ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಹಲವು ದಿನಗಳ ಕಾಲ ನಡೆದ ಹಿಂಸಾಚಾರದ ನಂತರ ಇದೀಗ ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳಲು ಪ್ರಾರಂಭಿಸಿದೆ. ಗುರುವಾರ ಮುಂಜಾನೆ ಭದ್ರತಾ ಪಡೆಗಳು ಹಿಂಸಾಚಾರ ಪೀಡಿತ ಪ್ರದೇಶದ ವಿವಿಧ ಪ್ರದೇಶಗಳಲ್ಲಿ ಧ್ವಜ ಮೆರವಣಿಗೆ ನಡೆಸಿದವು.
ದೆಹಲಿ ವಿಶೇಷ ಪೊಲೀಸ್ ಆಯುಕ್ತ ಎಸ್ ಎನ್ ಶ್ರೀವಾಸ್ತವ ಅವರು ಈಶಾನ್ಯ ಜಿಲ್ಲೆಯ ಪರಿಸ್ಥಿತಿಯನ್ನು ಬುಧವಾರ-ಗುರುವಾರ ಮಧ್ಯರಾತ್ರಿ ಅವಲೋಕನ ನಡೆಸಿದ ಕೆಲವೇ ಗಂಟೆಗಳ ನಂತರ ಧ್ವಜ ಮೆರವಣಿಗೆಗಳನ್ನು ನಡೆಸಲಾಗಿದೆ.
ಈಶಾನ್ಯ ದೆಹಲಿಯಲ್ಲಿನ ಹಿಂಸಾಚಾರದಿಂದಾಗಿ ಹೆಚ್ಚು ಪೀಡಿತಗೊಂಡಿದ್ದ ಜಾಫರಬಾದ್, ಮೌಜ್ಪುರ್ ಮತ್ತು ಭಜನ್ಪುರದಂತಹ ಪ್ರದೇಶಗಳಲ್ಲಿ ಭದ್ರತಾ ಪಡೆಗಳ ಧ್ವಜ ಮೆರವಣಿಗೆಯನ್ನು ನಡೆಸಲಾಯಿತು.
ಕಳೆದ ಭಾನುವಾರದಿಂದ ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಸಿಎಎ ವಿರೋಧಿ ಪ್ರತಿಭಟನೆಗಳಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ 27 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಮೃತರಲ್ಲಿ ಒಬ್ಬರು ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮತ್ತು ಗುಪ್ತಚರ ಅಧಿಕಾರಿ ಸೇರಿದ್ದಾರೆ. ಗುಪ್ತಚರ ಅಧಿಕಾರಿಯ ಶವವನ್ನು ಚರಂಡಿಯಲ್ಲಿ ದುಷ್ಕರ್ಮಿಗಳು ಹೂತು ಹಾಕಿದ್ದರು.
ದೆಹಲಿಯ ಭದ್ರತಾ ಪರಿಸ್ಥಿತಿಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಅವಲೋಕನ ಮಾಡಿದ್ದು, ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ್ದಾರೆ. ಪ್ರಸ್ತುತ ಪೊಲೀಸರು, ಪ್ಯಾರಾ ಮಿಲಿಟರಿ ಪಡೆಗಳು ದೆಹಲಿಯಲ್ಲಿ ಕಟ್ಟುನಿಟ್ಟಿನ ಕಣ್ಗಾವಲನ್ನು ಇರಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.