ನವದೆಹಲಿ : ಎಪ್ರಿಲ್ 22 ವಿಶ್ವ ಭೂಮಿ ದಿನದ ಪ್ರಯುಕ್ತ ಸರ್ಚ್ ಎಂಜಿನ್ ಗೂಗಲ್ ವಿಶೇಷ ಡೂಡಲ್ ಒಂದನ್ನು ರಚಿಸಿದೆ. ಈ ದಿನವನ್ನು ಪ್ರಪಂಚದ ಪುಟ್ಟ ಜೀವಿ, ಸಿಹಿ ನೀಡುವ ಜೀವಿ ಜೇನುನೊಣಗಳಿಗೆ ಸಮರ್ಪಿಸುವ ಡೂಡಲ್ ಮೂಲಕ ವರ್ಲ್ಡ್ ಅರ್ಥ್ ಡೇ ಯ 50 ನೇ ವಾರ್ಷಿಕೋತ್ಸವದ ಬಗ್ಗೆ ಅರ್ಥಪೂರ್ಣವಾಗಿ ತಿಳಿಸಿದೆ.
ಜನರಿಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತಿದ್ದು, ಪರಿಸರ ಸಂರಕ್ಷಣೆಯ ಅಗತ್ಯತೆಯ ಬಗ್ಗೆ ಮನವರಿಕೆ ಮಾಡಲಾಗುತ್ತದೆ. ಗೂಗಲ್ ಈ ಬಾರಿ ಪರಿಸರದ ಜೊತೆಗೆ ಜೇನು ನೊಣಗಳಿಂದ ನಡೆಯುತ್ತಿರುವ ಪರಿಸರ ಉಳಿಸುವ ಕೆಲಸದ ಬಗ್ಗೆಯೂ ಜನರಿಗೆ ಅರಿವು ಮೂಡಿಸಲು ಡೂಡಲ್ ಮೂಲಕ ಮುಂದಾಗಿದೆ.
ಜೇನುನೊಣಗಳು ಹೂವಿಂದ ಹೂವಿಗೆ ಹಾರುವ ಮೂಲಕ ಕೇವಲ ಜೇನು ಸಂಗ್ರಹಿಸುವ ಕೆಲಸ ಮಾತ್ರ ಮಾಡುತ್ತಿಲ್ಲ. ಬದಲಾಗಿ ಒಂದು ಹೂವಿನ ಮಕಂದದ ಜೊತೆಗೆ ಇನ್ನೊಂದು ಹೂವಿಗೆ ಪರಾಗಸ್ಪರ್ಶ ಮಾಡುವ ಕೆಲಸವನ್ನು ಮಾಡುತ್ತದೆ. ಇದರಿಂದಾಗಿ ಹೆಚ್ಚೆಚ್ಚು ಗಿಡ, ಮರ, ಬಳ್ಳಿಗಳು ಮತ್ತೆ ಸೃಷ್ಟಿಯಾಗುತ್ತದೆ. ಹಾಗೆಯೇ ಪ್ರಕೃತಿಯ ಈ ಆಟ ಅದೆಷ್ಟೋ ವರ್ಷಗಳ ವರೆಗೆ ನಡೆಯುತ್ತದೆ ಎಂಬುದಾಗಿಯೂ ಗೂಗಲ್ ತಿಳಿಸಿದೆ.
ವಿಶ್ವದಾದ್ಯಂತ ಅನೇಕ ಜೇನು ನೊಣಗಳು ಇಂತಹ ಪರಾಗಸ್ಪರ್ಶ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಆ ಮೂಲಕ ತಾವು ಮಕರಂದ ಸಂಗ್ರಹಿಸುವ ಗಿಡ, ಮರಗಳ ಸಂತತಿ ಹೆಚ್ಚಿಸುವುದಕ್ಕೆ ತಮಗೆ ಅರಿವಿಲ್ಲದಂತೆಯೇ ಪ್ರಯತ್ನ ಮಾಡುತ್ತವೆ ಎಂದು ಗೂಗಲ್ ಹೇಳಿದೆ. ” ಸಣ್ಣ ವ್ಯಕ್ತಿಗಳ, ಸಣ್ಣ ಕೆಲಸಗಳು ಹೇಗೆ ದೊಡ್ಡ ಫಲಿತಾಂಶ” ವನ್ನು ನೀಡುತ್ತವೆ ಎಂಬುದಕ್ಕೆ ಜೇನುನೊಣಗಳೇ ಸಾಕ್ಷಿ ಎಂಬುದಾಗಿ ಈ ಡೂಡಲ್ ಮೂಲಕ ಗೂಗಲ್ ಜನರಿಗೆ ಸಂದೇಶ ನೀಡಿದೆ. ಆ ಮೂಲಕ ಪರಿಸರ ರಕ್ಷಣೆ, ಬೆಳೆಸುವ ಬಗ್ಗೆ ಕಾಳಜಿ ವಹಿಸುವಂತೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಿದೆ.
ಈ ಡೂಡಲ್ ಅನ್ನು ಗೂಗಲ್ನ ಜಾಕೋಬ್ ಹೌ ಕ್ರಾಫ್ಟ್ ಮತ್ತು ಸ್ಟೀಫನ್ ಗೂ ಅವರು ಸಿದ್ಧಪಡಿಸಿದ್ದಾರೆ. ಆ ಮೂಲಕ ಜೇನು ನೊಣ ಯಾವುದೇ ಲಾಭದ ಉದ್ದೇಶ ಇಲ್ಲದೆ ಪರಿಸರ ಸಂರಕ್ಷಿಸುವ ಕಾರ್ಯ ಮಾಡುತ್ತಿದ್ದು, ಜನಸಾಮಾನ್ಯರಾದ ನಾವೂ ಪರಿಸರ ಉಳಿಸುವ ಕಾರ್ಯದಲ್ಲಿ ಕಾರ್ಯಪ್ರವೃತ್ತರಾಗಬೇಕೆಂಬ ಸಂದೇಶವನ್ನು ಜಗತ್ತಿಗೆ ರವಾನಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.