ನವದೆಹಲಿ: ಕೊರೋನಾ ಸಂದರ್ಭದಲ್ಲಿ ಫೇಸ್ ಮಾಸ್ಕ್ ಅಥವಾ ಮುಖಗವಸು ಎಂಬುದು ತೀರಾ ಅತ್ಯವಶ್ಯಕ ಎನಿಸಿಬಿಟ್ಟಿದೆ. ಆದರೆ ಅವುಗಳ ಲಭ್ಯತೆಯ ಕೊರತೆ ಮಾತ್ರ ಇಡೀ ದೇಶವನ್ನೇ ಕಾಡುತ್ತಿದ್ದು ಭಾರತದಲ್ಲಿಯೂ ಮಾಸ್ಕ್ಗಳ ಕೊರತೆ ಕಂಡುಬರುತ್ತಿದೆ. ಇನ್ನು ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗಂತೂ ಫೇಸ್ ಮಾಸ್ಕ್ ತೀರಾ ಅವಶ್ಯವೇ ಹೌದು.
ಹೀಗಿರುವಾಗ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ದೇಶದಲ್ಲಿ ಹಲವು ಮಂದಿ, ಹಲವು ಸಂಘ ಸಂಸ್ಥೆಗಳು ಫೇಸ್ ಮಾಸ್ಕ್ ತಯಾರಿಸುತ್ತಿದ್ದೂ, ಈ ಹೋಂ ಮೇಡ್ ಮಾಸ್ಕ್ಗಳನ್ನು ಅಗತ್ಯವಿರುವವರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕ್ರಿಕೆಟ್ ಮಂಡಳಿ ಬಿಸಿಸಿಐ ಸಹಾ ಜನರಿಗೆ ಸರ್ಕಾರದ ನಿಯಂತ್ರಣ ಕ್ರಮಗಳು, ಮಾಸ್ಕ್ ಧರಿಸುವ ಅನಿವಾರ್ಯತೆ ಮೊದಲಾದವುಗಳ ಅರಿವು ಮೂಡಿಸುವ ಸಲುವಾಗಿ ಟೀಂ ಮಾಸ್ಕ್ ಫೋರ್ಸ್ ಎಂಬ ಟ್ಯಾಗ್ಲೈನ್ ಬಳಸಿ ವಿಡಿಯೋ ಮಾಡಿ ಹರಿಬಿಟ್ಟಿದೆ.
ಭಾರತೀಯ ಕ್ರಿಕೆಟ್ನ ಪುರುಷ ಮತ್ತು ಮಹಿಳಾ ಆಟಗಾರರ ತಂಡ ಹೋಂ ಮೇಡ್ ಮಾಸ್ಕ್ ಬಳಕೆಯ ಕುರಿತಂತೆ ವಿಡಿಯೋ ಮಾಡಿದ್ದು #TeamMaskForce ಟ್ಯಾಗ್ಲೈನ್ ಬಳಸಿ ಆರೋಗ್ಯ ಸೇತು ಆ್ಯಪ್ ಡೌನ್ಲೋಡ್ ಮಾಡುವಂತೆಯೂ ಜನರಲ್ಲಿ ಮನವಿ ಮಾಡಿದೆ. ಈ ಬಗ್ಗೆ ಬಿಸಿಸಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದೆ. ಕೊಹ್ಲಿ, ತೆಂಡೂಲ್ಕರ್, ಸೌರವ್ ಗಂಗೂಲಿ, ಸ್ಮೃತಿ ಮಂಧಾನ, ರಾಹುಲ್ ದ್ರಾವಿಡ್, ಮಿಥಾಲಿ ರಾಜ್ ಮೊದಲಾದವರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದು, ಮಾಸ್ಕ್ ಬಳಕೆ, ಸ್ಯಾನಿಟೈಸರ್ ಬಳಸಿ ಕೈ ಗಳನ್ನು ಶುಚಿಯಾಗಿರಿಸಿಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮೊದಲಾದವುಗಳ ಬಗ್ಗೆ ಅರ್ಥಪೂರ್ಣ ಮಾಹಿತಿ ನೀಡಿದ್ದಾರೆ.
ಇನ್ನು ಈ ಅಭಿಯಾನದ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, #TeamMaskForce ಇಂದಿನ ಅನಿವಾರ್ಯತೆಯಾಗಿದೆ. ನಿಯಂತ್ರಣ ಕ್ರಮಗಳನ್ನು ಅನುಸರಿಸುವ ಮೂಲಕ ನಾವೆಲ್ಲರೂ ಸುರಕ್ಷಿತರಾಗಿರೋಣ. ಈ ಬಗ್ಗೆ ಎಲ್ಲರಲ್ಲಿಯೂ ಅರಿವು ಮೂಡಿಸೋಣ ಎಂಬುದಾಗಿ ಹೇಳಿದ್ದಾರೆ.
Among the most important tasks today- be a part of #TeamMaskForce.
Small but essential precautions can keep us all safe.
Important to spread awareness about it… https://t.co/50vY3lF20J
— Narendra Modi (@narendramodi) April 18, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.