ್ತು ವಿದೇಶಿ ಸಂಸ್ಥೆಗಳ ನಡುವಿನ ವ್ಯವಸ್ಥೆಗಳನ್ನೂ ಸುಗಮ ಮಾಡಲಾಗುತ್ತದೆ. ಇದಕ್ಕೆ ಪೂರಕವಾಗಿ ಐಸಿಎಂಆರ್ ಪರವಾಗಿ ಸಂಸ್ಥೆ ದಕ್ಷಿಣ ಕೊರಿಯಾದ ಪರೀಕ್ಷಾ ಕಿಟ್ ತಯಾರಿಕಾ ಕಂಪನಿಯ ಜೊತೆಗೆ 5 ಲಕ್ಷ ಕೊರೋನಾ ಕಿಟ್ ಸಂಗ್ರಹ ಮತ್ತು ಪೂರೈಕೆಯ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.