ಡಾ|| ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಾಧನೆ ಕೇವಲ ಭಾರತದ ಸಂವಿಧಾನ ರಚನೆಗೆ, ದಲಿತರ ಉದ್ಧಾರಕ ಎಂಬುದಕ್ಕಷ್ಟೇ ಸೀಮಿತವಲ್ಲ. ಅವರು ತಮ್ಮ ನಾಲ್ಕು ದಶಕಗಳ ಸಾರ್ವಜನಿಕ ಜೀವನದಲ್ಲಿ ದೇಶದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಜೀವನದಲ್ಲಿ ಪ್ರಾಮುಖ್ಯತೆಯನ್ನು ಹೊಂದಿದ್ದರು, ಮಾತ್ರವಲ್ಲದೆ ಓರ್ವ ಅರ್ಥಶಾಸ್ತ್ರಜ್ಞನಾಗಿ, ಚಿಂತಕ, ಸಮಾಜಶಾಸ್ತ್ರಜ್ಞ, ಇತಿಹಾಸಕಾರ ಮತ್ತು ಮಾನವಶಾಸ್ತ್ರಜ್ಞರಾಗಿ ಜೀವನದ ಹಲವು ಕ್ಷೇತ್ರಗಳಲ್ಲಿ ಅದ್ಭುತ ಕೊಡುಗೆ ನೀಡಿದರು. ಮತಧರ್ಮಗಳ ತುಲನಾತ್ಮಕ ಅಧ್ಯಯನದಲ್ಲಿ ಅವರು ಅಥಾರಿಟಿಯಾಗಿದ್ದರು. ಅವರೊಬ್ಬ ನೈಜ ರಾಷ್ಟ್ರೀಯ ನಾಯಕ ಹಾಗೂ ಬೌದ್ಧಿಕ ಔನ್ನತ್ಯದ ಶಿಖರ.
ತಮ್ಮ ಜೀವಿತಾವಧಿಯಲ್ಲಿ ಅವರು ರಾಜಕೀಯ ಚಳವಳಿ, ಸಾಮಾಜಿಕ ಹೋರಾಟ, ಸಂವಿಧಾನ ರಚನೆಯಂತಹ ಹಲವಾರು ಕೆಲಸಗಳ ನಡುವೆಯೂ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ಕಾನೂನು, ಮತಧರ್ಮ, ರಾಜಕೀಯ, ಮಾನವಶಾಸ್ತ್ರ – ಹೀಗೆ ವಿಷಯ ವೈವಿಧ್ಯವಿರುವ 22 ಬೃಹತ್ ಗ್ರಂಥಗಳನ್ನು ಬರೆದಿರುವುದು ಬಹಳ ದೊಡ್ಡ ಸಾಧನೆಯಾಗಿದೆ. ಇತರ ಯಾವುದೇ ಜನನಾಯಕರಲ್ಲಿ ಇಂತಹ ಬೌದ್ಧಿಕ ಔನ್ನತ್ಯವು ಕಾಣುವುದಿಲ್ಲ. ನೆಹರು ದೊಡ್ಡ ಲೇಖಕರೆಂದು ಹೇಳಲಾಗುತ್ತದೆ. ಆದರೆ ಅವರು ಬರೆದದ್ದು ಕೇವಲ ಮೂರೇ ಪುಸ್ತಕ (ಅವೆಲ್ಲವೂ ಇತಿಹಾಸದ ಕುರಿತಾಗಿವೆ). ಭಾರತೀಯ ಸಮಾಜ ಅಂಬೇಡ್ಕರ್ ಅವರನ್ನು ಸರಿಯಾಗಿ ಗುರುತಿಸದೇ ಅವರಿಗೆ ಅನ್ಯಾಯವೆಸಗಿದೆ.
ಅಂಬೇಡ್ಕರ್ ಅವರ ಜೀವನದ ಕೆಲವು ಪ್ರಮುಖ ಅಂಶಗಳು
🔹 ಅಂಬೇಡ್ಕರ್ ಅವರು ಹಿಂದೂ ಧರ್ಮದ ಒಳಗಿದ್ದೇ ಸುಧಾರಿಸಲು ಹಲವು ಚಳವಳಿಗಳನ್ನು ನಡೆಸಿದರು. ಮುಖ್ಯವಾಗಿ ಮಹಾಡ್ನ ಚಳವಳಿ ಮತ್ತು ದೇವಾಲಯ ಪ್ರವೇಶ. ಮುಂಬಯಿಯ ದಕ್ಷಿಣ ಭಾಗದ ಮಹಾಡ್ನಲ್ಲಿ ದಲಿತರನ್ನು ಬೃಹತ್ ಮೆರವಣಿಗೆಯಲ್ಲಿ ಕರೆತಂದು ಕೆರೆಯ ನೀರನ್ನು ತೆಗೆದು ಚಾಲ್ತಿಯ ನಿಯಮವನ್ನು ಮುರಿದು ತಮ್ಮ ಹಕ್ಕನ್ನು ಚಲಾಯಿಸಿದರು. ಅಂಬೇಡ್ಕರ್ರ ಸಾಮಾಜಿಕ ಚಳವಳಿ ಇಲ್ಲಿಂದಲೇ ಆರಂಭವಾಯಿತು. 1930 ರಲ್ಲಿ ಅವರು ಇನ್ನೊಂದು ಚಳವಳಿಯನ್ನು ಪ್ರಾರಂಭಿಸಿದರು. ಅದು ದಲಿತರ ದೇವಾಲಯ ಪ್ರವೇಶ ಚಳವಳಿ.
🔹 ದುಂಡು ಮೇಜಿನ ಪರಿಷತ್ ಸಂದರ್ಭದಲ್ಲಿ ಅವರ ಅಪೇಕ್ಷೆಯಂತೆ ಅವರನ್ನು ಭೇಟಿ ಮಾಡಿದ ಅಂಬೇಡ್ಕರ್ರನ್ನು ಗಾಂಧಿ ಅಂಬೇಡ್ಕರ್ ನೀವು ನನ್ನನ್ನು ವಿರೋಧಿಸುತ್ತೀರಿ. ಟೀಕಿಸಿ ಮಾತನಾಡುತ್ತೀರಿ; ವಿರುದ್ಧ ಬರೆಯುತ್ತೀರಿ. ನೀವು ಹುಟ್ಟುವುದಕ್ಕಿಂತ ಹಿಂದಿನಿಂದಲೇ ನಾನು ಅಸ್ಪೃಶ್ಯತೆಯ ನಿವಾರಣೆಗೆ ಶ್ರಮಿಸುತ್ತಾ ಬಂದಿದ್ದೇನೆ; ಗೊತ್ತೇ? ಎಂದು ಆಕ್ಷೇಪಿಸಿದರು. ಅದಕ್ಕೆ ಅಂಬೇಡ್ಕರ್, ಬೇರೂನೂ ಹೇಳಲಿಲ್ಲದಿರುವಾಗ ಎಲ್ಲ ಮುದುಕರು ಈ ರೀತಿ ತಮ್ಮ ವಯಸ್ಸಿನ ಆಶ್ರಯ ಪಡೆಯುತ್ತಾರೆ ಎಂದು ತಿರುಗೇಟು ನೀಡಿದರು. ಅಸ್ಪೃಶ್ಯತೆ ನಿವಾರಣೆಗೆ ಯಾವುದೇ ಹಣ ಖರ್ಚು ಮಾಡಬೇಕಿಲ್ಲ. ಎರಡು ಕೆಲಸ ಮಾಡಿದರೆ ಸಾಕು; ಒಂದು, ಕಾಂಗ್ರೆಸ್ನ ಎಲ್ಲ ನಾಲ್ಕಾಣೆ (ಸಾಮಾನ್ಯ) ಸದಸ್ಯರು ಸದಸ್ಯತ್ವವನ್ನು ಪಡೆಯುವಾಗ, ತಮ್ಮ ಜೀವನದಲ್ಲಿ ಅಸ್ಪೃಶ್ಯತೆಯನ್ನು ಆಚರಿಸುವುದಿಲ್ಲವೆಂದು ಲಿಖಿತವಾಗಿ ತಿಳಿಸುವಂತೆ ವಿಧಿಸಬೇಕು. ಎರಡನೆಯದಾಗಿ ಎಲ್ಲ ಕಾಂಗ್ರೆಸ್ ನಾಯಕರು ತಮ್ಮ ಮನೆಗಳಲ್ಲಿ ಸಹಾಯಕನಾಗಿ ಓರ್ವ ಅಸ್ಪೃಶ್ಯ ಹುಡುಗ ಅಥವಾ ಹುಡುಗಿಯನ್ನು ಇರಿಸಿಕೊಳ್ಳಬೇಕು. ಅದರಿಂದ ವ್ಯಾಪಕ ಬದಲಾವಣೆ ಉಂಟಾಗುತ್ತದೆ; ನೀವೇನೂ ಹಣ ಖರ್ಚು ಮಾಡಬೇಕಿಲ್ಲ ಎಂದರು. ಸಹಜವಾಗಿ ಗಾಂಧಿ ಒಪ್ಪಲಿಲ್ಲ. ರಾಷ್ಟ್ರೀಯ ನಾಯಕರಾಗಿದ್ದ ಗಾಂಧಿಯವರ ಎದುರು ಹಾಗೆ ಹೇಳುವ ಧೈರ್ಯ ಯಾರಿಗೂ ಇದ್ದಿರಲಿಲ್ಲ. ಆಗ ಅಂಬೇಡ್ಕರ್ ಒಬ್ಬ ಯುವಕ, ಉದಯೋನ್ಮುಖ ಮುಂದಾಳು, ಅಷ್ಟೆ ಆಗಿದ್ದರು.
🔹 1930 ರಲ್ಲಿ ಬ್ರಿಟಿಷ್ ಸರ್ಕಾರ ದೇಶದ ಪ್ರಮುಖ ನಾಯಕರನ್ನು ಇಂಗ್ಲೆಂಡಿಗೆ ಕರೆದು ದುಂಡುಮೇಜಿನ ಪರಿಷತ್ತು ನಡೆಸಲು ತೀರ್ಮಾನಿಸಿತು; ಒಟ್ಟು ಅಂತಹ ಮೂರು ಪರಿಷತ್ತುಗಳು ನಡೆದಿವೆ. ಅಂಬೇಡ್ಕರ್ ಇವುಗಳಲ್ಲಿ ಭಾಗವಹಿಸಿದ್ದರು. ಬ್ರಿಟನ್ನಲ್ಲಿ ನಡೆದ ಮೊದಲ ಪರಿಷತ್ತನ್ನು ಗಾಂಧಿ ಬಹಿಷ್ಕರಿಸಿದ್ದರು. ಎರಡನೇ ದುಂಡುಮೇಜಿನ ಪರಿಷತ್ ಹೊತ್ತಿಗೆ ಗಾಂಧಿಜೀ ತಮ್ಮ ಬಹಿಷ್ಕಾರವನ್ನು ವಾಪಸು ಪಡೆದು ಭಾಗವಹಿಸಲು ನಿರ್ಧರಿಸಿದರು.
🔹 ಅಂಬೇಡ್ಕರ್ ಔಪಚಾರಿಕವಾಗಿ ರಾಜಕೀಯಕ್ಕೆ ಪ್ರವೇಶಿಸಿದ್ದು 1936 ರಲ್ಲಿ – ಇಂಡಿಪೆಂಡೆಂಟ್ ಲೇಬರ್ ಪಾರ್ಟಿ (ಐಪಿಎಲ್) ಎನ್ನುವ ತಮ್ಮದೇ ಪಕ್ಷದಿಂದ. ಅವರು ಆಗ ಹೊರತಂದ ಐಪಿಎಲ್ ಪಕ್ಷದ ಪ್ರಣಾಳಿಕೆಯು ವಸ್ತುನಿಷ್ಟವಾಗಿದ್ದವು. ಮುಂದೆ ಇಂದಿರಾ ಗಾಂಧಿಯವರು ಜಾರಿಗೆ ತಂದ ೨೦ ಅಂಶಗಳ ಕಾರ್ಯಕ್ರಮಗಳಿಗೂ ಇದಕ್ಕೂ ಸಾಮ್ಯತೆಯಿದೆ.
🔹 ಜಾತಿ ಮತ್ತದರ ಪರಿಣಾಮವನ್ನು ವಿಶ್ಲೇಷಿಸಿದ ಅಂಬೇಡ್ಕರ್ ಜಾತಿ ಪದ್ಧತಿಯಿಂದ ದೇಶದ ಅರ್ಥಿಕತೆಯ ಮೇಲಾಗುವ ಹಾನಿಯನ್ನು ವಿವರಿಸಿದ್ದರು. ಈ ಮೊದಲು ಯಾರೂ ಈ ದೃಷ್ಟಿಯಿಂದ ಆರ್ಥಿಕತೆಯನ್ನು ನೋಡಿರಲಿಲ್ಲ. ಅಂಬೇಡ್ಕರ್ ಅಸ್ಪೃಶ್ಯತೆ ಮತ್ತು ಜಾತಿಪದ್ಧತಿಯ ಕುರಿತು 1936ರಲ್ಲಿ ಪ್ರಕಟಿಸಿದ ಪುಸ್ತಕವನ್ನು ಗಾಂಧಿಜೀ ಟೀಕಿಸಿ, ತಮ್ಮ ’ಯಂಗ್ ಇಂಡಿಯಾ’ದಲ್ಲಿ ಎರಡು ಲೇಖನಗಳನ್ನು ಬರೆದರು. ಅದಕ್ಕೆ ಅಂಬೇಡ್ಕರ್ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು. ಪುಸ್ತಕದ ಮರುಮುದ್ರಣದಲ್ಲಿ ಗಾಂಧಿ ಟೀಕೆ; ಮತ್ತು ತಮ್ಮ ಉತ್ತರವನ್ನು ಸೇರಿಸಿ ಪ್ರಕಟಿಸಿದರು. ಚಾತುರ್ವಣ್ಯವು ಶ್ರಮದ ವಿಭಜನೆ ಮಾತ್ರ; ಇದು ಅರ್ಥಶಾಸ್ತ್ರದ ತತ್ತ್ವ. ಇಂಗ್ಲೆಂಡ್ ಅಮೆರಿಕ ಎಲ್ಲ ಕಡೆಯೂ ಇದೆ – ಎಂಬ ವಾದದ ಮೂಲಕ ಗಾಂಧಿಜೀ ವರ್ಣಾಶ್ರಮ ವ್ಯವಸ್ಥೆಯನ್ನು ಸಮರ್ಥಿಸಿದ್ದರು. ಅದಕ್ಕೆ ಅಂಬೇಡ್ಕರ್ ನೀಡಿದ ಉತ್ತರ ಕುತೂಹಲಕರ; ಚಾತುರ್ವರ್ಣ್ಯದಲ್ಲಿ ಇರುವುದು ಶ್ರಮದ ವಿಭಜನೆಯಲ್ಲ; ಶ್ರಮಿಕರ ವಿಭಜನೆ (ಡಿವಿಜನ್ ಆಫ್ ಲೇಬರ್ ಅಲ್ಲ; ಡಿವಿಜನ್ ಆಫ್ ಲೇಬರರ್ಸ್). ಒಬ್ಬ ವಿದ್ವಾಂಸನಿರಲಿ ಅಥವಾ ಜಾಡಮಾಲಿ ಇರಲಿ. ಅವರ ಪ್ರತಿಭೆ, ಕೌಶಲಗಳನ್ನು ಆಧರಿಸಿ ಅದು ತೀರ್ಮಾನಿಸುವುದಿಲ್ಲ. ಅವನು ಹುಟ್ಟಿದ ಜಾತಿಯೇ ಆಧಾರವಾಗಿರುತ್ತದೆ. ಇದೇ ಸಮಸ್ಯೆಯ ಮೂಲ. ಶ್ರಮದ ವಿಭಜನೆ ಸಹಜವಾಗಿದ್ದರೆ ಶ್ರಮಿಕರ ವಿಭಜನೆ ಅಸಹಜವಾಗಿರುತ್ತದೆ ಎಂದವರು ಹೇಳಿದಾಗ ಗಾಂಧಿಯವರ ಬಳಿ ಉತ್ತರ ಇರಲಿಲ್ಲ.
🔹 ಅಂಬೇಡ್ಕರ್ ಪೂರ್ತಿ ಸಾಮಾಜಿಕ ಬದಲಾವಣೆಯನ್ನು ಬಯಸಿದ್ದರು. ಕಾಂಗ್ರೆಸ್ ನಾಯಕರು ಚಲೇಜಾವ್ (ಕ್ವಿಟ್ ಇಂಡಿಯಾ) ಚಳವಳಿಗೆ ಕರೆ ಕೊಟ್ಟಾಗ ಬ್ರಿಟಿಷರು ಕೆಲವರನ್ನು ಬ್ರಿಟಿಷ್ ಭಾರತ ಸರ್ಕಾರದ ಮಂತ್ರಿಗಳನ್ನಾಗಿ ನೇಮಿಸಿದರು. ಅದು ವೈಸರಾಯ್ ಅವರ ಎಕ್ಸಿಕ್ಯೂಟಿವ್ ಕೌನ್ಸಿಲ್ ಕಾರ್ಯನಿರ್ವಾಹಕ ಮಂಡಳಿ. ಅದರ ಆರು ಮಂದಿಯಲ್ಲಿ ಅಂಬೇಡ್ಕರ್ ಕೂಡ ಒಬ್ಬರು. ಚಳವಳಿ ನಡೆಯುವಾಗ ಸರ್ಕಾರವನ್ನು ಸೇರಿದ್ದಕ್ಕೆ ಟೀಕೆಗಳು ಬಂದವು. ಅದಕ್ಕೆ ಪ್ರತಿಕ್ರಿಯಿಸುತ್ತಾ ನಾನು ಏಕಕಾಲದಲ್ಲಿ ಇಬ್ಬರು ಶತ್ರುಗಳ ವಿರುದ್ಧ ಹೋರಾಡಬೇಕಾಗಿದೆ. ಒಂದು ವಿದೇಶಿ ಶತ್ರುಗಳಾದರೆ ಇನ್ನೊಂದು ನನ್ನದೇ ಸೋದರರಾದ ಗಾಂಧಿ ಪ್ರತಿನಿಧಿಸುವ ಸಮಾಜ. ಇಬ್ಬರನ್ನೂ ಏಕಕಾಲಕ್ಕೆ ಎದುರಿಸಲು ಸಾಧ್ಯವಿರಲಿಲ್ಲ; ಒಬ್ಬರ ಜೊತೆ ಸೇರಿಕೊಂಡು ಇನ್ನೊಬ್ಬರ ವಿರುದ್ಧ ಹೋರಾಡಬೇಕಾಯಿತು. ಅದಕ್ಕಾಗಿ ನಾನು ಬ್ರಿಟಿಷ್ ಸರ್ಕಾರದೊಂದಿಗೆ ಸೇರಿಕೊಂಡೆ ಎಂದರು.
🔹 ಅವರ ಖಾತೆಯ ಹೆಸರು ಲೇಬರ್ ವೆಲ್ಫೇರ್ (ಕಾರ್ಮಿಕ ಕಲ್ಯಾಣ). ಅದರಲ್ಲಿ ಕಾರ್ಮಿಕ ಖಾತೆ ಉದ್ಯೋಗ, ಇಂಧನ, ಲೋಕೋಪಯೋಗಿ, ನೀರು ನಿರ್ವಹಣೆ, ಗಣಿಗಾರಿಕೆ ಮುಂತಾಗಿ ಇಂದಿನ ಸುಮಾರು ೧೫ ಖಾತೆಗಳಿದ್ದವು. ಆರ್ಥಿಕ ತಜ್ಞನಾದ ಓರ್ವ ಆಡಳಿತಗಾರನಾಗಿ ಅವರು ಶ್ರೇಷ್ಠ ಕೊಡುಗೆ ನೀಡಿದರು. ನಾವಿಂದು ಹೇಳುವ ವಿದೇಶಿ ವಿನಿಮಯ, ಪ್ರಧಾನಿ ಮೋದಿ ಜಾರಿಗೆ ತಂದಿರುವ ’ಸ್ಕಿಲ್ ಇಂಡಿಯಾ’ದ ಕೌಶಲವೃದ್ಧಿ ಕಾರ್ಯಕ್ರಮದ ಮೂಲ, ಉದ್ಯೋಗ ವಿನಿಮಯ ವ್ಯವಸ್ಥೆ, ಕಾರ್ಮಿಕರಿಗೆ ಸಂಬಂಧಿಸಿದ ವಿವಾದಗಳ ಪರಿಹಾರಕ್ಕಾಗಿ ರಾಜಿಮಾತುಕತೆ ವಿಧಾನವನ್ನು ಅವರು ಜಾರಿಗೆ ತಂದರು. ಕಾರ್ಮಿಕ ಕಲ್ಯಾಣಕ್ಕಾಗಿ ಕೆಲಸದ ಅವಧಿಯನ್ನು 12 ಗಂಟೆಯಿಂದ 8 ಗಂಟೆಗೆ ಇಳಿಸಿದ್ದು, ಗೃಹ ನಿರ್ಮಾಣ, ವಿಮೆ, ಸುರಕ್ಷೆ, ಭದ್ರತೆ ಸಂಬಂಧಿಸಿದ ವಿವಿಧ ಯೋಜನೆಗಳು, ಮಹಿಳಾ ಕಾರ್ಮಿಕರಿಗೆ ಹೆರಿಗೆ ರಜೆ ಇವನ್ನೆಲ್ಲ ಅಂಬೇಡ್ಕರ್ ಆರಂಭಿಸಿದರು. ಇನ್ನು ಕೇಂದ್ರೀಯ ಜಲ ಆಯೋಗವನ್ನು ಸ್ಥಾಪಿಸಿದ್ದು ಕೂಡಾ ಅಂಬೇಡ್ಕರ್. ಹಿರಾಕುಡ್, ದಾಮೋದರ ಕಣಿವೆ ಯೋಜನೆ ಮುಂತಾದ ಅಣೆಕಟ್ಟುಗಳನ್ನು ನಿರ್ಮಿಸಿದರು. ದಾಮೋದರ ಕಣಿವೆ ಯೋಜನೆಗೆ ಅವರು ಅಮೆರಿಕದ ಟೆನಿಸ್ಸಿ ವ್ಯಾಲಿಯನ್ನು ರೂಪಿಸಿದ ತಜ್ಞನನ್ನೇ ಕರೆಸಿದ್ದರು. ಕಲ್ಲಿದ್ದಲು,
🔹 ಕಬ್ಬಿಣ ಮುಂತಾದ ಖನಿಜಗಳ ನಿರ್ವಹಣೆಗೆ ವ್ಯವಸ್ಥೆಯನ್ನು ರೂಪಿಸಿದರು. ವಿದ್ಯುತ್ ವಿಷಯದಲ್ಲಿ ಮಹತ್ತ್ವದ ಕೊಡುಗೆ ನೀಡಿದರು.
🔹 ಎರಡನೇ ದುಂಡುಮೇಜಿನ ಪರಿಷತ್ತಿನಲ್ಲಿ ದಲಿತರಿಗೆ ಪ್ರತ್ಯೇಕ ಮತಗಟ್ಟೆ ಇರಬೇಕೇ ಅಥವಾ ಜಂಟಿ ಮತಗಟ್ಟೆಗಳಿರಬೇಕೇ ಎಂಬುದು ಚರ್ಚೆಯ ಪ್ರಮುಖ ವಿಷಯವಾಗಿ ಗಾಂಧಿ ಮತ್ತು ಅಂಬೇಡ್ಕರ್ ನಡುವೆ ಹಣಾಹಣಿಗೆ ಕಾರಣವಾಗಿತ್ತು. ಮುಸ್ಲಿಮರಿಗೆ ಅಥವಾ ಸಿಖ್ಖರಿಗೆ ಪ್ರತ್ಯೇಕ ಮತಗಟ್ಟೆ ನೀಡುವುದನ್ನು ನಾನು ವಿರೋಧಿಸಲಾರೆ. ಆದರೆ ದಲಿತರಿಗೆ ಪ್ರತ್ಯೇಕ ಮತಗಟ್ಟೆ ಅಸಾಧ್ಯ. ಅದು ನನ್ನ ಶವದ ಮೇಲೆ ಆಗಬಹುದು ಎಂದು ಗಾಂಧಿ ಘೋಷಿಸಿದರು. ದಲಿತರಿಗೆ ಪ್ರತ್ಯೇಕ ಮತಗಟ್ಟೆ ಬೇಕೆಂಬುದು ಅಂಬೇಡ್ಕರ್ ಬೇಡಿಕೆಯಾಗಿತ್ತು. ಚರ್ಚೆ ತೀವ್ರವಾದಾಗ ನಿರ್ಧಾರವನ್ನು ಬ್ರಿಟಿಷ್ ಪ್ರಧಾನಿಯ ವಿವೇಚನೆಗೆ ಬಿಡಲಾಯಿತು. ಆರ ತಿಂಗಳ ನಂತರ ಬಂದ ತೀರ್ಮಾನ ರಾಷ್ಟ್ರನಾಯಕ ಗಾಂಧಿಗೆ ವಿರುದ್ಧವಾಗಿತ್ತು. ಅಂಬೇಡ್ಕರ್ ಪರವಾಗಿತ್ತು. ಯಾವ ತೀರ್ಮಾನ ಬಂದರೂ ಒಪ್ಪಿಕೊಳ್ಳುವುದಾಗಿ ಪರಿಷತ್ತಿನಲ್ಲಿ ಹೇಳಿದ್ದ ಗಾಂಧಿ, ತೀರ್ಮಾನದಿಂದ ಆಘಾತಗೊಂಡು ನಿಲವು ಬದಲಿಸಿ, ತೀರ್ಮಾನದ ವಿರುದ್ದ ಆಮರಣ ಉಪವಾಸ ಕೈಗೊಂಡರು. ಕೊನೆಗೆ ಅಂಬೇಡ್ಕರ್ ಮೇಲೆ ಒತ್ತಡ ಹೇರಿ, ಅವರನ್ನು ದೇಶದ್ರೋಹಿ ಎಂದೆಲ್ಲ ಟೀಕಿಸಿ, ಅಂಬೇಡ್ಕರ್ ಒಲ್ಲದ ಮನಸ್ಸಿನಿಂದ ತಮ್ಮ ಬೇಡಿಕೆ ಹಿಂತೆಗೆದುಕೊಳ್ಳುವಂತೆ ಮಾಡಿದರು.
🔹 1940 ರ ಮಾರ್ಚ್ನಲ್ಲಿ ಮುಸ್ಲಿಂಲೀಗ್ ಮೊದಲ ಬಾರಿಗೆ ಪ್ರತ್ಯೇಕ ಪಾಕಿಸ್ತಾನವನ್ನು ಕೇಳಿತು. ಅದಾಗಿ 9 ತಿಂಗಳೊಳಗೆ ಪಾಕಿಸ್ತಾನದ ಬಗೆಗಿನ ಮೊದಲ ಪುಸ್ತಕ ಡಾ|| ಅಂಬೇಡ್ಕರ್ ಅವರಿಂದ ಬಂತು. ಮೊದಲು ಅದರ ಹೆಸರು ’ಥಾಟ್ಸ್ ಆನ್ ಪಾಕಿಸ್ತಾನ್’ ಎಂದಿದ್ದು, 1945 ರಲ್ಲಿ ಮರುಮುದ್ರಣವಾದಾಗ ’ಪಾಕಿಸ್ತಾನ ಆರ್ ಪಾರ್ಟಿಶನ್ ಆಫ್ ಇಂಡಿಯಾ’ ಎಂಬ ಹೆಸರು ನೀಡಿದರು. ಮಹತ್ತ್ವದ ಸಂಗತಿಯೆಂದರೆ ಗಾಂಧಿ ಮತ್ತು ಜಿನ್ನಾ ಇಬ್ಬರೂ ಕೂಡ ಪಾಕಿಸ್ತಾನದ ವಿಷಯಕ್ಕೆ ಅದೇ ಅಧಿಕೃತ ಪುಸ್ತಕ ಎಂದು ಒಪ್ಪಿಕೊಂಡಿದ್ದರು; ಅಂತಹ ವಿದ್ವತ್ತು ಅಂಬೇಡ್ಕರ್ರದ್ದು.
🔹 ನೆಹರು ಸಂವಿಧಾನದ ರಚನೆಗೆ ಓರ್ವ ಬ್ರಿಟಿಷ್ ತಜ್ಞನನ್ನು (ಔಟ್ ಸೋರ್ಸ್ ಆಗಿ) ನೇಮಿಸಿಕೊಂಡಿದ್ದರು. ಆದರೆ ಗಾಂಧಿ ಅವರ ಸೂಚನೆಯಂತೆ ಕರಡು ಪ್ರತಿ ಸಮಿತಿ (ಡ್ರಾಫ್ಟಿಂಗ್ ಕಮಿಟಿ) ಸದಸ್ಯರಾಗಿ ಸೇರಿಸಿಕೊಂಡು ಮತ್ತೆ ಅಧ್ಯಕ್ಷಸ್ಥಾನಕ್ಕೆ ಏರಿದರು. ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರು ಪರಸ್ಪರ ಜಗಳಾಡುತ್ತಿದ್ದರೂ ಅವರ ನಡುವೆ ವೃತ್ತಿಗೌರವವಿತ್ತು; ಮತ್ತು ವೈಯಕ್ತಿಕ ಅಹಂಗಿಂತ ದೇಶ ದೊಡ್ಡದೆನ್ನುವ ಭಾವವಿತ್ತು. ಅವರು ದೇಶದ ಮೊದಲ ಕಾನೂನು ಮಂತ್ರಿಯಾಗಿದ್ದಾಗ ಸಂವಿಧಾನ ರಚನಾ ಸಭೆಯಲ್ಲೂ ಕೆಲಸ ಮಾಡುತ್ತಿದ್ದರು. ಆಗ ಸಂವಿಧಾನ ಸಭೆಯೇ ಸಂಸತ್ತಿನಂತೆ ಕೆಲಸ ಮಾಡುತ್ತಿತ್ತು. ಅಂಬೇಡ್ಕರ್ ಎರಡರಲ್ಲೂ ಇದ್ದು ಕಾರ್ಯ ನಿರ್ವಹಿಸುತ್ತಿದ್ದರು.
🔹 ಸಂವಿಧಾನ ರಚನೆಯನ್ನು ಮುನ್ನಡೆಸಿದ್ದು (ಪೈಲೆಟಿಂಗ್) ಅಂಬೇಡ್ಕರ್ ಅವರ ಬಹುದೊಡ್ಡ ಕೊಡುಗೆಯಾಗಿದೆ. ಕರಡು ಪ್ರತಿಗೆ 7,000 ಕ್ಕೂ ಅಧಿಕ ತಿದ್ದುಪಡಿಗಳನ್ನು ಸೂಚಿಸಲಾಯಿತು. ದೇಶದ ಶ್ರೇಷ್ಠ ಮಿದುಳುಗಳೆನಿಸುವ 295 ಮಂದಿ ಸಂವಿಧಾನ ರಚನಾ ಸಭೆಯ ಸದಸ್ಯರಾಗಿದ್ದರು. ಪರ-ವಿರೋಧ ಎರಡೂ ಅಭಿಪ್ರಾಯಗಳನ್ನು ಮಂಡಿಸಿ ಅಂಬೇಡ್ಕರ್ ಒಮ್ಮತಕ್ಕೆ ಬರಲು ಯತ್ನಿಸುತ್ತಿದ್ದರು. 295 ಜನರಿದ್ದರೂ ಒಮ್ಮತದ ನಿರ್ಣಯಕ್ಕೆ ಬರಲಾಗುತ್ತಿತ್ತೇ ವಿನಾ ಬಹುಮತದ ನಿರ್ಣಯ ಕೈಗೊಳ್ಳುತ್ತಿರಲಿಲ್ಲ.
🔹 ಸ್ವತಂತ್ರ ಭಾರತದ ಮೊದಲ ಸಚಿವ ಸಂಪುಟಕ್ಕೆ ಅಂಬೇಡ್ಕರ್ ಅವರನ್ನು ಸೇರಿಸಿದವರು ಗಾಂಧಿ. ಮೊದಲ ಕಾನೂನು ಮಂತ್ರಿಯಾಗಿ ಅಂಬೇಡ್ಕರ್ ಹಲವು ಕೊಡುಗೆಗಳನ್ನು ನೀಡಿದ್ದಾರೆ; ಬಹುಮುಖ್ಯವಾದದ್ದು ಹಿಂದೂ ಕೋಡ್ ಬಿಲ್. ಅಂಬೇಡ್ಕರ್ ಅಂತರ್ಜಾತಿ ವಿವಾಹ, ವಿಚ್ಛೇದನ, ತಂದೆಯ ಆಸ್ತಿಯಲ್ಲಿ ಹೆಣ್ಣಿಗೆ ಸಮಾನ ಪಾಲು, ಮೃತ ಪತಿಯ ಆಸ್ತಿಯಲ್ಲಿ ಮಹಿಳೆಗೆ ಪಾಲು, ಗಂಡು-ಹೆಣ್ಣಿಗೆ ಸಮಾನ ಪಾಲು ಇವುಗಳ ಬಗ್ಗೆ ಶ್ರಮಿಸಿದರು. ಆದರೆ ಅವರಿಗೆ, ಕಾಂಗ್ರೆಸ್ ಪಕ್ಷದಿಂದಲೇ ವಿರೋಧ ಬಂತು. ಇದು ಲಿಂಗ ಸಮಾನತೆ ಹಾಗೂ ಸಮಾನ ನಾಗರಿಕಸಂಹಿತೆಯೆಡೆಗಿನ ಮೊದಲ ಹೆಜ್ಜೆಯಾಗಿದೆ. ಆ ಬಗ್ಗೆ ಮೂರೂವರೆ ವರ್ಷ ಪ್ರಯತ್ನಿಸಿದರೂ ವಿಫಲರಾದ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಕನ್ನಡಕ್ಕೆ: ಅನಿಲ್ ಕುಮಾರ್ ಮೊಳಹಳ್ಳಿ
(ಮೂಲ ಲೇಖನ : ಡಾ|| ನರೇಂದ್ರ ಜಾಧವ್. ಅವರು ಪ್ರಸ್ತುತ ರಾಜ್ಯಸಭಾ ಸದಸ್ಯರು. ರಿಸರ್ವ್ ಬ್ಯಾಂಕ್ ಆಪ್ ಇಂಡಿಯಾದ ಆರ್ಥಿಕ ವಿಭಾಗದ ಮಾಜಿ ಮುಖ್ಯಸ್ಥರೂ ಪುಣೆ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಹಾಗೂ ಯೋಜನಾ ಆಯೋಗದ ಸದಸ್ಯರೂ, ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಸದಸ್ಯರೂ ಆಗಿದ್ದ ಡಾ|| ಜಾಧವ್ ದೇಶದ ಖ್ಯಾತ ಆರ್ಥಿಕ ತಜ್ಞರಲ್ಲೊಬ್ಬರು. ಸಂವಿಧಾನ ಶಿಲ್ಪಿ ಬಿ.ಆರ್ ಅಂಬೇಡ್ಕರ್ ಅವರ ಬಗ್ಗೆ ಅಪಾರ ಜ್ಞಾನ ಹೊಂದಿರುವ ಜಾಧವ್, ಪ್ರಮುಖ ದಲಿತ ಚಿಂತಕರು. ಇವರ ಸುಮಾರು ೩೬ ಕೃತಿಗಳ ಪೈಕಿ ೨೦ ಕೃತಿಗಳು ಅಂಬೇಡ್ಕರ್ ಅವರ ಕುರಿತಾಗಿವೆ. ಅಂಬೇಡ್ಕರ್ ವಿಚಾರ ಯಾತ್ರೆಯ ಹೆಸರಿನಲ್ಲಿ ದೇಶದಾದ್ಯಂತ ಪ್ರವಾಸ ಕೈಗೊಂಡಿದ್ದಾರೆ.)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.