ಭೋಪಾಲ್: ಮಧ್ಯಪ್ರದೇಶದ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವ ಹಾದಿಯಲ್ಲಿದೆ. ಈಗಾಗಲೇ ಅದರ 21 ಮಂದಿ ಕಾಂಗ್ರೆಸ್ ಶಾಸಕರು ರಾಜೀನಾಮೆಯನ್ನು ನೀಡಿದ್ದಾರೆ. ಒಂದು ವೇಳೆ ಈ ರಾಜೀನಾಮೆಗಳು ಅಂಗೀಕಾರಗೊಂಡರೆ ಸರ್ಕಾರ ಪತನವಾಗುವುದು ಶತಸಿದ್ಧವಾಗಿದೆ.
ಇನ್ನೊಂದೆಡೆ, ಕಾಂಗ್ರೆಸ್ ಪಕ್ಷದ ದಿಗ್ಗಜ ನಾಯಕ ಎನಿಸಿಕೊಂಡಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಈಗಾಗಲೇ ಪಕ್ಷವನ್ನು ತೊರೆದಿದ್ದು, ಬಿಜೆಪಿಗೆ ಸೇರ್ಪಡೆಗೊಳ್ಳಲು ಮುಂದಾಗಿದ್ದಾರೆ. ಮೂಲಗಳ ಪ್ರಕಾರ, ಬಿಜೆಪಿಯು ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕೇಂದ್ರ ಸಂಪುಟ ಸಚಿವ ಸ್ಥಾನವನ್ನು ಅವರಿಗೆ ನೀಡಲಿದೆ.
ಸಿಂಧಿಯಾ ಅವರು ಕಾಂಗ್ರೆಸ್ನಿಂದ ನಿರ್ಗಮಿಸಿದ ಸ್ವಲ್ಪ ಸಮಯದ ನಂತರ, 21 ಕಾಂಗ್ರೆಸ್ ಪಕ್ಷದ ಶಾಸಕರು ಮಧ್ಯಪ್ರದೇಶ ರಾಜ್ಯಪಾಲರಿಗೆ ರಾಜೀನಾಮೆ ಪತ್ರಗಳನ್ನು ಕಳುಹಿಸಿದ್ದಾರೆ. ಈ ಹಿಂದೆ 25 ಶಾಸಕರು ರಾಜೀನಾಮೆ ನೀಡಲು ಸಿದ್ಧರಿದ್ದಾರೆ ಎಂದು ಮೂಲಗಳು ತಿಳಿಸಿದ್ದವು. ಈ ರಾಜೀನಾಮೆಗಳನ್ನು ಅಂಗೀಕರಿಸಿದರೆ, 15 ತಿಂಗಳ ಕಮಲ್ನಾಥ್ ಸರ್ಕಾರ ಅಲ್ಪಸಂಖ್ಯೆಗೆ ಇಳಿಯಲಿದೆ.
49 ವರ್ಷದ ಸಿಂಧಿಯಾ ಅವರು ಕಾಂಗ್ರೆಸ್ ನಾಯಕತ್ವದ ಬಗ್ಗೆ ಸ್ವಲ್ಪ ಸಮಯದವರೆಗೆ ಇತ್ತೀಚಿನ ದಿನಗಳಲ್ಲಿ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಗಾಂಧಿ ಕುಟುಂಬಕ್ಕೆ ತುಂಬಾ ಹತ್ತಿರವಾಗಿದ್ದ ಅವರು, 2018 ರಲ್ಲಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದಾಗ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ನಿರಾಕರಿಸಲಾಗಿತ್ತು. ಅದರ ಬಳಿಕ ಅವರು ತಮ್ಮ ಪಕ್ಷದ ಬಗ್ಗೆ ಅಸಮಾಧಾನವನ್ನು ಹೊಂದಿದ್ದಾರೆ. ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ, 370ನೇ ವಿಧಿಯನ್ನು ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿದ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ ಕೆಲವೇ ಕಾಂಗ್ರೆಸ್ ನಾಯಕರಲ್ಲಿ ಸಿಂಧಿಯಾ ಕೂಡ ಒಬ್ಬರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.