ಕೊರೋನಾ (ಕೋವಿಡ್19) ಎಂಬ ಭಯಾನಕ ವೈರಸ್ ಇಡೀ ವಿಶ್ವವನ್ನೇ ನಲುಗಿಸುತ್ತಿದ್ದು ಭಾರತವೂ ಸಹ ಈ ಮಹಾಮಾರಿಗೆ ಸಿಕ್ಕಿಹಾಕಿಕೊಂಡಿದೆ. ಈ ಮಹಾಮಾರಿಯನ್ನು ತಡೆಗಟ್ಟುವಲ್ಲಿ ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಲಾಕಡೌನ್ ಘೋಷಣೆ ಮಾಡಿದೆ. ಈ ಲಾಕಡೌನ್ ಆದ ಮೇಲೆ ಅದೆಷ್ಟೋ ಜನ ಬಡವರು, ಕೂಲಿ ಕಾರ್ಮಿಕರು, ದಿನಗೂಲಿ ನೌಕರರು, ಇನ್ನೂ ಅನೇಕರು ಸಂಕಷ್ಟಕ್ಕೆ ಸಿಲುಕಿರುವುದು ನಮಗೆಲ್ಲರಿಗೂ ಗೊತ್ತಿರುವ ವಿಚಾರ.
ಈ ಲಾಕಡೌನ್ ಸಮಯದಲ್ಲಿ ದೇಶದ ಹಲವಾರು ಕಡೆ ಮನಕಲಕುವಂತಹ ಸನ್ನಿವೇಶಗಳು ಆಗಿರುವುದನ್ನು ನಾವು ಬೇರೆ ಬೇರೆ ಮಾಧ್ಯಮಗಳ ಮೂಲಕ ಕೇಳಿದ್ದೇವೆ. ಈಗ ನಾನು ನಿಮಗೆ ನನ್ನ ಮನಸ್ಸನ್ನು ಬಹಳವಾಗಿ ಕಾಡಿದ ನನ್ನ ಅನುಭವವನ್ನೇ ನೇರವಾಗಿ ನಿಮ್ಮ ಜೊತೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ.
ದೇಶದ ಓಳಿತನ್ನೇ ಸದಾ ಗಮನದಲ್ಲಿಟ್ಟುಕೊಂಡು, ದೇಶಕ್ಕೆ ಸಂಕಷ್ಟಗಳು ಎದುರಾದಾಗ ಅದನ್ನು ಎದುರಿಸಲು ಟೊಂಕಕಟ್ಟಿ ನಿಲ್ಲುವುದೇ ರಾಷ್ಟ್ರೀಯ ಸ್ವಯಂಸೇವಕ ಸಂಘ. ಎಲ್ಲಾ ಸಂದರ್ಭದಲ್ಲೂ ಅರೆಕ್ಷಣದಲ್ಲಿ ಸೇವಾಕ್ಷೇತ್ರಕ್ಕೆ ಧುಮುಕುವ ಸಂಘದ ಕಾರ್ಯಕರ್ತರು ಈ ಸಲವೂ ಸಹ ಈ ಲಾಕಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯ ಹಸ್ತವನ್ನು ಚಾಚಲು ನಿರ್ಧರಿಸಿ ಕಾರ್ಯಪ್ರವೃತ್ತರಾದರು.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕೆಲವು ಆಯ್ದ ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿರುವ ಸ್ಥಳೀಯ ಸ್ವಯಂಸೇವಕ ಸಹಾಯದಿಂದ ಸಂಕಷ್ಟಕ್ಕೆ ಈಡಾದ ಕುಟುಂಬಗಳ ಪಟ್ಟಿ ತಯಾರಿಸಿದೆವು. ಆ ಜನರಿಗೆ ದಿನನಿತ್ಯದ ಅತ್ಯಾವಶ್ಯಕ ದಿನಸಿ ಸಾಮಗ್ರಿಗಳಾದ ಅಕ್ಕಿ, ಬೇಳೆ, ಬೆಲ್ಲ, ರವಾ, ಈರುಳ್ಳಿ ಮುಂತಾದವುಗಳನ್ನು ವಿತರಿಸಲು ನಿರ್ಧರಿಸಲಾಯಿತು. ತಕ್ಷಣವೇ ನಾವು ಸ್ವಯಂಸೇವಕರೆಲ್ಲರೂ ಸೇರಿಕೊಂಡು ಆ ಸಾಮಗ್ರಿಗಳ ಕಿಟ್ಟನ್ನು ತಯಾರಿಸಿದೆವು. ಪೂರ್ವನಿಯೋಜಿತ ಯೋಜನೆಯಂತೆ ಯಾವ ಯಾವ ಗ್ರಾಮಗಳಿಗೆ ಯಾವ ಯಾವ ಸ್ವಯಂಸೇವಕರು ಹೋಗಬೇಕೆಂದು ನಿಶ್ಚಯಿಸಿದ್ದರಿಂದ ಆ ಕಿಟ್ಗಳನ್ನು ತೆಗೆದುಕೊಂಡು ಆಯಾ ಗ್ರಾಮಗಳಿಗೆ ತೆರಳಿ ವಿತರಿಸಲು ಅಣಿಯಾದೆವು. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಕ್ಕುಂಡಿ ಎಂಬ ಗ್ರಾಮದಲ್ಲಿ ಯೋಜನೆ ಮಾಡಿದಂತೆ ಪಟ್ಟಿಯಲ್ಲಿ ಇದ್ದವರ ಮನೆಗಳಿಗೆ ಕಿಟ್ ಗಳನ್ನು ವಿತರಿಸಲು ತೆರಳಿದೆವು.
ಆ ಗ್ರಾಮದಲ್ಲಿ ಹಳೆಯದಾದ ಒಂದು ಚಿಕ್ಕ ಮನೆಯಲ್ಲಿ ಒಬ್ಬರೇ ಅಜ್ಜಿ ವಾಸವಾಗಿದ್ದರು. ಅವರ ಹೆಸರು ಕೋರಿ ಪಾರ್ವತಮ್ಮ. ವಯಸ್ಸು ಅಂದಾಜಿಗೆ 80ರ ಆಸುಪಾಸಿನಲ್ಲಿ ಇರಬಹುದು. ಅವರಿಗೆ ನೆರವಾಗಲು ನಮ್ಮ ಸ್ವಯಂಸೇವಕರ ತಂಡವು ಅವರ ಮನೆಯತ್ತ ಹೆಜ್ಜೆ ಹಾಕಿದೆವು. ಬಾಗಿಲಲ್ಲಿ ನಿಂತು ನಾವು ಅಜ್ಜಿಯನ್ನು ಕರೆದಾಗ “ಯಾರು..?” ಎಂಬ ಮೆಲು ಧ್ವನಿ ಮನೆಯ ಒಳಗಿನಿಂದ ಬಂತು. “ಅಜ್ಜಿ, ಹೊರಗಡೆ ಬನ್ನಿ” ಎಂದು ಕರೆದಾಗ ನೀವೇ ಮನೆಯೊಳಗೆ ಬನ್ನಿ ಎಂದು ಹೇಳಿ ಅತಿಥಿ ಸತ್ಕಾರಕ್ಕೆ ಮುಂದಾಗಿಬಿಟ್ಟರು! ಊರಿನಲ್ಲಿ ಇನ್ನೂ ಅನೇಕ ಮನೆಗಳಿಗೆ ಕಿಟ್ ವಿತರಿಸುವುದು ಇದ್ದುದರಿಂದ “ಇಲ್ಲಾ! ನೀವೇ ಹೊರಗಡೆ ಬನ್ನಿ” ಎಂದು ಹೇಳಿದ ಮೇಲೆ ಅವರು ಬಂದರು. ನಾವು ತಂದಿದ್ದ ದಿನಸಿ ಸಾಮಗ್ರಿಗಳ ಕಿಟ್ಟನ್ನು ಅಜ್ಜಿಗೆ ಕೊಟ್ಟೆವು. ಕಿಟ್ಟನ್ನು ತೆಗೆದುಕೊಂಡ ಅಜ್ಜಿಯು ಒಂದೇ ಸಮನೆ ತದೇಕಚಿತ್ತದಿಂದ ನಮ್ಮನ್ನೇ ನೋಡುತ್ತಾ ಕಣ್ಣೀರು ಹಾಕಲು ಶುರುಮಾಡಿಬಿಟ್ಟರು. ಯಾವ ಕಾರಣಕ್ಕಾಗಿ ಅಜ್ಜಿ ಅಳುತ್ತಿದ್ದಾಳೆ ಎಂದು ಗೊತ್ತಾಗಲು ನಮಗೆ ಸ್ವಲ್ಪ ಸಮಯವೇ ಬೇಕಾಯ್ತು. ಜೊತೆಗಿದ್ದ ಸ್ವಯಂಸೇವಕರೆಲ್ಲರಿಗೂ ಆಶ್ಚರ್ಯದ ಜೊತೆಗೆ ಹಿರಿಯಜ್ಜಿಗೆ ನಮ್ಮಿಂದಾಗಿ ಏನೋ ಸಮಸ್ಯೆ ಆಗಿರಬಹುದು ಅದಕ್ಕೇ ಅಳುತ್ತಿದ್ದಾಳೆ ಎಂಬ ಭಯ ಪ್ರಾರಂಭವಾಯ್ತು. ಆದರೆ ಅಜ್ಜಿಯೇ ಮುಂದುವರೆದು ನಮ್ಮನ್ನೇ ನೋಡುತ್ತಾ “ನನ್ನ ಕಷ್ಟ ನೋಡಿ ಇವನ್ನೆಲ್ಲಾ ತಂದು ಕೊಟ್ರಾ ಮಕ್ಕಳಾ… ಯಾವ ತಂದೆ ತಾಯಿ ಹೆತ್ತ ಮಕ್ಕಳಪ್ಪಾ ನೀವು… ಪುಣ್ಯ ಹತ್ಲೇಪ್ಪಾ ನಿಮಗ” ಎಂದು ನಡುಗುವ ಧ್ವನಿಯಲ್ಲೇ ಕಣ್ಣೀರು ಹಾಕುತ್ತ ಹರಿಸಿದಳು. ಆಮೇಲೆ ಸ್ವಲ್ಪ ಸಾವರಿಸಿಕೊಂಡು ಮತ್ತೆ ಮಾತನ್ನು ಮುಂದುವರಿಸಿದ ಅಜ್ಜಿ, “ಈ ಹಿಂದೆ ಮಳಿ ಹೆಚ್ಚಾದಾಗ (ಉತ್ತರ ಕರ್ನಾಟಕ ಪ್ರವಾಹ) ನನಗೆ ಮತ್ತು ನಮ್ ಊರವ್ರಿಗೆ ಬಂದ್ ಸಹಾಯ ಮಾಡಿದ್ರೇಲ್ಲಪ್ಪಾ ಅವರೇ ತಾನೇ ನೀವು? ಈಗಲೂ ಮಾಡಾಕತ್ತೀರಿ. ಆ ದೇವರು ನಿಮಗ ಚೆಂದಗೇ ಇಟ್ಟಿರ್ಲಿ” ಎನ್ನುತ್ತಾ ಸೀರೆಯ ಸೆರಗನ್ನು ಕಣ್ಣಿಗೊತ್ತಿಕೊಂಡು ಮತ್ತಷ್ಟು ದುಃಖವಾದರು. “ಅಜ್ಜೀ, ನಾವು ತಂದು ಕೊಡ್ತಿವಿ ಅಷ್ಟೇ. ನಮ್ಮದೊಂದು ಸಂಘ ಅಂತ ಇದೆ. ಆ ಸಂಘ ಏನ್ ಮಾಡುತ್ತೆ ಅಂದ್ರೆ ಕೆಲವು ದಾನಿಗಳತ್ರ ಇವನ್ನೆಲ್ಲಾ ಇಸ್ಕೊಂಡು ನಿಮ್ಮಂತವರಿಗೆ ತಲುಪಿಸ್ಲಿಕ್ಕೆ ನಮ್ಮಂತ ಸ್ವಯಂಸೇವಕರಿಗೆ ಹೇಳುತ್ತೆ. ಹಾಗಾಗಿ ನಿಮ್ ಹಾರೈಕೆ ಏನಿದ್ರೂ ನಮ್ ಸಂಘಕ್ಕೇ ಇರಲಿ” ಎಂದಾಗ, “ನಿಮ್ಮ ಸಂಘಕ್ಕೆ ಎಷ್ಟೇ ಕಷ್ಟ ಬಂದ್ರೂ ಈ ಸಹಾಯ ಮಾಡುವುದನ್ನು ಬಿಡಬೇಡಿ. ಆ ದೇವರು ಎಲ್ಲಾನ್ನೂ ನೋಡ್ತಿರ್ತಾನೆ. ನಿಮ್ಮ ಸಂಘಕ್ಕೆ ಸದಾ ದೇವರ ಆಶಿರ್ವಾದ ಇರ್ಲಿ” ಅಂತ ಹೇಳಿದಳು. ಅಜ್ಜಿಯ ಹಾರೈಕೆಯ ಮಾತು ಕೇಳುತ್ತಾ ಜೊತೆಗಿದ್ದ ಸ್ವಯಂಸೇವಕರ ಕಣ್ಣಂಚುಗಳೂ ಸಹ ಒದ್ದೆಯಾಗಿದ್ದವು. ಅಂದಿನ ಆ ಘಟನೆಗೆ ಸಾಕ್ಷಿಯಾದ ಸ್ವಯಂಸೇವಕರಲ್ಲಿ ಆ ಒಂದು ಕ್ಷಣಕ್ಕೆ ಸಾರ್ಥಕತೆಯ ಭಾವ ಮೂಡಿದ್ದಂತೂ ಸುಳ್ಳಲ್ಲ.
“ಅಜ್ಜೀ, ನಾವ್ ಹೋಗ್ ಬರ್ತೀವಿ” ಎಂದು ಕೈ ಮುಗಿದು ಹೊರಡುವಾಗ ಆ ಅಜ್ಜಿ ಪುನಃ ಕರೆದು ಮತ್ತೆ ಮಾತು ಮುಂದುವರೆಸಿದಳು. “ಯಪ್ಪಾ..! ನಾಳೆ ನಾ ಸತ್ತಾಗ ಬಂದ ಹೆಗಲ ಕೊಟ್ಟ ಪುಣ್ಯ ಕಟ್ಗೋರೆಪ್ಪಾ! ನಿಮ್ಮ ಸೇವಾ ಮಾಡಿದ ಕೈಗಳಿಂದ ನಂಗ್ ಸಂಸ್ಕಾರ ಸಿಕ್ರ ನಂಗೂ ಮೋಕ್ಷ ಸಿಕ್ತೈತಿ” ಎಂದಳು. ಆ ಒಂದು ಮಾತಿಗೆ ನಾವೆಲ್ಲ ಅಕ್ಷರಶಃ ದಂಗಾಗಿ ನಿಶ್ಯಬ್ದರಾಗಿ ನಿಂತೆವು. “ಅಜ್ಜೀ, ನೀವು ಹೀಗೆಲ್ಲ ಮಾತಾಡಬಾರದು. ನಿಮಗೆ ಕಷ್ಟ ಅಂತ ಗೊತ್ತಾದ್ರೆ ಮತ್ತೆ ಸಹಾಯ ಮಾಡೋದಕ್ಕೆ ಬರ್ತಿವಿ. ನೀವು ನೂರ್ ವರ್ಷ ಬದುಕ್ಬೇಕು” ಅಂದಾಗ ಅಜ್ಜಿಗೆ ತಕ್ಕಮಟ್ಟಿಗೆ ಸಮಾಧಾನವಾಗಿತ್ತು. ನಾವಿನ್ನು ಬರ್ತೀವಜ್ಜೀ ಎಂದು ಹೇಳಿ ಅಜ್ಜಿಯ ಕಾಲಿಗೆ ನಮಸ್ಕಾರ ಮಾಡಿ ಹೊರಡುವಾಗ ಎಲ್ಲ ಸ್ವಯಂಸೇವಕರ ಕಣ್ಣಲ್ಲೂ ನೀರು ಕಾಣುತ್ತಿತ್ತು. ನಾವು ಹಿಂತಿರುಗಿ ಬರುವಾಗ ನಮ್ಮೆಲ್ಲರ ಮನಸ್ಸಿನಲ್ಲೂ ಅಜ್ಜಿಯ ಹಾರೈಕೆಯ ಚಿಂತನೆಯೇ ಅನುರಣಿಸುತ್ತಿತ್ತು. ಈ ಘಟನೆಯಾಗಿ ಎರಡು ಮೂರು ದಿನಗಳು ಕಳೆದರೂ ಆ ಅಜ್ಜಿಯನ್ನೇ ಪದೇ ಪದೇ ನಮ್ಮ ಮನಸ್ಸು ನೆನಪಿಸುತ್ತಿತ್ತು.
ಈ ರೀತಿಯ ಘಟನೆಗಳು ನಮ್ಮ ನಡುವೆ ಆದಾಗ ನಾವು ಧನ್ಯವಾದಗಳನ್ನು ಯಾರಿಗೆ ಹೇಳುವುದು? ನಿಸ್ವಾರ್ಥದಿಂದ ಕೆಲಸ ಮಾಡಲು ಪ್ರೇರಣೆ ಮಾಡಿದ ಸಂಘಕ್ಕೋ? ನಿಸ್ವಾರ್ಥದಿಂದ ಶುಭಹಾರೈಕೆಯನ್ನು ಮಾಡುವ ನಿಷ್ಕಲ್ಮಶ ಭಾವದ ಜನರಿಗೋ? ಈ ರೀತಿಯ ಗೊಂದಲದಲ್ಲೇ ಮನಸ್ಸು ನಿಂತು ಸಾರ್ಥಕತೆಯನ್ನು ಹೊಂದಿದ ಒಂದು ನೆಮ್ಮದಿಯನ್ನು ತಂದುಕೊಡುತ್ತದೆ. ಇಂತಹ ಸೇವೆಯನ್ನು ಮಾಡಲು ಪ್ರೇರಣೆಯನ್ನೊದಗಿಸಿದ, ನನ್ನಂತೆಯೇ ಲಕ್ಷಾಂತರ ಕೋಟ್ಯಾಂತರ ಸ್ವಯಂಸೇವಕರ ಸಂಘಕ್ಕೆ ಕೋಟಿ ಕೋಟಿ ನಮನಗಳು. ಈ ರೀತಿಯ ಘಟನೆಗಳು ನಮ್ಮಂತೆಯೇ ಲಕ್ಷಾಂತರ ಕಾರ್ಯಕರ್ತರಿಗೆ ಇನ್ನಷ್ಟು ಸ್ಪೂರ್ತಿಯನ್ನು ನೀಡುತ್ತವೆ. ಈ ಸೇವೆಯಿಂದ ಸಿಗುವ ಜೀವನಚೈತನ್ಯಕ್ಕೆ ಬೆಲೆಕಟ್ಟಲಾದೀತೇ? ಸಂಘ ಕೊಟ್ಟ ಈ ಸೇವಾಮನೋಭಾವದ ಸಂಸ್ಕಾರದಿಂದ ಜೀವನಸಾಫಲ್ಯವನ್ನು ನಾವು ಕಾಣುವಂತಾಗಿದೆ. ಸಂಘವೆಂದರೆ ಸಾಕು ತೆಗಳಲಿಕ್ಕೇ ಕಾಯ್ದುಕೊಂಡ ಕೆಲವರ ನಡುವೆ ಸಂಘದ ಸೇವೆಯಿಂದಾಗಿ ಹರಸುವ ಹಿರಿಯ ಮನಸ್ಸುಗಳೇ ನಮಗೆ ಪ್ರೇರಣೆ. ಸಂಘವನ್ನು ದೂರನಿಂತು ದೂಷಿಸುವುದಲ್ಲ. ಸಂಘದ ಜೊತೆ ಸೇರಿ, ಅದರ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ದೇಶಭಕ್ತಿ, ಸೇವಾಭಾವವನ್ನು ಮೈಗೂಡಿಸಿಕೊಳ್ಳುವುದರ ಮೂಲಕ ಧನ್ಯತಾಭಾವವನ್ನು ಪಡೆಯೋಣ ಎಂಬ ಆಶಯದೊಂದಿಗೆ ನನ್ನ ಸ್ವಾನುಭವ ಕಥನವನ್ನು ಮುಗಿಸುತ್ತಿದ್ದೇನೆ.
✍️ ಸಂತೋಷ ಸೊಗಲದ
ಸವದತ್ತಿ ತಾಲೂಕು ಕಾರ್ಯವಾಹ (ಬೆಳಗಾವಿ ಜಿಲ್ಲೆ)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.