ದೇಶ ಮತ್ತು ದೇಶವಾಸಿಗಳ ರಕ್ಷಣೆಯ ವಿಚಾರಕ್ಕೆ ಬಂದಾಗ ಎಲ್ಲರ ಬಾಯಲ್ಲೂ ಕೇಳುವ ಏಕೈಕ ಶಬ್ಧ ಸೈನ್ಯ ಮತ್ತು ಸೈನಿಕರು. ಶತ್ರು ರಾಷ್ಟ್ರಗಳು, ದೇಶದೊಳಗಿನ ದುಷ್ಟ ಪಡೆಗಳೂ ಆಕ್ರಮಣಕ್ಕೆ ಮುಂದಾದಾಗ ಜೀವದ ಹಂಗು ತೊರೆದು ನಮ್ಮನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗುತ್ತಾರೆ. ತಮ್ಮ ಮನೆ, ಮಕ್ಕಳು, ಕುಟುಂಬಸ್ಥರು ಎಂಬ ಮೋಹಗಳೆಲ್ಲವನ್ನೂ ಬದಿಗೊತ್ತಿ, ತಾಯಿ ನಾಡಿನ ಸೇವೆಗಾಗಿ ತಮ್ಮನ್ನು ತಾವು ಅರ್ಪಿಸುವ ಸೈನಿಕರ ಋಣ ತೀರಿಸುವುದಕ್ಕೆ ಜನ್ಮ ಸಾಲದು. ಹೀಗೆ ನಾವು ನೆಮ್ಮದಿಯಿಂದ ನಿದ್ದೆ ಮಾಡುವುದಕ್ಕಾಗಿ ತಮ್ಮ ನಿದ್ದೆ ಬಿಟ್ಟು ಪ್ರಯತ್ನಿಸುತ್ತಿರುವ ಸೈನಿಕರಿಗೆ ಗೌರವ ನೀಡಬೇಕಾದದ್ದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ತಮ್ಮ ಜೀವದ ಹಂಗು ತೊರೆದು ಶ್ರೀ ಸಾಮಾನ್ಯದ ಜೀವ ರಕ್ಷಣೆ ಮಾಡಿ ನಾಯಕರಾದ ಕೆಲವು ಧೀರರ ಸೇವೆಯ ಚಿತ್ರಣ ಇಲ್ಲಿದೆ.
ಲೆಫ್ಟಿನೆಂಟ್ ಕರ್ನಲ್ ಸುಮೀತ್ ಭಕ್ಸಿ (ಎಲ್)
ಗುಜರಾತ್ನ ಲಾತೋರ್ ಮತ್ತು ಒಸಮನಾಬಾದ್ನಲ್ಲಿ 1993 ರ ಸೆಪ್ಟೆಂಬರ್ 30 ರಂದು ನಡೆದ ಪಾಕೃತಿಕ ವಿಕೋಪ, ಭೂ ಕಂಪದ ಸಮಯದಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು 18 ತಿಂಗಳ ಹಸುಗೂಸನ್ನು ರಕ್ಷಿಸಿದ ಕೀರ್ತಿ ಸುಮೀತ್ ಭಕ್ಸಿ ಅವರಿಗೆ ಸಲ್ಲುತ್ತದೆ. ಭೂ ಕಂಪನವಾಗಿ 5 ದಿನಗಳೇ ಕಳೆದರೂ 18 ತಿಂಗಳ ಕೂಸು ಪತ್ತೆಯಾಗಿರುವುದಿಲ್ಲ. ದುರಂತದಲ್ಲಿ ಮಗಳು ಪಿನ್ನಿ ಮೃತಪಟ್ಟಿದ್ದಾಳೆ ಎಂದು ಭಾವಿಸಿದ ಹೆತ್ತವರು, ಕೊನೇ ಪಕ್ಷ ತಮ್ಮ ಮಗುವಿನ ಶವವನ್ನಾದರೂ ಹುಡುಕಿ ಕೊಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡುತ್ತಾರೆ.
ಇದೇ ವೇಳೆಗೆ ಹಾನಿ ಸಂಭವಿಸಿದ ಪ್ರದೇಶದಲ್ಲಿ ರಕ್ಷಣಾ ಕಾರ್ಯಗಳನ್ನು ನಡೆಸುತ್ತಿದ್ದ ಸುಮೀತ್ಗೆ ಅವಷೇಶಗಳನ್ನು ಪರಿಶೀಲನೆ ಮಾಡುತ್ತಿರುವ ಸಂದರ್ಭದಲ್ಲಿ ತಣ್ಣಗಾಗಿರುವ ವಸ್ತುವೊಂದು ಕೈಗೆ ತಾಕಿದಂತಾಗುತ್ತದೆ. ಅಲ್ಲಿಯೇ ಶೋಧನೆ ನಡೆಸಿದಾಗ ಹಸುಗೂಸಿನ ದೇಹವೊಂದು ಪತ್ತೆಯಾಗುತ್ತದೆ. ಮಣ್ಣಿನಡಿಯಲ್ಲಿಯೇ ಇದ್ದರೂ ಮಗು ಇನ್ನೂ ಉಸಿರಾಡುತ್ತಿರುತ್ತದೆ. ಅಲ್ಲಿಂದ ಆ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ನಿರಂತರ 108 ಗಂಟೆಗಳ ಶುಶ್ರೂಷೆಯ ನಂತರ ಆ ಮಗು ಮತ್ತೆ ಸರಿಯಾಗಿ ಉಸಿರಾಡುವುದಕ್ಕೆ ಆರಂಭಿಸುತ್ತದೆ.
ಅವಶೇಷಗಳಡಿಯಿಂದ ತಮ್ಮ ಜೀವದ ಹಂಗು ತೊರೆದು ಪಿನ್ನಿಯನ್ನು ರಕ್ಷಿಸಿದ ಲೆ. ಕ. ಸುಮೀತ್ ಭಕ್ಸಿ ಎಲ್ಲರಿಗೂ ಮಾದರಿ. ಈ ದುರ್ಘಟನೆಯಲ್ಲಿ 9748 ಮಂದಿ ಸಾವಿಗೀಡಾಗಿದ್ದರೆ, 3000 ದಷ್ಟು ಜನರು ಗಾಯಗೊಂಡಿದ್ದರು. ಈ ಘಟನೆಗೆ ಸಿಲುಕಿ ನಲುಗಿದ ಅನೇಕರ ಬದುಕನ್ನು ತಮ್ಮ ಜೀವದ ಹಂಗು ತೊರೆದು ಬದುಕಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಕ್ಯಾ. ಮೊಡೆಕುರ್ಟಿ ನಾರಾಯಣ ಮೂರ್ತಿ
ಹಲವಾರು ಯಶಸ್ವಿ ಕಾರ್ಯಾಚರಣೆಗಳಲ್ಲಿ ಕ್ಯಾ. ಮೂರ್ತಿ ಅವರು ಸುಪ್ರಸಿದ್ಧರು. ಗೋವಾ ವಿಮೋಚನೆ, ಚೀನಾ- ಭಾರತ ಯುದ್ಧಗಳಲ್ಲಿ ಹೋರಾಟಗಳಲ್ಲಿ ಹೆಸರು ಪಡೆದವರು. 15 ವರ್ಷಗಳ ಕಾಲ ಯೋಧರಾಗಿ ಸೇವೆ ಸಲ್ಲಿಸಿದ ಇವರು ನಂತರದ ದಿನಗಳಲ್ಲಿ ಇಂಡಿಯನ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಅಥಾರಿಟಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. 1990೦ ರಲ್ಲಿ ನಡೆದ ಏರ್ಲಿಫ್ಟ್ನಲ್ಲಿ ಹಲವಾರು ಜನರ ಜೀವ ರಕ್ಷಿಸಿದ ಕೀರ್ತಿಯೂ ಮೂರ್ತಿ ಅವರದ್ದಾಗಿದೆ.
ಅಮ್ಮಾನ್, ಜೋರ್ಡನ್, ಗಲ್ಫ್ ಮತ್ತು ಮಧ್ಯಪ್ರಾಚ್ಯ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿರುವ ಇವರು 1990 ರಲ್ಲಿ ನಡೆದ ಏರ್ಲಿಫ್ಟ್ನ ಭದ್ರತಾ ಅಧಿಕಾರಿಯಾಗಿದ್ದುಕೊಂಡು, ಇವರ ಮುಂದಾಳತ್ವದಲ್ಲಿ ಸುಮಾರು 1,16,134 ಮಂದಿ ಭಾರತೀಯರನ್ನು ರಕ್ಷಿಸಿದ್ದಾರೆ. ಆ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ. ಪ್ರಸ್ತುತ ವಾಲೆಂಟರೀ ಟ್ರಾಫಿಕ್ ವಾರ್ಡನ್ ಆಗಿ ರಸ್ತೆ ಸಂಚಾರದ ಕುರಿತದಂತೆ ಕಾಳಜಿ ವಹಿಸುತ್ತಿದ್ದಾರೆ. ಆ ಮೂಲಕ ಸಂಚಾರಿ ನಿಯಮ ಉಲ್ಲಂಘಿಸಿ, ಅನಾಹುತಕ್ಕೆ ಆಹ್ವಾನ ನೀಡುತ್ತಿರುವಂತಹ ಸವಾರರಲ್ಲಿ ಎಚ್ಚರ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಮೇ. ಹೇಮಂತ್ ರಾಜ್
ಕೇರಳ ಮೂಲದ ಸೈನಿಕ. ರಜೆಯ ಅವಧಿಯಲ್ಲಿ ಮನೆಗೆ ಆಗಮಿಸಿದ್ದ ಸಂದರ್ಭ, ಕೇರಳವೂ ಸೇರಿದಂತೆ ದೇಶದ ದಕ್ಷಿಣ ಭಾಗದ ಕೆಲವು ರಾಜ್ಯಗಳಲ್ಲಿ ಭೀಕರ ಪ್ರವಾಹ. ಈ ಸಂದರ್ಭ ತನ್ನ ಕರ್ತವ್ಯವನ್ನು ಮನಗಂಡು ತಾವೂ ಒಂದು ತಂಡ ಕಟ್ಟಿಕೊಂಡು ಪ್ರವಾಹಕ್ಕೆ ಸಿಕ್ಕಿ ನಲುಗಿದವರ ಸಹಾಯಕ್ಕೆ ನಿಲ್ಲುತ್ತಾರೆ. ಚೆಂಗನ್ನೂರ್ ಪ್ರದೇಶದಲ್ಲಿ ಮೀನುಗಾರಿಕೆಗೆ ಬಳಸುವ ದೋಣಿ ಬಳಸಿಕೊಂಡು ಸಂತ್ರಸ್ಥರನ್ನು ಕಾಪಾಡುವ ಕೆಲಸದಲ್ಲಿ ತೊಡಗುತ್ತಾರೆ. ಶಾಲಾ ವಿದ್ಯಾರ್ಥಿಗಳು, ನಿವೃತ್ತ ಅಧಿಕಾರಿಗಳ ಸಹಕಾರವನ್ನು ತೆಗೆದುಕೊಂಡು ಇವರು ಕಟ್ಟಿದ ತಂಡ, ಅಲ್ಲಿನ ಅದೆಷ್ಟೋ ಜನರ ಜೀವ, ಜೀವನವನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.
ಗುಂಜನ್ ಸಕ್ಸೇನಾ
ಭಾರತೀಯ ವಾಯು ದಳದ ಮೊದಲ ಬ್ಯಾಚ್ನ ಟ್ರೈನೀ ಪೈಲಟ್ ಆಗಿ ಕರ್ತವ್ಯ ನಿರ್ವಹಿಸಿದ ಮಹಿಳೆ. 1999ರ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿದ ಕೀರ್ತಿಯೂ ಗುಂಜನ್ ಅವರದ್ದು. ಯುದ್ಧದ ಸಂದರ್ಭದಲ್ಲಿ ಸೇನೆಗೆ ಬೇಕಾದ ಶಸ್ತ್ರಾಸ್ತ್ರಗಳ ಪೂರೈಕೆ, ಗಾಯಾಳು ಸೈನಿಕರ ಸ್ಥಳಾಂತರದ ಜೊತೆಗೆ ಭಾರತದ ಸೇನೆಗೆ ವರದಿಗಳನ್ನು ನಿಡುವ ಕೆಲಸವನ್ನು ಗುಂಜಾನ್ ಮಾಡುತ್ತಿದ್ದರು. ಸಣ್ಣ ಚೀತಹ್ ಹೆಲಿಕಾಪ್ಟರ್ ಅನ್ನು ಬಳಸಿ ಪರ್ವತ ಶ್ರೇಣಿಗಳ ಮೇಲೆ ಸುತ್ತಿ ದೇಶಕ್ಕೆ ಬಂದೊದಗುತ್ತಿರುವ ವಿಪತ್ತುಗಳ ಬಗ್ಗೆ ಮಾಹಿತಿ ನೀಡುವ ಮಹತ್ವಪೂರ್ಣ ಜವಾಬ್ಧಾರಿಯನ್ನು ಇವರು ನಿರ್ವಹಿಸಿದ್ದರು. ಆ ಮೂಲಕ ದೇಶದ ಭದ್ರೆತೆಯ ವಿಚಾರದಲ್ಲಿ ಕಾಳಜಿ ವಹಿಸುತ್ತಿದ್ದರು.
ಅವರ ಈ ಸಾಧನೆಗೆ ಅವರಿಗೆ ಶೌರ್ಯ ಚಕ್ರವೂ ಬಂದಿತ್ತು. ಅಲ್ಲದೆ ಈ ಪ್ರಶಸ್ತಿಯನ್ನು ಪಡೆದ ಮೊದಲ ಮಹಿಳಾ ಯೋಧೆ ಎಂಬ ಕೀರ್ತಿಗೂ ಅವರು ಭಾಜನರಾಗಿದ್ದಾರೆ.
ಕರ್ನಲ್ ಡಿಪಿಕೆ ಪಿಳ್ಳೈ
ಮಣಿಪುರದ ಜಿಲ್ಲೆಯೊಂದರಲ್ಲಿ ಬುಡಕಟ್ಟು ಜನರು ನಡೆಸಿದ ದಂಗೆಯನ್ನು ಹತ್ತಿಕ್ಕುವ ಸಲುವಾಗಿ ಪಿಳ್ಳೈ ಅವರನ್ನು ನೇಮಿಸಲಾಗಿತ್ತು. ಈ ಸಂದರ್ಭದಲ್ಲಿ ದಂಗೆಕೋರರ ಗುಂಡೇಟಿನಿಂದ ಗಾಯಗೊಂಡಿದ್ದರೂ, ತಮ್ಮ ಜೀವದ ಹಂಗು ತೊರೆದು ಈ ಹಿಂಸೆಯ ಮಧ್ಯೆ ಸಿಲುಕಿಕೊಂಡಿದ್ದ ಇಬ್ಬರು ಪುಟ್ಟ ಮಕ್ಕಳನ್ನು ರಕ್ಷಿಸಿದ ಕೀರ್ತಿ ಇವರದ್ದು.
ಗಾಯಗೊಂಡಿದ್ದ ಇವರನ್ನು ಕರೆದುಕೊಂಡು ಹೋಗುವುದಕ್ಕಾಗಿ ಬಂದಿದ್ದ ಹೆಲಿಕಾಪ್ಟರ್ನಲ್ಲಿ ಗಾಯಗೊಂಡಿದ್ದ ಆ ಇಬ್ಬರು ಮಕ್ಕಳನ್ನು ಚಿಕಿತ್ಸೆಗಾಗಿ ಕಳುಹಿಸಿ, ತಾವು ಉದ್ರಿಕ್ತ ಪ್ರದೇಶದಲ್ಲಿಯೇ ಮುಂದಿನ ರಕ್ಷಣಾ ಹೆಲಿಕಾಪ್ಟರ್ಗಾಗಿ ಕಾದು ಕುಳಿತರು. ಅಲ್ಲದೆ ಗಾಯಗೊಂಡಿರುವ ಮಕ್ಕಳಿಗೆ ಸರಿಯಾದ ಚಿಕಿತ್ಸೆ ಕೊಡಿಸುವಂತೆ ತಿಳಿಸಿ, ತಾವಿನ್ನು ಹೆಚ್ಚು ಸಮಯ ಬದುಕುವುದಿಲ್ಲ. ತಮ್ಮ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂಬುದನ್ನೂ ಪೈಲಟ್ಗೆ ತಿಳಿಸುತ್ತಾರೆ. ಹೀಗೆ ಮತ್ತೆರಡು ಜೀವ ಉಳಿಸುವ ಸಲುವಾಗಿ ತಮ್ಮ ಜೀವವನ್ನೇ ಸಮರ್ಪಿಸಲು ಸಿದ್ಧರಾದ ಪಿಳ್ಳೈ ಅವರು ನಿತ್ಯ ಸ್ತುತ್ಯರ್ಹರು.
ಬದುಕು ಎಲ್ಲರೂ ಬದುಕುತ್ತಾರೆ. ಆದರೆ ಇತರರಿಗೆ ನಮ್ಮಿಂದೇನಾದರೂ ಉಪಯೋಗವಾಗುವಂತೆ, ಸಹಾಯವಾಗುವಂತೆ ಬದುಕುವವರ ಸಂಖ್ಯೆ ತೀರಾ ಕಡಿಮೆ ಎನ್ನಬಹುದು. ಹೀಗೆ ಪರ ಹಿತ ಮತ್ತು ರಾಷ್ಟ್ರ ಹಿತಕ್ಕಾಗಿ ಬದುಕು ಮುಡಿಪಾಗಿಟ್ಟ ಯೋಧರು ನಿಜಕ್ಕೂ ನಮ್ಮೆಲ್ಲರ ಪಾಲಿನ ನಾಯಕರು. ಅವರಿಗೆ ಗೌರವ ಸಲ್ಲಿಸಬೇಕಾಗಿರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವೂ ಹೌದು. ದೇಶಕ್ಕಾಗಿ ದೇಹ ಅರ್ಪಿಸುವ ತ್ಯಾಗಿಗಳಿಗೆ ದೊಡ್ಡ ಸಲಾಂ.
ಮೂಲ : ದಿ ಬೆಟರ್ ಇಂಡಿಯಾ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.