2019ರ ಜುಲೈ ತಿಂಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿಯು ಅಧಿಕಾರದ ಗದ್ದುಗೆಯನ್ನು ಏರಿತು. ಬಿ. ಎಸ್. ಯಡಿಯೂರಪ್ಪ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದರು. ಆದರೂ ಯಡಿಯೂರಪ್ಪನವರು ಅಧಿಕಾರಕ್ಕೇರಿದ್ದನ್ನು ಮುಕ್ತಕಂಠದಿಂದ ಹೊಗಳಲು ಕೇಂದ್ರ ನಾಯಕತ್ವ ಹಿಂಜರಿದಿತ್ತು. 14 ತಿಂಗಳು ಹಳೆಯ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವು ಪತನಗೊಂಡಾಗ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಕೇಂದ್ರ ನಾಯಕತ್ವವು ಸಹಜವಾಗಿಯೇ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ನಡೆಸಿದ ಬಲವಾದ ನಕಾರಾತ್ಮಕ ಅಭಿಯಾನದಿಂದಾಗಿ ಆತಂಕವನ್ನು ಪಟ್ಟಿಕೊಂಡಿತು.
ಆದರೆ ಯಡಿಯೂರಪ್ಪನವರು ನಂತರ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಅಭೂತಪೂರ್ವವಾದ ರೀತಿಯಲ್ಲಿ ಗೆಲ್ಲಿಸಿ ಕೇಂದ್ರ ನಾಯಕರ ಆತಂಕವನ್ನು ದೂರ ಮಾಡಿದರು. 15 ಸ್ಥಾನಗಳ ಪೈಕಿ 12 ಸ್ಥಾನಗಳಲ್ಲಿ ಬಿಜೆಪಿ ಜಯವನ್ನು ಗಳಿಸಿತ್ತು. ಹೀಗಾಗಿ ಯಡಿಯೂರಪ್ಪ ಅಸ್ಥಿರವಾಗಿದ್ದ ಸರ್ಕಾರವನ್ನು ಸ್ಥಿರಗೊಳಿಸಿದರು. ಕೇಂದ್ರ ನಾಯಕರು ಯಡಿಯೂರಪ್ಪ ಕಾರ್ಯವೈಖರಿಯನ್ನು ಕೊಂಡಾಡಿದರು.
ಕರ್ನಾಟಕದಲ್ಲಿ ನಡೆದ ಉಪಚುನಾವಣೆ ಯಡಿಯೂರಪ್ಪ ಅವರ ರಾಜಕೀಯ ತಂತ್ರಗಾರಿಕೆಯನ್ನು ಪ್ರತಿಬಿಂಬಿಸುತ್ತದೆ, ಅವರು ಫೆಬ್ರವರಿ 27 ರಂದು 78 ನೇ ವರ್ಷಕ್ಕೆ ಕಾಲಿಡಲಿಡುತ್ತಿದ್ದಾರೆ. ಪ್ರಸ್ತುತ ಪಕ್ಷದ ವಲಯಗಳಲ್ಲಿ ಅವರ ಪ್ರಭಾವವು ಎಷ್ಟು ಪ್ರಬಲವಾಗಿದೆ ಎಂದರೆ ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸಿ ಮಾರ್ಗದರ್ಶಕ ಮಂಡಲದ ಗಣ್ಯರ ಕ್ಲಬ್ಗೆ ಸೇರುವಂತೆ ಅವರನ್ನು ಕೇಳಲು ಯಾವುದೇ ನಾಯಕನಿಗೆ ಧೈರ್ಯವಿಲ್ಲ. ಕರ್ನಾಟಕ ಮುಖ್ಯಮಂತ್ರಿಯವರ ಜನ್ಮದಿನಾಚರಣೆ ಈ ಬಾರಿ ದೊಡ್ಡ ಸಮಾರಂಭವಾಗಿಯೇ ಮಾರ್ಪಾಡಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ನಾಲ್ಕು ಕೇಂದ್ರ ಸಚಿವರು, ಕರ್ನಾಟಕದ ನಾಲ್ಕು ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಎಚ್.ಡಿ.ಕುಮಾರಸ್ವಾಮಿ, ಡಿ.ವಿ.ಸದಾನಂದ ಗೌಡ ಮತ್ತು ಸಿದ್ದರಾಮಯ್ಯ ಗುರುವಾರ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
ಬಿಎಸ್ ಯಡಿಯುರಪ್ಪ ಅವರು ಮುಖ್ಯಮಂತ್ರಿಯಾಗಿ ತಮ್ಮ 78 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ಅವರ ಛಲ ಮತ್ತು ದಿಟ್ಟತನವೇ ಕಾರಣ. ರೈತರ ಪರವಾದ ಕಾಳಜಿ, ಮಠಮಾನ್ಯಗಳ ಬಗೆಗಿನ ಅತೀವ ಗೌರವ, ಯಾವ ಸೋಲಿಗೂ ಎದೆಗುಂದದ ಅವರ ವ್ಯಕ್ತಿತ್ವವೇ ಅವರನ್ನಿಂದು ಸಿಎಂ ಕುರ್ಚಿಯಲ್ಲಿ ಕುಳ್ಳರಿಸಿದೆ. ಅನಗತ್ಯ ಹೇಳಿಕೆಗಳನ್ನು ನೀಡಿ ವಿವಾದ ಸೃಷ್ಟಿಸುವವರಲ್ಲ ಯಡಿಯೂರಪ್ಪ, ಗಂಭೀರ ವ್ಯಕ್ತಿತ್ವ, ಗಂಭೀರ ನಡೆನುಡಿ ಅವರ ಗುಣ. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಬಂದಾಗಲೂ ಅವರು ವಿವಾದಕ್ಕೆ ತಮ್ಮನ್ನು ತಾವು ಒಳಪಡಿಸಿಕೊಳ್ಳಲಿಲ್ಲ, ಅತ್ಯಂತ ಪ್ರಬುದ್ಧರಾಗಿಯೇ ನಡೆದುಕೊಂಡರು. ಹೀಗಾಗಿ ಇಂದಿಗೂ ಅವರು ಲಿಂಗಾಯತ, ವೀರಶೈವ ಸಮುದಾಯದ ಪ್ರಬಲ ನಾಯಕ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕನಾಗಿ ಬೆಳೆದ ಯಡಿಯೂರಪ್ಪನವರಲ್ಲಿ ಸಮಾಜ ಪರವಾದ ಕಾಳಜಿ ಇದೆ. ಮುಖ್ಯಮಂತ್ರಿ ಆಗಿ ಬಂದ ಕೂಡಲೇ ಅವರು ವಿವಾದಾತ್ಮಕ ಟಿಪ್ಪು ಜಯಂತಿ ಆಚರಣೆಯನ್ನು ಕೈಬಿಟ್ಟರು. ಕೇಂದ್ರದ ಕಿಸಾನ್ ಮಾನಧನ್ ಅಡಿಯಲ್ಲಿ ಸಿಗುವ ರೂ.6000ಕ್ಕೆ ಹೆಚ್ಚುವರಿಯಾಗಿ 2,000 ರೂ ಅನ್ನು ರೈತರಿಗೆ ಘೋಷಿಸಿದರು. ತೀವ್ರ ನೆರೆ ಬಾಧಿಸಿದ ಸಂದರ್ಭದಲ್ಲಿ ಏಕಾಂಗಿಯಾಗಿ ತಿರುಗಾಡಿ ಜನರ ಕಷ್ಟಗಳನ್ನು ಆಲಿಸಿದರು. ಸಂಪುಟ ಪುನರ್ ರಚನೆಯ ದೊಡ್ಡ ಸವಾಲನ್ನು ಅವರು ಎದುರಿಸಿದ್ದು ಅವರ ರಾಜಕೀಯ ಅನುಭವವನ್ನು ಪ್ರತಿಬಿಂಬಿಸುತ್ತದೆ.
ಇನ್ನು ಮೂರು ವರ್ಷ ರಾಜ್ಯದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಖಚಿತವಾಗಿದೆ. ಅಧಿಕಾರಾವಧಿ ಪೂರ್ಣಗೊಂಡಾಗ ಅವರು 80ರ ವಸಂತದಲ್ಲಿ ಇರಲಿದ್ದಾರೆ. ದಕ್ಷಿಣ ಭಾರತದ ರಾಜ್ಯವೊಂದರಲ್ಲಿ ಕೇಸರಿ ಪಕ್ಷವನ್ನು ಅಧಿಕಾರಕ್ಕೇರಿಸಿದ ಚತುರನಾಗಿರುವ ಬಿಎಸ್ವೈ ಭವಿಷ್ಯದಲ್ಲೂ ಬಿಜೆಪಿಯ ಅಗ್ರ ಗಣ್ಯ ನಾಯಕನಾಗಿಯೇ ಮುಂದುವರೆಯುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.