ಮಹಿಳೆ ಹೀಗೆಯೇ ಬದುಕಬೇಕು ಎನ್ನುವ ಕಟ್ಟುಪಾಡು ಇಂದಿನ ಸಮಾಜದಲ್ಲೂ ಇದೇ. ಇನ್ನು 90 ರ ದಶಕದ ಸ್ಥಿತಿ ಹೇಗಿದ್ದಿರಬಹುದು? ನೀವೇ ಯೋಚಿಸಿ. ಈ ಎಲ್ಲಾ ಕಟ್ಟುಪಾಡುಗಳನ್ನು ಮೀರಿ ಒಬ್ಬಳು ಮಹಿಳೆ ಬದುಕು ಕಟ್ಟಿಕೊಳ್ಳುತ್ತಾಳೆ ಮತ್ತು ಇತರರಿಗೂ ಬದುಕು ಕಟ್ಟಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತಾಳೆ ಎಂದರೆ ಅದು ಅದ್ಭುತವೇ ಸರಿ.
ಕೌಟುಂಬಿಕ, ಸಾಮಾಜಿಕ ಕಟ್ಟುಪಾಡುಗಳಿಗೆ ಸೆಡ್ಡು ಹೊಡೆದು ಇತರರಿಗೆ ಮಾದರಿಯಾಗಿ ಬದುಕು ಸಾಗಿಸಿದ ಲೂಧಿಯಾನಾದ ಗುರ್ದೇವ್ ಕೌರ್ ಡಿಯೋಲ್, ಇಂದು 350 ಮಹಿಳೆಯರಿಗೆ ಸ್ವಂತ ದುಡಿಮೆಯ ಮೂಲಕವೇ ಬದುಕು ಕಟ್ಟಿಕೊಳ್ಳುವುದಕ್ಕೂ ಅವಕಾಶ ಮಾಡಿಕೊಟ್ಟಿದ್ದಾಳೆ. 25 ವರ್ಷಗಳ ಹಿಂದೆ 5 ಜೇನಿನ ಪೆಟ್ಟಿಗೆಗಳಿಂದ ಆರಂಭವಾದ ಈಕೆಯ ವಹಿವಾಟು ಇಂದು ಲೂಧಿಯಾನಾದಲ್ಲಿಯೇ ಈಕೆಯನ್ನು ಬಹುದೊಡ್ಡ ಮಹಿಳಾ ಉದ್ಯಮಿಯನ್ನಾಗಿ ಮಾಡಿದೆ.
ಮದುವೆಯ ನಂತರ ಪಂಜಾಬ್ ರಾಜ್ಯದ ಲೂಧಿಯಾನಾದ ಪಿಂಡ್ ಗ್ರಾಮಕ್ಕೆ ಆಗಮಿಸಿದ ಡಿಯೋಲ್ ಬಿಎಡ್ ಪದವೀಧರೆ. ಮನೆಯಲ್ಲಿ ಅನೇಕ ಕಟ್ಟುಪಾಡುಗಳು. ಈ ಕೌಟುಂಬಿಕ ಕಟ್ಟುಪಾಡುಗಳನ್ನೆಲ್ಲಾ ಸಮರ್ಥವಾಗಿ ಎದುರಿಸಿ ಸ್ವ ಉದ್ಯೋಗದ ಮೂಲಕ ಬದುಕು ಕಟ್ಟಿಕೊಂಡ ಚಾಣಾಕ್ಷೆ. ಕೇವಲ ಐದು ಜೇನಿನ ಪೆಟ್ಟಿಗೆಗಳನ್ನಿಟ್ಟುಕೊಂಡು ಈಕೆ ಆರಂಭಿಸಿದ ಉದ್ಯೋಗ ಇಂದು ದೊಡ್ಡ ಉದ್ಯಮವಾಗಿ ಮಾರ್ಪಾಡಾಗಿ 350 ಮಂದಿ ಮಹಿಳೆಯರಿಗೂ ಉದ್ಯೋಗಾವಕಾಶವನ್ನು ಕಲ್ಪಿಸಿದೆ. ಆ ಮೂಲಕ ಒಂದಷ್ಟು ಮನೆಗಳಲ್ಲಿ ಮಹಿಳೆ ಸಬಲಳಾಗುವುದಕ್ಕೆ ವೇದಿಕೆಯನ್ನು ಮಾಡಿಕೊಟ್ಟಿದೆ. ಇವರ ಈ ಕಾಯಕ ಇಂದು ಆಕೆಯನ್ನು ರಾಜ್ಯದ ಎರಡನೇ ಅತೀ ದೊಡ್ಡ ಮಹಿಳಾ ಉದ್ಯಮಿ ಎಂಬ ಪ್ರಶಂಸೆಗೂ ಭಾಜನರನ್ನಾಗಿ ಮಾಡಿದೆ.
ಆರಂಭದಲ್ಲಿ ಜೇನು ಸಾಕಾಣಿಕೆಯಿಂದ ಆರಂಭವಾದ ಈಕೆಯ ಉದ್ಯಮ ಇಂದು ಬೇರೆ ಬೇರೆ ವಸ್ತುಗಳನ್ನು ತಯಾರಿಸುವ ಮಟ್ಟಕ್ಕೆ ಬೆಳೆದಿದೆ. ಸಾವಯವ ರೀತಿಯಲ್ಲಿಯೇ ಈಕೆ ಉತ್ಪನ್ನಗಳನ್ನು ತಯಾರು ಮಾಡುತ್ತಿದ್ದು, ಇವರ ಫಾರ್ಮ್ನಲ್ಲಿ ತಯಾರಾಗುವ ಉಪ್ಪಿನಕಾಯಿ, ಜಾಮ್, ಪರಿಸರ ಸ್ನೇಹಿ ಡಿಟರ್ಜೆಂಟ್, ಶ್ಯಾಂಪೂ, ಕರವಸ್ತ್ರಗಳು ಲೂಧಿಯಾನದ ಮನೆಮನೆಗಳಲ್ಲಿಯೂ ಪ್ರಖ್ಯಾತಿ ಪಡೆದಿದೆ ಎಂದರೆ ನಂಬಲೇಬೇಕು. ಇನ್ನು ಆಕೆ ಗ್ರಾಹಕರೊಂದಿಗೆ ಜೊತೆಗೆ ವ್ಯವಹರಿಸುವಾಗಲೂ ಹೆಚ್ಚು ತಾಳ್ಮೆಯಿಂದ ವ್ಯವಹರಿಸುತ್ತಾರೆ. ಆ ಮೂಲಕ ತಮ್ಮ ಉದ್ಯಮದ ಅಭಿವೃದ್ಧಿಯನ್ನೂ ಮಾಡಿಕೊಳ್ಳುತ್ತಿದ್ದಾರೆ.
ಇವರ ಮಾತುಗಳಲ್ಲಿಯೇ ಕೇಳುವುದಾದರೆ, ಮನೆಯ ಹಿತ್ತಲಲ್ಲಿ ಕೇವಲ 5 ಪೆಟ್ಟಿಗೆಗಳಿಂದ ಆರಂಭವಾದ ಜೇನು ಕೃಷಿ, ಮುಂದಿನ 4 ವರ್ಷಗಳಲ್ಲಿಯೇ 450 ಪೆಟ್ಟಿಗೆಗಳಿಗೆ ಏರಿಕೆಯಾಗಿತ್ತು. ಯಾವುದೇ ಕಲಬೆರಕೆ ಮಾಡದ, ಶುದ್ಧ ಜೇನುತುಪ್ಪವನ್ನು ಗ್ರಾಹಕರಿಗೆ ತಲುಪಿಸುವ ಕೆಲಸವನ್ನೂ ಇವರು ಮಾಡುತ್ತಿದ್ದಾರೆ. ಇನ್ನು ತಮ್ಮ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸಿಬ್ಬಂದಿಗಳನ್ನೂ ಕೆಲಸಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೆ ಈ ವಸ್ತುಗಳ ತಯಾರಿಕಾ ಘಟಕದಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಉದ್ಯೋಗಾವಕಾಶವನ್ನೂ ನೀಡಿದ್ದು, ಇವೆಲ್ಲದರ ಮೇಲ್ವಿಚಾರಣೆಯನ್ನು ತಾವೇ ಮಾಡುತ್ತಿದ್ದಾರೆ. ಜೊತೆಗೆ ತಮ್ಮಲ್ಲಿ ತಯಾರಾದ ಜೇನನ್ನು ಬಾಟಲಿಗೆ ತುಂಬಿಸಿ, ಮರಾಟ ಮಾಡುವ ಕೆಲಸವನ್ನೂ ತಾವೇ ಮಾಡುತ್ತಿದ್ದಾರೆ. ಜೊತೆಗೆ ಆಹಾರ ವಸ್ತುಗಳ ಮಾರಾಟವನ್ನೂ ಇವರೇ ಮಾಡುತ್ತಿದ್ದು ಇತರರಿಗೂ ಮಾದರಿಯಾಗಿದ್ದಾರೆ. ಇನ್ನು ಇವುಗಳ ತಯಾರಿಕೆಗೆ ಬೇಕಾದ ಕಚ್ಛಾವಸ್ತುಗಳನ್ನು ಸ್ಥಳೀಯ ಕೃಷಿಕರಿಂದಲೇ ಖರೀದಿ ಮಾಡುತ್ತಿದ್ದಾರೆ. ಪ್ರದರ್ಶನಗಳಂತಹ ಕಾರ್ಯಕ್ರಮಗಳಲ್ಲಿ, ರಸ್ತೆ ಬದಿಯಲ್ಲಿಯೂ ತಮ್ಮ ಮಂಡಿಯಲ್ಲಿ ತಯಾರಾದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು, ಯಾವ ಕೆಲಸವೂ ಸಣ್ಣದಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.
ಈ ಎಲ್ಲಾ ಉದ್ಯಮಗಳಿಗೆ ಕೈ ಹಾಕುವ ಮುನ್ನ ಇವರು ಅನೇಕ ತರಬೇತಿ ಕಾರ್ಯಕ್ರಮಗಳಿಂದ ತರಬೇತಿಯನ್ನೂ ಪಡೆದಿದ್ದಾರೆ. ಈಗ ಅವರು ತಮ್ಮ ಗ್ರಾಮದ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೂ ತರಬೇತಿ ನೀಡಿ, ಅವರನ್ನೂ ಸ್ವಾವಲಂಬಿಗಳನ್ನಾಗಿ ಮಾಡುತ್ತಿದ್ದಾರೆ. ಜೊತೆಗೆ ಅವರದ್ದೇ ಆದ ಒಂದು ಮಹಿಳೆಯರ ತಂಡ ಕಟ್ಟಿಕೊಂಡು ಬ್ಯಾಂಕ್ ಲೋನ್ ಪಡೆದು ಗ್ಲೋಬಲ್ ಸೆಲ್ಫ್ ಹೆಲ್ಫ್ ಗ್ರೂಪ್ ಎಂಬ ತಂಡವನ್ನು ಕಟ್ಟಿಕೊಂಡಿದ್ದಾರೆ. ಈ ಗುಂಪು ರಾಜ್ಯ ಕೃಷಿ ಇಲಾಖೆಯ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು 350 ಜನರು ಈ ಗುಂಪಿನ ಕಾರಣದಿಂದಲೇ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಸದ್ಯ ತಮ್ಮ ಹಳ್ಳಿಯಲ್ಲಿಯೇ ಇವರ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯೂ ಲಭಿಸಿದೆ. ಅಲ್ಲದೆ ದೆಹಲಿ, ಚಂಡೀಗಢ ಮೊದಲಾದೆಡೆಗಳಲ್ಲಿಯೂ ಇವರ ವಸ್ತುಗಳಿಗೆ ಬೇಡಿಕೆ ಇದೆ. ವಾರ್ಷಿಕವಾಗಿ 30 ಲಕ್ಷಕ್ಕೂ ಹೆಚ್ಚು ಹಣದ ವಹಿವಾಟು ಇವರ ಈ ಉದ್ಯಮದಲ್ಲಿ ನಡೆಯುತ್ತದೆ. ಇವರ ಈ ಸಾಧನೆಗೆ ಸರ್ಕಾರಿ, ಸಾರ್ಕರೇತರ ಸಂಸ್ಥೆಗಳಿಂದ ಅದೆಷ್ಟೋ ಪುರಸ್ಕಾರಗಳು ಇವರನ್ನು ಹುಡುಕಿಕೊಂಡು ಬಂದಿವೆ.
ಮಹಿಳೆಯ ಬದುಕಿಗೆ ಅಂಟಿಕೊಂಡಿರುವ ಎಲ್ಲಾ ಕಟ್ಟುಪಾಡುಗಳನ್ನು 25 ವರ್ಷಗಳ ಹಿಂದೆಯೇ ಮೀರುವ ಧೈರ್ಯ ಮಾಡಿ, ಸ್ವಾವಲಂಬಿ ಬದುಕು ಕಟ್ಟಿಕೊಂಡು, ಇತರ ಮಹಿಳೆಯರಿಗೂ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಲ್ಲಿ ಮಾರ್ಗದರ್ಶನ ಮಾಡಿದ ಡಿಯೋಲ್ಗೆ ಸಾಧನೆಗೆ ಬಹುಪರಾಕ್ ಹೇಳಲೇ ಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.