ವೃತ್ತಿಯಲ್ಲಿ ಸಾಫ್ಟ್ವೇರ್ ಉದ್ಯೋಗಿ. ಬಹುತೇಕ ಸಾಫ್ಟ್ವೇರ್ ಉದ್ಯೋಗಿಗಳಿಗೆ ತಾವಾಯಿತು ತಮ್ಮ ಕೆಲಸವಾಯಿತು ಎಂಬ ಮನೋಭಾವವೇ ಹೆಚ್ಚು. ಇದಕ್ಕೆ ಅಪವಾದವೆಂಬಂತೆ ವಿಭಿನ್ನ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ಸಾಫ್ಟ್ವೇರ್ ಉದ್ಯೋಗಿಗಳು ಕಾಣಸಿಗುವುದು ಅತ್ಯಂತ ವಿರಳ. ಅಂತಹ ವಿರಳ ವರ್ಗಕ್ಕೆ ಸೇರಿದವರು ವಿನೋದ್ ಚೆನ್ನಕೃಷ್ಣ. ಅಥ್ಲೆಟಿಕ್ಸ್ನಲ್ಲಿ ಏನಾದರೂ ವಿಶಿಷ್ಟ ಸಾಧನೆ ಮಾಡಬೇಕೆಂಬ ತುಡಿತ ಹೊಂದಿರುವ ಅವರು ಸ್ವ ಆಸಕ್ತಿಯಿಂದ ಉನ್ನತ ಸ್ಥಾನಗಳನ್ನೇರಿದ್ದಾರೆ.
ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಹಂಬಲ ಹೊಂದಿದ್ದ ವಿನೋದ್ ಚೆನ್ನಕೃಷ್ಣ, 1999 ರಿಂದಲೂ (ಯೂಥ್ ಯುನಿಟಿ ವೈಟಾಲಿಟಿ ಅಂಡ್ ಅವೇರ್ನೆಸ್) ಯುವ ಕ್ಲಬ್ನಲ್ಲಿ ಅಭ್ಯಾಸ ನಡೆಸುತ್ತಿದರು. ವಿಶಿಷ್ಟ ಸಾಧನೆ ಮಾಡುವ ಮೊದಲ ಹೆಜ್ಜೆಯಾಗಿ 2010ರಲ್ಲಿ (ಯೂಥ್ ಯುನಿಟಿ ವೈಟಾಲಿಟಿ ಅಂಡ್ ಅವೇರ್ನೆಸ್) ಯುವ ಕ್ಲಬ್ನಲ್ಲಿ ಸಹಾಯಕ ತರೆಬೇತುದಾರರಾಗಿ ಸೇರ್ಪಡೆಯಾದರು.
ಕನಸುಗಳ ಗೋಪುರದೊಂದಿಗೆ ಯುವ ಕ್ಲಬ್ ಸೇರಿದ ವಿನೋದ್ ಚೆನ್ನಕೃಷ್ಣ ಅವರ ಹಾದಿ ಸುಗಮವಾಗೇನು ಇರಲಿಲ್ಲ. ಹೆಜ್ಜೆ ಹೆಜ್ಜೆಗೂ ಕಹಿ ಘಟನೆಗಳೇ ಎದುರಾದವು. ಕ್ಲಬ್ನ ಆಡಳಿತ ಮಂಡಳಿ ಅಥವಾ ಹಿರಿಯ ತರಬೇತುದಾರರಿಂದ ನಿರೀಕ್ಷಿತ ಬೆಂಬಲ ದೊರೆಯಲಿಲ್ಲ. ತಮ್ಮ ಸಾಮರ್ಥ್ಯ ನಿರೂಪಿಸಲು ಸೂಕ್ತ ಅವಕಾಶವೂ ಸಿಗಲಿಲ್ಲ. ಇದೆಲ್ಲವನ್ನು ಕಂಡು ಆಕಾಶವೇ ಮೇಲೆಬಿದ್ದಂತ ಭಾವನೆ ವಿನೋದ್ ಚೆನ್ನಕೃಷ್ಣ ಅವರಿಗೆ. ಅಥ್ಲೆಟಿಕ್ಸ್ನಲ್ಲಿ ಛಾಪು ಮೂಡಿಸಬೇಕೆಂಬ ಕನಸು ಕಮರುತ್ತಿದೆ ಎಂದುಕೊಳ್ಳುವಾಗ ಕಣ್ಣಿಗೆ ಬಿದ್ದದ್ದು ದಿವ್ಯಾಂಗ ಮಕ್ಕಳು.
ಮಕ್ಕಳ ಹಂಬಲ ನೋಡಿದ ವಿನೋದ್, ಅವರಿಗೆ ಯಾರೂ ತರಬೇತಿ ನೀಡದಿದ್ದನ್ನು ಕಂಡು ತಾವೇ ತರಬೇತಿ ನೀಡಲು ಮುಂದಾದರು. ಅಥ್ಲೆಟಿಕ್ಸ್ ಅಭ್ಯಾಸ ನಡೆಸಲು ಕ್ಲಬ್ಗೆ ಬರುತ್ತಿದ್ದ ದಿವ್ಯಾಂಗ ಮಕ್ಕಳು ವಿನೋದ್ ಕಣ್ಣಿಗೆ ಬಿದ್ದಾಗ ತನ್ನನ್ನು ನಿರೂಪಿಸಿಕೊಳ್ಳಲು ಇದೊಂದು ಸುವರ್ಣಾವಕಾಶ ಎಂದೇ ಭಾವಿಸಿದರು. ವಿನೋದ್ ಅವರ ಈ ನಿರ್ಧಾರ ಕ್ಲಬ್ನಲ್ಲಿ ತನ್ನನ್ನು ತಾನು ನಿರೂಪಿಸಿಕೊಳ್ಳಲು ಸಾಕಷ್ಟು ನೆರವಾಯಿತು ಎನ್ನಬಹುದು.
ದಿವ್ಯಾಂಗ ಮಕ್ಕಳಿಗೆ ತರಬೇತಿ ನೀಡುವಾಗ ತಮಗಾದ ಅನುಭವಗಳನ್ನು ವಿನೋದ್ ಅವರ ಮಾತುಗಳಲ್ಲೇ ತಿಳಿಯೋಣ. “ದಿವ್ಯಾಂಗ ಮಕ್ಕಳಲ್ಲಿ ಸಾಕಷ್ಟು ಪ್ರತಿಭೆ ಇದ್ದರೂ ಸೂಕ್ತ ಮಾರ್ಗದರ್ಶನದ ಕೊರತೆ ಕಾಡುತ್ತದೆ. ಅಂಗವಿಕಲ ಮಕ್ಕಳನ್ನು ಕಂಡರೆ ಬಹುತೇಕರಿಗೆ ಅಸಡ್ಡೆಯೂ ಹೌದು. ದೃಷ್ಠಿದೋಷ ಹೊಂದಿರುವ ಮಕ್ಕಳಿಗೆ ಓಡಲು ಹೇಳಿಕೊಡುವುದೆಂದರೆ, ಕಾಲಿಲ್ಲದವರು ಬೆಟ್ಟ ಏರಿದಷ್ಟೇ ತ್ರಾಸದ ಕೆಲಸ. ಅವರಿಗೆ ಹೇಗೆ ಓಡಬೇಕು ? ಯಾವ ದಿಕ್ಕಿನಲ್ಲೂ ಓಡಬೇಕು ? ಸೇರಿದಂತೆ ಪ್ರತಿಯೊಂದರ ಬಗ್ಗೆ ಹೇಳಿಕೊಡಬೇಕು. ಅಲ್ಲದೇ ಹೆಚ್ಚು ಅಭ್ಯಾಸ ಮಾಡಿಸಬೇಕು, ಆಗ ಮಾತ್ರ ದಿವ್ಯಾಂಗ ಮಕ್ಕಳಿಗೆ ಓಡಲು ಸುಲಭವಾಗುತ್ತದೆ. ದಿವ್ಯಾಂಗ ಮಕ್ಕಳಿಗೆ ತರಬೇತಿ ನೀಡಲು ಪ್ರಾರಂಭಿಸಿದಾಗ ಪ್ರೋತ್ಸಾಹಿಸಿದವರಿಗಿಂತ ಕಿಚಾಯಿಸಿದವರೇ ಜಾಸ್ತಿ. ದಿವ್ಯಾಂಗ ಮಕ್ಕಳಿಗೆ ತರಬೇತಿ ನೀಡುವುದು ಕಷ್ಟದ ಕೆಲಸ. ಇದೇಲ್ಲಾ ಬೇಕಾ ಎಂದು ತಾತ್ಸಾರ ಮಾತುಗಳಾಡಿದವರೇ ಹೆಚ್ಚು” ಎಂದು ತಮ್ಮ ಆರಂಭದ ದಿನಗಳ ಕುರಿತು ಹೇಳುತ್ತಾರೆ ವಿನೋದ್.
“ಆದರೆ ಇಷ್ಟೆಲ್ಲಾ ಪರಿಶ್ರಮಕ್ಕೆ ಸಿಕ್ಕ ಫಲದಂತೆ, ನಾನು ತರಬೇತಿ ನೀಡುತ್ತಿದ ವಿದ್ಯಾರ್ಥಿಗಳು ಜಿಲ್ಲಾ ಮತ್ತು ತಾಲೂಕು ಮಟ್ಟದ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆದ್ದರು. ಇದು ನನಗೆ ಮರೆಯಲಾಗದ ಕ್ಷಣ. ಮಕ್ಕಳ ಪರಿಶ್ರಮಕ್ಕೆ ಹಾಗೂ ನನ್ನ ತಾಳ್ಮೆಗೆ ಸಂದ ಗೆಲುವು ಇದಾಗಿತ್ತು” ಎಂದು ತಮ್ಮ ಮೊದಲ ಬ್ಯಾಚ್ನ ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ಒಂದೆಡೆ ವಿದ್ಯಾರ್ಥಿಗಳು ಪದಕಗಳು ಗೆಲ್ಲುತ್ತಿದ್ದರೂ ಮತ್ತೊಂದು ವಿಚಾರ ತನ್ನನ್ನು ಚಿಂತೆಗೆ ದೂಡಿತ್ತು. ಅದೇನೆಂದರೆ ತರಬೇತಿಗೆ ಬರುತ್ತಿದ್ದ ವಿದ್ಯಾರ್ಥಿಗಳು ಅರ್ಧದಲ್ಲಿಯೇ ಅಭ್ಯಾಸ ನಿಲ್ಲಿಸುತ್ತಿದ್ದರು. ನನ್ನನ್ನು ಇದು ಚಿಂತೆಗೆ ದೂಡಿತ್ತು. ಕಾರಣ ಹುಡುಕುತ್ತಾ ಸಾಗಿದಾಗ ಗೊತ್ತಾಗಿದ್ದು, ಮತ್ತೊಂದು ಬೃಹತ್ ಸಮಸ್ಯೆ. ಅಥ್ಲೆಟಿಕ್ಸ್ನಲ್ಲಿ ಸಾಧನೆ ಮಾಡಬೇಕೆಂದರೆ ಉತ್ಸಾಹ, ಸಾಧಿಸಬೇಕೆಂಬ ಛಲದೊಂದಿಗೆ ಪೌಷ್ಠಿಕ ಆಹಾರ ತುಂಬಾ ಮುಖ್ಯ. ಉತ್ತಮ ಪೌಷ್ಠಿಕ ಆಹಾರಕ್ಕೆ ಸಾಕಷ್ಟು ಹಣಕಾಸು ಬೇಕಾಗುತ್ತದೆ. ಮಧ್ಯದಲ್ಲೇ ಅಭ್ಯಾಸ ನಿಲ್ಲಿಸುತ್ತಿರುವ ಮಕ್ಕಳ ಜಾಡು ಹಿಡಿದು ಹೊರಟಾಗ ಇವೆಲ್ಲಾ ಸಮಸ್ಯೆಗಳು ದರ್ಶನ ನೀಡಿದವು. ಸಮಸ್ಯೆಗಳನ್ನು ಬಗೆಹರಿಸಲು ಏನಾದರು ಮಾಡಲೇಬೇಕು ಎಂಬ ಛಲದಿಂದ ತಾವೇ “ಪರಿವರ್ತನ” ಎಂಬ ಸ್ವಯಂ ಸೇವಾ ಸಂಸ್ಥೆ ಸ್ಥಾಪಿಸಿದರು. ಎಷ್ಟೇ ಕಷ್ಟವಾದರೂ ಸುಖವಿದ್ದರು ತಾವು ತರಬೇತಿ ನೀಡುತ್ತಿರುವ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಇಲ್ಲಿಯವರೆಗೆ ನೋಡಿಕೊಳ್ಳುತ್ತಿದ್ದಾರೆ. ಪರಿವರ್ತನ ಸಂಸ್ಥೆ ವತಿಯಿಂದ ಇದುವರೆಗೂ 50 ರಿಂದ 60 ದಿವ್ಯಾಂಗ ಅಥ್ಲಿಟ್ಸ್ಗೆ ಉಚಿತವಾಗಿ ತರಬೇತಿ ನೀಡಿದ್ದಾರೆ.
ತಮ್ಮ ಕೈಲಾದ ಮಟ್ಟಿಗೆ ದಿವ್ಯಾಂಗ ಮಕ್ಕಳಿಗೆ ಅಥ್ಲೆಟಿಕ್ಸ್ನಲ್ಲಿ ತರಬೇತಿ ನೀಡುತ್ತಿರುವ ವಿನೋದ್ ಚೆನ್ನಕೃಷ್ಣ ಅವರಿಗೆ ಮಹತ್ವಕಾಂಕ್ಷಿ ಯೋಜನೆಯೊಂದಿದೆ, ಅದೇನೆಂದರೆ, ದಿವ್ಯಾಂಗ ಮಕ್ಕಳಿಗೆ ಸ್ಪೋರ್ಟ್ಸ್ ಅಕಾಡೆಮಿ ಆಫ್ ಇಂಡಿಯಾ (ಸಾಯ್) ರೀತಿಯಲ್ಲಿ ಒಂದು ಸುಸಜ್ಜಿತವಾದ ಕ್ರೀಡಾ ಸಂಸ್ಥೆಯನ್ನು ಸ್ಥಾಪಿಸುವುದು. ಇಂತಹ ಕ್ರೀಡಾ ಸಂಸ್ಥೆ ಸ್ಥಾಪಿಸಿದಾಗ ಮಾತ್ರ ಪ್ಯಾರ ಒಲಿಂಪಿಕ್ಸ್ನಂತಹ ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ದೇಶಕ್ಕೆ ಹೆಚ್ಚು ಪದಕಗಳನ್ನು ಸಾಧಿಸಲು ಸಾಧ್ಯ ಎನ್ನುತ್ತಾರೆ ವಿನೋದ್. ಇದಕ್ಕೆ ಸರ್ಕಾರದ ಸಹಾಯವೂ ಅತ್ಯಗತ್ಯ ಎಂದು ತಮ್ಮ ಮಹತ್ವಾಕಾಂಕ್ಷಿ ಕನಸಿನ ಯೋಜನೆ ಬಗ್ಗೆ ಹೇಳಿಕೊಳ್ಳುತ್ತಾರೆ.
ವಿನೋದ್ ಅವರಿಂದ ತರಬೇತಿ ಪಡೆದ ಅಂಗವಿಕಲ ಅಥ್ಲಿಟ್ಗಳು ವಿವಿಧ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗಳಿಸಿದ ಫಲವಾಗಿ “ಯೂಥ್ ಯೂನಿಟಿ ವೈಟಾಲಿಟಿ ಆ್ಯಂಡ್ ಅವೇರ್ನೆಸ್” ಯುವ ಕ್ಲಬ್ನ ಉಸ್ತುವಾರಿ ಕಾರ್ಯದರ್ಶಿಯಾಗಿ ನೇಮಕಗೊಂಡರು. ಕಿತ್ತೂರು ರಾಣಿ ಚೆನಮ್ಮ ಕ್ರೀಡಾ ಮತ್ತು ಸಾಂಸ್ಕೃತಿಕ ಅಕಾಡೆಮಿಯ ಕಾರ್ಯದರ್ಶಿಯಾಗಿ, ಫಿನಿಕ್ಸ್ ಟ್ರ್ಯಾಕ್ ಮತ್ತು ಫೀಲ್ಡ್ ಉಪಾಧ್ಯಕ್ಷರಾಗಿ, ಮೇಳ ಪುರಂ ಪ್ರತಿಷ್ಠಾನದ ಖಜಾಂಚಿಯಾಗಿ ಅಲ್ಲದೇ ವಿವಿಧ ಕ್ರೀಡಾ ಒಕ್ಕೂಟಗಳಲ್ಲಿ ಪ್ರತಿಷ್ಠಿತ ಹುದ್ಧೆಗಳನ್ನು ನಿಭಾಯಿಸಿದ್ದಾರೆ.
ಯುವ ಕ್ಲಬ್ನಲ್ಲಿ ತನ್ನನ್ನು ನಿರೂಪಿಸಿಕೊಂಡ ನಂತರ ಸಕ್ರಿಯ ಸಮಾಜ ಸೇವೆಗಿಳಿದರು. ತಮ್ಮ ಪ್ರಭಾವ ಬಳಸಿ ಬೇರೆಯವರಿಗೆ ಹೇಳಿ ಕೆಲಸ ಮಾಡಿಸುವ ಬದಲು ತಾವೇ ಖುದ್ದು ಕೆಲಸ ಮಾಡುವುದು ಮುಖ್ಯ ಎಂದು ನಿರ್ಧರಿಸಿದರು. ಅಂದಿನಿಂದ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ವಿನೋದ್ ಚೆನ್ನಕೃಷ್ಣ, ಹಲವರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಸರ್ಕಾರದ ಯೋಜನೆಗಳನ್ನು ತಮ್ಮ ವಾರ್ಡಿನ ನೈಜ ಫಲಾನುಭವಿಗಳಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ತಮ್ಮ ವಾರ್ಡ್ನಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಸಾಮಾನ್ಯ ಸೇವಾ ಕೇಂದ್ರ ಆರಂಭಿಸಿದ್ದಾರೆ. ಇದರಿಂದ ಕನಿಷ್ಠ ವೆಚ್ಚದಲ್ಲಿ ಸರ್ಕಾರದ ಹಲವು ಜನೋಪಯೋಗಿ ಯೋಜನೆಗಳಾದ – ಜೀವವಿಮೆ, ಪಡಿತರ ಚೀಟಿ, ಅಧಾರ್ ಕಾರ್ಡ್, ಪಾಸ್ ಪೋರ್ಟ್ ಸೇರಿದಂತೆ 500ಕ್ಕೂ ಹೆಚ್ಚು ಸೇವೆಗಳನ್ನು ಒದಗಿಸುತ್ತಿದ್ದಾರೆ. ತಮ್ಮ ಕ್ಷೇತ್ರದ ಶಾಸಕರು, ಕಾರ್ಪೊರೇಟರ್ ಜೊತೆ ಉತ್ತಮ ಸಂಬಂಧ ಹೊಂದಿದ್ದು ತಮ್ಮ ವಾರ್ಡ್ನಲ್ಲಿರುವ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಿ ಮಾದರಿ ವಾರ್ಡನ್ನಾಗಿ ರೂಪಿಸುವ ಕಾರ್ಯದಲ್ಲಿ ವಿನೋದ್ ಚೆನ್ನಕೃಷ್ಣ ಅವರು ನಿರತರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.