ಅಂದು 27-02-2020 ಭಾರತ ಪಾಕಿಸ್ಥಾನ ಗಡಿ ನೋಡುವ ಸಲುವಾಗಿಯೇ ಜೈಸಲ್ಮೇರ್ ರಾಜಸ್ಥಾನಕ್ಕೆ ಬಂದಿದ್ದೆವು. ಬಾಡಿಗೆ ಆಧಾರದ ಮೇಲೆ ಒಂದು ಬುಲೆರೋ ಗಾಡಿ ಮಾಡಿದೆವು. ಬೆಳಿಗ್ಗೆ ಮುಗಿಯುವುದರೊಳಗೆ ಜೈಸಲ್ಮೇರ್ನ ಕೋಟೆಗಳು, ಮ್ಯೂಸಿಯಮ್ಗಳನ್ನು ನೋಡಿದೆವು. ಸುಮಾರು 12-00 ರ ಹೊತ್ತಿಗೆ 130km ದೂರದ ಪ್ರಯಾಣ ಭಾರತ ಪಾಕ್ನ ಸರ್ಹದ್ ಕಡೆಗೆ ಆರಂಭ.
ಎಲ್ಲಿ ನೋಡಿದರು ನಿರ್ಜನ ಪ್ರದೇಶ, ಜನವಸತಿ ಸುಮಾರು 50-50 ಕಿಲೋ ಮೀಟರ್ಗಳಿಗೊಂದು ಸಿಗುತ್ತಿದ್ದವು. ಬೆಟ್ಟ ಗುಡ್ಡಗಳೇ ಅಲ್ಲಿನ ಸಂಪತ್ತು ಅದೆಲ್ಲವೂ ಬರಡು ಭೂಮಿ. ಕುಡಿಯೋಕೆ, ತಿನ್ನೊಕೆ ಏನಾದರೂ ತಗೊಳ್ಳೊಕೆ ಒಂದೇ ಒಂದು ಅಂಗಡಿ ಮನೆಗಳು ಕಾಣಲು ಸಿಗೊಲ್ಲ. ಅವಾಗವಾಗ ಕಾಣುವ ಒಂಟೆಗಳು, ಗೋವುಗಳು, ಮೇಕೆಗಳು ಸರ್ವೆ ಸಮಾನ್ಯವಾಗಿ ಜನಕ್ಕಿಂತ ಹೆಚ್ಚಾಗಿ ಆ ದಾರಿಯಲ್ಲಿ ಇವೇ ಕಾಣುತ್ತವೆ.
ಅಳತೆ ಪಟ್ಟಿ ಇಟ್ಟು ಗೆರೆ ಎಳೆದ ಹಾಗೆ ಕಾಣುವ ಕಪ್ಪಗಿನ ರಸ್ತೆ, ಆ ರಸ್ತೆಗೆ ಬಿಳಿಯ ಪಟ್ಟಿಯ ಬಣ್ಣ ರಸ್ತೆಯ ಸುಂದರತೆಯನ್ನು ಹೆಚ್ಚಿಸುತ್ತಿದ್ದವು. ಎಷ್ಟು ದೂರ ನೋಡಿದರೂ ನೇರವಾಗಿಯೇ ಕಾಣುವ ರಸ್ತೆ. ಸಾಮಾನ್ಯವಾಗಿ ಅಲ್ಲಿ ಹೋಗುವ ಎಲ್ಲ ವಾಹನಗಳ ವೇಗ ಕನಿಷ್ಟ 100. ತಣ್ಣನೇಯ ಗಾಳಿಯ ಜೊತೆಗೆ ಬಿಸಿಲಿನ ಶೆಕೆಯ ದರ್ಶನ. ಅಲ್ಲಲ್ಲಿ ಕಾಣುವ ರಸ್ತೆಯ ತಿರುವುಗಳು, ಸ್ವಲ್ಪ ವಿಶ್ರಾಂತಿಗಾಗಿ ನಿಲ್ಲಿಸಿದರೂ ಭಯ ಹುಟ್ಟಿಸುವ ನಿರ್ಜನ ಪ್ರದೇಶ, ನೆರಳಿನ ಸಲುವಾಗಿ ಒಂದೇ ಒಂದು ಮರವಿಲ್ಲದ ಬರಡು ಭೂಮಿ. ಇದೆಲ್ಲದರ ಮಧ್ಯೆ ಗಡಿ ನೋಡುವ ತವಕ. ಅಲ್ಲಿನ ಸ್ಥಿತಿಗತಿಯ ಬಗ್ಗೆ ತಿಳಿಯುವ ಅವಸರಕ್ಕೆ ವಾಹನ ಇನ್ನು ಓಡಲಿ ಎಂಬ ಉದ್ಘೋಷ ಸಾಮಾನ್ಯವಾಗಿತ್ತು.
ಕೊನೆಗೂ ತನೋಟಗೆ ಬಂದೆವು, ಅಲ್ಲಿ ಭಾರತದ ಕೊನೆಯ ದೇವಸ್ಥಾನವಾದ ಶ್ರೀ ಮಾತೆಶ್ವರಿ ತನೋಟ ರಾಯ್ ಮಂದಿರದ ದರ್ಶನವಾಯ್ತು. ಭಾರತ ಪಾಕ್ ಗಡಿ ಇಲ್ಲಿಂದ 25 km ಇದೆ. ಇಲ್ಲಿಂದ ಗಡಿಕಡೆಗೆ ಹೋಗಬೇಕಾದರೆ ಪರವಾನಿಗೆ ಬೇಕು. ಅಲ್ಲಿರುವ ಚೆಕ್ ಪಾಯಿಂಟನಲ್ಲಿ ಗಡಿ ನೋಡುವ ಸಲುವಾಗಿ ಪರ್ಮಿಶನ್ ಕೇಳೊಕೆ ಹೋದ್ರೆ ಇಲ್ಲಿ ಕೊಡೊಲ್ಲ BSF ಹೆಡ್ ಕಮ್ಯಾಂಡರ್ ಆಫೀಸ್ ಜೈಸಲ್ಮೇರ್ನಲ್ಲಿ ತಗೋಬೇಕು ಅಂತ ಕಡಾ ಖಂಡಿತವಾಗಿ ಹೇಳಿದರು. ನಮಗೆ ವಾಹನ ಚಾಲಕ ಮಿಸ್ ಗೈಡ್ ಮಾಡಿದ್ದು ಗೊತ್ತಾಯ್ತು. ವಾಹನ ಬಾಡಿಗೆ ಮಾಡುವಾಗ ಪರ್ಮಿಶನ್ ತನೋಟನಲ್ಲಿಯೇ ಸಿಗುತ್ತದೆ ಅಂತ ಸುಳ್ಳು ಹೇಳಿ ಬಾಡಿಗೆ ಹಣದ ಸಲುವಾಗಿ ಕರೆದುಕೊಂಡು ಬಂದಿದ್ದರು. ವಾಪಸ್ ವಾಹನದ ಮಾಲಿಕನಿಗೆ ಕೇಳಿದರೆ ಮುಂಚೆ ತನೋಟನಲ್ಲಿಯೇ ಕೊಡ್ತಿದ್ದರು ಇವಾಗ ಜೈಸಲ್ಮೇರ್ನಲ್ಲಿ ಕೊಡ್ತಿರಬಹುದು ಅಂತ ನಾಟಕೀಯ ಮಾತುಗಳನ್ನಾಡಿದ. ಇಲ್ಲಿಯವರೆಗೂ ಬಂದಿದ್ದೇವೆ ಗಡಿ ನೋಡಿಯೇ ಹೋಗೋಣ ಅಂತ ಜೊತೆಗಿದ್ದವರು ಹೇಳಿದರು. ಆದರೆ ನಮ್ಮ ಅದೃಷ್ಟ ಇಲ್ಲ ಅನಿಸುತ್ತಿತ್ತು, ಯಾಕೆಂದರೆ ನಮಗಿಂತ ಎಷ್ಟೋ ದೊಡ್ಡ ದೊಡ್ಡ ವ್ಯಕ್ತಿಗಳಿಗೂ ಪರ್ಮಿಶನ್ ಲೆಟರ್ ಇಲ್ಲದಕ್ಕೆ ನಮ್ಮ ಮುಂದೇನೆ ಗಡಿ ನೋಡೋಕೆ ಹೋಗಲು ಬಿಡಲಿಲ್ಲ. ಇಲ್ಲಿಯವರೆಗೆ ಬಂದು ಗಡಿ ನೋಡದೇ ಹೋದರೆ ಮನಸ್ಸಿಗೆ ತುಂಬಾ ಸಂಕಟವಾಗುತ್ತಿತ್ತು.
ಒಂದು ಕಡೆ ಬಿಸಿಲಿನ ಬೇಗೆ ಜಾಸ್ತಿಯಾಗುತ್ತಿತ್ತು, ಇನ್ನೊಂದು ಕಡೆ BSF ಯೋಧರಿಗೆ ಎಷ್ಟೇ ಬೇಡಿಕೊಂಡರು ಬಿಡೊಲ್ಲ ಅಂತಿದ್ರು. ಇದರ ಮಧ್ಯದಲ್ಲಿಯೇ ಡ್ರೈವರ್ ಸಹಿತ ಹೋಗೋಣ ನಡಿರಿ ಅಂತಿದ್ದ. ಇಷ್ಟೆಲ್ಲ ಸಮಸ್ಯೆ ನಿಮ್ಮಿಂದಾಗಿ ಅಂತ ಅವರ ಮೇಲೆ ಕೋಪ ಮಾಡ್ಕೊಂಡಿದ್ವಿ. ನಮ್ಮ ಕೋಪ ನೆತ್ತಿಗೇರುತ್ತೆ ಎನ್ನುವ ಭಾವ ಅವನಿಗೆ ಗೊತ್ತಾಗಿ ಸುಮ್ಮನಾಗಿಬಿಟ್ಟ.
BSF ಚೀಫ್ ಕಮ್ಯಾಂಡರ್ ಆಫೀಸ್ನಲ್ಲಿ ಪರ್ಮಿಶನ್ ತಗೊಂಡಾದ್ರೂ ನಾಳೆ ನೋಡೋಣ ಅಂತ ವಿಚಾರ ಮಾಡುತ್ತಿದ್ವಿ. ಆದರೆ ಅಲ್ಲಿನ ಸೈನಿಕ ಹೇಳಿದ ನಿಮಗೆ ಪರ್ಮಿಶನ್ ಕೊಟ್ಟರೆ ಕೊಡಬಹುದು ಇಲ್ದಿದ್ರೆ ಇಲ್ಲ. ಪರ್ಮಿಶನ್ ಕೊಡಲೇ ಬೇಕಂದ್ರೆ ಇನ್ಫ್ಲುಯೆನ್ಸ್ ಬೇಕು. ಎಷ್ಟೇ ಇನ್ಫ್ಲುಯೆನ್ಸ್ ಇದ್ರೂ ನಿಮ್ಮ ಸರತಿ ಬರಬೇಕಂದ್ರೆ ಎರಡ್ಮೂರು ದಿನಗಳಾದರೂ ಕಾಯಬೇಕು ಅಂದಾಗಂತು ನಮ್ಮ ಜನ್ಮದಲ್ಲಿ ಈ ಗಡಿ ನೋಡೋಕೆ ಅಸಾಧ್ಯ ಅಂತ ದುಃಖವಾಗತೊಡಗಿತು. ಅಲ್ಲಿ ಕಾಣುವ ಎಷ್ಟೋ ಯೋಧರಿಗೂ ಗಡಿ ನೋಡುವ ತವಕ ಹಂಚಿಕೊಂಡಾಗ ಯಾರೊಬ್ಬರು ನಿಯಮ ಮುರಿದು ಕಳಿಸೋಕೆ ಆಗಲ್ಲ ಅಂತ ಹೇಳುತ್ತಿದ್ದರು.
ತನೋಟ ಮಾತಾ ಮಂದಿರದಲ್ಲಿ ಹರಕೆ ಕಟ್ಟುವ ಸಂಪ್ರದಾಯವಿದೆ, ಹೇಗೆಂದರೆ ಅಲ್ಲಿ ಸಿಗುವ ಹೊಸ ಕರ್ಚಿಫ್ (ಕರವಸ್ತ್ರ) ಕಟ್ಟಿದರೆ ನಾವು ಅನ್ಕೊಂಡದ್ದು ಈಡೇರುತ್ತದೆ ಎನ್ನುವ ನಂಬಿಕೆ ಇದೆ. ಅಂತ ಅಲ್ಲಿನ ಯೋಧರೊಬ್ಬರು ಹೇಳಿದ ತಕ್ಷಣ ಆದದ್ದಾಗಲಿ ಕೊನೆಯ ಪ್ರಯತ್ನ ಅಂದುಕೊಂಡು ದೇವರಿಗೆ ಕರವಸ್ತ್ರ ಕಟ್ಟಿ ಇವತ್ತು ಎಷ್ಟೋತ್ತಿದ್ರು ನಮಗೆ ಗಡಿ ನೋಡಲು ಅವಕಾಶ ಸಿಗುವಂತಾಗಲಿ ತಾಯಿ ಅಂತ ಬೇಡಿಕೊಂಡು ಬಂದೆವು. ಬಿಸಿಲು ಜಾಸ್ತಿಯಾಗ್ತಿತ್ತು, ಸಮಯ ನಿಲ್ತಾಯಿರಲಿಲ್ಲ, ಹೊಟ್ಟೆ ಹಸಿದಿತ್ತು, ತುಂಬಾ ಹೊತ್ತು ಅಲ್ಲಿಯೇ ನಿಂತು ನಿಂತು ಸುಸ್ತಾಗಿದ್ವಿ.
ಕೊನೆಗೂ ದೇವರ ಮೇಲಿಟ್ಟ ನಂಬಿಕೆ ಸುಳ್ಳಾಗಲಿಲ್ಲ. ಅಷ್ಟೋತ್ತು ಹಿಂದಿಯಲ್ಲಿ ಮಾತಾಡ್ತಿದ್ದ BSF ಯೋಧರೊಬ್ಬರು ನಮ್ಮತ್ರ ಬಂದು ಕರ್ನಾಟಕನಾ ಅಂತ ಕನ್ನಡದಲ್ಲಿ ಕೇಳಿದರು. ಅಷ್ಟೋತ್ತು ಬೇಜಾರಾಗಿದ್ದ ನಮಗೆ ಕನ್ನಡದ ಶಬ್ದ ಕಿವಿಗೆ ಬಿದ್ದ ತಕ್ಷಣ ಏನೋ ಪಡೆದುಕೊಂಡ ಹಾಗೆ ಆಯ್ತು. ಎಲ್ಲರೂ ಒಟ್ಟಿಗೆ ಆಶ್ಚರ್ಯವಾಗಿ ಹೌದು ಕರ್ನಾಟಕನೇ ಅಂದ್ವಿ. ಯಾವ ಊರು ಅಂದರು ಬಾಗಲಕೋಟೆ ಅಂದ್ವಿ, ಬಾಗಲಕೋಟೆಲಿ ಮನೆ ಎಲ್ಲಿ ಅಂದರು ಕಿಲ್ಲಾ ಅಂದ್ವಿ, ಪಂಕಾ ಮಸೀದಿ ವಲ್ಲಭ್ ಬಾಯ್ ಚೌಕ್ ಗೊತ್ತಾ ಅಂದ ತುಂಬಾ ಖುಷಿಯಿಂದ ನಾವು ಅದೇ ಏರಿಯಾದಲ್ಲಿರೋದು ಅಂದಾಗ ಅವರು ತುಂಬಾ ಖುಷಿ ಪಟ್ಟರು. ನಾನು ನಿಮ್ಮ ಪಕ್ಕದ ಊರಿನವನೇ ಅಂತ ಪರಿಚಯ ಎಲ್ಲ ಮಾಡ್ಕೊಂಡ್ವಿ, 10 ವರ್ಷದ ಸೈನ್ಯದಲ್ಲಿನ ಅನುಭವದ ಬಗ್ಗೆ ಹೇಳಿದರು. ಕೊನೆಗೂ ದಾರಿ ಸಿಗಬಹುದು ಅಂತ ನಮ್ಮೆಲ್ಲ ಕಷ್ಟವನ್ನೆಲ್ಲ ಅವರಿಗೆ ಹೇಳಿದೆವು. ಗಡಿ ನೋಡಲೇಬೇಕು ಅನ್ನುವ ನಮ್ಮ ಭಾವ ಅವರಿಗೆ ಅರ್ಥವಾಯ್ತು. ಸ್ವಲ್ಪ ಕಾಯಿರಿ ನನ್ನ ಕೈಯಿಂದ ಆದರೆ ಕಳಿಸುವೆ ಅಂತ ಭರವಸೆಯನ್ನು ನೀಡಿದರು. ಬರಡುಭೂಮಿಯಲ್ಲಿ ನೀರು ಕಂಡಷ್ಟು ಖುಷಿಯಾಯ್ತು ಆ ಯೋಧನ ಭರವಸೆಯಿಂದ.
ಆ ಯೋಧ ನೀಡಿದ ಆ ಭರವಸೆಯೇ ನಮಗೆ ಬಿಸಿಲಿನಲ್ಲಿ , ಹೊಟ್ಟೆ ಹಸಿದಿದ್ದರೂ ಒಂದು ತೊಟ್ಟು ನೀರು ಕುಡಿಯದೇ ಬಕ ಪಕ್ಷಿಯಂತೆ ಕಾಯುತ್ತಾ ಕುಳ್ಳಿರಿಸಿತು. ಪ್ರತಿ ಐದ್ಹತ್ತು ನಿಮಿಷಕ್ಕೊಮ್ಮೆ ಆ ಯೋಧನ ಹತ್ತಿರ ಹೋಗಿ ತುಂಬಾ ವಿನಂತಿ ಮಾಡ್ಕೊಳ್ಳುತ್ತಿದ್ದೆವು. ಪ್ರತಿ ಸಲಾನೂ ಸೈನಿಕ ಇವತ್ತು ನನ್ನ ಡ್ಯೂಟಿ ಸಮಯ ಮುಗಿಯುವುದರೊಳಗೆ ನಿಮಗೆ ಗಡಿ ದರ್ಶನ ಮಾಡಿಸುವೆ ಅಂತ ಪೂರ್ತಿ ವಿಶ್ವಾಸ ತುಂಬಿದರು. ನಮ್ಮ ಪಾಡು ಕಂಡು ಯೋಧನೇ ಸ್ವತಃ ಮರುಗಿದ್ದರು. ಪ್ರತಿಸಲ ಅವರತ್ರ ಹೋದಾಗ ತುಂಬಾ ನೋವಿನಿಂದ ಮಾತಾಡುತ್ತಿದ್ದ ನಮ್ಮ ಅವಸ್ಥೆಯ ಸಲುವಾಗಿ.
ಕೊನೆಗೂ ನಮ್ಮ ಸೌಭಾಗ್ಯದ ಬಾಗಿಲಿಗೆ ಆ ಯೋಧನೇ ಅವಕಾಶ ಮಾಡಿಕೊಟ್ಟರು. ಏನೇನೋ ಕಷ್ಟಪಟ್ಟು ರಿಸ್ಕ್ ತಗೊಂಡು ನಮಗೆ ಸರಹದ್ದಿಗೆ ಹೋಗಲು ಪರವಾನಿಗೆ ಕೊಡಿಸಿದರು. ಕಷ್ಟಕಾಲದಲ್ಲಿ ದೇವರು ಬಂದು ಸಹಾಯ ಮಾಡ್ತಾನೆ ಅನ್ನೋದಕ್ಕೆ ಸಾಕ್ಷಿಯಾಯ್ತು. ನಮಗೆ ಯೋಧನ ರೂಪದಲ್ಲಿ ದೇವರು ಬಂದು ಸಹಾಯ ಮಾಡಿದ. ಆ ಯೋಧನಿಗೆ ದೇವರ ಸಮಾನ ಗೌರವ ಕೊಟ್ಟು ನಮಸ್ಕಾರ ಮಾಡಿ, ನಮ್ಮೆಲ್ಲ ಮಾಹಿತಿ ಎಂಟ್ರಿ ಮಾಡಿದೆವು. ಅಷ್ಟೋತ್ತು ಸಪ್ಪೆ ಆಗಿದ್ದ ಮುಖದಲ್ಲಿ ಆವಾಗ ತಾನೇ ಅರಳುತ್ತಿರುವ ಮೊಗ್ಗಿನ ಹಾಗೆ ನಮ್ಮಗಳ ಮುಖವು ಅರಳಿತ್ತು. ಎಲ್ಲಿಲ್ಲದ ಸಂತೋಷ ನಮ್ಮ ವಾಹನದಲ್ಲಿ ಮನೆ ಮಾಡಿತ್ತು. ಎಷ್ಟೋ ದೊಡ್ಡ ದೊಡ್ಡ ವ್ಯಕ್ತಿಗಳಿಗೂ ಸಿಗದ ಗಡಿ ನೋಡುವ ಪರ್ಮಿಶನ್ ಆ ಯೋಧನ ಸಹಾಯದಿಂದ ನಮಗೆ ಸಿಕ್ಕಿತು. ಗಡಿ ಕಡೆಗೆ ನಮ್ಮ ಪ್ರಯಾಣ ಸರಿಯಾಗಿ 02-00 ಶುರುವಾಯಿತು. ಅಲ್ಲಿಂದ ಗಡಿ 25 km ಇದ್ದು ದಾರಿಯುದ್ದಕ್ಕೂ ಆ ಯೋಧನ ಗುಣಗಾಣವೇ ನಮಗೆ ಪ್ರಧಾನವಾಯಿತು.
ತನೋಟ ಮಾತಾ ಮಂದಿರ ದಾಟಿದ 5km ನಂತರ ನಮ್ಮೆಲ್ಲರ ಮೊಬೈಲ್ ನೆಟ್ವರ್ಕ್ ಹೋಯಿತು. ಒಂದೆ ರಸ್ತೆ ಅಕ್ಕ ಪಕ್ಕದಲ್ಲಿ ಮರಳಿನ ರಾಶಿ. ಬೆಟ್ಟ ಗುಡ್ಡದ ಮಧ್ಯೆದಲ್ಲಿ ಲೈಟಿನ ಕಂಬಗಳು, ಹಾಹಾಕಾರದಂತೆನಿಸುವ ನಿರ್ಜನ ಪ್ರದೇಶ, ಆ ಬೆಟ್ಟ ಗುಡ್ಡಗಳ ನಡುವೆ ರಸ್ತೆಯ ಏರಿಳಿತಗಳು. ಒಂಥರ ಭಯದ ವಾತಾವರಣ ಇದ್ದರೂ ಇದು ನಮ್ಮ ದೇಶದ ಗಡಿ ಎನ್ನುವ ನಿರ್ಭೀತಿ. ಒಣಗಿದ ಚಿಕ್ಕ ಚಿಕ್ಕ ಗಿಡಗಳು. ಆ 25km ನಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ಕಾಣಲಿಲ್ಲ. ಒಂದೆ ಒಂದು ಪಕ್ಷಿಗಳ ಹಾರಾಟವು ಕಾಣಲಿಲ್ಲ. ಅಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದ್ದದ್ದು ಮಾತ್ರ BSFನ ಫಲಕಗಳು, ನಿರ್ಬಂಧಿತ ಪ್ರದೇಶಗಳು ಅಂತ ಬೋರ್ಡ್ಗಳು, ಒಣಗಿದ ಗಿಡಗಳು, ಅಲ್ಲೊಂದು ಇಲ್ಲೊಂದು ಒಂಟೆ ಕಾಣುತ್ತಿತ್ತು. ಆ ಒಂಟೆ ನೋಡಿದರೇನೆ ಗೊತ್ತಾಗುತ್ತಿತ್ತು ಅಲ್ಲಿ ಪ್ರಾಣಿಗಳಿಗೆ ಆಹಾರದ ಕೊರತೆ ಇದೆ ಅಂತ. ಇನ್ನೂ ಮನುಷ್ಯರಿಗೆ ಸಿಗೋದೆ ಇಲ್ಲ ಅಂತ. 25 kmನ ದಾರಿಯಲ್ಲಿ ಮೇನ್ ಗೇಟ್ ಹಿಡಿದು ಒಟ್ಟು ಮೂರು ಕಡೆ ನಮ್ಮ ವಾಹನ ಚೆಕ್ ಆಯ್ತು. ಕೊನೆಗೆ ಒಂದು ಟರ್ನ್ ಬಂತು ಅಲ್ಲಿಂದ 800 m ಆಗ್ತಿದ್ದಂಗೆ ಎತ್ತರದ ಒಂದು ಕಟ್ಟಡ ಕಾಣಿಸ್ತಿತ್ತು ಬಹುಶಃ ಇದೆ ಬಾರ್ಡರ್ ಅಂದುಕೊಂಡೆವು. ಬಾವ್ಲಿಯನ್ 0km ಅಂತ ಬೋರ್ಡ್ ಇತ್ತು. ಇದೇ ಭಾರತ ಪಾಕಿಸ್ಥಾನ ಗಡಿಯನ್ನು ಹೊಂದಿರುವ ರಾಜಸ್ಥಾನದ ಬಾರ್ಡರ್. ಇದು ಸಹಿತ ಥಾರ ಮರಭೂಮಿಯಲ್ಲಿನೇ ಬರೋದಂತೆ.
ಹಾಗೇನೆ ಮುಂದೆ ಹೋಗ್ತಿದ್ದಂಗೆ ಅತ್ಯಾಧುನಿಕ ಬಂದುಕುದಾರಿ ಇಬ್ಬರೂ BSF ಯೋಧರು ಪಹರೆಯಲ್ಲಿದ್ದರು. ಅವರು ನಮ್ಮ ವಾಹನ ನೋಡುತ್ತಿದ್ದಂತೆ ಸೂಕ್ಷ್ಮವಾಗಿ ಗಮನಿಸುತ್ತಾ ಬೆನ್ನು ಹಿಂದೆ ಇದ್ದ ಬಂದೂಕನ್ನು ಎದೆಯ ಮುಂದೆ ತಂದರು. ವಾಹನ ಇಳಿಯುತ್ತಿದ್ದಂತೆ ಮತ್ತೊಮ್ಮೆ ಪರವಾನಿಗೆ ಕೇಳಿದರು ಪರವಾನಿಗೆ ಚೆಕ್ ಮಾಡಿ ಮಂದಹಾಸ ಬೀರಿದರು ಆವಾಗ್ಲೆ ನಾವು ನಿಟ್ಟುಸಿರು ಬಿಟ್ಟಿದ್ದು. ಆ ನಮ್ಮ ಹೆಮ್ಮೆಯ ಸೈನಿಕರ ಪರಿಚಯವಾದ ನಂತರ ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದ ಇಬ್ಬರೂ BSF ಯೋಧರು ಆವತ್ತು ಡ್ಯೂಟಿಯಲ್ಲಿದ್ದರು. ಅಲ್ಲಿಂದಲೇ 500 ಮೀಟರ್ ದೂರದಲ್ಲಿದ್ದ ಪಾಕಿಸ್ಥಾನ ತಂತಿಬೇಲಿ ತೋರಿಸಿದರು.
ನಮ್ಮ ಸರಹದ್ದಿನ ಬಗ್ಗೆ ವಿವರಿಸುತ್ತಾ ಹೋದರು. ಸುಮಾರು 20-25 ಅಡಿ ಎತ್ತರದ ಮುಳ್ಳಿನ ತಂತಿ ಬೇಲಿ, 100 ಮೀಟರ್ಗೆ ಒಂದರಂತೆ 60 ಅಡಿ ಎತ್ತರದ ಹೈಮಾಸ್ ಲೈಟ್ಗಳು, ಮರಳಿನ ಏರಿಳಿತದ ದಿಣ್ಣೆಗಳು, ದೂರದಲ್ಲಿ ಕಾಣುವ ನಮ್ಮ ಸೈನ್ಯದ ವಸತಿಯ ಪ್ರದೇಶ, ಗಡಿಯ ಮುಳ್ಳಿನ ತಂತಿಯ ಬೇಲಿಯ ಪಕ್ಕದಲ್ಲಿಯೇ ನಮ್ಮ ಸೈನಿಕರ ವಾಹನಕ್ಕಾಗಿ ಇರುವ ಮರಳಿನ ದಾರಿ. ಸೈನಿಕರ ವಸತಿಯ ಹತ್ತಿರದಲ್ಲಿಯೇ ಕಾಣುವ ಭಾರತದ ತ್ರಿವರ್ಣ ಧ್ವಜ. ಅಬ್ಬಬ್ಬಾ ಅಲ್ಲಿನ ವರ್ಣನೆ ಎಷ್ಟು ಮಾಡಿದರೂ ಕಡಿಮೆನೇ. ಆ ದಾರಿಯಲ್ಲಿ ಸೈನ್ಯದ ವಾಹನ ಬಿಟ್ಟು ಮತ್ಯಾರಿಗೂ ಪರವಾನಿಗೆ ಇಲ್ಲ.
ನಿಜಕ್ಕೂ ಸೈನಿಕರಿಗೆ ತುಂಬು ಕುಟುಂಬ ಇದ್ದರೂ ಒಬ್ಬಂಟಿ. ಅದು ದೇಶಕ್ಕೋಸ್ಕರ, ಭಾರತ ಮಾತೆಗೋಸ್ಕರ. ಸಾಕು ಪ್ರಾಣಿಗಳು ಮಿಸ್ಸಾದಾಗ ಪಾಕ್ನ ಅಲ್ಲಿನ ಸ್ಥಳಿಯ ಹಳ್ಳಿಗರು ತಮ್ಮ ಪ್ರಾಣಿಗಳನ್ನು ಹುಡುಕಿಕೊಂಡು ಪಾಕ್ ಧ್ವಜ ಹಿಡಿದುಕೊಂಡು ಬರುತ್ತಾರಂತೆ. ಅವರಿಗೆ ನಮ್ಮ ಸೈನಿಕರು ಏನೂ ತೊಂದರೆ ಮಾಡದೆ ಕಳಿಸುತ್ತಾರಂತೆ ಆದರೆ ನಮ್ಮ ಹಳ್ಳಿಗರ ಭಾರತದ ಧ್ವಜ ಹಿಡಿದುಕೊಂಡು ಪಾಕ್ ನೆಲದಲ್ಲಿ ಪ್ರಾಣಿಗಳನ್ನು ಹುಡುಕಿಕೊಂಡು ಹೋದರೆ ಅವರನ್ನು ತುಂಬಾ ಹೀನಾ ಮಾನವಾಗಿ ಕಾಣ್ತಾರಂತೆ, ಅಥವಾ ಅವರನ್ನು ಸಾಯಿಸಿಯೇ ಕಳಿಸುತ್ತಾರಂತೆ. ಭಾರತೀಯ ಸೈನಿಕರಲ್ಲಿ ಮಾನವೀಯತೆ ಇದೆ, ಆದರೆ ಪಾಕ್ನ ಸೈನಿಕರಿಗೆ ಮಾನವೀಯತೆ ಇಲ್ವಂತೆ. ಈ ಗಡಿದಾಟಿ ಬಂದ ಒಬ್ಬನೇ ಒಬ್ಬ ಪಾಕಿಸ್ಥಾನ ನಾಗರಿಕರನ್ನು ಸಾಯಿಸಿಲ್ಲ. ಬದಲಾಗಿ ನಮ್ಮ ನಾಗರಿಕರನ್ನು ಸಾಯಿಸಿದ್ದಕ್ಕೆ ಲೆಕ್ಕವೇ ಇಲ್ಲವಂತೆ. ಅಷ್ಟು ಜನರನ್ನು ಪಾಕ್ ಸೈನಿಕರು ಸಾಯಿಸಿದ್ದಾರೆ.
ಈ ಮುಳ್ಳಿನ ತಂತಿ ಬೇಲಿಯನ್ನು ಮಟ್ಟಿದರೆ ಸೈನಿಕರ ಸದ್ಯದ ಎಲ್ಲ ಸ್ಟೇಷನ್ಗಳಿಗೂ ಸೈರನ್ ಹೊಡೆಯುತ್ತಂತೆ. ಆವಾಗ ಎಲ್ಲರೂ ಅಲರ್ಟ್ ಆಗಿ ಸದ್ಯದ ಪರಿಸ್ಥಿತಿ ತಿಳಿಗೊಳಿಸುತ್ತಾರಂತೆ. ಪಾಕ್ನ ಸೈನಿಕರು, ಭಯೋತ್ಪಾದಕರು ಹಳ್ಳಿಯವರ ಹಾಗೆ ವೇಷಧರಿಸಿ ಬಂದು ನಮ್ಮ ಸೈನಿಕರನ್ನು ಸಾಯಿಸಿ ಹೋಗಿರೋದು ಈ ಗಡಿಯಲ್ಲಿ ನಡೆದಿದೆಯಂತೆ.
ಇನ್ನೂ ಅಲ್ಲಿನ ಹಲವಾರು ವಿಷಯಗಳ ಬಗ್ಗೆ ತಿಳಿದುಕೊಳ್ಳಲಾಯಿತು. ಭದ್ರತೆಯ ಸಲುವಾಗಿ ಇಲ್ಲಿ ತಿಳಿಸಿಲ್ಲ. ಈ ಸ್ಥಳದಲ್ಲಿ ಒಂದು ಎತ್ತರವಾದ ಕಟ್ಟಡವಿದೆ ಅಲ್ಲಿಂದ ಪಾಕ್ನ ಗಡಿಯಲ್ಲಿ, ದೂರದ ಬೆಟ್ಟ ಗುಡ್ಡದಲ್ಲಿ ಏನೇನು ನಡೆಯುತ್ತಿದೆ ಅಂತ ಕಾಣಬಹುದಂತೆ. ಅಲ್ಲಿ ಡ್ಯೂಟಿ ಮೇಲಿರುವ ಸೈನಿಕನನ್ನು ಬಿಟ್ಟು ಮತ್ಯಾರಿಗೂ ಅವಕಾಶವಿಲ್ಲವಂತೆ. ಮುಂದಿನ ಡ್ಯೂಟಿಗೆ ಬರುವ ಸೈನಿಕ ಕೋಡನ್ನು ಹೇಳಿದ ಮೇಲೆನೇ ಅಲ್ಲಿಗೆ ಬಿಡುತ್ತಾನಂತೆ. ಆ ಕಟ್ಟಡದ ಮೇಲೆ ಹೋಗದಿದ್ರೂ ಆ ಜಾಗವನ್ನು ನೋಡಿ ಖುಷಿ ಪಟ್ಟೆವು. ಕಟ್ಟಡದ ಮೇಲೆ ಬಂದೂಕು, ದುರ್ಬಿನ್ ಇನ್ನೂ ಏನೇನೋ ಸಾಮಗ್ರಿಗಳಿರುತ್ತವಂತೆ. ಕೆಲವೊಮ್ಮೆ ಊಟ, ನೀರು ಬರದಿದ್ದರೆ ಆ ಇಬ್ಬರೂ ಸೈನಿಕರು ಅಲ್ಲಿಯೇ ಇರಬೇಕಂತ ನಿಯಮ ಇದೆಯಂತೆ.
ನಮಗೆ ಒಂದೈದು ನಿಮಿಷ ಮೊಬೈಲ್ ನೆಟ್ವರ್ಕ್ ಹೋದ್ರೇನೆ ಪ್ರಾಣ ಹೋದವರಂತೆ ಸಂಕಟ ಪಡುತ್ತೇವೆ. ಆದರೆ ಅಲ್ಲಿ ಡ್ಯೂಟಿ ಮಾಡುವವರಿಗೆ ಮೊಬೈಲ್ ಬಳಕೆ ಇಲ್ಲವೆ ಇಲ್ಲ. ಬಳಕೆ ಇದ್ದಿದ್ದರೂ ನೆಟ್ವರ್ಕ್ ಇರುತ್ತಿರಲಿಲ್ಲ. ನಿಜಕ್ಕೂ ಸೈನಿಕರ ಈ ತ್ಯಾಗ ಅವಿಸ್ಮರಣೀಯ. ಸೈನಿಕರ ಬಗ್ಗೆ ಅಪಹಾಸ್ಯ ಮಾಡುವ ಅವೀವೇಕಿಗಳು ಈ ತರಹದ ಗಡಿಗಳನ್ನು ನೋಡಬೇಕು ಆವಾಗಲಾದರೂ ಅರಿವಾಗಬಹುದು.
ಗಡಿಯ ಪೋಟೋಗಳನ್ನು ತೆಗೆಯಲು ಅವಕಾಶ ಮಾಡಿಕೊಟ್ಟರು ಆದರೆ ಆ ಯೋಧರ ಜೊತೆಗೆ ಕಡ್ಡಾಯವಾಗಿ ಅವಕಾಶವಿಲ್ಲ ಯಾಕಂದ್ರೆ ಭದ್ರತಾ ಸಲುವಾಗಿ ಅಂತೆ. ಆ ಉಂಡುಂಡೆ ಮುಳ್ಳಿನ ಬೇಲಿ ನೋಡಿದ್ರೇನೇ ಭಯವಾಗುತ್ತೆ. ಅದನ್ನು ಟಚ್ ಮಾಡಿದರಂತೂ ತಕ್ಷಣ ನೂರಾರು ಯೋಧರು ನಮ್ಮ ಮುಂದೇನೆ ಹಾಜರಾಗುತ್ತಾರಂತೆ. ಎಷ್ಟುದ್ದ ನೋಡಿದರೂ ಮರಳು, ಮುಳ್ಳಿನ ಬೇಲಿ, ನಿರ್ಜನ ಪ್ರದೇಶ ಅಲ್ಲಲ್ಲೊಂದು ಸೈನ್ಯದ ಕಟ್ಟಡಗಳು ಕಾಣುವುದುಂಟು. ಈ ಸರಹದ್ದಿನಲ್ಲಿ ಸಾಕಷ್ಟು ವಿಶ್ರಮಿಸಿ, ಆ ಮಣ್ಣಿಗೆ ನಮಸ್ಕರಿಸಿ, ಪೋಟೋ ತೆಗೆದುಕೊಂಡು ವಾಪಸ್ ತನೋಟ ಮಾರ್ಗವಾಗಿ ಜೈಸಲ್ಮೇರ್ ಕಡೆಗೆ ಪ್ರಯಾಣ ಬೆಳೆಸಿದೆವು. ತನೋಟಗೆ ಬಂದು ಸರಹದ್ದಿಗೆ ಪ್ರಣಾಮ ಮಾಡಲು ಅವಕಾಶ ಕಲ್ಪಿಸಿದ ನಮ್ಮ ಪಕ್ಕದ ಊರಿನ ಸೈನಿಕನಿಗೊಂದು ಪ್ರಣಾಮ ಮಾಡಿ ಬಂದೆವು.
ಸರಹದ್ದಿನಲ್ಲಿ ನಮ್ಮ ಯೋಧರು ಎಷ್ಟು ಕಷ್ಟ ಅನುಭವಿಸುತ್ತಾರೆ, ನಮ್ಮ ಸರಹದ್ದು ಹೇಗಿದೆ, ಅಲ್ಲಿನ ಸ್ಥಿತಿಗತಿಯ ಬಗ್ಗೆ ತಿಳಿದು ಮನಸ್ಸು ಮರುಗುತ್ತಿದೆ. ಸೈನಿಕರ ಈ ಎಲ್ಲ ಕಷ್ಟವನ್ನು ಕಷ್ಟ ಅಂತ ಅನ್ಕೊಂಡೆ ಇಲ್ವಲ್ಲ ಇದೇ ಅವರ ಭಾರತ ಮಾತೆಯ ಮೇಲಿನ ಭಕ್ತಿ ಎಂತಹದ್ದು ಅಂತ ತೋರಿಸುತ್ತದೆ. ದೇಶಕ್ಕೋಸ್ಕರ ಯಾರು ಎಷ್ಟೇ ದುಡಿದಿದ್ದರೂ ಸರಹದ್ದಿನಲ್ಲಿರುವ ಸೈನಿಕರ ಮುಂದೆ ಶೂನ್ಯವೆ. ಅಷ್ಟು ತ್ಯಾಗ ಬಲಿದಾನಗಳನ್ನು ನಮ್ಮ ಸೈನಿಕರು ಮೈಗೂಡಿಸಿಕೊಂಡಿದ್ದಾರೆ. ಪಾಕ್ ಪರವಾಗಿ ಘೋಷಣೆ ಕೂಗುವ ಮತೀಯವಾದಿಗಳಿಗೇನು ಗೊತ್ತು ಅದೇ ಪಾಕ್ನ ಸೈನಿಕರಿಂದ ನಮ್ಮ ಸ್ಥಳಿಯ ಹಳ್ಳಿಗರಿಗೆ ಎಷ್ಟು ತೊಂದರೆಯಾಗುತ್ತಂತ.
ದೇಶಪ್ರೇಮಿಗಳು ನಮ್ಮ ಯೋಧರನ್ನು ಗೌರವಿಸುತ್ತಾರೆ. ಸರಹದ್ದು ನೋಡಿ ಬಂದವರು ಸೈನಿಕರನ್ನು ಗೌರವಿಸೋದು ಅಷ್ಟೇ ಅಲ್ಲ ಪೂಜಿಸುತ್ತಾರೆ. ಅಲ್ಲಿ ಅಷ್ಟು ಸತ್ಯದ ದರ್ಶನವಾಗುತ್ತದೆ. ತನ್ನನ್ನು ತಾನು ದೊಡ್ಡ ದೇಶಪ್ರೇಮಿ ಅನ್ಕೊಂಡು ಸೈನಿಕರ ಬಗ್ಗೆ ಇಲ್ಲ ಸಲ್ಲದ ಆರೋಪ, ಅಪಹಾಸ್ಯ ಮಾಡುವವರು ಒಮ್ಮೆ ಯೋಧರ ಪರಿಸ್ಥಿತಿಯನ್ನೊಮ್ಮೆ ಸರಹದ್ದಿಗೆ ಹೋಗಿ ನೋಡಿ ಬನ್ನಿ, ಆವಾಗಲಾದರೂ ಸತ್ಯದ ಅರಿವು ಆಗಿ, ಸೈನಿಕರ ಮೇಲೆ ಗೌರವವಾದರೂ ಹುಟ್ಟಲಿ ಎನ್ನುವ ಆಶಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.