ಒಳ್ಳೆಯವರ ಕಷ್ಟದ ಕಾರಣದಿಂದಲೇ ಉಳಿದವರು ನೆಮ್ಮದಿಯಿಂದ ಇರುವುದು – ಕೀರ್ತಿಶೇಷ ಮಾನನೀಯ ದತ್ತೋಪಂತ ಠೇಂಗಡಿಯವರ ಜೀವನ ಮಂತ್ರ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಓರ್ವ ಸಾಮಾನ್ಯ ಸ್ವಯಂಸೇವಕ ನಾನು ಎಂಬುದು ಅವರ ವಿನಯ. ಸ್ವಯಂಸೇವಕ ಸದಾ ಇನ್ನೊಬ್ಬರ, ಸಮಾಜದ ಹಿತ ಚಿಂತನೆಯಲ್ಲೇ ಧ್ಯೇಯಯಾತ್ರೆ ಮಾಡಬೇಕಾದವ ಎಂಬುದು ಅವರ ವಿಶ್ವಾಸ. ಸಂಘದ ಸಂಸ್ಕಾರಗಳಿಂದ ಧ್ಯೇಯ ಪ್ರಾಪ್ತಿಯ ತೀವ್ರ ಇಚ್ಛೆ ಸ್ವಯಂಸೇವಕನ ಮನದಲ್ಲಿ ಮೂಡುತ್ತದೆ ಎನ್ನುತ್ತಿದ್ದರು ಆ ಗುಣಗ್ರಾಹಿ.
ಯಾವುದೇ ಕಾರ್ಯದ ಸರಿಯಾದ ಪರಿಚಯ ಅದರ ಸಿದ್ಧಾಂತ (ಫಿಲಾಸಾಫಿ) ಅಥವಾ ಕಾರ್ಯಪದ್ಧತಿ (ಮೆಥೆಡಾಲೋಜಿ)ಯಿಂದ ಆಗದು; ಅದು ಕಾರ್ಯಕರ್ತರಿಂದ ಮಾತ್ರ ಸಾಧ್ಯವಾಗುತ್ತದೆ. ಕಾರ್ಯ ಮತ್ತು ಕಾರ್ಯಕರ್ತ ಇವುಗಳ ನಡುವೆ ಅವಿನಾಭಾವ ಸಂಬಂಧವಿದೆ ಎಂದವರು, ಅನೇಕ ಸಂಘಟನೆಗಳ ಪ್ರೇರಕರೂ, ಮಹಾಪೋಷಕರಾಗಿದ್ದ ದತ್ತೋಪಂತಜೀ.
ಅವರು ನೀಡುತ್ತಿದ್ದ ’ಲಾಟೀನು ಮತ್ತು ಗಾಜು’ ಉದಾಹರಣೆ ಮನನೀಯ. ಗಾಜು ಹಾಕಿದ್ದರೆ, ಗಾಳಿಯ ಹೊಡೆತವನ್ನು ದೀಪ ತಾಳಿಕೊಂಡು ಬೆಳಗುತ್ತದೆ. ದೀಪ ಆರದು; ಬೆಳಕೂ ಹರಡುತ್ತದೆ. ಆದರೆ ಗಾಜಿನ ಒಳ ಮೈಗೆ ಧೂಳು ಮಸಿ ಅಂಟಿದರೆ?! ಬೆಳಕು ಹೊರ ಸೂಸುವುದೂ ಇಲ್ಲ; ಬೆಳಕು ನೀಡಲಾಗದು. ಕಾರ್ಯಕರ್ತನೂ ಸಹ ಸಾರ್ವಜನಿಕ ಜೀವನದಲ್ಲಿ ಗಾಜಿನಂತೆ ನಿಷ್ಕಳಂಕ-ಪಾರದರ್ಶಿ ಆಗಿರಬೇಕು.
ವ್ಯವಹಾರಿ ಆದರ್ಶವಾದಿ (ಪ್ರ್ಯಾಕ್ಟಿಕಲ್ ಐಡಿಯಲಿಸ್ಟ್) ಕಾರ್ಯಕರ್ತರನ್ನು ರೂಪಿಸುವತ್ತ ಅವರ ದೃಷ್ಟಿ ಸದಾ ನೆಟ್ಟಿರುತ್ತಿತ್ತು. ಅವರ ಮಾತುಗಳಲ್ಲೇ ಹೇಳುವುದಾದರೆ.. ಅನೇಕ ಆದರ್ಶವಾದಿಗಳು ಎತ್ತರೆತ್ತರಕ್ಕೆ ಏರುತ್ತಾರೆ. ನೆಲದ ಮೇಲೇನಿದೆ ಎಂಬುದು ಅವರಿಗೆ ಕಾಣಿಸುವುದಿಲ್ಲ. ಇನ್ನು ಕೆಲವು ವ್ಯವಹಾರ ಚತುರರು ಕೇವಲ ನೆಲದ ಮೇಲಿರುವುದನ್ನೇ ನೋಡುವುದರಲ್ಲಿ ಮುಳುಗಿ ಹೋಗುತ್ತಾರೆ. ’ಏನಿದೆ?’ ಎಂಬ ಚಿಂತೆ ಅದೆಷ್ಟು ಅವರನ್ನು ಮುಳುಗಿಸುತ್ತದೆ ಎಂದರೆ, ’ಏನಿಲ್ಲವೋ ಅದನ್ನು ಸಾಧಿಸಬೇಕಿತ್ತು!’ ಎಂಬ ವಿವೇಕ ಮನದಲ್ಲಿ ಸುಳಿಯುವುದೇ ಇಲ್ಲ!
ಕಾರ್ಯಕರ್ತನಲ್ಲಿ ಆತ್ಮವಿಶ್ವಾಸದಿಂದ ಅಹಂಕಾರ ಹುಟ್ಟದೇ? ನಿಜ ಈ ಅಪಾಯ ಯಾವತ್ತೂ ಇದೆ ಎನ್ನುತ್ತಿದ್ದರು ದತ್ತೋಪಂತ್ಜೀ. ಅದಕ್ಕವರು ಸೂಚಿಸಿದ ಪರಿಹಾರ ನೋಡಿ.. ಕಾರ್ಯದ ಕುರಿತಿರುವ ನಿಷ್ಠೆಯಿಂದ ವ್ಯಕ್ತಿಗತ ಅಹಂಕಾರವನ್ನು ಧ್ಯೇಯನಿಷ್ಠ ಆತ್ಮ ವಿಶ್ವಾಸವನ್ನಾಗಿ ಪರಿವರ್ತಿಸಿಕೊಳ್ಳುವುದು. ಆ ಪರಿವರ್ತನೆ ಕಾರ್ಯಕರ್ತನ ವಿಕಾಸ ಪ್ರಕ್ರಿಯೆಯಲ್ಲಿ ಮಹತ್ವಪೂರ್ಣ ಘಟ್ಟ. ಈ ತಪಸ್ಸು ಅವರಿಗೆ ಸಿದ್ಧಿಸಿತ್ತು.
ಸಂತ ಜ್ಞಾನೇಶ್ವರರ ವಾಣಿ ’ಮಾರ್ಗಾಧಾರೆ ವರ್ತಾವೇ/ ವಿಶ್ವ ಹೇ ಮೋಹರೇ ಲಾವಾವೇ/’ ನಿಧಾನವಾಗಿ ಕಾರ್ಯಕರ್ತನ ನಡಿಗೆ ವೇಗವಾಗುತ್ತದೆ. ಆತನ ಪ್ರತಿಷ್ಠೆ, ಗೌರವ ಹೆಚ್ಚಾಗುತ್ತವೆ. ಸುಖಸಾಧನಗಳೂ ದೊರೆಯುತ್ತವೆ. ಕೆಲವರು ಬೇಕೆಂದೇ ಅವುಗಳನ್ನು ತಂದುಕೊಳ್ಳುತ್ತಾರೆ. ಇದರಿಂದ ದುರಾಸೆ ಮೂಡುತ್ತದೆ! ಎಂದು ಎಚ್ಚರಿಸುತ್ತಿದ್ದರು. ಹಾಗಾಗಿ, ಹಲವು ಆಯಾಮಗಳ ದೃಷ್ಟಿ ಇದ್ದರೂ ಏಕಾಂಶದ ಏಕಾಗ್ರತೆ (ಮೆನಿ ಡೈಮೆನ್ಶನಲ್ ವಿಜನ್) ದತ್ತೋಪಂತ್ಜೀ ಪ್ರತಿಪಾದಿಸುತ್ತಿದ್ದ ’ಸ್ವಯಂಸೇವಕ ಕೇಂದ್ರಿತ ನಿತ್ಯ ಶಾಖೆ’ ಪದ್ಧತಿ.
’ಪರಂ ವೈಭವಂ ನೇತುಮೇತತ್ ಸ್ವರಾಷ್ಟ್ರಂ’ ಸಂಘದ ಧ್ಯೇಯ ಸಂಕಲ್ಪ. ಈ ಧ್ಯೇಯದ ಪೂರ್ವಶರತ್ತು ’ವಿಧಾಯಾಸ್ಯ ಧರ್ಮಸ್ಯ ಸಂರಕ್ಷಣಮ್’. ಈ ಧರ್ಮ ಸಂರಕ್ಷಣೆ ಮಾಡಲು ಆಧಾರವಾಗಿರುವ ಉಪಕರಣ ’ವಿಜೇತ್ರಿ ಚ ನಃ ಸಂಹತಾ ಕಾರ್ಯಶಕ್ತಿಃ’ ಈ ಕಾರ್ಯಕ್ಕಾಗಿ ಕಟಿಬದ್ಧರಾದ ’ವಯಂ ಹಿಂದುರಾಷ್ಟ್ರಾಂಗಭೂತಾ’ ನಾವು ಸಾಮರ್ಥ್ಯಶಾಲಿಗಳಾಗಲು ಆಶೀರ್ವಾದ ಬೇಡುವೆವು.. ಎಂಬ ಧ್ಯೇಯಕ್ಕಂಟಿದ ಬಾಳು ಹೆಬ್ಬಾಳು ಬಾಳಿದ ಜೇಷ್ಠ ಪ್ರಚಾರಕರು ದತ್ತೀಪಂತ್ಜೀ.
ಅವರಿಗೆ ಮೌಲ್ಯಗಳು ಚರ್ಮವಾಗಿತ್ತು; ನಾಲಿಗೆಯಾಗಿರಲಿಲ್ಲ. ವಿಶಾಲ ಸಂಘಟನೆಯ ಬಲದ ಆಧಾರದಲ್ಲಿ ನಿರ್ಮಾಣಗೊಳ್ಳುವ ನಮ್ಮಂತಹ ಧ್ಯೇಯನಿಷ್ಠ ಕಾರ್ಯಕರ್ತರ ಕಾರ್ಯಶಕ್ತಿಯು ಧರ್ಮ ಸಂರಕ್ಷಣೆ ಮಾಡುವ ಮೂಲಕ, ಈ ರಾಷ್ಟ್ರವನ್ನು ಪರಮ ವೈಭವದೆಡೆಗೆ ತೆಗೆದುಕೊಂಡು ಹೋಗುತ್ತದೆ ಎಂದು ಅವರು ನಡೆದು ತೋರಿಸಿದ ಮಾನ್ಯವರ.
’ಆಗಾಗ ಬಂದು ಹೋಗುವ ಆನಂದದಿಂದ ಸುಖವಿಲ್ಲ’ ಎಂದು ಋಷಿತುಲ್ಯ ಜೀವನ ನಡೆಸಿದ ಪ್ರಚಾರಕ ದತ್ತೋಪಂತಜೀ ನೆನಪಿಸುತ್ತಿದ್ದ ಮಾತು.. ’ತೃಷೆಯನ್ನು ಜೀರ್ಣಿಸಲಾಗದೇ ಕೊನೆಯಲ್ಲಿ ನಾವೇ ಜೀರ್ಣರಾಗಬೇಯಿತು’ ಎಂಬ ಯಯಾತಿಯ ಕಥೆ. ಹಾಗಾಗಿ, ಬೌದ್ಧಿಕ ಪ್ರಾಮಾಣಿಕತೆ (ಇಂಟೆಲ್ಯಾಕ್ಚುವಲ್ ಹಾನೆಸ್ಟಿ)ಗೆ ಮಹತ್ವ ನೀಡಬೇಕೇ ಹೊರತು ಬೌದ್ಧಿಕ ಅಹಂಕಾರ (ಇಂಟೆಲ್ಯಾಕ್ಚುವಲ್ ಇಗೋ)ಕ್ಕಲ್ಲ ಎಂಬುದು ಅವರ ಸ್ಪಷ್ಟ ನುಡಿ.
ವಾಸ್ತವದಲ್ಲಿ ಅರ್ಥ ಮತ್ತು ಕಾಮದ ಬೆನ್ನು ಹತ್ತಿ, ಪ್ರಭಾವಿತರಾದರೆ ಸುಖ ಸಿಗಲಾರದು. ಗೋಸ್ವಾಮಿ ತುಳಸೀದಾಸರ ಉಪಮೆ – ಡಾಸತೀಹ ನಿಶಿ ಬೀತ್ ಗಯೀ ಸಬ್, ಕಪಿಹು ನ ನಾಥ್ ನೀಂದ್ ಭರ ಆಯೋ ಒಳ್ಳೆಯ ಸುಖ ನಿದ್ರೆ ಬೇಕಿದ್ದರೆ ಹಾಸಿಗೆ ಚೆನ್ನಾಗಿರಬೇಕು. ಆದರೆ, ಹಾಸಿಗೆಯನ್ನು ಸರಿ ಮಾಡುತ್ತ ಮಾಡುತ್ತಾ ರಾತ್ರಿ ಕಳೆದು ಬೆಳಗಾಗಿ ಬಿಟ್ಟರೆ! ಹಾಸಿಗೆ ಸರಿ ಮಾಡುವುದರಲ್ಲೇ ಜೀವನವಿಡೀ ಕಳೆದಂತೆ ನಿದ್ದೆಯ ಸುಖವೇ ಸಿಗಲಾರದು.. ಲೆಕ್ಕದಲ್ಲಿ ಜೀವನ ಮಾಡಬೇಕು.
ಹಾಗಾಗಿ, ’ತೇರಾ ವೈಭವ್ ಅಮರ ರಹೇ ಮಾ; ಹಮ್ ದಿನ ಚಾರ್ ರಹೇ ನ ರಹೇ..’ ನಿನ್ನ ವೈಭವ ಅಮರವಾಗಿರಲಿ ಅಮ್ಮ; ನಾವು ನಾಲ್ಕು ದಿನ ಮಾತ್ರ ಇರುವವರು.. ಈ ಜೀವನ ಮೌಲ್ಯದೊಂದಿಗೆ ಬಾಳಿದವರು ದತ್ತೋಪಂತ್ಜೀ.
1942 ರಲ್ಲಿ ಆರ್ಎಸ್ಎಸ್ನ ಪ್ರಚಾರಕರಾಗಿ ಸೇವಾವ್ರತಿಯಾದ ಮಾನನೀಯ ದತ್ತೋಪಂತಜೀ, ರಾಷ್ಟ್ರ ಸಮರ್ಪಿತ ಜೀವನ ನಡೆಸಿದವರು. ಅಸಂಖ್ಯಾತ ಕಾರ್ಯಕರ್ತರನ್ನು ರೂಪಿಸಿದವರು. ಪ್ರಪಂಚದ ಅತೀ ದೊಡ್ಡ ಕಾರ್ಮಿಕ ಸಂಘಟನೆ ಭಾರತೀಯ ಮಜ್ದೂರ ಸಂಘದ ಸಂಸ್ಥಾಪಕರು. ಜಗತ್ತಿನ ಗಮನ ಸೆಳೆದ ವಿದ್ಯಾರ್ಥಿ ಸಂಘಟನೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಅಸ್ಥಿವಾರ ರೂಪಿಸಿದವರು. ಭಾರತೀಯ ಕಿಸಾನ್ ಸಂಘ, ಸ್ವದೇಶಿ ಜಾಗರಣ ಮಂಚ್ ಸ್ಥಾಪಿಸಿದ ದೃಷ್ಟಾರರು.
ಸೇವೆ ಎಂಬ ಯಜ್ಞ ಕುಂಡದಲ್ಲಿ ಸಮಿಧೆಯಂತೆ ಉರಿದ ಮಾನ್ಯ ದತ್ತೋಪಂತ್ಜೀ ಎರಡು ಅವಧಿಗೆ ರಾಜ್ಯ ಸಭೆಯ ಸಂಸದೀಯ ಪಟುವಾಗಿದ್ದರು. ಮಾನನೀಯ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರೊಂದಿಗೆ ಅನೇಕ ವಿಧಾಯಕ ಕಾರ್ಯಕ್ರಮಗಳನ್ನು ರೂಪಿಸಿದ ಮಹನೀಯ. ಸಮಾಜಮುಖಿ ಚಿಂತಕ.
ರಾಷ್ಟ್ರ ಚಿಂತನೆಯ 100 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಶ್ರೇಯ ಠೇಂಗಡಿಯವರದ್ದು. ’ನಾನೊಬ್ಬ ಸಾಮಾನ್ಯ ಕಾರ್ಯಕರ್ತ’ ಎಂಬ ಅವರ ವಿನೀತಭಾವ, ’ಕಾರ್ಯಕರ್ತ’ ಎಂಬ ಬಹುಚರ್ಚಿತ ಕೃತಿ ಸೇರಿದಂತೆ, ’ಥರ್ಡ್ ವೇ’, ’ಆನ್ ರೆವ್ಯುಲ್ಯೂಷನ್’, ಪ್ರೀಫೇಸಸ್ ಇನ್ ಹಿಂದು ಎಕನಾಮಿಕ್ಸ್’ ಅವರು ರಚಿಸಿದ ಗಮನ ಸೆಳೆದ ಚಿಂತನ ಮಾಲೆಗಳು.
✍ ಹರ್ಷವರ್ಧನ್ ವಿ. ಶೀಲವಂತ್
(ಮಾನನೀಯ ಡಾ. ಅಂಬೇಡ್ಕರ್ ಅವರೊಂದಿಗೆ ಕೆಲಸ ಮಾಡಿದ ಮಹನೀಯ
ಮಾನ್ಯ ಶ್ರೀ ದತ್ತೋಪಂತಜೀ ಠೇಂಗಡಿ ಅವರ ಜನ್ಮ ಶತಮಾನೋತ್ಸವ ಹಿನ್ನೆಲೆಯಲ್ಲಿ ಈ ಲೇಖನ)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.