ವಿಶ್ವವೇ ಕೊರೋನಾ ಸೋಂಕಿಗೆ ತತ್ತರಿಸಿ ಹೋಗಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕೋಟಿ ಕೋಟಿ ದುಡಿಯುತ್ತಿದ್ದವರನ್ನೂ ಮನೆಯೊಳಗೆ ಕೂರುವಂತೆ ಮಾಡಿರುವ ಈ ವೈರಸ್ ಇಡೀ ಪ್ರಪಂಚವೇ ಆರ್ಥಿಕ ಬಿಕ್ಕಟ್ಟಿನ ಇಕ್ಕಟ್ಟಿಗೆ ಸಿಲುಕಿದೆ. ಶ್ರೀಮಂತರನ್ನೂ ತಲೆಗೆ ಕೈ ಹೊತ್ತು ಕೂರುವಂತೆ ಮಾಡಿದೆ ಅಂದ ಮೇಲೆ ಬಡವರಂತೂ ಕೈಯಲ್ಲಿ ಹಣವಿಲ್ಲದೆ, ಬೇಕು ಬೇಡಗಳನ್ನು ಪೂರೈಸಿಕೊಳ್ಳಲು ಬೇಕಾದ ಕೆಲಸವೂ ಇಲ್ಲದೆ ಆಕಾಶ ನೋಡುವಂತಾಗಿದೆ ಎಂದರೂ ತಪ್ಪಲ್ಲ. ಹಾಗಾದರೆ ಇಂತಹ ಕಠಿಣ ಆರ್ಥಿಕ ಹಿಂಜರಿತದಿಂದ ಪಾರಾಗುವ ಬಗೆ ಹೇಗೆ ಎಂಬುದಕ್ಕೆ ಇಲ್ಲಿದೆ ಕೆಲವು ಉಪಾಯಗಳು.
ತುರ್ತು ಸಂದರ್ಭಗಳಿಗೆಂದೇ ಮುಂಜಾಗ್ರತೆಯಾಗಿ ಉಳಿತಾಯ ಖಾತೆಗಳಲ್ಲಿ ಹಣ ಇಟ್ಟುಕೊಳ್ಳುವುದು
ಬ್ಯಾಂಕ್ ಅಥವಾ ಇನ್ನಿತರ ಹಣಕಾಸು ಸಂಸ್ಥೆಗಳಲ್ಲಿ ನಾವು ದುಡಿದ ಹಣದಲ್ಲಿ ಕೊಂಚ ಪ್ರಮಾಣವನ್ನು ತುರ್ತು ಅವಶ್ಯಕತೆಗೆ ಎಂದೇ ಕೂಡಿಡುವ ಕ್ರಮವನ್ನು ಅನುಸರಿಸಬೇಕು. ಮಾಸಿಕವಾಗಿ ಇಂತಿಷ್ಟು ಹಣ ನನ್ನ ಮತ್ತು ನನ್ನ ಕುಟುಂಬದ ತುರ್ತು ಅಗತ್ಯತೆಗಾಗಿ ಬೇಕು (ಅಂತಹ ಕಠಿಣ ಸಂದರ್ಭಗಳು ಬರಲಿ, ಬಾರದೇ ಇರಲಿ) ಎಂದು ಪ್ರತಿ ತಿಂಗಳ ಬಜೆಟ್ ನಲ್ಲಿ ಎಮರ್ಜೆನ್ಸಿ ಫಂಡ್ ನಲ್ಲಿ ಹಾಕೂವುದನ್ನು ರೂಢಿಸಿಕೊಂಡಲ್ಲಿ ಇಂತಹ ಸಂದರ್ಭಗಳಿಂದ ಕೊಂಚ ಮಟ್ಟಿಗೆ ಪಾರಾಗುವುದು ಸಾಧ್ಯ.
ಇನ್ಶೂರೆನ್ಸ್ಗಳ ಮೂಲಕವೂ ಉಳಿತಾಯ
ಇನ್ಶೂರೆನ್ಸ್ ಗಳಲ್ಲಿ ಹಣ ಹೂಡುವ ಮೂಲಕವೂ ಕೋವಿಡ್-19 ನಂತಹ ಆಕಸ್ಮಿಕ ಪರಿಸ್ಥಿತಿಯಲ್ಲಿ ನಮ್ಮನ್ನು ನಾವು ಕಾಪಾಡಿಕೊಳ್ಳುವುದು ಸಾಧ್ಯ. ಕೊರೋನಾ ದಂತಹ ಪರಿಸ್ಥಿತಿಗಳು ಯಾವಾಗ ಅಪ್ಪಳಿಸುವುದೋ ಎಂಬುದನ್ನು ಯಾರಿಂದಲೂ ಮುಂಚಿತವಾಗಿ ತಿಳಿಸುವುದು ಅಸಾಧ್ಯ. ಆದರೆ ಇಂತಹ ಸಂದರ್ಭಗಳು ಘಟಿಸುವ ಮುನ್ನವೇ ನಾರ್ಮಲ್ ಇನ್ಶೂರೆನ್ಸ್ ಅಥವಾ ಮುಖ್ಯವಾಗಿ ಹೆಲ್ತ್ ಇನ್ಶೂರೆನ್ಸ್ ಗಳಲ್ಲಿ ತೊಡಗಿಸಿಕೊಂಡಿದ್ದರೆ ಅವುಗಳು ಉಪಯೋಗಕ್ಕೆ ಬರುವುದು.
ಹೂಡಿಕೆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು
ಹಣ ಉಳಿತಾಯ ಮಾಡುವುದಕ್ಕೆ ಇನ್ನೊಂದು ಮಾರ್ಗವೇ ಹೂಡಿಕೆ ಕ್ಷೇತ್ರ. ಸಣ್ಣ ಪ್ರಮಾಣದ ಹೂಡಿಕೆ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಇಂತಹ ತುರ್ತು ಸಂದರ್ಭದಲ್ಲಿ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬಹುದು. ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದರಿಂದ ಇಂತಹ ಹೆಲ್ತ್ ಎಮರ್ಜೆನ್ಸಿ ಸಂದರ್ಭಗಳಿಂದ ಪಾರಾಗುವುದು ಸಾಧ್ಯ. ಹೆಲ್ತ್ ಕಾರ್ಡ್ ಗಳನ್ನು ಮಾಡುವ ಮೂಲಕವೂ ಆರೋಗ್ಯ ಸಂಬಂಧಿ ಆಕಸ್ಮಿಕಗಳು ಘಟಿಸಿದಾಗ ಪಾರಾಗಬಹುದು.
ಡಿಜಿಟಲ್ ಬ್ಯಾಂಕಿಂಗ್
ಅಯ್ಯಯ್ಯೋ, ಪರಿಸ್ಥಿತಿ ಬಿಗಡಾಯುಸಿದೆಯಲ್ಲಾ. ಬ್ಯಾಂಕ್ ನಲ್ಲಿ ಹಣವಿದೆ. ಆದರೆ ಹೋಗಿ ತೆಗೆದುಕೊಂಡು ಬರುವಂತಿಲ್ಲ ಎಂದು ಚಿಂತಿಸುವ ಬದಲು ಮೊಬೈಲ್ ಬ್ಯಾಂಕಿಂಗ್, ಡಿಜಿಟಲ್ ಬ್ಯಾಂಕಿಂಗ್ ನಂತಹ ಆಧುನಿಕ ಕ್ರಮಗಳ ಬಳಕೆಯನ್ನು ತಿಳಿದುಕೊಳ್ಳುವುದು ಹಾಗೆಯೇ ಬಳಕೆ ಮಾಡುವುದು ಉತ್ತಮ. ಹಲವು ಬಾರಿ ಬ್ಯಾಂಕ್, ಎಟಿಎಂ ಗಳಿಂದ ಹಣ ಪಡೆಯುವುದು ಅಸಾಧ್ಯವಾಗುತ್ತದೆ. ಹೀಗಿರುವಾಗ ನಮ್ಮ ಕೈಯಲ್ಲೇ ಇರುವ ಮೊಬೈಲ್ ಮೂಲಕವೇ ಮನಿ ಟ್ರಾನ್ಸಾಕ್ಷನ್ ಮಾಡುವುದನ್ನು ತಿಳಿದುಕೊಂಡರೆ ಕೈಯಲ್ಲಿ ಹಣವಿಲ್ಲದಿದ್ದರೂ ಬಚಾವ್ ಆಗುವುದು ಸಾಧ್ಯ.
ಯಾವುದಕ್ಕೂ ಅಗತ್ಯಕ್ಕೆ ಎಂದು ಮನೆಯಲ್ಲಿ ಸ್ವಲ್ಪ ಹಣವಿರಲಿ
ಇನ್ನು ಈ ಮೇಲಿನ ಎಲ್ಲಾ ಕ್ರಮಗಳನ್ನು ಅನುಸರಿಸುವ ಹೊರತಾಗಿಯೂ ಮನೆಯಲ್ಲಿ ಕೊಂಚ ಹಣವನ್ನು ಇಟ್ಟುಕೊಂಡಲ್ಲಿ ಹಲವು ಸಂದರ್ಭಗಳಲ್ಲಿ ಕಠಿಣ ಪರಿಸ್ಥಿತಿಯಲ್ಲಿ ನಮ್ಮನ್ನು ನಾವು ಕಾಪಾಡಿಕೊಳ್ಳಲು ಸಾಧ್ಯ. ಮನೆಯ ಪಕ್ಕದ ದಿನಸಿ ಅಂಗಡಿ, ತರಕಾರಿ ಅಂಗಡಿ, ಸಣ್ಣ ಹೊಟೇಲ್, ಊರಿನ ಕ್ಲಿನಿಕ್ ಗಳಲ್ಲಿ ಡಿಜಿಟಲ್ ಪೇಮೆಂಟ್ ಗಳಿಗೆ ಅವಕಾಶವಿಲ್ಲದಾಗ ನೀಡಲು ಮುಂಜಾಗ್ರತಾ ಕ್ರಮವಾಗಿ ಮನೆಯಲ್ಲಿಯೂ ಸ್ವಲ್ಪ ಪ್ರಮಾಣದ ಎಮರ್ಜೆನ್ಸಿ ಮನಿ ಕೂಡಿಟ್ಟಲ್ಲಿ ಉತ್ತಮ.
ಸಂದರ್ಭಗಳು ಯಾವ ರೀತಿ ಎದುರಾಗುತ್ತದೆ ಎಂಬುದನ್ನು ಯಾರಿಂದಲೂ ಹೇಳುವುದು ಅಸಾಧ್ಯ. ಆದರೆ ಹೀಗಾದರೆ.. ಎಂಬ ಚಿಕ್ಕ ಅನುಮಾನಗಳ ಜೊತೆಗೆ ನಾಳಿನ ಭದ್ರತೆಯ ದೃಷ್ಟಿಯಿಂದ ನಮ್ಮ ಆರ್ಥಿಕತೆಯ ಬುಡವನ್ನು ಇಂದೇ ನಾವು ಗಟ್ಟಿಯಾಗಿ ಇರಿಸಿಕೊಂಡಲ್ಲಿ ಎಂತಹ ಪರಿಸ್ಥಿತಿಯಲ್ಲಿಯೂ ಕೊಂಚ ಮಟ್ಟಿಗೆ ನಾವು ಸಭಲರಾಗಿರುವುದು ಸಾಧ್ಯವಾಗುತ್ತದೆ. ಕೊರೋನಾ ಪರಿಸ್ಥಿತಿ ವಿಶ್ವವನ್ನು ಕಂಗೆಡಿಸುವಂತಾಗುವುದಕ್ಕೂ ಮೂಲ ಕಾರಣ ನಮ್ಮ ಆರ್ಥಿಕ ಸ್ಥಿತಿಯ ಮೇಲೆ ನಾವು ನಿಯಂತ್ರಣ ಹೇರಿಕೊಳ್ಳದೇ ಇದ್ದದ್ದು. ಉಳಿತಾಯ ಮಾಡುವ ನಿಟ್ಟಿನಲ್ಲಿಯೂ ನಮ್ಮ ಪ್ರಯತ್ನ ಕಡಿಮೆಯಾದದ್ದು. ಇನ್ನಾದರೂ ಎಚ್ಚೆತ್ತುಕೊಂಡು ನಮ್ಮ ಆರ್ಥಿಕ ಸ್ಥಿತಿಯನ್ನು ನಾವು ಸ್ಥಿರವಾಗಿರಿಸಿಕೊಳ್ಳುವತ್ತ ಚಿತ್ತ ನೆಟ್ಟಲ್ಲಿ ಇಂತಹ ಸ್ಥಿತಿಯಿಂದ ಪಾರಾಗಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.